‘ಇವತ್ತು ಬೆಳಗ್ಗೆ ಸಿಕ್ಕಿದ್ದ ಮಾರಾಯ. ಕಷ್ಟಸುಖ ಮಾತಾಡಿದ್ವಿ. ಮಧ್ಯಾಹ್ನ ಹಾರ್ಟ್ ಅಟಾಕ್ ಆಗಿ ತೀರಿಕೊಂಡ ಅಂತ ಸುದ್ದಿ ಬಂದಿದೆ. ನಂಬಲಿಕ್ಕೇ ಆಗ್ತಿಲ್ಲ. ಚಟುವಟಿಕೆಯಿಂದ ಇದ್ದ. ಇನ್ನೂ ಬಾಳಿ ಬದುಕಬೇಕಾದ ಸಣ್ಣ ವಯಸ್ಸು. ದೇವರು ಒಳ್ಳೆಯವರನ್ನು ಬೇಗ ಕರೆಸಿಕೊಳ್ಳುತ್ತಾನೆ ಎನ್ನುತ್ತಾರಲ್ಲ. ನಿಜವಿರಬೇಕು ಎನಿಸುತ್ತದೆ’
‘ಏನಾಯ್ತು ಅಂತಾನೆ ಗೊತ್ತಾಗಿಲ್ಲವಂತೆ. ನಿನ್ನೆಮೊನ್ನೆವರೆಗೂ ಅರಾಮಾಗಿದ್ದನಂತೆ. ಎದೆನೋವು ಅಂದನಂತೆ. ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣಹೋಗಿಬಿಟ್ಟಿತ್ತು. ಹೀಗೆ ಚಿಕ್ಕ ವಯಸ್ಸಿನವರು ಏನೇನೋ ಕಾರಣಕ್ಕೆ ಹೊರಟುಹೋಗುತ್ತಿದ್ದರೆ ಆ ಮನೆಯ ಕತೆಯೇನು? ಆ ಮನೆಯ ಸದಸ್ಯರ ಜೀವನ ಮುಂದುವರಿಯುವುದು ಹೇಗೆ? ವಯಸ್ಸಾದ ತಂದೆತಾಯಿಯರನ್ನು ನೋಡಿಕೊಳ್ಳುವವರು ಯಾರು?’
ಈಗ ಯಾವ ಕಡೆ ಹೋದರೂ ಇಂಥ ಮಾತುಗಳು ಕಿವಿಗೆ ಬೀಳುತ್ತವೆ; ನೋವಿನ ದನಿಗಳು ಹೊರಡುತ್ತವೆ. ಕುಟುಂಬವೊಂದರಲ್ಲಿ ಸಣ್ಣ ವಯಸ್ಸಿನವರು ಸಾವಿಗೀಡಾದಲ್ಲಿ, ಆ ಮನೆಯ ಒಟ್ಟಾರೆ ಚಿತ್ರಣವೇ ಬದಲಾಗಿಬಿಡುತ್ತದೆ. ಮುಂಚೆ ಐದಾರು ಮಕ್ಕಳಿರುತ್ತಿದ್ದರು, ಹೇಗೋ ಕುಟುಂಬ ನಡೆಯುತ್ತಿತ್ತು. ಈಗ ಇರುವುದೇ ಒಬ್ಬರು-ಇಬ್ಬರು. ಮೊದಲೆಲ್ಲ ಹೃದಯಾಘಾತ ಎಂದರೆ ವಯಸ್ಸಾದವರಿಗೆ ಎಂಬ ಮಾತಿತ್ತು. ಈಗ ಹಾಗಿಲ್ಲ. ಇನ್ನೂ 30-40 ವಯಸ್ಸಿನವರು ಸಹ ಎದೆನೋವಿನ ಭಾರಕ್ಕೆ ಕುಸಿಯುತ್ತಿದ್ದಾರೆ. ಮೊದಲೇ ಗೊತ್ತಾಗಿ, ಚಿಕಿತ್ಸೆ ಕೊಡಿಸುತ್ತಿದ್ದರೂ ಪ್ರಾಣ ಹೋದರೆ, ‘ಕೈಲಾದುದನ್ನು ಮಾಡಿದೆವು; ಅವನ ಆಯಸ್ಸೇ ಅಷ್ಟಿತ್ತು’ ಎಂದು ತುಸುವಾದರೂ ಸಮಾಧಾನ ತಂದುಕೊಳ್ಳಬಹುದು. ಆದರೆ ಇದು ಹಾಗಲ್ಲ. ಈಗ ಕಣ್ಣೆದುರು ಓಡಾಡುತ್ತಿದ್ದವ ಹತ್ತು ನಿಮಿಷದಲ್ಲಿ ಶವವಾಗುತ್ತಾನೆ ಎಂದರೆ ಆ ದುಃಖವನ್ನು, ಅಗಲುವಿಕೆಯನ್ನು ಸಹಿಸುವುದಾದರೂ ಹೇಗೆ? ಇನ್ನೊಂದು ಹತ್ತು ವರ್ಷವಾದರೂ ಬದುಕಬಾರದಿತ್ತೇ ಎಂದು ಮನಸ್ಸು ಹಲುಬುತ್ತದೆ; ಹಂಬಲಿಸುತ್ತದೆ. ಇಲ್ಲ, ಅವನು ಸತ್ತಿಲ್ಲ, ಈಗ ಬರುತ್ತಾನೆ ಎಂದು ಮನಸ್ಸು ಭ್ರಮೆಗೊಳಗಾಗುತ್ತದೆ. ಸಮಾಧಾನ ತಂದುಕೊ ಎಂದು ಹೇಳುವುದು ಸುಲಭ. ಆದರೆ, ಮಗನನ್ನು ಕಳೆದುಕೊಂಡ ತಂದೆತಾಯಿ, ಪತಿಯ ಅಗಲಿಕೆಯ ನೋವನ್ನು ಉಳಿದ ಜೀವನಪರ್ಯಂತ ಎದುರಿಸಬೇಕಾದ ಪತ್ನಿ, ಇನ್ನೆಂದೂ ತಂದೆಯ ಮುಖನೋಡಲಾಗದ ಪುಟ್ಟ ಮಕ್ಕಳು…ಇವರಿಗೆಲ್ಲ ಸಮಾಧಾನ-ಸಾಂತ್ವನ ಹೇಳಲು ಆದೀತೆ? ಅಲ್ಲಿ ಮಾತು ಸೋಲುತ್ತದೆ; ಮೌನವೇ ಮಾತಾಗುತ್ತದೆ. ‘ಡಿಜಚಠಿ ಜಿಠ ್ಝ್ಛ? ್ಝ್ಛ ಜಿಠ ಚ ್ಝ್ಞ ಟ್ಟಛಿಟಚ್ಟಚಠಿಜಿಟ್ಞ ಠಿಟ ಛಛಿಚಠಿಜ’ (ಜೀವನ ಎಂದರೆ ಏನು? ಸಾವಿಗೆ ಸುದೀರ್ಘ ತಯಾರಿ) ಎಂಬ ಚಿಂತಕನೊಬ್ಬನ ಮಾತು ಇಲ್ಲಿ ನೆನಪಾಗುತ್ತದೆ. ಆದರೆ, ಹುಟ್ಟಿದವನು ಸಾಯಲೇಬೇಕು. ಜೀವ ಇರುವುದೆಲ್ಲ ಅಳಿಯಲೇಬೇಕು. ಅದು ನಿಸರ್ಗ ನಿಯಮ. ವ್ಯಕ್ತಿಯ ಜೀವನದ ಅವಧಿ ಸ್ವಲ್ಪವಾದರೂ ದೀರ್ಘವಾಗಿದ್ದರೆ ಅಂತಹ ಸಾವನ್ನು ಹೇಗೋ ಸಹಿಸಬಹುದು. ಹೀಗಿದ್ದರೂ ಸಾವನ್ನು ಎದುರಿಸುವುದು ಅನಿವಾರ್ಯ. ಏಕೆಂದರೆ ಸಾವು ಅಪರಿಹಾರ್ಯ. ಈ ತತ್ವವನ್ನು ಅರಿತು, ಮನಸ್ಸು ಗಟ್ಟಿಮಾಡಿಕೊಂಡು, ಮರೆಯಾದವರನ್ನು ಮರೆಯದೆ, ಅವರ ಚಿತ್ರವನ್ನು ಚಿತ್ತದಲ್ಲಿಟ್ಟುಕೊಂಡು ಬದುಕಿ ತೋರಿಸಿದ ನೂರಾರá–ಸಾವಿರಾರು ನಿದರ್ಶನಗಳು ನಮ್ಮ ಮುಂದಿವೆ. ಹೀಗೆ ಬದುಕನ್ನು ದಿಟ್ಟವಾಗಿ ಎದುರಿಸಿದವರಿಗೊಂದು ಸಲಾಮು ಸಲ್ಲಲೇಬೇಕು. ‘ಸತ್ತವರು ಸಾಯುವುದಿಲ್ಲ. ಅವರನ್ನು ನಾವು ಮರೆತಾಗ ಸಾಯುತ್ತಾರೆ’ ಎಂಬ ಮಾತು ಮನನೀಯ.
ಐಸಿಎಂಆರ್ ಅಧ್ಯಯನ: ಕರೊನಾ ನಂತರದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಿದೆ; ಹಠಾತ್ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂಬುದು ಜನರ ಅನಿಸಿಕೆ. ಅವರ ಸುತ್ತಮುತ್ತಲ ಘಟನೆಗಳು ಈ ಮಾತಿಗೆ ಇಂಬು ನೀಡುತ್ತವೆ. ಆದರೆ, ಇದು ವೈಜ್ಞಾನಿಕವಾಗಿ ದೃಢಪಡಬೇಕು. ಅಂದರೆ, ಅದಕ್ಕೆ ವೈದ್ಯಕೀಯ ಆಯಾಮದಲ್ಲಿ ಅಧ್ಯಯನ ಹಾಗೂ ಅಂಕಿ-ಅಂಶಗಳ ಆಧಾರ ಬೇಕು. ಈ ನಿಟ್ಟಿನಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿರುವುದು ಗಮನಾರ್ಹ. ಅಧಿಕೃತ ವೈದ್ಯಕೀಯ ಸಂಸ್ಥೆಯೇ ಇಂಥ ಅಧ್ಯಯನ ನಡೆಸಿದಾಗ ಅದಕ್ಕೆ ವಿಶ್ವಾಸಾರ್ಹತೆ ಜಾಸ್ತಿ. ಯುವಜನರಲ್ಲಿ ಹೃದಯಾಘಾತ ಘಟಿಸುತ್ತಿರುವುದು ಹಾಗೂ ಹೃದಯಾಘಾತ ಮತ್ತು ಕರೊನಾ ಲಸಿಕೆ ನಡುವೆ ಸಂಬಂಧ ಏನಾದರೂ ಇದೆಯೇ ಎಂಬ ಕುರಿತು ಈ ಅಧ್ಯಯನ ನಡೆಸಿದ್ದು, ಇದರ ಫಲಿತಾಂಶವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಐಸಿಎಂಆರ್ ತಿಳಿಸಿದೆ. ‘ಹಠಾತ್ ಸಾವುಗಳ ಬಗ್ಗೆ ನಾವು ಅಧ್ಯಯನ ನಡೆಸುತ್ತಿದ್ದೇವೆ; ನಾಲ್ಕು ಅಧ್ಯಯನಗಳು ಚಾಲ್ತಿಯಲ್ಲಿವೆ. ಇದರ ಫಲಿತಾಂಶ ಶೀಘ್ರದಲ್ಲಿ ಕೈಸೇರುವ ನಿರೀಕ್ಷೆ ಇದೆ. ಆ ವರದಿಯನ್ನು ನಾವು ಸಾರ್ವಜನಿಕರ ಅವಗಾಹನೆಗೆ ಇಡಲಿದ್ದೇವೆ. ದಿಢೀರ್ ಸಾವಿನ ಸಂಖ್ಯೆ ಹೆಚ್ಚಿದೆಯೇ ಎಂಬುದು ಸೇರಿದಂತೆ ಹಲವು ಆಯಾಮಗಳಲ್ಲಿ ನಾವು ಅಧ್ಯಯನ ನಡೆಸುತ್ತಿದ್ದೇವೆ’ ಎಂದು ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಬೆಹಲ್ ಹೇಳಿದ್ದಾರೆ. ಇಂಥ ವೈಜ್ಞಾನಿಕ ಅಧ್ಯಯನ ನಡೆಯುವುದು ಸೂಕ್ತವೇ ಸರಿ. ಇದರಿಂದ ಜನರಲ್ಲಿ ಅನಗತ್ಯ ಗೊಂದಲ, ಭೀತಿ, ಅನುಮಾನ ಉಂಟಾಗುವುದನ್ನು ತಪ್ಪಿಸಬಹುದು. ಇದಲ್ಲದೆ, ಒಂದೊಮ್ಮೆ ಯುವಜನರಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚಿದೆ ಎಂಬುದು ದೃಢಪಟ್ಟಲ್ಲಿ, ಅದಕ್ಕೆ ಕಾರಣ, ಪರಿಹಾರ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನೂ ಆಲೋಚಿಸಬಹುದಾಗಿದೆ. ಯಾವುದೇ ವಾದಾಂಶಕ್ಕೆ ಅಂಕಿ-ಅಂಶಗಳು ಹಾಗೂ ವಾಸ್ತವಾಂಶಗಳ ಬೆಂಬಲ ಇರದಿದ್ದರೆ ಸತ್ಯದ ನಿಷ್ಕರ್ಷೆಯಲ್ಲಿ ಅದು ಸೋಲಬೇಕಾಗುತ್ತದೆ. ಕೆಲವು ಪ್ರಕರಣಗಳನ್ನು ಎದುರಲ್ಲಿ ಇಟ್ಟುಕೊಂಡು ‘ಈ ಕಾರಣಕ್ಕೇ ಹೀಗಾಗಿದೆ’ಎಂದು ಷರಾ ಬರೆಯಲು ಆಗದು. ‘ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂಬುದು ದೃಢಪಟ್ಟಲ್ಲಿ, ಅವರ ವಯಸ್ಸು, ಅನ್ಯಕಾಯಿಲೆಗಳೇನಾದರೂ ಇದ್ದವೇ? ಅವರ ಹವ್ಯಾಸಗಳು, ಕರೊನಾ ಅವರಿಗೆ ಬಂದಿದ್ದು ಹೇಗೆ? ಕರೊನಾ ತೀವ್ರವಾಗಿತ್ತೇ? ಅವರು ಕರೊನಾ ಲಸಿಕೆ ತೆಗೆದುಕೊಂಡಿದ್ದರೇ? ಇತ್ಯಾದಿ ಹಲವು ಸಂಗತಿಗಳನ್ನು ಪರಿಗಣಿಸಿ ಅಧ್ಯಯನ ಕೈಗೊಳ್ಳಲಾಗಿದೆ’ ಎಂದು ಐಸಿಎಂಆರ್ ಮಹಾನಿರ್ದೇಶಕ ರಾಜೀವ್ ಬಹಲ್ ವಿವರಿಸಿದ್ದಾರೆ. ಭಾರತದ ಬೇರೆ ಬೇರೆ ನಗರಗಳಲ್ಲಿ ಹಠಾತ್ ಸಾವುಗಳ ಬಗ್ಗೆ ವರದಿಯಾಗಿದ್ದು, ಐಸಿಎಂಆರ್ ಆ ಬಗ್ಗೆ ಕೂಡ ಇನ್ನೊಂದು ಅಧ್ಯಯನದಲ್ಲಿ ಗಮನಹರಿಸಿದೆ. ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್್ಸ) ಘಟಿಸಿದ, 18-45 ವಯೋಮಾನದವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ, ಸಾವಿಗೆ ಕಾರಣ ಪತ್ತೆಹಚ್ಚುವುದು ಇದರ ಉದ್ದೇಶ. ಕರೊನಾಪೂರ್ವದಲ್ಲಿ ಆದ ಸಾವುಗಳು