ಇಸ್ರೋ ಐತಿಹಾಸಿಕ ಯಾನ : 15ರಂದು ಚಂದ್ರಯಾನ-2 ಉಡಾವಣೆ

ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಉಡಾವಣೆಗೆ ದಿನಗಣನೆ ಆರಂಭವಾಗಿದೆ. ಲ್ಯಾಂಡರ್ ವಿಕ್ರಂ ಸುರಕ್ಷಿತವಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಸುವುದು ಯೋಜನೆಯ ಪ್ರಮುಖ ಸವಾಲಾಗಿದೆ.

ಇಸ್ರೋದ ವಿಜ್ಞಾನಿಗಳು ಇದಕ್ಕಾಗಿಯೇ ಹೆಚ್ಚಿನ ಸಮಯ ವ್ಯಯಿಸಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಲ್ಯಾಂಡಿಂಗ್​ಗೆ ಸೂಕ್ತ ಸ್ಥಳದ ಹುಡುಕಾಟಕ್ಕಾಗಿ 3,500 ಫೋಟೋಗಳನ್ನು ಪರಿಶೀಲಿಸಿದ್ದಾರೆ. ನಾಸಾದ ಲೂನಾರ್ ರಿಕನೇಸಾನ್ಸ್ ಆರ್ಬಿಟರ್, ಜಪಾನ್​ನ ಕಗುವಾ ಲೂನಾರ್ ಆರ್ಬಿಟರ್ ಸಂಗ್ರಹಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇದರ ಜತೆಗೆ ಚಂದ್ರಯಾನ-1 ಸಂಗ್ರಹಿಸಿರುವ ಫೋಟೋ ಗಳನ್ನೂ ಅಧ್ಯಯನ ನಡೆಸಲಾಗಿದೆ. ಚಂದ್ರನಲ್ಲಿ ಭಾರಿಗಾತ್ರದ ಕಲ್ಲುಗಳಿವೆ. 32 ಸೆಂ.ಮೀ ದೊಡ್ಡ ಕಲ್ಲು ಕೂಡ ಸುರಕ್ಷಿತ ಲ್ಯಾಂಡಿಂಗ್​ಗೆ ಅಡ್ಡಿಯಾಗಲಿದೆ. 

ದಕ್ಷಿಣ ಧ್ರುವದ ಆಯ್ಕೆ ಯಾಕೆ?:ಇತ್ತೀಚೆಗೆ ಬಾಹ್ಯಾಕಾಶಕ್ಕೆ ಹಾರಿರುವ ಚೀನಾದ ಚಾಂಗ್ ಇ-4 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ಮೊದಲ ಉಪಗ್ರಹ. ಇದು ದಕ್ಷಿಣ ಧ್ರುವದ ಅಟ್​ಕೆನ್ ಬೇಸಿನ್​ನಿಂದ 180 ಕಿಮೀ ದೂರದಲ್ಲಿ ಇಳಿದಿತ್ತು. ಭಾರತವೂ ಇದೇ ಧ್ರುವದಲ್ಲೇ ವಿಕ್ರಂನ್ನು ಇಳಿಸಲು ಬಯಸಿದ್ದು, ಇಲ್ಲಿ ಆಳ ಕುಳಿಗಳು ಮತ್ತು ದೊಡ್ಡ ದೊಡ್ಡ ಕಲ್ಲುಗಳ ಪ್ರಮಾಣ ಕಡಿಮೆ ಇದೆ. ಸುರಕ್ಷಿತವಾಗಿ ಇಳಿಯಲು 12 ಡಿಗ್ರಿಗಿಂತಲೂ ಕಡಿಮೆ ತಗ್ಗು ಪ್ರದೇಶದ ಅಗತ್ಯವಿದೆ. ದಕ್ಷಿಣ ಧ್ರುವದಲ್ಲಿ ಮೇಲ್ಮೈ ಸಮತಟ್ಟಾಗಿರುವುದು ಲ್ಯಾಂಡಿಂಗ್​ಗೆ ಅನುಕೂಲಕರವಾಗಿದೆ. ಇದರ ಹೆಚ್ಚಿನ ಭಾಗ ನೆರಳಿನಿಂದ ಆವೃತ್ತವಾಗಿರುವುದರಿಂದ, ಈ ಭಾಗದಲ್ಲಿ ನೀರಿನ ಅಂಶಗಳು ಕಂಡುಬರುವ ಸಾಧ್ಯತೆ ದಟ್ಟವಾಗಿದೆ. ಶೀತಲ ವಾತಾವರಣದಿಂದ ಸೌರಮಂಡಲದ ಉಗಮದ ಬಗೆಗಿನ ಅಧ್ಯಯನಕ್ಕೂ ಅನುಕೂಲವಾಗಲಿದೆ. 2018ರಲ್ಲಿ ಇಸ್ರೋ ನೀಡಿದ್ದ ಮಾಹಿತಿಯಂತೆ ಅಟ್​ಕೆನ್ ಬೇಸಿನ್​ನಿಂದ ಉತ್ತರಕ್ಕೆ 350 ಕಿಮೀ ದೂರದಲ್ಲಿ ವಿಕ್ರಂ ಲ್ಯಾಂಡಿಂಗ್ ಆಗಲಿದೆ. ಇನ್ನೊಂದು ಸ್ಥಳವನ್ನೂ ಗುರುತಿಸಲಾಗಿದ್ದು, ಇದು ಇದರ ಪಕ್ಕದಲ್ಲೇ ಇದೆ.

