ರೋಣ: ಪಟ್ಟಣದ 17ನೇ ವಾರ್ಡ್ನಲ್ಲಿನ ಮುಖ್ಯ ನೀರಿನ ಪೈಪ್ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗಿ ಪೋಲಾಗುತ್ತಿದೆ.
ಕಳೆದ ಮೂರು ತಿಂಗಳಿಂದ ಒಡೆದಿರುವ ಪೈಪ್ಲೈನ್ ಸರಿಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ನಿವಾಸಿಗಳು ಮನವಿ ಮಾಡಿದರೂ ಅವರು ಕ್ಯಾರೆ ಎನ್ನುತ್ತಿಲ್ಲ. ಪ್ರತಿ ಬಾರಿ ನೀರು ಪೂರೈಕೆ ಮಾಡಿದಾಗಲೂ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಚರಂಡಿಯ ಪಕ್ಕದಲ್ಲಿಯೇ ಇರುವ ಪೈಪ್ಲೈನ್ ಒಡೆದಿದ್ದು ಅದರಲ್ಲಿ ಚರಂಡಿ ನೀರು ತುಂಬಿ ಮನೆಗಳು ಹಾಗೂ ಅಂಗಡಿಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರಾದ ಕರುಣಾಕರ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಕೂಡಲೇ ಪುರಸಭೆ ಅಧಿಕಾರಿಗಳು ಪೈಪ್ಲೈನ್ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದ ನೀರು ಸರಬರಾಜು ಅಧಿಕಾರಿ ಬಸವರಾಜ ಕಿರೇಸೂರ ಶೀಘ್ರದಲ್ಲಿ ಒಡೆದಿರುವ ಪೈಪ್ಲೈನ್ ಸರಿಪಡಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಪೈಪ್ಲೈನ್ ಒಡೆದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಯಾರು ದೂರು ನೀಡಿಲ್ಲ. ದೂರವಾಣಿ ಕರೆ ಮಾಡಿದ್ದು, ವಿಷಯ ತಿಳಿದ ಕೂಡಲೇ ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡಿದ್ದೇನೆ.
| ರಮೇಶ ಹೊಸಮನಿ ಮುಖ್ಯಾಧಿಕಾರಿ, ರೋಣ