ಸಾಗರ: ಯಕ್ಷಗಾನದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿವೆ. ಆದರೆ ಇದು ಮೂಲ ರೂಪಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬಾರದು ಎಂದು ಹಿರಿಯ ಪತ್ರಕರ್ತ ಕಡತೋಕಾ ಗೋಪಾಲಕೃಷ್ಣ ಭಾಗವತ ಹೊನ್ನಾವರ ಹೇಳಿದರು.
ನಗರದ ಉರ್ದು ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಡಾ. ಜಿ.ಎಸ್.ಭಟ್ ಮತ್ತು ಮಕ್ಕಳು ನಿಧಿ ಪ್ರಕಾಶನ ಆಶ್ರಯದಲ್ಲಿ ಕೆರೆಮನೆ ಶಂಭುಹೆಗಡೆ ದತ್ತಿ ಅಡಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆರೆಮನೆ ಶಂಭು ಹೆಗಡೆ ಮತ್ತು ಸಂವಹನ ಮಾಧ್ಯಮ ವಿಷಯ ಕುರಿತು ಮಾತನಾಡಿದರು.
ಯಕ್ಷಗಾನ ಕಂಡ ಶ್ರೇಷ್ಠ ಕಲಾವಿದರಲ್ಲಿ ಕೆರೆಮನೆ ಶಂಭು ಹೆಗಡೆ ಸಹ ಒಬ್ಬರು. ತಮ್ಮ ವಿಚಾರಧಾರೆಗಳ ಮೂಲಕ ಯಕ್ಷಗಾನ ಕ್ಷೇತ್ರ ವಿಸ್ತರಿಸುವ ಕೆಲಸ ಮಾಡಿದ್ದಾರೆ. ಯಕ್ಷಗಾನ ರಂಗದಲ್ಲಿ ಕೆರೆಮನೆ ಶಂಭು ಹೆಗಡೆ ಅವರಷ್ಟು ಸ್ಪಷ್ಟವಾಗಿ ಮಾತನಾಡುವ ಕಲಾವಿದರು ಇಲ್ಲ. ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸದಾ ಯಕ್ಷಗಾನ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ತುಡಿಯುತ್ತಿದ್ದರು ಎಂದರು.
ವಿದ್ವಾಂಸ ಡಾ. ಜಿ.ಎಸ್.ಭಟ್ ಮಾತನಾಡಿ, ರಾಜ್ಯದ ಮಾಧ್ಯಮಗಳು ಶಂಭು ಹೆಗಡೆ ಅವರಿಗೆ ಕೊಟ್ಟಷ್ಟು ಮಹತ್ವ ಬೇರೆ ಯಾವ ಕಲಾವಿದರಿಗೂ ಕೊಟ್ಟಿಲ್ಲ. ಯಕ್ಷಗಾನ ರಂಗಭೂಮಿ ಮತ್ತು ಪತ್ರಿಕೆಗಳ ಸಂಬಂಧ ತುಂಬ ವಿಶೇಷ. ಅಭಿನಯದ ಮೂಲಕ ಶಂಭು ಹೆಗಡೆ ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ತಿಳಿಸಿದರು.
ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಮುಖ್ಯಶಿಕ್ಷಕ ದತ್ತಾತ್ರೇಯ ಭಟ್, ಎಸ್.ಎಂ.ಪಾಲಾಕ್ಷಪ್ಪ, ಲೋಕೇಶಕುಮಾರ್, ನಾರಾಯಣಮೂರ್ತಿ ಇತರರಿದ್ದರು.