ಚುನಾವಣೆ ಬಳಿಕವೇ ಪ್ರಧಾನಿ ಆಯ್ಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರವನ್ನು ಕೇಂದ್ರದಲ್ಲಿ ಅಸ್ತಿತ್ವಕ್ಕೆ ತರಬೇಕೆಂಬ ಉದ್ದೇಶದಿಂದಲೇ ಕಾಂಗ್ರೆಸ್ ಸೇರಿ ಸಮಾನ ಮನಸ್ಕ ಪಕ್ಷದವರು ಮಹಾ ಮೈತ್ರಿಕೂಟ ರಚಿಸಲು ಹಿರಿಯ ನಾಯಕ ಶರದ್ ಯಾದವ್ ಸಾರಥ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಲೋಕ ತಾಂತ್ರಿಕ ಜನತಾದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಕೋದಂಡರಾಮಯ್ಯ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸಿದ್ಧಾಂತ ವಿರೋಧಿಸುವ ಪಕ್ಷಗಳು ಒಗ್ಗೂಡಲಿವೆ. ಕೆಲ ಪಕ್ಷದವರು ಚುನಾವಣೆ ಪೂರ್ವ ಮೈತ್ರಿಯಾದರೆ, ಕೆಲವರು ಚುನಾವಣೆ ಬಳಿಕ ನಮ್ಮೊಂದಿಗೆ ಬರಲಿದ್ದಾರೆ. ಚುನಾವಣೆ ಫಲಿತಾಂಶ ಬಳಿಕವೇ ಪ್ರಧಾನಿ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋಮುವಾದಿ, ಜನವಿರೋಧಿ ಬಿಜೆಪಿ ಹಾಗೂ ಸುಳ್ಳು ಹೇಳುತ್ತಿರುವ ನರೇಂದ್ರ ಮೋದಿ ಅವರನ್ನು ಸೋಲಿಸುವುದು ದೇಶದ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ. ಹೀಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಕೆಲಸ ಮಾಡುತ್ತಿದ್ದಾರೆ. ಡಿಎಂಕೆ, ಎನ್ಸಿಪಿ, ಜೆಡಿಎಸ್, ಬಿಎಸ್ಪಿ, ಸಮಾಜ ವಾದಿ, ಸಿಪಿಐ ಹೀಗೆ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಚುನಾವಣೆಗೆ ಹೋಗಲು ತಯಾರಿ ನಡೆಸುತ್ತಿದ್ದೇವೆ. ಈ ಸಲ ಬಿಜೆಪಿ ಗೆಲುವು ಅಸಾಧ್ಯದ ಮಾತು ಎಂದರು. ಮಾಜಿ ಶಾಸಕ ಬಿ.ಆರ್. ಪಾಟೀಲ್, ಎನ್.ಎಸ್.ಖೇಡ, ನೀಲಕಂಠ ಧಾರವಾಡ, ಸುಭಾಶ್ಚಂದ್ರ ಸುದ್ದಿಗೋಷ್ಠಿಯಲ್ಲಿದ್ದರು.

ಉದ್ಯೋಗ ಸೃಷ್ಟಿ, ಕೃಷಿ, ಕೈಗಾರಿಕೆ ಕುಸಿತ: ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೈಗಾರಿಕೆ ಕ್ಷೇತ್ರದ ಪ್ರಗತಿಯಾಗಿಲ್ಲ. ಪ್ರಧಾನಿ ಮೋದಿ ನೀಡಿದ ಭರವಸೆಯಂತೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಭಾರತ ಕುಸಿತ ಕಾಣುವಂತಾಗಿದೆ ಎಂದು ಅರ್ಥಶಾಸ್ತ್ರ ಸಂಶೋಧನಾ ತಜ್ಞರೂ ಆಗಿರುವ ಕೋದಂಡರಾಮಯ್ಯ ಆತಂಕ ವ್ಯಕ್ತಪಡಿಸಿದರು. ದೇಶದಲ್ಲಿ ಗೋರಕ್ಷಕರ ಹೆಸರಿನಲ್ಲಿ ಸಂಘ ಪರಿವಾರದವರು, ಬಜರಂಗ ದಳದವರು ಅಮಾಯಕರ ಹತ್ಯೆ ಮಾಡುವುದು ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಗೋರಕ್ಷಕರು ಎಂದು ಹೇಳಿ ಹಲವು ಹತ್ಯೆಗಳಾಗಿದ್ದು, ನೈತಿಕ ಹೊಣೆ ಹೊತ್ತು ಸಿಎಂ ಯೋಗಿ ಅದಿತ್ಯನಾಥ ರಾಜೀನಾಮೆ ನೀಡಬೇಕಿಗಿತ್ತು. ಆದರೆ ಇನ್ನೂ ಅಧಿಕಾರದಲ್ಲಿ ಮುಂದುವರಿದಿದ್ದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.

ಬಂಡವಾಳ ಹೂಡಿಕೆ ಹೆಚ್ಚಳ, ಕೃಷಿ ಸುಸ್ಥಿರಗೊಳಿಸಿ ಲಾಭದಾಯಕಗೊಳಿಸದೆ, ಅಭಿವೃದ್ಧಿ ಕೆಲಸಗಳನ್ನು ಜನರ ನಿರೀಕ್ಷೆಯಂತೆ ಮಾಡದೆ ವಿಫಲಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗ ಅಭಿವೃದ್ಧಿ ಬದಲಿಗೆ ಧಾರ್ಮಿಕ ವಿಷಯ, ಹಿಂದು ಧರ್ಮ, ರಾಮನ ಕುರಿತು ಮಾತನಾಡಲು ಶುರುವಿಟ್ಟಿದ್ದನ್ನು ನೋಡಿದರೆ ಅವರಿಗೆ ಸೋಲಿನ ಭೀತಿ ಕಾಡಲು ಶುರುವಾದಂತಿದೆ.
| ಕೋದಂಡರಾಮಯ್ಯ ಲೋಕ ತಾಂತ್ರಿಕ ಜನತಾದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Leave a Reply

Your email address will not be published. Required fields are marked *