More

    ತತ್ತ್ವಜ್ಞಾನಿಯ ನಿಲುವು

    ಸುಟ್ಟ ಹಗ್ಗದ ಬೂದಿ ರೂಪ ಮಾತ್ರದಿ ಹಗ್ಗ |

    ಗಟ್ಟಿ ಜಗವಂತು ತತ್ತ್ವಜ್ಞಾನ ಸೋಕೆ ||

    ತೊಟ್ಟಿಹುದು ಲೋಕರೂಪವ, ತಾತ್ತ್ವಿಕನ ವೃತ್ತಿ |

    ಕಟ್ಟದವನಾತ್ಮವನು – ಮಂಕುತಿಮ್ಮ ||

    ‘ಹಗ್ಗವನ್ನು ಸುಟ್ಟರೆ ಆ ಬೂದಿ ಹಗ್ಗದಂತೆಯೇ ಕಾಣುತ್ತದೆ, ಆದರೆ ಹಗ್ಗವಾಗಿರುವುದಿಲ್ಲ. ತತ್ತ್ವಜ್ಞಾನವು ಸೋಕಿದರೆ ಈ ಗಟ್ಟಿ ಜಗತ್ತೂ ಕೂಡ ಹೀಗೆಯೇ. ತಾತ್ತಿ್ವಕನು ತನ್ನ ಕೆಲಸ-ಕಾರ್ಯಗಳಲ್ಲಿ ಲೋಕರೂಪವನ್ನು ತೊಟ್ಟಿರುತ್ತಾನೆ ಆದರೆ ಆತನ ಆತ್ಮವು ಅದರಿಂದ ಬಂಧಿಸಲ್ಪಟ್ಟಿರುವುದಿಲ್ಲ ಎನ್ನುತ್ತದೆ ಈ ಕಗ್ಗ.

    ಸೂರಿನಿಂದಲೋ, ಬಾಗಿಲ ಸಂದಿನಿಂದಲೋ ಮನೆಯೊಳಗೆ ಇಣುಕುವ ಸೂರ್ಯಕಿರಣಗಳು ಬೆಳಕಿನ ಕೋಲಿನಂತೆ ಭಾಸವಾಗುತ್ತವೆ. ಅದರ ಚೆಲುವಿಗೆ, ನೆಲದಲ್ಲಿ ಅದು ಬಿಡಿಸುವ ಚಿತ್ತಾರಕ್ಕೆ ಮನಸೋತು ಆ ಬಿಸಿಲುಕೋಲನ್ನು ಹಿಡಿಯಲು ಹೋದರೆ ಅದು ಕೈಗೆ ಸಿಗಲಾರದು. ಆದರೂ ಇದೆ ಎಂಬ ಭ್ರಮೆ ಹುಟ್ಟಿಸಿ ಆಕರ್ಷಿಸುತ್ತದೆ. ಪುಟ್ಟ ಮಕ್ಕಳ ಮನಸ್ಸನ್ನು ಸೆಳೆದು, ಸತಾಯಿಸಿ, ಅಳಿಸುವ, ಏನೂ ಅರಿಯದಂತೆ ಮರೆಯಾಗುವ ಬಿಸಿಲು ಕೋಲಿನಂತೆ ಈ ಜಗತ್ತು.

    ಜಗತ್ತಿನ ಆಕರ್ಷಣೆಗಳಿಗೆ ಮರುಳಾಗಿ ಅದನ್ನು ತನ್ನದಾಗಿಸಿಕೊಳ್ಳಲು ಹವಣಿಸುವ ಮನುಜನು ಭಾವಾವೇಶಕ್ಕೆ ಒಳಗಾಗುತ್ತಾನೆ, ವಿವೇಚನಾರಹಿತನಾಗಿ ವರ್ತಿಸುತ್ತಾನೆ. ಯಾವಾಗ ಆತನಿಗೆ ದೇವ-ಜೀವತತ್ತ್ವದ ಒಂದಿನಿತು ಸ್ಪರ್ಶವಾಗುತ್ತದೆಯೋ ಆಗ ಜಗತ್ತಿನ ಗಟ್ಟಿತನವು ಸುಟ್ಟುಹೋಗುವುದರೊಂದಿಗೆ ಅದು ಪೊಳ್ಳೆಂದು ಅರ್ಥವಾಗುತ್ತದೆ. ಅಂದರೆ ವ್ಯಕ್ತಿಯು ಜೀವನದಿಂದ ವಿಮುಖನಾಗುತ್ತಾನೆ ಎಂದರ್ಥವಲ್ಲ; ಕ್ಷಣಿಕತೆಯನ್ನು ಬೆಂಬೆತ್ತದೆ, ಅರ್ಥಪೂರ್ಣವಾಗಿ ಜೀವಿಸುವುದನ್ನು ಅರಿಯುತ್ತಾನೆ.

    ಒಂದು ವಸ್ತುವು, ಬೇರೆಯೇ ರೀತಿಯ ವಸ್ತು ಎನಿಸದೆ ಅದಾಗಿಯೇ ಇರುವ ವಸ್ತುಸ್ಥಿತಿಗೆ ತತ್ತ್ವ ಎನ್ನುತ್ತೇವೆ. ನೆಲದ ಮೇಲೆ ಹರಡಿಕೊಂಡಿದ್ದ ಹಗ್ಗಕ್ಕೆ ಬೆಂಕಿ ಹಿಡಿದು, ಅದು ಇರುವ ಸ್ಥಿತಿಯಲ್ಲೇ ಬೂದಿಯಾದಾಗ ಹಗ್ಗದಂತೆಯೇ ಕಾಣುತ್ತದೆ. ಬಳಿ ಸಾರಿ ಅಲುಗಿಸಿದರಷ್ಟೇ ಅದು ಹಗ್ಗದ ರೂಪದ ಬೂದಿಯ ರಾಶಿ ಎಂದರ್ಥವಾಗುತ್ತದೆ. ಅಂತೆಯೇ ಲೋಕಜೀವನವು ಬಣ್ಣಬಣ್ಣವಾಗಿ, ಬಗೆಬಗೆಯ ಆಸೆ, ಕುತೂಹಲಗಳನ್ನು ಹುಟ್ಟುಹಾಕುತ್ತ ಮನುಷ್ಯಚಿತ್ತವನ್ನು ಮರುಳುಗೊಳಿಸುತ್ತದೆ. ಅದುವೇ ಶಾಶ್ವತ ಆನಂದವನ್ನು ಕರುಣಿಸುತ್ತದೆ ಎಂದು ಲೌಕಿಕದ ಮೋಹದೊಳಗೆ ವ್ಯಕ್ತಿಯು ಮುಳುಗಿಬಿಡುತ್ತಾನೆ. ವಾಸ್ತವವನ್ನು ಮರೆತುಬಿಡುತ್ತಾನೆ. ಆದರೆ ಅದು ನಿಜವಲ್ಲ, ಭ್ರಮೆ, ತೋರಿಕೆ ಮಾತ್ರ ಎನ್ನುವುದು ಅರಿವಾಗಬೇಕಿದ್ದರೆ ಮನುಜಮತಿಯು ಎಚ್ಚೆತ್ತುಕೊಳ್ಳಬೇಕು. ಜೀವನದ ಹೋರಾಟದಲ್ಲಿ ಅನುಭವವು ಬೆಳೆಯುತ್ತ ಹೋದಂತೆ ಚಿತ್ತವಿಭ್ರಮವು ಕಡಿಮೆಯಾಗುತ್ತದೆ. ಇಹ-ಪರಗಳ ಬಗ್ಗೆ ಕುತೂಹಲ, ಆತ್ಮಚೈತನ್ಯದ ಜೈತ್ರಯಾತ್ರೆಯ ಅರಿವು, ಸೃಷ್ಟಿಯದ್ಭುತಗಳಲ್ಲಿ ಮೇಳೈಸಿರುವ ಜಗನ್ನಿಯಾಮಕನ ಇರವು ಮನುಷ್ಯನ ಆಂತರ್ಯವನ್ನು ಚಿಂತನೆಗೆ ಹಚ್ಚುತ್ತದೆ.

    ಲೋಕಸಂಪರ್ಕದಲ್ಲಿ ಪರಿಪಾಕಗೊಳ್ಳುವ ಬದುಕಿನಲ್ಲಿ ತಾನು ಏನು, ತಾನು ಇರಬೇಕಾದದ್ದು ಹೇಗೆ ಎಂಬುದನ್ನು ಆತನು ಅರ್ಥಮಾಡಿಕೊಳ್ಳುತ್ತಾನೆ. ಬದುಕಿನ ಭ್ರಾಂತಿಯನ್ನು ತೊರೆದು ಆತ್ಮಜ್ಞಾನ ಹೊಂದುತ್ತಾನೆ. ಅಂದರೆ ಸಾಕ್ಷೀಭಾವದಿಂದ ಜೀವನವನ್ನು ಗಮನಿಸುವ, ಯಾವುದಕ್ಕೂ ಅಂಟದ ಸ್ಥಿತಿ. ತಾನೇನು ಮಾಡುತ್ತಿದ್ದೇನೆ, ತನ್ನ ಯೋಚನೆಗಳೇನು, ಲೋಕವ್ಯವಹಾರವು ಹೇಗಿದೆ ಎಂದು ತಿಳಿದಿರುವ ಎಚ್ಚರದ ಸ್ಥಿತಿ. ತಾತ್ತಿ್ವಕನು ಹೀಗೆ ತನ್ನ ಆಂತರ್ಯವನ್ನು ಸ್ಪಷ್ಟವಾಗಿ ಅರಿತಿರುತ್ತಾನೆ. ಆದುದರಿಂದ ಲೋಕವ್ಯವಹಾರಗಳಲ್ಲಿ ಕರ್ತವ್ಯಗಳನ್ನು ನಿಭಾಯಿಸಿದರೂ ಮೋಹವಶನಾಗಲಾರ, ಮತ್ಸರಿಸಲಾರ, ಹಗೆ, ಕೋಪಗಳಿಗೆ ಒಳಗಾಗದೆ ಸಮಚಿತ್ತದಿಂದ ಇರಬಲ್ಲ. ಲೋಕವ್ಯವಹಾರವು ತಾತ್ತಿ್ವಕನ ಮೇಲೆ ಯಾವ ಪ್ರಭಾವವನ್ನೂ ಬೀರಲಾರದು. ಜಗದ ಸಂಸಾರದಲ್ಲಿ ಮುಳುಗೆದ್ದರೂ ಆಂತರ್ಯವು ನಿರ್ಲಿಪ್ತವಾಗಿರುತ್ತದೆ, ಅಂತರಾತ್ಮನು ಯಾವ ಬಂಧನಕ್ಕೂ ಒಳಗಾಗದೆ ಮುಕ್ತನಾಗಿರುತ್ತಾನೆ. ಜೀವನದ ಪ್ರಗತಿ ಕೂಡ ಸುಲಭವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts