ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಮೂಡದ ಒಮ್ಮತ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್(ಡಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಒಮ್ಮತ ಮೂಡಿಲ್ಲ. ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ವಿರಾಜಪೇಟೆ ತಾಲೂಕು ಭಾಗದ ನಿರ್ದೇಶಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಮೂಡಿರುವ ಬಿಕ್ಕಟ್ಟು ಬಿಜೆಪಿ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಸಮಾಧಾನಿತರನ್ನು ಸಮಾಧಾನ ಮಾಡುವ ಕಸರತ್ತು ನಡೆದಿದೆ. ಏ.15 ರಂದು ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ.

ಮಡಿಕೇರಿ ಶಾಸಕ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ರಾಬಿನ್ ದೇವಯ್ಯ, ಸಹಕಾರ ಪ್ರಕೋಷ್ಠ ಅಧ್ಯಕ್ಷ ಕುಂದಲ್ಪಾಡಿ ನಾಗೇಶ್ ಸಮ್ಮುಖದಲ್ಲಿ ಬಿಜೆಪಿ ಬೆಂಬಲಿತ 9 ನಿರ್ದೇಶಕರ ಸಭೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸಂಜೆ ನಡೆದಿತ್ತು. ಹಾಲಿ ಅಧ್ಯಕ್ಷ ಬಿ.ಡಿ.ಮಂಜುನಾಥ್, ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವ ನಿರ್ಧಾರವನ್ನು ಮುಖಂಡರು ಪ್ರಕಟಿಸಿದರು. ಇದಕ್ಕೆ ವಿರಾಜಪೇಟೆ ತಾಲೂಕು ಭಾಗದ ನಿರ್ದೇಶಕರಾದ ಬಾಂಡ್ ಗಣಪತಿ, ರಘು ನಾಣಯ್ಯ, ಹೊಟ್ಟೆಂಗಡ ರಮೇಶ್, ಕೋಲತಂಡ ಸುಬ್ರಮಣಿ ವಿರೋಧ ವ್ಯಕ್ತಪಡಿಸಿ, ಸಭೆಯಿಂದ ಹೊರ ನಡೆದರು.

ಕಳೆದ ಐದು ವರ್ಷ ಬಿ.ಡಿ. ಮಂಜುನಾಥ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದ ಬಾಂಡ್ ಗಣಪತಿಗೆ ಅವಕಾಶ ನೀಡಲಿಲ್ಲ. ಈ ಬಾರಿ ವಿರಾಜಪೇಟೆ ತಾಲೂಕಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ವಿರಾಜಪೇಟೆ ಭಾಗದ ನಿರ್ದೇಶಕರು ಪಟ್ಟುಹಿಡಿದರು. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನವನ್ನು ಎರಡೂವರೆ ವರ್ಷ ಹಂಚಿಕೊಳ್ಳುವ ಪ್ರಸ್ತಾವನೆಯನ್ನು ಮುಖಂಡರು ಮುಂದಿಟ್ಟರು. ಮೊದಲ 30 ತಿಂಗಳಿಗೆ ಹಾಲಿ ಅಧ್ಯಕ್ಷ- ಉಪಾಧ್ಯಕ್ಷರನ್ನು ಮುಂದುವರಿಸುವ ನಿರ್ಧಾರವನ್ನು ಮುಖಂಡರು ಪ್ರಕಟಿಸಿದರು.

ಹಾಲಿ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ಮುಖಂಡರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಮನಸ್ಸು ಮಾಡಲಿಲ್ಲ. ಇದರಿಂದ ಬಿಜೆಪಿ ವರಿಷ್ಠರ ನಿರ್ಧಾರಕ್ಕೆ ಮೌನ ಸಮ್ಮತಿ ವ್ಯಕ್ತಪಡಿಸಿದರು. ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಬಾಂಡ್ ಗಣಪತಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿಯಂತೆ ಅಪೆಕ್ಸ್ ಬ್ಯಾಂಕ್ ನಿರ್ದೇಶಕರನ್ನಾಗಿ ಆಯ್ಕೆ ಮಾಡುವ ವರಿಷ್ಠರ ನಿರ್ಧಾರಕ್ಕೆ ಸಮ್ಮತಿ ವ್ಯಕ್ತ ಪಡಿಸಲಿಲ್ಲ.

ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ತಳೂರು ಕಿಶೋರ್‌ಕುಮಾರ್, ಕೋಡಿರ ಪ್ರಸನ್ನ ಸೋಲಿನಿಂದ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ತೀವ್ರ ಬೇಸರಗೊಂಡಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಆಯ್ಕೆ ಮಾಡಲು ನಡೆದ ಬಿಜೆಪಿ ಪ್ರಮುಖರ ಸಭೆಗೂ ಆಗಮಿಸಿರಲಿಲ್ಲ. ಡಿಸಿಸಿ ಬ್ಯಾಂಕ್ ಸಹವಾಸ ನನಗೆ ಬೇಡ ಎಂದು ಆತ್ಮೀಯರೊಂದಿಗೆ ಬೇಸರ ಹಂಚಿಕೊಂಡಿದ್ದಾರೆ.

ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅಪ್ಪಚಟ್ಟೋಳಂಡ ಮನು ಮುತ್ತಪ್ಪ, ಕಿಮ್ಮುಡೀರ ಜಗದೀಶ್ ಸಭೆಗೆ ಆಗಮಿಸಿರಲಿಲ್ಲ. ಬಿಜೆಪಿ ನಿರ್ಧಾರಕ್ಕೆ ವಿರುದ್ಧವಾಗಿ ಸ್ಪರ್ಧಿಸಿದ್ದರಿಂದ ಅವರನ್ನು ಸಭೆಗೆ ಆಹ್ವಾನಿಸಿರಲಿಲ್ಲ. ಒಟ್ಟು 13 ನಿರ್ದೇಶಕ ಸ್ಥಾನದ ಪೈಕಿ 9 ಬಿಜೆಪಿ ಬೆಂಬಲಿತರು ಚುನಾಯಿತರಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಬಿ.ಕೆ.ಚಿಣ್ಣಪ್ಪ, ಜೆಡಿಎಸ್ ಬೆಂಬಲಿತ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಗೆಲುವು ಸಾಧಿಸಿದ್ದಾರೆ.

ಬಾಂಡ್ ಗಣಪತಿ ಬಂಡಾಯ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ. ಮಡಿಕೇರಿ ಶಾಸಕರು ಹಾಲಿ ಅಧ್ಯಕ್ಷರಿಗೆ ಮತ್ತೊಂದು ಅವಕಾಶ ನೀಡಲು ಒತ್ತಾಸೆಯಾಗಿ ನಿಂತಿದ್ದಾರೆ. ಇದರಿಂದ ಹೊಸಬರಿಗೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಪ್ರಮುಖ ನಾಯಕರೊಬ್ಬರು ವಿಜಯವಾಣಿಯೊಂದಿಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಿ.ಡಿ. ಮಂಜುನಾಥ್- ಕೇಟೋಳಿರ ಹರೀಶ್ ಪೂವಯ್ಯ ಅವರಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಬೆಂಬಲ ನೀಡುವಂತೆ ಬಿಜೆಪಿ ಬೆಂಬಲಿತ ಸದಸ್ಯರಿಗೆ ವಿಪ್ ಜಾರಿ ಮಾಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿ, ಗೆಲುವು ಸಾಧಿಸದಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ, ಅಧಿಕೃತ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಅಧ್ಯಕ್ಷರ ವಿರುದ್ಧ ಕರಪತ್ರ: ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷ ಬಿ.ಡಿ. ಮಂಜುನಾಥ್ ವಿರುದ್ಧ ಗಂಭೀರ ಆರೋಪಗಳನ್ನೊಳಗೊಂಡ ಎರಡು ಪುಟದ ಕರಪತ್ರವನ್ನು ಬೇನಾಮಿ ಹೆಸರಿನಲ್ಲಿ ಹಂಚಲಾಗಿದೆ. ಹಾಲಿ ನಿರ್ದೇಶಕರು, ಬಿಜೆಪಿ ಮುಖಂಡರು ಸೇರಿದಂತೆ ಪ್ರಮುಖರಿಗೆ ಬೇನಾಮಿ ಪತ್ರ ಕಳುಹಿಸಲಾಗಿದೆ. ತನ್ನ ಮೇಲಿನ ಆರೋಪದ ಕರಪತ್ರಕ್ಕೆ ಪ್ರತಿಯಾಗಿ ಸ್ಪಷ್ಟೀಕರಣ ಪತ್ರವನ್ನು ಬಿ.ಡಿ. ಮಂಜುನಾಥ್ ಕಳುಹಿಸಿದ್ದಾರೆ.
ಮಂಗಳೂರು ಹಾಗೂ ಬೆಳಗಾವಿ ಮೂಲದ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಸಾಲ ನೀಡುವುದರ ಮೂಲಕ ಪ್ರಯೋಜನ ಪಡೆದಿದ್ದಾರೆ. ಡಿಸಿಸಿ ಬ್ಯಾಂಕ್ ನೌಕರರ ನೇಮಕಾತಿಗೆ 1 ಕೋಟಿ ರೂ. ಪಡೆದಿದ್ದಾರೆ. ಶಾಖಾ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 40 ಲಕ್ಷ ರೂ. ಪಡೆದಿದ್ದಾರೆ. ತನ್ನ ಹೆಂಡ್ತಿ, ಇತರೆ ವ್ಯಕ್ತಿಗಳ ಹೆಂಡ್ತಿಯರ ಹೆಸರಿನಲ್ಲಿ 120 ಎಕರೆ ಕಾಫಿ ತೋಟ ಖರೀದಿಗೆ 20 ಕೋಟಿ ರೂ. ಸಾಲ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ ಒಪ್ಪಿಗೆ ಇಲ್ಲದೆ ನೀಡಲಾಗಿದೆ. ಆಡಳಿತ ಮಂಡಳಿ ಒಪ್ಪಿಗೆ ಇಲ್ಲದೆ ಪಡೆದ ಈ ಸಾಲಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಕ್ರಮ ಆಗುವುದನ್ನು ತಪ್ಪಿಸಲು ಬಡ್ಡಿ ಸಹಿತ ಮರುಪಾವತಿ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಐದು ವರ್ಷ ಆಡಳಿತಾವಧಿಯಲ್ಲಿ ಇಲ್ಲದ ಆರೋಪ ಈಗ ಮಾಡಲಾಗುತ್ತಿದೆ. ಏನೂ ಇಲ್ಲದಿರುವಾಗ ಸುಳ್ಳು ಆರೋಪ ಮಾಡುವುದರ ಮೂಲಕ ನನ್ನ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆಂದು ವಿಜಯವಾಣಿಗೆ ತಿಳಿಸಿದ್ದಾರೆ. ತನ್ನ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ನಿರ್ದೇಶಕರು, ಶಾಸಕರು, ಬಿಜೆಪಿ ಮುಖಂಡರು ಸೇರಿದಂತೆ ಸಾಕಷ್ಟು ಜನರಿಗೆ ಸ್ಪಷ್ಟೀಕರಣ ಪತ್ರ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಬಿಜೆಪಿ ಶಾಸಕರು, ಪಕ್ಷದ ಪ್ರಮುಖರ ಸಭೆಯಲ್ಲಿ ಪ್ರತಿಯೊಬ್ಬ ನಿರ್ದೇಶಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಪಕ್ಷ ನಿರ್ಧರಿಸುವವರಿಗೆ ಪಕ್ಷದವರು ಬೆಂಬಲ ನೀಡಬೇಕು.
ಬಿ.ಬಿ. ಭಾರತೀಶ್ ಬಿಜೆಪಿ ಜಿಲ್ಲಾಧ್ಯಕ್ಷ

ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರ ಬಗ್ಗೆ ಪಕ್ಷ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ.
ಬಿ.ಡಿ. ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ

Leave a Reply

Your email address will not be published. Required fields are marked *