More

  ತೈಲ ಬೆಲೆ ಏರಿಕೆ ಬಿಸಿ ಸರ್ವ ವ್ಯಾಪಿ

  ಬಸವರಾಜ ಇದ್ಲಿ ಹುಬ್ಬಳ್ಳಿ

  ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏಕಾಏಕಿ ಹೆಚ್ಚಳ ಮಾಡಿರುವುದು ಕೇವಲ ಸಾರಿಗೆ ಕ್ಷೇತ್ರದ ಮೇಲಷ್ಟೇ ಅಲ್ಲ, ಜನಸಾಮಾನ್ಯರ ನಿತ್ಯದ ಬದುಕನ್ನೂ ದುಸ್ತರಗೊಳಿಸಿದೆ.

  ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಸುಮಾರು 3 ರೂ.ನಷ್ಟು ಹೆಚ್ಚಳ ಮಾಡುತ್ತಿದ್ದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆಗಳು ಸಹ ಏಕಾಏಕಿ ಏರಿಕೆಯಾಗಿವೆ. ಯಾವುದೇ ವಸ್ತುಗಳನ್ನು ಕೊಳ್ಳಲು ಹೋದರೂ ಇಂಧನ ದರ ಹೆಚ್ಚಳದ ಪರಿಣಾಮವು ಸಾಮಾನ್ಯ ಜನರ ಜೇಬು ಸುಡುತ್ತಿದೆ.

  ಮಳೆ ಕೊರತೆಯಿಂದಾಗಿ ಉತ್ಪಾದನೆ ಕಡಿಮೆಯಾಗಿ ಎಪಿಎಂಸಿಗೆ ನಿತ್ಯ ಬರುವ ತರಕಾರಿ ಬೆಲೆ ಮೊದಲೇ ಒಂದಿಷ್ಟು ಹೆಚ್ಚಾಗಿತ್ತು. ಇದೀಗ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆ ಹೆಚ್ಚಳವು ಪ್ರತಿಯೊಂದು ತರಕಾರಿ ದರಗಳನ್ನು ಪ್ರತಿ ಕೆಜಿಗೆ ನೂರು ರೂಪಾಯಿಯ ಗಡಿ ದಾಟಿಸಿದೆ.

  ದಿನಸಿ ವ್ಯಾಪಾರಿಗಳು ಸಹ ಅಕ್ಕಿ, ಗೋಧಿ, ಅಡುಗೆ ಎಣ್ಣೆ, ಕಡ್ಲೆಹಿಟ್ಟು, ಮೈದಾ ಹಿಟ್ಟು ಮುಂತಾದವುಗಳ ಬೆಲೆಯನ್ನು ಸದ್ದಿಲ್ಲದೇ ಒಂದು- ಎರಡು ರೂಪಾಯಿಯಷ್ಟು ಹೆಚ್ಚಳ ಮಾಡಿದ್ದಾರೆ.

  ಮೊದಲೆಲ್ಲ ಸಾವಿರ ರೂಪಾಯಿ ಇಟ್ಟುಕೊಂಡು ವಾರದ ಸಂತೆಗೆ ಬರುತ್ತಿದ್ದ ಗ್ರಾಹಕರು ಇದೀಗ ಎರಡುನೂರು ರೂಪಾಯಿ ಹೆಚ್ಚುವರಿಯಾಗಿ ಇಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಇಲ್ಲದಿದ್ದರೆ ಒಂದಿಷ್ಟು ಸರಕುಗಳನ್ನು ಖರೀದಿ ಮಾಡದೇ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತಾಗಿದೆ.

  ನಿರ್ಮಾಣ ಕ್ಷೇತ್ರ:

  ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿ ಜನರು ಹೈರಾಣಾಗುತ್ತಿರುವ ಬೆನ್ನಲ್ಲೇ ನಿರ್ಮಾಣ ಕ್ಷೇತ್ರದ ಸರಕುಗಳ ಬೆಲೆಯೂ ಇದೀಗ ಏರುಮುಖವಾಗಿವೆ. ಕಬ್ಬಿಣ, ಸಿಮೆಂಟ್, ಉಸುಕು, ಖಡಿ ಹೀಗೆ ಎಲ್ಲ ವಸ್ತುಗಳ ಸಾಗಾಟ ದರದಲ್ಲಿ ಪರಿಷ್ಕರಣೆಯಾಗಿದೆ. ಸಿಮೆಂಟ್, ಕಬ್ಬಿಣ ಸಾಗಿಸಲು ಸಾವಿರ ರೂ. ಬಾಡಿಗೆ ಪಡೆಯುತ್ತಿದ್ದವರು, ಇದೀಗ 1,100, 1,200 ರೂ. ಕೊಟ್ಟರೆ ಬರುತ್ತೇವೆ ಎನ್ನುತ್ತಿದ್ದಾರೆ. ಇದೇ ರೀತಿ ಕೂಲಿ ಕಾರ್ವಿುಕರನ್ನು ಕರೆ ತರಲು ಇಂಜಿನಿಯರ್​ಗಳು, ಕಾಮಗಾರಿ ಗುತ್ತಿಗೆದಾರರು ವಾಹನಗಳಿಗೆ ಹೆಚ್ಚು ಹಣ ವ್ಯಯ ಮಾಡಬೇಕಾಗಿದೆ. ಇಷ್ಟು ಮಾತ್ರವಲ್ಲ, ಕಬ್ಬಿಣ, ಸಿಮೆಂಟ್, ಉಸುಕು ಇತ್ಯಾದಿಗಳು ಬೇರೆ ಜಿಲ್ಲೆಯಿಂದ ಬರಬೇಕಾಗಿರುವುದರಿಂದ ಅವುಗಳ ಸಾಗಾಟ ದರವೂ ಹೆಚ್ಚಾಗಿ ಅದರ ಭಾರವನ್ನು ವ್ಯಾಪಾರಸ್ಥರು ಗ್ರಾಹಕರ ಮೇಲೆ ಹಾಕಲು ಹೊರಟಿದ್ದಾರೆ.

  See also  ಪದ್ಮಾವತಿ ದೇವಿ ಮಹಿಮೆ ಅಪಾರ

  ಕೆಲವರು ಗ್ರಾಹಕರನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಬೆಲೆ ಏರಿಕೆಯ ಭಾರ ತಮ್ಮ ಮೇಲೆಯೇ ಹೊತ್ತುಕೊಳ್ಳುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಕೆಲ ವ್ಯಾಪಾರಸ್ಥರು ಲಾಭ ಇಲ್ಲದೇ ವಹಿವಾಟು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸಿಮೆಂಟ್ ಚೀಲವೊಂದಕ್ಕೆ 350 ರೂ. ಇದ್ದದ್ದು ಈಗ 355 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ ಕಬ್ಬಿಣ ದರವನ್ನು ಕೆಜಿಗೆ 10 ರಿಂದ 20 ಪೈಸೆಯಷ್ಟು ಹೆಚ್ಚಳ ಮಾಡಲಾಗುತ್ತಿದೆ. ಹೀಗಾಗಿ, ಮನೆ ಕಟ್ಟಿಕೊಳ್ಳಬೇಕೆಂಬ ಬಡ, ಮಧ್ಯಮ ವರ್ಗದ ಜನರು ಇನ್ನಷ್ಟು ಹೆಚ್ಚು ಖರ್ಚು ಮಾಡಬೇಕಾಗಿದೆ. ಒಟ್ಟಾರೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಪರಿಣಾಮಗಳು ಒಂದೊಂದಾಗಿ ಜನರ ಅನುಭವಕ್ಕೆ ಬರುತ್ತಿದ್ದು, ಇನ್ನಷ್ಟು ಹೊರೆ ಹೊತ್ತುಕೊಳ್ಳಲು ಗ್ರಾಹಕರು ಸಜ್ಜಾಗಬೇಕಿದೆ.

  ಇಂಧನ ದರ ಏರಿಕೆಯಿಂದಾಗಿ ನಿರ್ಮಾಣ ಕ್ಷೇತ್ರದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸಿಮೆಂಟ್, ಕಬ್ಬಿಣದ ದರಗಳು ಹೆಚ್ಚಾಗಲಿವೆ. ಜನರಿಗೆ ಮನೆ ನಿರ್ವಣವೂ ಇನ್ನು ದುಬಾರಿ ಎನಿಸಲಿದೆ.

  – ಸುರೇಶ ಕಿರೇಸೂರ, ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್, ಹುಬ್ಬಳ್ಳಿ

  ಸಾಗಾಟ ದರ ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ವಸ್ತುಗಳ ಬೆಲೆ ಏರಿಸಬೇಕಾಗಿದೆ. ಹಿಟ್ಟು, ಧಾನ್ಯಗಳ ದರಗಳು ಪ್ರತಿ ಕೆಜಿ ಮೇಲೆ ಒಂದೆರಡು ರೂಪಾಯಿ ಹೆಚ್ಚಾಗಲಿವೆ. ಗ್ರಾಹಕರ ಹಿತವನ್ನೂ ಕಾಯಬೇಕಾಗಿದೆ. ಇಂಧನ ದರ ಕಡಿಮೆಯಾದರೆ ನಮಗೂ ಒಂದಿಷ್ಟು ನಿರಾಳವಾಗಲಿದೆ.

  -ದಾಮೋದರ, ದಿನಸಿ ವರ್ತಕರು, ಹುಬ್ಬಳ್ಳಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts