ಲೋಕಾಪುರ : ಸನ್ಮಾರ್ಗದ ದಾರಿಗೆ ಕೊಂಡ್ಯೊಯಲು ಧಾರ್ಮಿಕ ಪ್ರವಾದಿಗಳು ದಾರ್ಶನಿಕರಾಗಿ ಸಂದೇಶ ನೀಡಿದ್ದಾರೆ ಎಂದು ಇಳಕಲ್ಲನ ಡಾ. ಮಹಾಂತ ಶಿವಯೋಗಿ ಮಹಾ ಸ್ವಾಮಿಗಳು ಹೇಳಿದರು.
ಪಟ್ಟಣದ ಚಾಂದತಾರಾ ಮಸೀದಿ ಆವರಣದಲ್ಲಿ ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ಪಟ್ಟಣದ ಮುಸ್ಲಿಂ ಬಾಂಧವರು ಭಾನುವಾರ ಆಯೋಜಿಸಿದ್ದ ಭಾವೈಕ್ಯತೆಯ ಇಫ್ತಾರ್ ಕೂಟದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರವಾದಿ ಮೊಹಮ್ಮದ ಪೈಗಂಬರ ಅವರಿಗೆ ಜ್ಞಾನ ಗೋಚರಿಸಿದ ಅದ್ಬುತ ಶಕ್ತಿಗೆ ಅಲ್ಲಾಹು ಎಂದು ಕರೆದರು. ಅದೇ ರೀತಿಯಾಗಿ 12 ನೇ ಶತಮಾನದಲ್ಲಿ ಬಸವಣ್ಣನವರು ಅದ್ಭುತ ಶಕ್ತಿಗೆ ಲಿಂಗ ಪೂಜೆ ಎಂದು ಕರೆದರು. ನಮ್ಮಲ್ಲಿ ಭೇಧ-ಭಾವ ಇಲ್ಲ, ನಾವೆಲ್ಲರೂ ಸಮಾನರು, ಭಾರತ ದೇಶ ಸಮಾನತೆ ಸಾರುವ ದೇಶ. ಇಲ್ಲಿ ತಲೆತಲಾಂತರದಿಂದ ಹಿಂದೂ, ಮುಸ್ಲಿಂ, ಜೈನ, ಸಿಖ್ ಹಮ್ ಸಬ್ ಭಾಯಿ ಭಾಯಿ ಎಂದು ಬಂಧುತ್ವ ಭಾರತ ಕಟ್ಟಿಕೊಂಡು ಬರುತ್ತಿದ್ದೇವೆ ಎಂದರು.
ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಇ್ತಾರ್ ಕೂಟಗಳು ಸಾಮಾಜಿಕ ಸಾಮರಸ್ಯ ಸಂದೇಶ ಬೀರುವ ಆಚರಣೆಯಾಗಿದೆ. ಅದರ ಮೂಲಕ ಸಮಾಜದ ಎಲ್ಲ ವರ್ಗದ ಜನರ ನಡುವೆ ಸೌಹಾರ್ದತೆ ಬೀರಲು ಸಾಧ್ಯ ಎಂದರು. ರಂಜಾನ ಹಬ್ಬವೂ ಸಾಮರಸ್ಯದ ಪ್ರತೀಕ ಹಾಗೂ ಭಾವಕ್ಯತೆಯ ಪ್ರತಿಬಿಂಬವಾಗಿದೆ. ಬಡವ ಬಲ್ಲಿದ ಎಂಬ ಬೇದ ಭಾವವಿಲ್ಲದೆ ಎಲ್ಲರೂ ಸಂತಸದಿಂದ ರಂಜಾನ ಮಾಸದಲ್ಲಿ ನಿರಂತರವಾಗಿ 30 ದಿನಗಳ ಕಾಲ ಉಪವಾಸವಿದ್ದು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದರು.
ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಸ್ವಾಮಿಜಿ ಮಾತನಾಡಿ ಪಟ್ಟಣದಲ್ಲಿ ಎಲ್ಲ ಸಮುದಾಯದ ಬಾಂಧವರು ಉತ್ತಮ ಬಾಂಧವ್ಯದೊಂದಿಗೆ ಆಚರಣೆ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು.
ಅಂಜುಮನ್-ಏ-ಇಸ್ಲಾಂ ಕಮಿಟಿ ಹಾಗೂ ಪಟ್ಟಣದ ಮುಸ್ಲಿಂ ಬಾಂಧವರ ವತಿಯಿಂದ ಮುಸ್ಲಿಂ ಸಮಾಜದ ಸರ್ಕಾರಿ ನೌಕರರಿಗೆ ಸನ್ಮಾನ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮೌಲಾನಾ ಹಾಬಿಲ್ ನದಾ, ಮೌಲಾನಾ ಖಾಲಿದ ಬೇಪಾರಿ ಸಾನ್ನಿಧ್ಯ ವಹಿಸಿದ್ದರು. ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಹಸನ ಡೋಂಗ್ರಿ ಮಹಾಲಿಂಗಪೂರ ಅಧ್ಯಕ್ಷತೆ ವಹಿಸಿದ್ದರು. ಬಿಡಿಡಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ವಾಯುಪುತ್ರ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಲೋಕಣ್ಣ ಕತ್ತಿ, ಸೈಯ್ಯದ ನದಾ, ರವಿ ಬೋಳಿಶೆಟ್ಟಿ, ಬಿ.ವಿ. ಹಲಕಿ, ಸಂಜಯ ತಳೇವಾಡ, ಕಾಶಿನಾಥ ಹುಡೇದ, ಲೋಕಣ್ಣ ಕೊಪ್ಪದ, ಗುರುರಾಜ ಉದಪುಡಿ, ರಮೇಶ ಪಂಚಕಟ್ಟಿಮಠ, ಗೋವಿಂದಪ್ಪ ಕೌಲಗಿ, ಶಿವಪ್ಪ ಚೌಧರಿ, ಪ್ರಕಾಶ ಚುಳಕಿ, ಯಮನಪ್ಪ ಹೊರಟ್ಟಿ, ಲಕ್ಷ್ಮಣ ಮಾಲಗಿ, ಮಹೇಶ ಹುಗ್ಗಿ, ಬೀರಪ್ಪ ಮಾಯಣ್ಣವರ, ಬಾಷಾಸಾಬ ಗುದಗಿ, ಅಲ್ಲಾಸಾಬ ಯಾದವಾಡ, ರಫೀಕ ಬೈರಕದಾರ, ಗುಲಾಬಸಾಬ ಅತ್ತಾರ ಮತ್ತಿತರರಿದ್ದರು.