ತಿ.ನರಸೀಪುರ: ನ್ಯಾಯಮೂರ್ತಿ ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಜಾರಿಗೆ ತರಲು ಸರ್ಕಾರ ಮೀನಮೇಷ ಎಣಿಸುತ್ತಿದ್ದು, ಜಾತಿ ಗಣತಿ ಜಾರಿಗೆ ಆಗ್ರಹಿಸಿ ಅ.16ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದರು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಪಟ್ಟಭದ್ರ ಶಕ್ತಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಮಾನ್ಯತೆ ನೀಡದೆ ಅ.18 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೆ ಮೀಸಲಾತಿ ಪ್ರಮಾಣವನ್ನು ಶೇ.75 ರಷ್ಟು ಏರಿಕೆ ಮಾಡಬೇಕೆಂದು ಆಗ್ರಹಿಸಿದರು.
ಜಾತಿ ಗಣತಿ ಜಾರಿಯಿಂದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯಕ್ಕೆ ಅನುಕೂಲವಾಗಲಿದ್ದು, ಸರ್ಕಾರದ ಯೋಜನೆಗಳು ಜನಸಂಖ್ಯೆಗೆ ಅನುಗುಣವಾಗಿ ರೂಪುಗೊಳ್ಳಲಿವೆ. ಜಾತಿ ಗಣತಿ ವರದಿ ಜಾರಿಯಿಂದಾಗಿ ಪರಿಶಿಷ್ಟರಿಗಷ್ಟೇ ಅನುಕೂಲ, ಲಾಭವಾಗಲಿದೆ ಎಂಬ ತಪ್ಪು ತಿಳಿವಳಿಕೆ ಪಟ್ಟಭದ್ರರಲ್ಲಿ ಇರುವುದರಿಂದ ಅವರು ವಿರೋಧಿಸುತ್ತಿದ್ದಾರೆ. ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ನಡೆದಿರುವ ಜಾತಿ ಗಣತಿಯ ವರದಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ತಾಲೂಕು ಸಂಚಾಲಕ ಕುಕ್ಕೂರು ರಾಜು ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶಾಸಕರು ಜಾತಿ ಗಣತಿ ವರದಿ ಜಾರಿಗೆ ಈವರೆಗೂ ದನಿ ಎತ್ತಿಲ್ಲ. ದೇಶದ ಹಲವೆಡೆ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆದರೂ ಆಕ್ಷೇಪಿಸುವ ಸೌಜನ್ಯವೂ ಇಲ್ಲ. ಇಂತಹವರನ್ನು ಶಾಸನ ಸಭೆಗೆ ಆಯ್ಕೆ ಮಾಡಿ, ದಲಿತ ಸಮುದಾಯ ತಪ್ಪು ಮಾಡಿದೆ. ಇನ್ಮುಂದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕರು ಹಾಗೂ ಸಂಸದರ ವಿರುದ್ಧವೇ ಹೋರಾಟ ನಡೆಸಬೇಕಾಗಿದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ತುರುಗನೂರು ಲಕ್ಷ್ಮಣ, ಕೈಯಂಬಳ್ಳಿ ಕೃಷ್ಣ, ಬನ್ನಳ್ಳಿಹುಂಡಿ ಉಮೇಶ್, ಆಲಗೂಡು ನಾಗರಾಜ್ ಮೂರ್ತಿ, ಆದಿಬೆಟ್ಟಳ್ಳಿ ಅರ್ಜುನ, ವಾಟಾಳು ಕೃಷ್ಣ, ಶಿವಣ್ಣ, ಬಿಳಿಗೆರೆಹುಂಡಿ ಶಿವಕುಮಾರ್, ಪ್ರಿನ್ಸ್ ಮಹೇಶ, ಕನ್ನಳ್ಳಿ ಶಶಿಕುಮಾರ್, ಸಿದ್ದರಾಜು, ಶ್ರೀನಿವಾಸ್, ಹ್ಯಾಕನೂರು ಮಹೇಶ ಇತರರು ಇದ್ದರು.