More

    ಯುವಕರ ಶಕ್ತಿಯೇ ದೇಶದ ಶಕ್ತಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಯುವಕರು ಮಾನವೀಯ ಮೌಲ್ಯಗಳೊಂದಿಗೆ ಸಮಯಪ್ರಜ್ಞೆ, ಸಮಯ ಸದುಪಯೋಗದ ಕಲೆ ಅರಿಯಬೇಕು. ಅಂದಾಗ ಮಾತ್ರ ರಾಷ್ಟ್ರದ ಅಭಿವೃದ್ಧಿಗೆ ನೆರವಾಗಲು ಸಹಾಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
    ನಗರದ ಸೃಜನಾ ರಂಗ ಮಂದಿರದಲ್ಲಿ ನೆಹರು ಯುವ ಕೇಂದ್ರ, ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಲಾ ಕಾಲೇಜು, ಕರ್ನಾಟಕ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಯುವ ಉತ್ಸವ-ಇಂಡಿಯಾ-2047 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ನೆಹರು ಯುವ ಕೇಂದ್ರವು ಯುವ ಸಮೂಹದಲ್ಲಿರುವ ಸಾಂಸ್ಕೃತಿಕ, ಕ್ರೀಡೆ, ಕಲೆ, ಚಿತ್ರಕಲೆ, ನೃತ್ಯ ಮತ್ತು ಇತರೆ ವಿಭಾಗಗಳಲ್ಲಿನ ಅವರ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುತ್ತಿದೆ. ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರ ಆಯೋಜಿಸುವ ಮೂಲಕ ಯುವಕ, ಯುವತಿಯರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಯುವ ಜನತೆಯು ಉದ್ಯೋಗದಾತ, ಉತ್ಪಾದನೆ ಕ್ಷೇತ್ರದ ಒಂದು ಭಾಗವಾದಾಗ ಮಾತ್ರ ದೇಶದ ಶಕ್ತಿ, ಸಂಪತ್ತು ಬೆಳವಣಿಗೆಯಾಗಲು ಸಾಧ್ಯ. ಯುವಕರು ದೇಶಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ದೇಶ ಉತ್ತಮವಾಗಲಿದೆ. ನೆಹರು ಯುವ ಕೇಂದ್ರವು ಯುವಕರಲ್ಲಿನ ಕೌಶಲ ಬೆಳೆಸುವ ಕೆಲಸ ಮಾಡಬೇಕು ಎಂದರು.
    ಭಾಷಣ, ಚಿತ್ರಕಲಾ, ಕವನ ರಚನಾ, ಮೊಬೈಲ್ ಛಾಯಾಚಿತ್ರ, ಸಮೂಹ ನೃತ್ಯ, ಜನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ದಕ್ಷಿಣ ವಲಯದ ನೆಹರು ಯುವ ಕೇಂದ್ರ ಸಂಘಟನೆ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಎಂ.ಗೌತಮ ರೆಡ್ಡಿ, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ.ಮಂಜಲಿ ಸಾಳುಂಕೆ, ಇತರರು ಇದ್ದರು.
    ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಸ್ವಾಗತಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts