ಕಟ್ಟೆಮಳಲವಾಡಿಕೊಪ್ಪಲಿನಲ್ಲಿ ನಳನಳಿಸುತ್ತಿರುವ ಕುಂಬಳ

ಕಟ್ಟೆಮಳಲವಾಡಿ: ಹುಣಸೂರು ತಾಲೂಕು ಕಟ್ಟೆಮಳಲವಾಡಿಕೊಪ್ಪಲು ಗ್ರಾಮದ ರೈತ ಪುಟ್ಟರಾಜು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ ಕುಂಬಳ ಬೆಳೆ ಬೇಸಾಯದಲ್ಲಿ ತೊಡಗಿದ್ದಾರೆ.

ಪುಟ್ಟರಾಜು ಅವರಿಗೆ ತರಕಾರಿ ಫಸಲು ಬೆಳೆಯುವುದೇ ಜೀವನಾಧಾರ. ಅತೆಯೆ, ಈ ಬಾರಿ ಒಂದು ಎಕರೆ ಜಮೀನಿನಲ್ಲಿ ‘ಅರ್ಜುನ’ ಹೈಬ್ರಿಡ್ ತಳಿಯ ಕುಂಬಳ ಬೇಸಾಯ ಮಾಡಿದ್ದು, ಅದೃಷ್ಟ ಒಲಿದು, ಉತ್ತಮ ಬೆಲೆ ಸಿಕ್ಕರೆ ಕೈತುಂಬಾ ಕಾಸು ಸಂಪಾದನೆಯ ನಿರೀಕ್ಷೆಯಲ್ಲಿದ್ದಾರೆ.

ಬೇಸಾಯ ವಿಧಾನ:
ಬಿತ್ತನೆಗೆ ಮುನ್ನ ಜಮೀನನ್ನು ಸೂಕ್ತವಾಗಿ ಹದಗೊಳಿಸಿ, 8 ಅಡಿಗೆ ಒಂದರಂತೆ ಸಾಲು ಹೊಡೆದು ನೇರ ಬಿತ್ತನೆ ಮಾಡಲಾಗಿದೆ. ಸಸಿ ಹುಟ್ಟಿದ 15ನೇ ದಿನದಿಂದ ವ್ಯವಸಾಯ ಪ್ರಾರಂಭಿಸಿ, ತಿಂಗಳ ನಂತರ ಔಷಧ ಸಿಂಪಡಣೆ ಮಾಡಿದ್ದಾರೆ.

ಮತ್ತೆ ತಿಂಗಳ ಬಳಿಕ ರಾಸಾಯನಿಕ ಗೊಬ್ಬರ ನೀಡಿದ್ದು, ಇದೀಗ ಫಸಲು ಉತ್ತಮವಾಗಿ ಬಂದು ನಳನಳಿಸುತ್ತಿದೆ. ಕಾಯಿ ಬಲಿಯಲು ಬಿಟ್ಟಿದ್ದು, ಕೆಲವೇ ದಿನಗಳಲ್ಲಿ ಕೊಯ್ಲು ಪ್ರಾರಂಭಿಸುವುದಾಗಿ ಪುಟ್ಟರಾಜು ಹೇಳುತ್ತಾರೆ.

ಕಳೆದ ಮಾರ್ಚ್‌ನಲ್ಲಿ 20 ಗುಂಟೆ ಜಮೀನಿನಲ್ಲಿ ಕುಂಬಳ ಬೇಸಾಯ ಮಾಡಿ ಎಲ್ಲ ಖರ್ಚು ಕಳೆದು 26 ಸಾವಿರ ರೂ. ಆದಾಯ ಬಂದಿತ್ತು. ಈ ಬಾರಿ 1 ಎಕರೆಯಲ್ಲಿ ವ್ಯವಸಾಯ ಮಾಡಿದ್ದು, ಹೆಚ್ಚು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದೇನೆ. ಅದಕ್ಕೆ ಪೂರಕವಾಗಿ ಬೆಲೆಯೂ ಉತ್ತಮವಾಗಿದೆ ಎನ್ನುತ್ತಾರೆ ರೈತ ಪುಟ್ಟರಾಜು.