More

    ಮಕ್ಕಳಲ್ಲಿ ಉಚ್ಚಾರಣೆ ಸಮಸ್ಯೆ ಹೊಸತಲ್ಲ

    ಬೆಂಗಳೂರಿನ ಶಾಲೆಗೆ ಹೋಗಿದ್ದ ವೇಳೆ. ಒಬ್ಬ ಹುಡುಗನಿಗೆ ‘ನಿನ್ನ ಹೆಸರೇನು ಎಂದು ಕೇಳಿದೆ. ಇದ್ದಕ್ಕಿದ್ದಂತೆ ಗಾಬರಿಗೊಂಡ ಹುಡುಗ ಪಕ್ಕದವನನ್ನು ನೋಡಿ ‘ನೀನೇ ಹೇಳು’ ಅನ್ನೋ ರೀತಿ ಸನ್ನೆ ಮಾಡಿದ. ಅವನು ಮಾತನಾಡಲು ಪ್ರಯತ್ನ ಪಡುತ್ತಿದ್ದರಿಂದ ಮೂಗ ಅಲ್ಲವೆಂದು ಅರ್ಥವಾಯಿತು. ಮಕ್ಕಳ ಹಿನ್ನೆಲೆ ಗೊತ್ತಿಲ್ಲದೆ ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸಬಾರದು ಎಂದುಕೊಂಡು ಕ್ಷಣಕಾಲ ಮಗುವಿನ ಪಕ್ಕದಲ್ಲಿಯೇ ನಿಂತೆ. ಅಷ್ಟರಲ್ಲಿ ಸುಧಾರಿಸಿಕೊಂಡ ಹುಡುಗ ಉಗ್ಗುತ್ತಲೇ ತನ್ನ ಹೆಸರನ್ನು ಹೇಳಲು ಪ್ರಯತ್ನಿಸಿದ. ಅಷ್ಟರಲ್ಲಿ ನನಗೆ ಸ್ಪಷ್ಟವಾಗಿತ್ತು. ಈ ಮಗುವಿಗೆ ಉಗ್ಗುವಿಕೆ ಸಮಸ್ಯೆ ಇದೆ ಎಂದು.

    ಸಾಮಾನ್ಯವಾಗಿ ಇಂತಹ ಸಮಸ್ಯೆ ಇರುವವರಿಗೆ ಹೊಸಬರ ಎದುರಿನಲ್ಲಿ, ದೊಡ್ಡ ಗುಂಪಿನಲ್ಲಿ, ಅಕಸ್ಮಾತಾಗಿ ಏನಾದರೂ ಪ್ರಶ್ನೆ ಕೇಳಿದರೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಲ್ಲಿಯೂ ಹಾಗೆ ಆಗಿತ್ತು. ಈ ಮಗುವಿನ ಮನಸ್ಸಿನ ಸಾಮರ್ಥ್ಯ ಹೆಚ್ಚಿಸುವ ಬಗ್ಗೆಯೇ ಯೋಚಿಸುತ್ತಾ ‘ನಿನ್ನ ಹೆಸರನ್ನು ನೀನೇ ಹೇಳು. ನಿಧಾನವಾದರೂ ಸರಿ. ನನಗೇನೂ ಅವಸರವಿಲ್ಲ’ ಎಂದು ಹುಡುಗನ ಬೆನ್ನುತಟ್ಟಿ ಪ್ರೋತ್ಸಾಹಿಸಿದೆ. ಇಡೀ ತರಗತಿ ಮೌನವಾಗಿತ್ತು. ನಂತರ ಯಶಸ್ವಿಯಾಗಿ ಈ ಹುಡುಗನಿಗೆ ತನ್ನ ಹೆಸರು ಹೇಳಲು ಸಾಧ್ಯವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲು ವಿದ್ಯಾರ್ಥಿಗಳನ್ನು ಆಹ್ವಾನಿಸಿದಾಗ ಮೊದಲನೆಯದಾಗಿ ಬಂದು ಅನುಭವ ಹಂಚಿಕೊಂಡಿದ್ದ. ಆ ಕ್ಷಣದಲ್ಲಿ ಹೃದಯತುಂಬಿ ಕಣ್ಣಾಲಿಗಳು ಒದ್ದೆಯಾದವು.

