ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯಲ್ಲಿ ಗೊಂದಲ ಮೂಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿತ ಶಿಕ್ಷಣ ತಜ್ಞರು ಕಾರಣ ಎಂದು ಪೀಪಲ್ಸ್ ಫಾರಂ ಫಾರ್ಮ್ ಕರ್ನಾಟಕ ಎಜುಕೇಶನ್ ವೇದಿಕೆ ಮುಖಂಡ, ಎಂಎಲ್‌ಸಿ ಡಿ.ಎಸ್.ಅರುಣ್ ಆರೋಪಿಸಿದರು.
ಎನ್‌ಇಪಿ ಎಂಬುದು ಹಲವು ಚರ್ಚೆಗಳ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ, ಪಾಲಕರ, ಸಾರ್ವಜನಿಕರ ಮತ್ತು ಚಿಂತಕರ, ಶಿಕ್ಷಣ ತಜ್ಞರ ಅಭಿಪ್ರಾಯದೊಂದಿಗೆ ಚರ್ಚಿಸಿ ಒಮ್ಮತದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ ಬಿಜೆಪಿ ಸರ್ಕಾರ ತಂದಿದೆ ಎಂಬ ನೆಪ ಮುಂದಿಟ್ಟುಕೊಂಡು ಯೋಜನೆಯನೇ ರದ್ದು ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಮತ್ತವರ ಬೆಂಬಲಿಗ ಚಿಂತಕರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಆ ಚಿಂತಕರ ಮಾತು ಕೇಳಿ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರೇರಕವಾಗಿರುವ ಎನ್‌ಇಪಿ ಅನ್ನು ರದ್ದುಮಾಡಲು ಹೊರಟಿದೆ. ಎನ್‌ಇಪಿ ಎಂಬುದು ಹೊಸದೇನಲ್ಲ, ಇದು 1968 ಮತ್ತು 1986ರಲ್ಲಿ ಜಾರಿಗೆ ಬಂದಿತ್ತು. ಇದೆಲ್ಲವೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಅಳವಡಿಸಲಾಗಿತ್ತು. ಆದರೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಂದ ಯೋಜನೆ ಎಂಬ ಕಾರಣಕ್ಕಾಗಿ ವಿರೋಧ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಎನ್‌ಇಪಿಯನ್ನು ವಿರೋಧಿಸುವುದಕ್ಕೆ ಕಾರಣವೇ ಇಲ್ಲ. ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಪರಿಚಯ ಮಕ್ಕಳಿಗೆ ಎನ್‌ಇಪಿಯಿಂದ ಸಾಧ್ಯವಿಲ್ಲ ಎಂದು ಹೇಳಿರುವುದು ಎಷ್ಟರ ಮಟ್ಟಿಗೆ ಸರಿ, ಕನ್ನಡದ ಮಕ್ಕಳಿಗೆ ಯಾವ ರೀತಿಯ ಅನ್ಯಾಯವಾಗುತ್ತದೆ ಎಂಬುವುದನ್ನು ಇವರೇ ಹೇಳಬೇಕು. ಅಂತಾರಾಷ್ಟ್ರೀಯಮಟ್ಟದ ಖ್ಯಾತಿ ಹೊಂದಿರುವ ಕನ್ನಡದವರೇ ಶಿಕ್ಷಣ ತಜ್ಞರು ಇರುವಾಗ ಹೊರಗಿನವರನ್ನು ಸರ್ಕಾರ ಗುರುತಿಸಿ ತಂದಿರುವುದು, ಅವರ ಮಾತನ್ನು ಕೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದರು.
ಪ್ರಮುಖರಾದ ಎ.ಜೆ.ರಾಮಚಂದ್ರ, ಡಾ. ರವಿಕಿರಣ್, ಪ್ರವೀಣ್, ರಾಮಲಿಂಗಪ್ಪ, ಚಂದ್ರಶೇಖರ್, ಧರ್ಮಪ್ರಸಾದ್ ಇದ್ದರು.