ಹನಗೋಡು: ಕರ್ನಾಟಕ ಹೆಚ್ಚು ಆನೆಗಳನ್ನು ಹೊಂದಿರುವ ದೊಡ್ಡ ರಾಜ್ಯವಾಗಿದ್ದು ಆನೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಮಹದೇವಯ್ಯ ಹೇಳಿದರು.
ಹನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಆನೆಗಳ ಸಂರಕ್ಷಣೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.
ಆನೆಗಳ ಆವಾಸ ಸ್ಥಾನದ ನಷ್ಟದಿಂದಾಗಿ ಕಾಡಿನಿಂದ ನಾಡಿಗೆ ಬರುತ್ತಿದ್ದು, ಇದು ಮಾನವ ಮತ್ತು ಆನೆಗಳ ಸಂಘರ್ಷಕ್ಕೆ ಕಾರಣವಾಗಿದೆ. ಅತಿ ಹೆಚ್ಚು ಆನೆಗಳು ವಿದ್ಯುತ್ ಸಂಪರ್ಕದ ತಂತಿಯಿಂದಾಗಿ ಸಾವಿಗೀಡಾಗುತ್ತಿರುವುದು ಸಮೀಕ್ಷೆ ವರದಿಯಿಂದ ಗೊತ್ತಾಗಿದೆ ಎಂದು ತಿಳಿಸಿದರು.
ವಯಸ್ಕ ಆನೆ ಹಾಗೂ ಗಂಡಾನೆಗಳು ಅತಿಕ್ರಮಣ ಪ್ರವೃತ್ತಿಯನ್ನು ಹೊಂದಿದ್ದು ಅವು ಕಾಡನ್ನು ತೊರೆದು ಆಹಾರದ ಅವಶ್ಯಕತೆಗಳಾದ ಕಬ್ಬು, ಬಾಳೆ ಸೇರಿದಂತೆ ಇತರ ಬೆಳೆಗಳನ್ನು ಅರಸಿ ನಾಡಿಗೆ ಬರುವುದು ಸ್ವಾಭಾವಿಕ. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡುವುದರ ಮೂಲಕ ಆನೆಗಳ ಪ್ರವೇಶವನ್ನು ಕಡಿಮೆ ಮಾಡಬಹುದಾಗಿದೆ. ಹಾಗಾಗಿ ಎಲ್ಲರೂ ಅರಣ್ಯ ಇಲಾಖೆಯೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳುವಂತೆ ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿ ಪಿ.ವಲ್ಲೀಶ್ ಮಾತನಾಡಿ, ಆನೆಗಳ ಸಂರಕ್ಷಣೆ ಮತ್ತು ಪೀಳಿಗೆಯನ್ನು ಕಾಪಾಡಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು. ಕಿರುಚಿತ್ರ ಪ್ರದರ್ಶಿಸಿ ಆನೆಯ ಜೀವನ ನಿರ್ವಣೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಯ್ಯ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ನಂದಕುಮಾರ್, ಮುಖ್ಯ ಶಿಕ್ಷಕ ಸಂತೋಷ್ ಕುಮಾರ್, ಹುಣಸೂರು ರೋಟರಿ ಸಂಸ್ಥೆ ಕಾರ್ಯದರ್ಶಿ ಎಚ್.ಆರ್.ಕೃಷ್ಣಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹನಗೋಡು ನಟರಾಜ್, ಗ್ರಾ.ಪಂ.ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಸಂತೋಷ್, ಶಿವಣ್ಣ, ರತ್ನಾ ಶ್ರೀಧರ್, ಸಂಗೀತಾ, ಬೋರೇಗೌಡ, ಮಹದೇವನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣೇಗೌಡ, ಹರೀಶ್, ಪ್ರಾಂಶುಪಾಲ ದೊರೆರಾಜ್, ಸತೀಶ್ ಕುಮಾರ್, ಜಯಂತಿ, ಪ್ರಸನ್ನ ಕುಮಾರ್, ಭಾನುಮತಿ, ವೀರಣ್ಣ ಕರಡಿ, ಶರತ್, ಛಾಯಾಮಣಿ, ಅರ್ಚನಾ ಬಾಯಿ, ಜವರಮ್ಮ, ವರ್ಷಾ, ರಘುಪತಿ, ಜಯಲಕ್ಷ್ಮೀ, ಸೌಮ್ಯಾ, ನಿಹಾರಿಕಾ ಇತರರು ಇದ್ದರು.
ವಿಶ್ವ ಆನೆ ದಿನಾಚರಣೆ ಅಂಗವಾಗಿ ಹನಗೋಡಿನ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಚಿತ್ರಕಲಾ ಸ್ಪರ್ಧೆಯಲ್ಲಿ ತನುಶ್ರೀ(ಪ್ರಥಮ), ಅನುತಾ(ದ್ವಿತೀಯ), ಅಂಜಲಿ(ತೃತೀಯ) ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಯಶಸ್ವಿನಿ (ಪ್ರಥಮ), ಸ್ಪಂದನಾ(ದ್ವಿತೀಯ), ಅಶ್ವಿನಿ ಮತ್ತು ಲಕ್ಷ್ಮೀ(ತೃತೀಯ) ಬಹುಮಾನ ಪಡೆದರು.