ಕೆಲವು ಸಮಸ್ಯೆಗಳು: ವಿಕ್ರಂ ಸುರಕ್ಷಿತವಾಗಿ ಚಂದ್ರನ ಮೇಲ್ಮೈನಲ್ಲಿ ದರೂ ಅಲ್ಲಿನ ಧೂಳು ಸೌರಫಲಕಗಳ, ಸೆನ್ಸರ್​ಗಳು, ನ್ಯಾವಿಗೇಷನಲ್ ಸಾಧನಗಳು ಮುಂತಾದವುಗಳ ಕಾರ್ಯನಿರ್ವಹಣೆಗೆ ಅಲ್ಪ ಪ್ರಮಾಣದಲ್ಲಿ ಅಡ್ಡಿಯಾಗಲಿದೆ.

ಲ್ಯಾಂಡಿಂಗ್ ನಡೆಯದಿದ್ದರೆ?

ಲ್ಯಾಂಡರ್ ವಿಕ್ರಂ ನಿಗದಿತ ಸ್ಥಳದಲ್ಲಿ ಇಳಿಯಲು ಸಾಧ್ಯವಾಗದಿದ್ದರೆ, ನಂತರದ 65 ಸೆಕೆಂಡುಗಳಲ್ಲಿ 10 ಮೀಟರ್ ಎತ್ತರ ತಲುಪಲಿದೆ. ಲ್ಯಾಂಡಿಂಗ್​ಗೆ 2ನೇ ಸ್ಥಳ ಆಯ್ದುಕೊಂಡಿದ್ದರೆ, ಮುಂದಿನ 40 ಸೆಕೆಂಡುಗಳಲ್ಲಿ 60 ಮೀ ಎತ್ತರಕ್ಕೆ ಏರಲಿದೆ. ಅಲ್ಲಿಂದ ಮುಂದಿನ 25 ಸೆಕೆಂಡುಗಳಲ್ಲಿ ಲ್ಯಾಂಡಿಂಗ್​ಗೆ ಆಯ್ದುಕೊಂಡಿರುವ ಇನ್ನೊಂದು ಸ್ಥಳದ 10 ಮೀಟರ್ ಎತ್ತರಕ್ಕೆ ತಲುಪಲಿದೆ. ನಂತರ ಸುರಕ್ಷಿತವಾಗಿ ಇಳಿಯಲಿದೆ.

 

Leave a Reply

Your email address will not be published. Required fields are marked *