    ಮಕ್ಕಳಲ್ಲಿ ಉಚ್ಚಾರಣೆ ಸಮಸ್ಯೆ ಹೊಸತಲ್ಲಮನೆಮನೆಯಲ್ಲೂ ಮಗುವೊಂದು ಮಾತನಾಡಲು ಪ್ರಾರಂಭಿಸಿದರೆ ಆ ಮನೆಯ ಸೊಬಗೇ ಬೇರೆ. ಬಾಲ್ಯದಲ್ಲಿನ ತೊದಲು ಮಾತುಗಳು ಬಹಳ ಮುದಕೊಡುತ್ತವೆ. ತಪ್ಪುತಪ್ಪಾಗಿ -ಕಷ್ಟಪಟ್ಟು ಮಾತನಾಡುವ ಮಗುವಿನ ಮಾತುಗಳನ್ನು ಕೇಳುವುದೇ ಆನಂದ. ಆದರೆ ಅದೇ ತೊದಲುನುಡಿ ಮಕ್ಕಳು ಬೆಳೆದಂತೆ ಬದಲಾಗುತ್ತದೆ. ಮಕ್ಕಳು ಸರಿಯಾದ ಉಚ್ಚಾರಣೆಯನ್ನು, ಭಾಷೆಯನ್ನು ಅಭ್ಯಾಸ ಮಾಡಿಕೊಳ್ಳಲು ಹಿರಿಯರು ಸಹಕರಿಸುತ್ತಾರೆ. ಹಾಗೇನಾದರೂ ತೊದಲು ನುಡಿಗಳು ಸ್ಪಷ್ಟ ಉಚ್ಚಾರಣೆಯಾಗಿ ಪರಿವರ್ತನೆ ಆಗದಿದ್ದಲ್ಲಿ ಅನೇಕ ಸಮಸ್ಯೆಗಳು ಅಲ್ಲಿಂದಲೇ ಪ್ರಾರಂಭವಾಗುತ್ತದೆ.

    ಚಪಾತಿ ಚಪ್ಪಲ್ಲು ಇತ್ಯಾದಿ ಪದಗಳನ್ನು ಪಚಾತಿ, ಪಚ್ಚಲ್ಲು ಎಂದು ಉಚ್ಚರಿಸುವ ಬಹಳಷ್ಟು ಮಕ್ಕಳು ಕಾಣಸಿಗುತ್ತಾರೆ. ಹಿಂದೆ ಎನ್ನುವಾಗ ಹಿಂಡೆ ಎನ್ನುವುದು, ತ ಬದಲು ಟ ಎಂದು ಉಪಯೋಗಿಸುವುದು ಸ,ಶ,ಷ ಗಳ ಮಧ್ಯದಲ್ಲಿ ವ್ಯತ್ಯಾಸ ತಿಳಿಯದಿರುವುದು ಒತ್ತಕ್ಷರಗಳನ್ನು ಹೇಳಲಾಗದಿರುವುದು, ಹೀಗೆ ವಿಭಿನ್ನ ರೀತಿಯ ಉಚ್ಚಾರಣೆಯ ಅನೇಕ ಸಮಸ್ಯೆಗಳು ಬಾಲ್ಯದಲ್ಲಿ ಕಂಡುಬರುತ್ತವೆ. ಮಕ್ಕಳು ಬೆಳೆದಂತೆಲ್ಲ ಉಚ್ಚಾರಣೆಯಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳುತ್ತಾ ಹೋಗುತ್ತಾರೆ.