ಹಾಗೂ ನಂತರದಲ್ಲಿ ಆದ ಸಾವುಗಳ ತುಲನಾತ್ಮಕ ಅಧ್ಯಯನದಿಂದ ನಿಖರ ಕಾರಣ ತಿಳಿದುಬರಬಹುದೆಂಬ ನಿರೀಕ್ಷೆ ಇದೆ. ಸಾಮಾನ್ಯವಾಗಿ ಆರೋಗ್ಯವಂತರಾಗಿ ಇದ್ದವರೂ ಸಹ ಹಠಾತ್ತಾಗಿ ಸಾವನ್ನಪು್ಪವುದು ವಿವರಣೆಗೆ ನಿಲುಕದಂತಿದ್ದು, ಐಸಿಎಂಆರ್ ಅಧ್ಯಯನ ಈ ನಿಟ್ಟಿನಲ್ಲಿ ಬೆಳಕು ಚೆಲ್ಲಬಹುದೆಂದು ಆಶಿಸಬಹುದಾಗಿದೆ. ಕರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಮಾನವ ದೇಹದಲ್ಲಿನ ಮಾನಸಿಕ ಬದಲಾವಣೆಗಳೇನಾದರೂ ಯುವಜನರ ಹಠಾತ್ ಸಾವಿಗೆ ಕಾರಣವಾಗಿರಬಹುದಾ ಎಂಬ ಆಯಾಮದಲ್ಲಿಯೂ ಅಧ್ಯಯನ ಗಮನಹರಿಸಲಿದೆ. ಏಕೆಂದರೆ, ಕರೊನಾ ಬಂದಿದೆ ಎಂಬ ಕಾರಣಕ್ಕೇ ಮಾನಸಿಕ ಒತ್ತಡಕ್ಕೆ ಒಳಗಾದ ಪ್ರಕರಣಗಳು ಸಹ ವರದಿಯಾಗಿದ್ದವು. ಆಯಾ ಕುಟುಂಬದವರ ಜತೆಯೂ ತಜ್ಞರ ತಂಡ ಸಂವಹನ ನಡೆಸಲಿದ್ದು, ಸಾವಿಗೀಡಾದವರ ಆಹಾರಕ್ರಮ, ಜೀವನಶೈಲಿ, ಕರೊನಾ ಹಿಸ್ಟರಿ, ತಂಬಾಕು ಇತ್ಯಾದಿ ಚಟಗಳೇನಾದರೂ ಇದ್ದವೆ? ಕರೊನಾ ವ್ಯಾಕ್ಸಿನ್ ತೆಗೆದುಕೊಂಡಿದ್ದರೆ? ಕುಟುಂಬದ ವೈದ್ಯಕೀಯ ಇತಿಹಾಸ ಇತ್ಯಾದಿ ಮಾಹಿತಿ ಕಲೆಹಾಕಿ, ಅದರ ಆಧಾರದಲ್ಲಿ ವರದಿ ಸಿದ್ಧಪಡಿಸಲಿದೆ.
ಅಂದಹಾಗೆ, ಲೋಕಸಭೆಯಲ್ಲಿಯೂ ಈ ಸಂಗತಿ ಪ್ರಸ್ತಾಪವಾಗಿತ್ತು. ‘ಕರೊನಾ ತಗುಲಿದ ನಂತರದಲ್ಲಿ ಕೆಲ ಯುವಜನರ ಹಠಾತ್ ಸಾವು ಘಟಿಸಿದ ಬಗ್ಗೆ ವರದಿಗಳಾಗಿವೆ. ಆದರೆ ಇದಕ್ಕೂ ಕರೊನಾಕ್ಕೂ ಸಂಬಂಧವಿದೆ ಎನ್ನಲು ಸದ್ಯಕ್ಕೆ ಬಲವಾದ ಪುರಾವೆಗಳಿಲ್ಲ’ ಎಂದು ಜುಲೈ 21ರಂದು ಲೋಕಸಭೆಯಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಉತ್ತರ ನೀಡಿದ್ದರು. ಹಾಗೂ ಅವರು ಐಸಿಎಂಆರ್ ಅಧ್ಯಯನದ ಬಗ್ಗೆಯೂ ಪ್ರಸ್ತಾಪಿಸಿದ್ದರು.
ಇದೇನೆ ಇದ್ದರೂ, ಕರೊನಾ ಸಾಂಕ್ರಾಮಿಕದ ಹಾವಳಿ ನೆನೆಸಿಕೊಂಡರೆ ಈಗಲೂ ಬೆಚ್ಚುವಂತಾಗುತ್ತದೆ. ಅದರಿಂದಾದ ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಔದ್ಯೋಗಿಕ ಹಾನಿಯ ಲೆಕ್ಕ ಹಾಕಲು ಸಾಧ್ಯವೆ? ಅದರ ದುಷ್ಪರಿಣಾಮಗಳು ಈಗಲೂ ಬೇರೆ ಬೇರೆ ಬಗೆಯಲ್ಲಿ ಜಗತ್ತನ್ನು ಕಾಡುತ್ತಲೇ ಇವೆ. ಹಾಗೆ ನೋಡಿದರೆ, ಈ ಪಾಟಿ ಜನಸಂಖ್ಯೆ ಇದ್ದರೂ, ಹೋಲಿಕೆಯಲ್ಲಿ ಭಾರತವೇ ಕರೊನಾ ಸನ್ನಿವೇಶವನ್ನು ಹಲವು ಅಡೆತಡೆಗಳ ನಡುವೆಯೂ ದಿಟ್ಟವಾಗಿಯೇ ಎದುರಿಸಿತು. ಆಧುನಿಕ ವೈದ್ಯಕೀಯ ಸವಲತ್ತು ದಂಡಿಯಾಗಿ ಇರುವ ಅಮೆರಿಕದಂತಹ ಅಮೆರಿಕವೇ ಕರೊನಾ ಹೊಡೆತಕ್ಕೆ ಸಪಾಟು ಮಲಗಿಬಿಟ್ಟಿತ್ತು. ಜಾಗತಿಕವಾಗಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದು ಅಲ್ಲಿಯೇ. ಚೀನಾ ಬಿಡಿ, ಅದು ಕೊನೆಯವರೆಗೂ ಸುಳ್ಳು ಹೇಳಿಕೊಂಡೇ ಬಂತು, ಅಥವಾ ಜಗತ್ತಿನ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರ ಕೊಡುವ ಗೋಜಿಗೇ ಹೋಗಲಿಲ್ಲ. ವಿಶ್ವಸಂಸ್ಥೆ ಕಳುಹಿಸಿದ ನಿಯೋಗಗಳಿಗೂ ಚೀನಾ ಆಳುಗರು ಕ್ಯಾರೇ ಅನ್ನಲಿಲ್ಲ. ಹೀಗಾಗಿ, ಕರೊನಾ ಒಕ್ಕರಿಸಲು ಕಾರಣ ಏನೆಂಬುದು ಕೂಡ ನಿಗೂಢವಾಗಿಯೇ ಇರುವಂತಾಯಿತು. ಕರೊನಾ ಸನ್ನಿವೇಶವನ್ನು ಎದುರಿಸುವ ಜತೆಗೆ, ಲಸಿಕೆ ಕಂಡುಹಿಡಿಯುವಲ್ಲಿ ಸಹ ಭಾರತವೇ ಮೊದಲಿಗನಾಯಿತು. ಒಂದೊಮ್ಮೆ ಆಗ ಲಸಿಕೆ ತಯಾರಾಗದಿದ್ದಲ್ಲಿ ದೇಶ ಇನ್ನೆಷ್ಟು ಸಾವುನೋವುಗಳನ್ನು ಕಾಣಬೇಕಾಗುತ್ತಿತ್ತೋ! ಕರೊನಾ ಲಸಿಕಾಭಿಯಾನ ಸಹ ವೇಗದಿಂದ ನಡೆಯಿತು. ಲಸಿಕೆ ಬಗ್ಗೆ ವದಂತಿಗಳು ಹಬ್ಬಿದರೂ, ಜನಾರೋಗ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಹೆಜ್ಜೆ ಮುಂದಿಟ್ಟಿತು. ಭಾರತ ತನ್ನ ಪ್ರಜೆಗಳಿಗೆ ಮಾತ್ರವಲ್ಲದೆ, ಅಗತ್ಯವಿರುವ ಇತರ ದೇಶಗಳಿಗೂ ಲಸಿಕೆಗಳನ್ನು ಕಳಿಸಿ, ಮಾನವೀಯತೆ ಮೆರೆಯಿತು.
