ವಿಐಎಸ್​ಎಲ್​ಗೆ ಕೊನೇ ಮೊಳೆ!

ನಷ್ಟದ ಕಾರಣ ಭದ್ರಾವತಿ ವಿಐಎಸ್​ಎಲ್ (ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ) ಸೇರಿ ದೇಶದ ಮೂರು ಉಕ್ಕು ಕಾರ್ಖಾನೆಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭವಾಗಿದ್ದು, ಚರ್ಚೆ ಮಾಡಿ ಅಧಿಕೃತ ತೀರ್ಮಾನ ಕೈಗೊಳ್ಳಲು ಕೇಂದ್ರ ಸಚಿವರ ಸಭೆ

ಸದ್ಯದಲ್ಲೇ ನಡೆಯಲಿದೆ. ಸರ್ ಎಂ. ವಿಶ್ವೇಶ್ವರಾಯ ಆರಂಭಿಸಿದ ದೇಶದ ಮೊಟ್ಟ ಮೊದಲ ಸಾರ್ವಜನಿಕ ಉಕ್ಕು ಉತ್ಪಾದನಾ ಸಂಸ್ಥೆ ಪುನಶ್ಚೇತನಗೊಳಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.

ಆದರೆ ನಷ್ಟದಿಂದ ಲಾಭದ ಹಾದಿಗೆ ತರಲು ಸಾಧ್ಯವಿಲ್ಲ, ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಬದಲಿಗೆ ಮುಚ್ಚುವುದೇ ಲೇಸು ಎಂಬ ತೀರ್ವನವೇ ಮೇಲುಗೈ ಪಡೆಯುವ ಲಕ್ಷಣಗಳಿವೆ.

ಕೇಂದ್ರ ಸರ್ಕಾರವೇ ಅಗತ್ಯ ಬಂಡವಾಳ ಹೂಡಿ ಗತವೈಭವ ಮರುಕಳಿಸುವಂತೆ ಮಾಡಬೇಕೆಂಬ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಖಾಸಗಿಯವರಿಗೆ ಮಾರಾಟ ಮಾಡುವ ಪ್ರಯತ್ನಗಳೂ ಸದ್ದಿಲ್ಲದೆ ನಡೆದಿವೆ. ಊದು ಕುಲುಮೆ ಅಧ್ಯಯನ ನೆಪದಲ್ಲಿ ದಕ್ಷಿಣ ಕೊರಿಯಾದ ಸಂಸ್ಥೆಯೊಂದು ಇಡೀ ಕಾರ್ಖಾನೆಯ ಸ್ಥಿತಿಗತಿ ಮಾಹಿತಿ ಸಂಗ್ರಹ ಮಾಡಿದೆ. 2016ರಲ್ಲಿ ನೀತಿ ಆಯೋಗ ಈ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ. ಇದನ್ನು ಹೊರತೆಗೆಯುವ ಪ್ರಯತ್ನ ನಡೆದಿಲ್ಲ.

1 ರೂ.ಗೆ ಪರಭಾರೆ: ಪುನಶ್ಚೇತನದ ಏಕೈಕ ಷರತ್ತಿನೊಂದಿಗೆ ರಾಜ್ಯ ಸರ್ಕಾರ 1989ರಲ್ಲಿ ಕೇವಲ 1 ರೂ.ಗೆ ಈ ಕಾರ್ಖಾನೆಯನ್ನು ಸೈಲ್​ಗೆ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ವಹಿಸಿತು. ಅಲ್ಲದೆ ವಿದ್ಯುತ್ ಶುಲ್ಕ ಮತ್ತು ಸಾಲದ ಹೊಣೆ ಹೊತ್ತ ರಾಜ್ಯ ಸರ್ಕಾರ, ಇದನ್ನು ಲಾಭದಾಯಕ ಸಾರ್ವಜನಿಕ ಉದ್ದಿಮೆಯನ್ನಾಗಿ ಮಾಡಬೇಕೆಂಬ ಷರತ್ತನ್ನು ಹಾಕಿತ್ತು. ಎಚ್.ಡಿ.ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಸೈಲ್​ಗೆ ವಹಿಸಿ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ಹೂಡಿಕೆ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಆದರೆ, ಯಾವುದೇ ಷರತ್ತುಗಳನ್ನು ಸೈಲ್ ಪಾಲನೆ ಮಾಡಲಿಲ್ಲ.

ಮುಚ್ಚುವ ಪಟ್ಟಿಯಲ್ಲಿರುವ ಉಕ್ಕು ಕಾರ್ಖಾನೆಗಳು
  1. 1. ವಿಶ್ವೇಶ್ವರಾಯ ಉಕ್ಕು ಕಾರ್ಖಾನೆ, ಭದ್ರಾವತಿ
  2. 2. ಅಲಾಯ್ ಸ್ಟೀಲ್ ಪ್ಲಾಂಟ್, ದುರ್ಗಾಪುರ
  3. 3. ಸೇಲಂ ಸ್ಟೀಲ್ ಪ್ಲಾಂಟ್, ತಮಿಳುನಾಡು

ಮೊದಲು ಬಂಡವಾಳ ಹಿಂತೆಗೆತ ಪಟ್ಟಿಯಿಂದ ವಿ​ಐಎಸ್ಎಲ್​ ಹೊರತೆಗೆಯಬೇಕು. ರಾಜ್ಯಸರ್ಕಾರದಿಂದ 1 ರೂಪಾಯಿಗೆ ಪಡೆದುಕೊಳ್ಳುವ ಸಂದರ್ಭದಲ್ಲಿ ಆಗಿರುವ ಒಪ್ಪಂದದಂತೆ ಸೈಲ್​ ಬಂಡವಾಳ ಹೂಡಬೇಕು. ಹೊಸಹೊಸ ತಂತ್ರಜ್ಞಾನ ಅಳವಡಿಸಿ ಆಧುನೀಕರಣಗೊಳಿಸಬೇಕು.
| ಕಾರ್ಮಿಕ, ವಿಐಎಸ್​ಎಲ್​

ಎರಡು ಗಣಿ ಮಂಜೂರು

ಯಾವುದೇ ಕಾರ್ಖಾನೆ ಬಂಡವಾಳ ಹಿಂತೆಗೆತ ಪಟ್ಟಿಯಲ್ಲಿದ್ದರೆ ರಾಜ್ಯ ಸರ್ಕಾರ ಗಳು ನೆರವು ನೀಡುವುದಿಲ್ಲ. ಆದರೂ, ವಿಐಎಸ್​ಎಲ್​ಗೆ ಕರ್ನಾಟಕ ಸರ್ಕಾರ ಸಂಡೂರು ತಾಲೂಕು ಎನ್​ಇಬಿ ವಲಯ ದಲ್ಲಿ 140 ಹೆಕ್ಟೇರ್, ರಮಣದುರ್ಗ ವಲಯ ದಲ್ಲಿ 60 ಹೆಕ್ಟೇರ್ ಗಣಿ ಮಂಜೂರು ಮಾಡಿದೆ. ದೇಶದಲ್ಲೇ ಯಾವುದೇ ಸರ್ಕಾರ ಮುಚ್ಚುವ ಭೀತಿಯಲ್ಲಿರುವ ಕಾರ್ಖಾನೆಗೆ ಈ ರೀತಿ ಸಹಾಯಕ್ಕೆ ಬಂದಿರುವ ನಿದರ್ಶನ ಇಲ್ಲ.

| ಎನ್.ಡಿ. ಶಾಂತಕುಮಾರ ಶಿವಮೊಗ್ಗ

Leave a Reply

Your email address will not be published. Required fields are marked *