    ಉಚ್ಚಾರಣೆಯ ಸಮಸ್ಯೆಗೂ ಭಾಷಾ ಕಲಿಕೆಯ ಸಮಸ್ಯೆಗಳಿಗೂ ಭೇದವಿದೆ. ಕೆಲವು ಮಕ್ಕಳಿಗೆ ಭಾಷೆ ಬರಬಹುದು, ಉಚ್ಚಾರಣೆ ಕಷ್ಟವಾಗಬಹುದು. ಕೆಲವರಿಗೆ ಉಚ್ಚಾರಣೆ ಕಷ್ಟವಿಲ್ಲದೆ, ಭಾಷೆ ಕಲಿಯಲು, ನೆನಪಿಟ್ಟುಕೊಳ್ಳಲು, ಹೊಸಪದಗಳನ್ನು ಗ್ರಹಿಸಲು ಕಷ್ಟವಾಗಬಹುದು. ಇದರ ಮಧ್ಯೆ ಸೂಕ್ಷ್ಮ ವ್ಯತ್ಯಾಸ ಇದ್ದರೂ ಇವೆರಡು ಸಮಸ್ಯೆಗಳೂ ಮಕ್ಕಳು ಬೇರೆಯವರ ಜತೆಯಲ್ಲಿ ಸಂವಹನ ಮಾಡುವಾಗ ಸಮಸ್ಯೆ ಉಂಟು ಮಾಡುತ್ತವೆ. ಉಚ್ಚಾರಣೆಯ ಸಮಸ್ಯೆಯಲ್ಲಿ ಕೆಲವು ವಿಭಾಗ ಮಾಡಬಹುದು. ನಿರ್ದಿಷ್ಟ ಅಕ್ಷರಗಳನ್ನು ಉತ್ತರಿಸಲಾಗದೆ ಇರುವ ಸಮಸ್ಯೆ. ಇದರಲ್ಲಿ ವ್ಯಕ್ತಿಗೆ ಕೆಲವು ಅಕ್ಷರಗಳು ಮಾತ್ರ ಕಷ್ಟವಾಗುತ್ತದೆ, ಮಿಕ್ಕಂತೆ ಬೇರೆ ಏನು ಸಮಸ್ಯೆ ಅನಿಸುವುದಿಲ್ಲ. ಇನ್ನು ಕೆಲವರಿಗೆ ಕೆಲವು ಅಕ್ಷರಗಳ ಸಮೂಹ ಅಥವಾ ಒತ್ತಕ್ಷರಗಳು ಅಥವಾ ದೀರ್ಘವಾದ ವಾಕ್ಯ ಕಷ್ಟವೆನಿಸಬಹುದು. ಯಾರಾದರೂ ಹೇಳಿಕೊಟ್ಟ ಪದಗಳನ್ನು ಪುನರುಚ್ಚಾರ ಮಾಡಲು ಕಷ್ಟವಾಗಬಹುದು.

    ಇನ್ನೂ ಕೆಲವು ಮಕ್ಕಳಿಗೆ ಸಣ್ಣಪುಟ್ಟ ನಾಲಿಗೆ ಹೊರಳಿಸಿ ಮಾತನಾಡಬೇಕಾದ ವಾಕ್ಯಗಳು ಕಷ್ಟವಾಗಿಬಿಡುತ್ತದೆ. ಒಂದೇ ತರಹದ ಅಕ್ಷರಗಳು ಪದಪುಂಜಗಳು ಪುನರಾವರ್ತನೆ ಗೊಂಡಾಗ ಸರಾಗವಾಗಿ ಅವುಗಳನ್ನು ಅಭಿವ್ಯಕ್ತಿಗೊಳಿಸಲು ಕಷ್ಟವಾಗುತ್ತದೆ. ಇನ್ನು ಕೆಲವು ಮಕ್ಕಳಲ್ಲಿ ಉಗ್ಗುವಿಕೆ ಕಾಣಬಹುದು. ಉಗ್ಗುವಿಕೆ ಎಂದರೆ ಒಂದು ಅಕ್ಷರವನ್ನು ಉಚ್ಚಾರಣೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಅಥವಾ ಒಂದೇ ಅಕ್ಷರವನ್ನು ಅರ್ಧರ್ಧವಾಗಿ ಪದೇ ಪದೇ ಹೇಳುತ್ತಾ ನಂತರ ಮುಂದುವರೆಸಬಹುದು.

