ಗೌತಮ ರಥದ ಹಿಂಬದಿ ಚಕ್ರ ಜಖಂ

ನಂಜನಗೂಡು: ಪಂಚ ಮಹಾರಥೋತ್ಸವದಲ್ಲಿ ಹಗ್ಗ ತುಂಡಾದ ಹಿನ್ನೆಲೆಯಲ್ಲಿ ರಥವನ್ನು ಮುಂದಕ್ಕೆ ತಳ್ಳುವ ಸಲುವಾಗಿ ಜೆಸಿಬಿಯಿಂದ ನೂಕಿದ್ದರಿಂದ ಹಿಂಬದಿಯ ಚಕ್ರ ಜಖಂಗೊಂಡಿದೆ.

ರಥಕ್ಕೆ ಸವೆದಿದ್ದ ಹಗ್ಗ ಕಟ್ಟಿದ್ದರಿಂದ ರಥ ಎಳೆಯುವ ಸಂದರ್ಭ ತುಂಡಾಯಿತು. ನಂತರ ಜನಸಾಗರ ಮಧ್ಯೆಯೇ ಬಿಗಿಯಾಗಿ ಹೊಸ ಹಗ್ಗ ಕಟ್ಟುವುದು ಸವಾಲಾಗಿ ಪರಿಣಮಿಸಿತು. ಬಳಿಕ ಜೆಸಿಬಿ ಸಹಾಯದಿಂದ ನೂಕಿದಾಗ ಮುಂದೆ ಸಾಗಿತು. ನಂತರ ರಥೋತ್ಸವ ಸ್ವಸ್ಥಾನಕ್ಕೆ ಮರಳುವರೆಗೂ ಜೆಸಿಬಿಯಿಂದ ನೂಕಿದ ಹಿನ್ನೆಲೆಯಲ್ಲಿ ಹಿಂಬದಿಯ ಎಡಭಾಗದ ಚಕ್ರ ಹಾನಿಗೊಂಡಿದೆ.

ಸಾಮಾನ್ಯವಾಗಿ ರಥ ಹೂತುಕೊಂಡಾಗ ಮಾತ್ರ ಜೆಸಿಬಿ ಅಥವಾ ಕ್ರೇನ್ ಬಳಸಲಾಗುತ್ತಿತ್ತು. ಹಗ್ಗ ಕಿತ್ತು ಬಂದು ಜನಜಂಗುಳಿ ಮಧ್ಯೆ ಹೊಸ ಹಗ್ಗವನ್ನು ಸರಿಯಾಗಿ ಕಟ್ಟಲಾಗದೆ ಜೆಸಿಬಿ ನೆರವು ಪಡೆದಿದ್ದು ಈ ಅವಾಂತರಕ್ಕೆ ಕಾರಣವಾಗಿದೆ. ರಥೋತ್ಸವ ಮುನ್ನಾ ದಿನವೇ ಹೊಸ ಹಗ್ಗ ಕಟ್ಟಿದ್ದರೆ ವಿಘ್ನಗಳು ಎದುರಾಗುತ್ತಿರಲಿಲ್ಲ.

ರಥೋತ್ಸವಕ್ಕಾಗಿ ಒಂದು ತಿಂಗಳಿಂದ ಚಕ್ರದ ದುರಸ್ತಿ ಕಾರ್ಯ ಮಾಡಲಾಗಿತ್ತು. ಇದೀಗ ಹಾನಿಯಾಗಿರುವುದರಿಂದ ಮತ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕಾಗಿದೆ. ಮುಂದಿನ ವರ್ಷವೇ ರಥ ಸಾಗುವುದರಿಂದ ಆ ಸಂದರ್ಭದಲ್ಲೇ ರಥದ ಚಕ್ರ ದುರಸ್ತಿ ಮಾಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.