ಈಗ ಐಸಿಎಂಆರ್ ಅಧ್ಯಯನದ ಫಲಿತಾಂಶ ಏನೆಂದು ಬರುತ್ತದೆಂಬುದು ಕುತೂಹಲಕರ. ಕರೊನಾ ಲಸಿಕೆಗೂ- ಈಗಿನ ಅನಾರೋಗ್ಯಕ್ಕೂ ಸಂಬಂಧವಿಲ್ಲ ಎಂದಾದಲ್ಲಿ ಅದು ಸಮಾಧಾನಕರ. ಆದರೂ., ಯುವಜನರಲ್ಲಿ ದಿಢೀರ್ ಹೃದಯಾಘಾತ ಹೆಚ್ಚುತ್ತಿದೆಯೇ? ಹೌದಾದಲ್ಲಿ ಇದಕ್ಕೆ ಕಾರಣ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು? ಅಥವಾ ಈಗಿನ ಜನಸಂಖ್ಯೆಗೆ ಹೋಲಿಸಿದರೆ ಇದು ಸಹಜ ಅಂಕಿ-ಅಂಶವೇ? ಅಥವಾ ಜೀವನಶೈಲಿ, ಮಾಲಿನ್ಯ ಇತ್ಯಾದಿ ಕಾರಣದಿಂದಾಗಿ ಇದು ಹೆಚ್ಚುತ್ತಿದೆಯೇ? ಈ ಮುಂತಾದ ಪ್ರಶ್ನೆಗಳಿಗೂ ಈ ಅಧ್ಯಯನಗಳು ಉತ್ತರ ನೀಡಿದಲ್ಲಿ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅನುಕೂಲಕರ. ಏಕೆಂದರೆ, ಕ್ಟಛಿಡಛ್ಞಿಠಿಜಿಟ್ಞ ಜಿಠ ಚಿಛಿಠಿಠಿಛ್ಟಿ ಠಿಜಚ್ಞ c್ಟ ಎಂಬುದು ವೈದ್ಯಲೋಕದ ನುಡಿಗಟ್ಟು.
ಐಸಿಎಂಆರ್ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಅಧೀನದಲ್ಲಿನ ಸಂಸ್ಥೆಯಾಗಿದ್ದು, ವೈದ್ಯಕೀಯ ಸಂಶೋಧನೆಯಲ್ಲಿ ಜಗತ್ತಿನ ಹಳೆಯ ಹಾಗೂ ಮುಂಚೂಣಿ ಸಂಸ್ಥೆಗಳಲ್ಲಿ ಒಂದು. ಐಸಿಎಂಆರ್ ನಡೆಸುವ ಸಂಶೋಧನೆ ಹಾಗೂ ಅದರ ವೈದ್ಯಕೀಯ ನಿಷ್ಕರ್ಷೆಗಳಿಗೆ ಜಾಗತಿಕ ಮನ್ನಣೆ ಇದೆ. ಆದ್ದರಿಂದ ಅದು ನಡೆಸುತ್ತಿರುವ ಅಧ್ಯಯನ ಜಾಗತಿಕವಾಗಿಯೂ ಕುತೂಹಲ ಕೆರಳಿಸಿದೆ.
ಕೊನೇ ಮಾತು: ಒಂದು ಕಾಲದಲ್ಲಿ ಭಾರತದಲ್ಲಿ ಪೋಲಿಯೋ ಹಾವಳಿ ವಿಪರೀತವಾಗಿತ್ತು. ಪೋಲಿಯೋ ಲಸಿಕೆ ಅಭಿಯಾನವನ್ನು ಸಮರೋಪಾದಿಯಲ್ಲಿ ನಡೆಸುವ ಮೂಲಕ, ಪೋಲಿಯೋಮುಕ್ತ ದೇಶವಾಯಿತು. ಈ ಕರೊನೊತ್ತರ ಸನ್ನಿವೇಶವನ್ನು ಸಹ ದೇಶ ಸಮರ್ಥವಾಗಿ ಎದುರಿಸುತ್ತದೆ ಎಂದು ಭಾವಿಸಬಹುದು. ಈ ಕಾಲಘಟ್ಟದಲ್ಲಿ ಅನುಸರಿಸಬೇಕಾದ ಆರೋಗ್ಯ ಕಾಳಜಿ ಬಗ್ಗೆ ಒಂದು ಅರಿವಿನ ಅಭಿಯಾನ ನಡೆದರೂ ಉತ್ತಮವೇ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)
‘ಡಾಕ್ಟರ್ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್; ಯೂ-ಟ್ಯೂಬ್ ಒಂದರಲ್ಲೇ 2 ಮಿಲಿಯನ್ ಸಬ್ಸ್ಕ್ರೈಬರ್ಸ್!