    ಬಾಯಿಂದ ಶಬ್ದವನ್ನು ಉತ್ಪತ್ತಿ ಮಾಡಲು ತುಟಿ, ದವಡೆ, ನಾಲಿಗೆ, ಧ್ವನಿಪೆಟ್ಟಿಗೆ, ಉಸಿರಾಟ, ನರ ವ್ಯವಸ್ಥೆ, ಮೆದುಳು ಹಾಗೂ ಸೂಕ್ತ ಉದ್ದೇಶ ಎಲ್ಲವೂ ಮುಖ್ಯವಾಗಿರುತ್ತದೆ. ಬೆಳವಣಿಗೆ ಹಂತದಲ್ಲಿ ಈ ಮೇಲಿನ ಎಲ್ಲಾ ಕಾರಣಗಳಿಂದ ಅಥವಾ ಯಾವುದಾದರೂ ಒಂದು ಕಾರಣದಿಂದ ಸಮಸ್ಯೆ ಉಂಟಾಗಬಹುದು. ಸಮಸ್ಯೆ ಯಾವುದೇ ಕಾರಣದಿಂದ ಬಂದಿದ್ದರೂ ಕೆಲವಕ್ಕೆ ತರಬೇತಿ ಚಿಕಿತ್ಸೆಯಿಂದ ಉತ್ತಮಗೊಳಿಸಬಹುದು. ಕೆಲವು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವೂ ಬರಬಹುದು. ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವುದೆಂದರೆ ಪ್ರೋತ್ಸಾಹಕ ಚಿಕಿತ್ಸೆ. ಪ್ರತಿಯೊಬ್ಬನಲ್ಲಿಯೂ ಏನೋ ಕುಂದು ಕೊರತೆ ಇದ್ದೇ ಇರುತ್ತದೆ. ಕೆಲವರಿಗೆ ಕಣ್ಣಿಗೆ ಕಾಣುವಂತೆ ಕಾಣುತ್ತದೆ, ಕೆಲವರಿಗೆ ಗೋಪ್ಯವಾಗಿ ಹೊರಗೆ ಪ್ರಕಟಗೊಂಡಿಲ್ಲದೇ ಇರಬಹುದು. ಯಾರೊಬ್ಬರ ಮನಸ್ಸಿಗೆ, ಭಾವನೆಗಳಿಗೆ, ಬದುಕುವ ರೀತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ.

    ಎಲ್ಲರನ್ನೂ ಒಂದೇ ಮಾಪನದಲ್ಲಿ ಅಳೆಯಲು ಸಾಧ್ಯವಿಲ್ಲ. ದ್ರವ, ಘನ, ಅನಿಲ ಹೀಗೆ ವಿಭಿನ್ನ ಪದಾರ್ಥಗಳನ್ನು ವಿಭಿನ್ನ ಮಾಪನದಲ್ಲಿ ಅಳೆಯುವಾಗ ಮನುಷ್ಯರನ್ನು ಮಾತ್ರ ಹೇಗೆ ಒಂದೇ ಮಾಪನದಲ್ಲಿ ಅಳೆಯಲು ಸಾಧ್ಯ. ಕೆಲವು ಕ್ಷಣವಾದರೂ ಅವರ ಸ್ಥಾನದಲ್ಲಿ ನಿಮ್ಮನ್ನು ನಿಲ್ಲಿಸಿ ನೋಡಿಕೊಂಡಾಗ ಅವರ ನೋವು ಕಷ್ಟ ಸಮಸ್ಯೆ ಅರ್ಥವಾಗುತ್ತದೆ ಅಥವಾ ಅರಿವಿಗೆ ಬರಬಹುದು. ಯಾವುದೇ ಕಾರಣದಿಂದ ಅಂಗವೈಕಲ್ಯಗಳಾಗಲಿ ಅಭಿವ್ಯಕ್ತಿಯಲ್ಲಾಗಲಿ ಇರುವ ದೋಷಗಳನ್ನು ಹೀಯಾಳಿಸುವುದು, ಅವಮಾನ ಮಾಡುವುದು, ಅವರನ್ನು ಅನುಪಯುಕ್ತರಂತೆ ಪರಿಗಣಿಸುವುದು ಕ್ರೂರ ನಡವಳಿಕೆಯಾಗುತ್ತದೆ ಹಾಗೂ ಕಾನೂನು ದೃಷ್ಟಿಯಲ್ಲಿ ಅಪರಾಧವಾಗುತ್ತದೆ.

    ಪರಿಹಾರೋಪಾಯಗಳು

    1. ಸಮಸ್ಯೆ ಇರುವವರಿಗೆ ಮಾನಸಿಕ ಸಾಮರ್ಥ್ಯ ತುಂಬಿಸುವುದು.

    2. ಪರ್ಯಾಯ ಸಂವಹನ ವ್ಯವಸ್ಥೆ ಕಲಿಸಿಕೊಡುವುದು. ಬರವಣಿಗೆಯನ್ನು ಒಂದು ಮಾಧ್ಯಮವನ್ನಾಗಿಸುವುದು

    3. ಅವಸರವಿಲ್ಲದೆ ಹಾಗೂ ಗಾಬರಿಗೊಳ್ಳದೆ ಮಾತನಾಡುವ ಧೈರ್ಯವನ್ನು ತುಂಬಿಸಬೇಕು. ಪ್ರಾಣಾಯಾಮ ಸಹಕಾರಿ.

    4. ಆಂತರಿಕ ಸಾಮರ್ಥ್ಯ ಹೆಚ್ಚಿಸಲು ಎಲ್ಲಾ ಪ್ರಯತ್ನ, ಅವಕಾಶ, ಮಾರ್ಗದರ್ಶನ ಒದಗಿಸಿಕೊಡಬೇಕು.

    5. ವಯೋಧರ್ಮಕ್ಕನುಗುಣವಾಗಿ ತಜ್ಞರಿಂದ ಸೂಕ್ತ ತರಬೇತಿ ದೊರೆಯುವಂತೆ ವ್ಯವಸ್ಥೆ ಮಾಡಿಕೊಡಬೇಕು.

    6. ಸಹಪಾಠಿಗಳಲ್ಲಿ, ಜನರ ಗುಂಪುಗಳ ಮಧ್ಯದಲ್ಲಿ ಮಗುವಿಗೆ ಅವ ಮಾನವಾಗದಂತೆ ಸುತ್ತಲಿರುವವರಿಗೆ ತಿಳುವಳಿಕೆ ನೀಡಬೇಕು.

    7. ಮಕ್ಕಳು ಗಳಿಸುವ ಅಂಕಕ್ಕಿಂತ ಬದುಕು ದೊಡ್ಡದು ಎಂದು ಪರಿಗಣಿಸಿ ಶಾಲೆಯಲ್ಲಿ ಶಿಕ್ಷಕರು ಮಾನಸಿಕ ಸ್ಥೈರ್ಯ ಹೆಚ್ಚುವಂತೆ ಮಕ್ಕಳಿಗೆ ಪೋ›ತ್ಸಾಹ ಕೊಡಬೇಕು.

    ಸಮಾಜದಲ್ಲಿ ಪ್ರತಿಯೊಬ್ಬರು ಕೂಡ ಸಹಾನುಭೂತಿ, ಮಾನವೀಯತೆಯಿಂದ ವರ್ತಿಸಿದಾಗ ಸದೃಢ ಸಮಾಜ ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts