Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬುದ್ಧ ಬೋಧಿಸಿದ ಬೆಳಕು

Thursday, 24.05.2018, 3:03 AM       No Comments

ತನಗೆ ತಾನೇ ಗುರುವಾಗಿ, ತನ್ನದೇ ರೀತಿಯಲ್ಲಿ ಬೋಧಿಜ್ಞಾನವನ್ನು ಪಡೆದುಕೊಂಡ ಮಹಾತ್ಮ ಭಗವಾನ್ ಬುದ್ಧ. ಬೋಧಿಜ್ಞಾನದ ಬಳಿಕ ‘ಬುದ್ಧ’ ಎಂದು ಹೆಸರು ಪಡೆದ ಗೌತಮ ಸಿದ್ಧಾರ್ಥನ ಬದುಕನ್ನು ಮನೋಜ್ಞವಾಗಿ ಇದೇ ಮೊದಲ ಬಾರಿ ಕಾದಂಬರಿರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕ, ಕಾದಂಬರಿಕಾರ ಸು. ರುದ್ರಮೂರ್ತಿ ಶಾಸ್ತ್ರಿ. ಮಹಾಯಾನ, ವಜ್ರಯಾನ ಹಾಗೂ ಹೀನಯಾನ ಹೀಗೆ ಮೂರು ಪಂಥಗಳಲ್ಲಿ ಬಂದ ಬುದ್ಧನ ಬಗೆಗಿನ ವಿಚಾರಗಳನ್ನು ಸಂಗ್ರಹಿಸಿ ರಚಿಸಲ್ಪಟ್ಟಿರುವ ಈ ಕಾದಂಬರಿಯನ್ನು ಅಂಕಿತ ಪುಸ್ತಕ ಇತ್ತೀಚೆಗೆ ಪ್ರಕಟಿಸಿದೆ. ಪ್ರಸ್ತುತ ಗೌತಮ ಬುದ್ಧ ಕಾದಂಬರಿಯ ಆಯ್ದ ಭಾಗ ಇಲ್ಲಿದೆ.

ಮರುದಿನ ಮುಂಜಾನೆ ಬ್ರಾಹ್ಮೀಮುಹೂರ್ತದಲ್ಲಿ ಉಪದೇಶ ನೀಡುವುದಾಗಿ ಬುದ್ಧ ಹೇಳಿದ. ಪಂಚಭಿಕ್ಷುಗಳು ಉಪಚರಿಸಿದರು. ಅಂದು ರಾತ್ರಿ ಧ್ಯಾನಸ್ಥನಾಗಿದ್ದ ಬುದ್ಧ. ತಾನು ಕಂಡುಕೊಂಡ ಸತ್ಯಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡ. ಪಂಚಭಿಕ್ಷುಗಳು ಅವನ ಬಗ್ಗೆ ಕೆಳದನಿಯಲ್ಲಿ ಬಹಳ ಹೊತ್ತು ಮಾತನಾಡಿಕೊಳ್ಳುತ್ತ, ಹಾಗೇ ನಿದ್ರೆ ಹೋದರು.

ಮುಂಜಾನೆ ಬ್ರಾಹ್ಮೀಮುಹೂರ್ತದಲ್ಲಿ ಬುದ್ಧನೇ ಮೊದಲು ಸಿದ್ಧನಾಗಿ ಪಂಚಭಿಕ್ಷುಗಳಿಗೆ ಕಾಯುತ್ತಿದ್ದ. ಅವರು ಬೇಗ ಬೇಗ ಸಿದ್ಧರಾಗಿ ಬಂದು ವಿನೀತರಾಗಿ ಅವನ ಎದುರಿಗೆ ಕುಳಿತರು.

‘ಮಿತ್ರರೇ ನೀವು ಸಿದ್ಧರಾಗಿರುವಿರಲ್ಲವೆ?’ ಬುದ್ಧ ಕೇಳಿದ.

‘ಸಿದ್ಧರಾಗಿದ್ದೇವೆ ಗುರುಗಳೇ.’

ಬುದ್ಧ ಅವರತ್ತ ಒಮ್ಮೆ ಪ್ರಶಾಂತವಾದ ದೃಷ್ಟಿ ಬೀರಿ ಆರಂಭಿಸಿದ, ‘ಅತ್ಯಂತ ಕಠಿಣವಾಗಿ ದೇಹ ದಂಡಿಸಿ ತಪಸ್ಸನ್ನು ಆಚರಿಸುವ ಮಾರ್ಗ ರೂಢಿಯಲ್ಲಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನೊಂದು ಬರೀ ತರ್ಕ ವಿತರ್ಕಗಳ ಮೂಲಕ ಇಂದ್ರಿಯಭೋಗಗಳೇ ಜೀವಿಯ ಪರಮಧ್ಯೇಯವೆಂದು ನಂಬಿಸುವ ಮಾರ್ಗ. ಇವೆರಡರ ನಡುವಿನ ಒಂದು ಮಧ್ಯಮಮಾರ್ಗವನ್ನು ನಾನು ಕಂಡುಕೊಂಡಿದ್ದೇನೆ.’

‘ಆ ಮಾರ್ಗ ಯಾವುದೆಂದು ತಿಳಿಯಲು ನಾವು ಕುತೂಹಲಿಗಳಾಗಿದ್ದೇವೆ’ ಎಂದ ಕೌಂಡಿನ್ಯ.

‘ನಾನು ಧ್ಯಾನದ ಮೂಲಕ, ವಿಚಾರಮಂಥನ ಮಾಡುವುದರ ಮೂಲಕ, ಮತ್ತೆ ಮತ್ತೆ ಮನನ ಮಾಡಿ ಪರೀಕ್ಷಿಸುವ ಮೂಲಕ ನಾಲ್ಕು ಆರ್ಯಸತ್ಯಗಳನ್ನು ಕಂಡುಕೊಂಡೆ. ಲೋಕದಲ್ಲಿ ದುಃಖ ತುಂಬಿದೆ ಎಂಬುದು ಮೊದಲ ಆರ್ಯಸತ್ಯ. ಹುಟ್ಟಿದವರಿಗೆ ರೋಗ, ಮುಪ್ಪು, ಸಾವು ಇತ್ಯಾದಿಗಳಿಂದ ದುಃಖವುಂಟಾಗುತ್ತದೆ. ನಮ್ಮ ಸ್ವಯಂಕೃತ ಅಪರಾಧಗಳಿಂದಲೂ ದುಃಖವುಂಟಾಗುತ್ತದೆ. ನಮ್ಮ ಅಪರಾಧವಿಲ್ಲದೆ ಸ್ವಾರ್ಥ, ದ್ವೇಷ, ಅಸೂಯೆಗಳಿಂದಲೂ ದುಃಖ ಉಂಟಾಗುತ್ತದೆ. ನಮ್ಮ ಅಪರಾಧವಿಲ್ಲದೆ ಬೇರೆಯವರ ಅಪರಾಧದಿಂದಲೂ ನಮಗೆ ದುಃಖವುಂಟಾಗುತ್ತದೆ.’

‘ಎರಡನೆಯ ಆರ್ಯಸತ್ಯ ಯಾವುದು?’ ಭದ್ರಿಕ ಕೇಳಿದ.

‘ದುಃಖಕ್ಕೆ ಒಂದು ಕಾರಣವಿದ್ದೇ ಇರುತ್ತದೆ ಎಂಬುದೇ ಎರಡನೇ ಆರ್ಯಸತ್ಯ. ಹುಟ್ಟಿದವರಿಗೆ ತಾನೆ ರೋಗ, ಮುಪ್ಪು, ಸಾವು ಇತ್ಯಾದಿಗಳು ಸಂಭವಿಸುವುದು? ಅಂದಮೇಲೆ ಹುಟ್ಟುವುದೂ ದುಃಖವೇ. ನಾವು ಹುಟ್ಟಿ ಬರಲು ಕಾರಣ ಆಸೆಯೇ. ಬದುಕಿನಲ್ಲಿ ಹಲವು ರೀತಿಯಲ್ಲಿ ನಮ್ಮ ಆಸೆಗಳೇ

ದುಃಖಕ್ಕೆ ಕಾರಣವಾಗುತ್ತವೆ. ಆಸೆಗಳ ಚಕ್ರದಲ್ಲಿ ಸಿಕ್ಕಿ ಸತ್ತಮೇಲೂ ಮತ್ತೆ ಹುಟ್ಟಿ

ದುಃಖದ ಸುಳಿಯಲ್ಲಿ ಮುಳುಗುತ್ತೇವೆ.’

‘ನಿಮ್ಮ ಮಾತು ನಿಜ, ಆ ದುಃಖಗಳನ್ನು ನಿವಾರಿಸುವುದು ಹೇಗೆ ಸಾಧ್ಯ?’ ಎಂದು ಬಾಷ್ಪ ಕೇಳಿದ.

ಬುದ್ಧ ಹೇಳಿದ, ‘ಆ ದುಃಖವನ್ನು ಕೊನೆಗಾಣಿಸಲು ಸಾಧ್ಯ ಎಂಬುದೇ ಮೂರನೆಯ ಆರ್ಯಸತ್ಯ. ಹುಟ್ಟುವುದಕ್ಕೆ ಆಸೆ ಕಾರಣ. ಆಸೆಗಳಿಲ್ಲದಿದ್ದರೆ ಹುಟ್ಟಿಲ್ಲ. ಹುಟ್ಟದೇ ಇದ್ದರೆ ರೋಗ, ಮುಪ್ಪು, ಸಾವುಗಳ ದುಃಖವಿಲ್ಲ. ಅಂದರೆ, ಆಸೆಗಳನ್ನು ಗೆದ್ದರೆ ದುಃಖ ನಿವಾರಣೆಯಾಗುತ್ತದೆ.’

ಮಹಾನಾಮ ‘ಅದು ಹೇಗೆ?’ ಎಂದು ಸಂದೇಹ ವ್ಯಕ್ತಪಡಿಸಿದ.

‘ದುಃಖವನ್ನು ಕೊನೆಗಾಣಿಸುವ ಒಂದು ದಾರಿಯಿದೆ ಎಂಬುದೇ ನಾಲ್ಕನೇ ಆರ್ಯಸತ್ಯ’ ಎಂದ ಬುದ್ಧ.

‘ಅದು ಸರಿ, ಆಸೆಗಳನ್ನು ಗೆಲ್ಲುವುದು ಹೇಗೆ?’ ಎಂದ ಅಶ್ವಜಿತ.

ಬುದ್ಧ ಹೇಳಿದ, ‘ಆಸೆಗಳನ್ನು ಗೆಲ್ಲಬೇಕೆಂಬುವವನು ತನ್ನ ಮನಸ್ಸು, ಮಾತು, ನಡತೆಗಳನ್ನು ಶುದ್ಧವಾಗಿರಿಸಿಕೊಳ್ಳಬೇಕು. ದೃಢಸಂಕಲ್ಪ, ನಂಬಿಕೆಯಿಂದ ಕಾರ್ಯಶೀಲನಾಗಬೇಕು, ಸ್ವಾರ್ಥವನ್ನು ಬಿಡಬೇಕು. ಪರೋಪಕಾರ ಬುದ್ಧಿ ಬರಬೇಕು. ಹುಸಿಯಾಡಬಾರದು. ದಯಾವಂತನಾಗಿರಬೇಕು. ದುರ್ಗಣಗಳನ್ನು ತೊರೆಯಬೇಕು. ಕೆಟ್ಟತನವನ್ನು ಹತ್ತಿರ ಸುಳಿಯಲೂ ಅವಕಾಶ ಕೊಡಬಾರದು. ಸದಾ ಒಳ್ಳೆಯದನ್ನೇ ಯೋಚಿಸಬೇಕು, ಒಳ್ಳೆಯದನ್ನೇ ಆಚರಿಸಬೇಕು. ಒಳ್ಳೆಯ ಮಾತುಗಳನ್ನೇ ಆಡಬೇಕು. ಇದೇ ನಾನು ಅರಳಿಯಮರದ ಬುಡದಲ್ಲಿ ಕಂಡುಕೊಂಡ ಬೋಧಿಜ್ಞಾನದ ಸಾರ.’

‘ಇನ್ನು ಮುಂದೆ ಆ ಮರವನ್ನು ಬೋಧಿವೃಕ್ಷವೆಂದೇ ಪೂಜ್ಯ ಭಾವನೆಯಿಂದ ಕಾಣಬೇಕು?’ ಎಂದ ಕೌಂಡಿನ್ಯ.

‘ಈಗ ಇಷ್ಟು ಸಾಕು. ಭಿಕ್ಷೆಗೆ ಹೋಗಿಬರೋಣ. ಅಪರಾಹ್ನ ನಿಮಗೆ ಉಂಟಾಗುವ ಸಂದೇಹಗಳಿಗೆ ಪರಿಹಾರ ನೀಡುತ್ತೇನೆ. ಅಲ್ಲಿಯವರೆಗೆ ನಾನು ಹೇಳಿದ ಆರ್ಯಸತ್ಯಗಳ ಬಗ್ಗೆ ಮನನ ಮಾಡಿಕೊಳ್ಳಿ’ ಎಂದ ಬುದ್ಧ.

ಭಿಕ್ಷುಗಳು ಎದ್ದರು. ನಂತರ ಎಲ್ಲರೂ ಭಿಕ್ಷೆಗೆ ಹೋದರು. ಬುದ್ಧನೂ ಭಿಕ್ಷಾಪಾತ್ರೆ ಹಿಡಿದು ಹತ್ತಿರದ ಗ್ರಾಮದ ಕಡೆಗೆ ಸಾಗಿದ.

ಊಟ ಮುಗಿಸಿ ಬುದ್ಧ ಕುಟೀರದ ಹೊರ ಅಂಗಳದಲ್ಲಿ ಕಣ್ಣುಮುಚ್ಚಿ ವಿಶ್ರಾಂತಿ ಪಡೆಯುತ್ತಿದ್ದ. ಪಂಚಭಿಕ್ಷುಗಳು ತುಸು ದೂರದಲ್ಲಿ ಕುಳಿತು ಬೆಳಗ್ಗೆ ಬುದ್ಧ ಬೋಧಿಸಿದ ಆರ್ಯಸತ್ಯಗಳ ಬಗ್ಗೆ ಪರಸ್ಪರ ಸಮಾಲೋಚಿಸಿದರು. ಬೇರೆ ಪದ್ಧತಿಗಳ ಬಗ್ಗೆ ತಮಗೆ ತಿಳಿದಷ್ಟರಿಂದಲೇ ಬುದ್ಧನ ಹೊಸ ತತ್ವಗಳನ್ನು ಹೋಲಿಸಿ ಚರ್ಚೆ ಮಾಡಿಕೊಂಡರು. ಅವರಿಗೆ ಬುದ್ಧನ ಸರಳ ತತ್ವಗಳು ಇಷ್ಟವಾದವು. ಆದರೂ ಅವರಲ್ಲಿ ಕೆಲವು ಸಂದೇಹಗಳುಂಟಾದವು.

ವಿಶ್ರಾಂತಿಯ ನಂತರ ಬುದ್ಧ ಭಿಕ್ಷುಗಳನ್ನು ತನ್ನ ಬಳಿಗೆ ಕರೆದ. ‘ಈಗ ನಿಮ್ಮ ಸಂದೇಹಗಳನ್ನು ಹಿಂಜರಿಯದೆ ವ್ಯಕ್ತಪಡಿಸಬಹುದು. ನಾನು ಕಂಡುಕೊಂಡ ಆರ್ಯಸತ್ಯಗಳು ಬೀಜಗಳಿದ್ದಂತೆ. ಆ ಬೀಜಗಳಿಂದ ಧರ್ಮವೃಕ್ಷ ಬೆಳೆಯಬೇಕು. ಆ ವೃಕ್ಷದ ಕೊಂಬೆರೆಂಬೆಗಳಂತೆ ಪೂರಕವಾದ ನೂರಾರು ಅಂಶಗಳಿವೆ. ನಿಮ್ಮ ಸಂದೇಹ ಪರಿಹಾರದ ನೆಪದಲ್ಲಿ ಆ ಪೂರಕ ಅಂಶಗಳ ಬಗ್ಗೆಯೂ ನಿಮಗೆ ತಿಳಿಸುತ್ತೇನೆ.’

ಪಂಚಭಿಕ್ಷುಗಳು ಒಬ್ಬೊಬ್ಬರೂ ತಮ್ಮ ಸಂದೇಹಗಳನ್ನು ಕೇಳುತ್ತಾ ಬಂದರು. ಬುದ್ಧ ಅವುಗಳಿಗೆಲ್ಲ ಸ್ಪಷ್ಟೀಕರಣ ನೀಡುತ್ತಾ ಬಂದ. ಆಸೆಗಳನ್ನು ಗೆಲ್ಲಲು ನಾಲ್ಕನೆಯ ಆರ್ಯಸತ್ಯದ ಬಗ್ಗೆ ಇನ್ನಷ್ಟು ವಿವರವಾಗಿ ಹೇಳಿದ. ಅವುಗಳನ್ನು ಅಷ್ಟಾಂಗ ಮಾರ್ಗ ಎಂದು ಹೆಸರಿಸಿದ.

ಅವುಗಳಲ್ಲಿ ಮೊದಲನೆಯದು ಸಮ್ಯಕ್​ದೃಷ್ಟಿ. ಅಂದರೆ ಅದು ನಾಲ್ಕು ಆರ್ಯಸತ್ಯಗಳ ಸ್ಪಷ್ಟವಾದ ಜ್ಞಾನ. ಜಗತ್ತು ದುಃಖದಿಂದ ಕೂಡಿದೆ. ಅದು ಮನುಷ್ಯನ ತೃಷ್ಣೆ ಅಥವಾ ಅತಿಯಾದ ಆಸೆಯಿಂದ ಹುಟ್ಟಿದೆ. ಆ ಆಸೆಯನ್ನು ನಾಶ ಮಾಡಿದರೆ ಶಾಂತಿ ದೊರೆಯುತ್ತದೆ. ಅಂಧಶ್ರದ್ಧೆಯಿಂದ ಯಾವ ಮಾತನ್ನೂ ನಂಬದೆ ಸ್ವಯಂ ಪ್ರಮಾಣೀಕರಣದಿಂದ ಪರ್ಯಾಲೋಚಿಸಿ ನಂಬಬೇಕು. ಅಪಕಾರಿಗಳಿಗೂ ಉಪಕಾರ ಮಾಡುವ ಉದಾರ ಸ್ವಭಾವವಿರಬೇಕು.

ಎರಡನೆಯದು ಸಮ್ಯಕ್ ಸಂಕಲ್ಪ, ಅಂದರೆ ಸರಿಯಾದ ಸಂಕಲ್ಪ. ಸುಖಲೋಲುಪ್ತಿಯನ್ನು, ರಾಗ-ದ್ವೇಷಗಳನ್ನು ತ್ಯಜಿಸಿ, ಲೋಕದ ಸಕಲಜೀವಿಗಳ ಕುಶಲವನ್ನು ಬಯಸುವ ಪ್ರಜ್ಞೆಯನ್ನು ಪಡೆದುಕೊಳ್ಳಬೇಕೆಂಬ ಸ್ಥಿರವಾದ ನಿಶ್ಚಯ ಮಾಡಿಕೊಳ್ಳಬೇಕು. ಇದರಲ್ಲಿ ಸ್ವಾರ್ಥರಹಿತ ಸಂಕಲ್ಪ, ಯಾರಿಗೂ ದ್ರೋಹ ಮಾಡಬಾರದೆಂಬ ಸಂಕಲ್ಪ, ಅಹಿಂಸೆಯ ಸಂಕಲ್ಪಗಳೂ ಸೇರುತ್ತವೆ. ಅಂದರೆ ಸದ್ಭಾವನೆಗಳೇ ತತ್ವಸಾಕ್ಷಾತ್ಕಾರಕ್ಕೆ ಮೂಲಾಧಾರವೆಂಬುದು ಸಮ್ಯಕ್ ಸಂಕಲ್ಪದ ಉದ್ದೇಶ.

ಮೂರನೆಯದು ಸಮ್ಯಕ್ ವಚನ. ಸುಳ್ಳು ಹೇಳಬಾರದು, ಪರನಿಂದೆ ಮಾಡಬಾರದು, ಚಾಡಿ ಹೇಳಬಾರದು, ಕಟುಮಾತುಗಳಿಂದ ಯಾರನ್ನೂ ನೋಯಿಸಬಾರದು. ಅಂದರೆ ಸತ್ಯವನ್ನೇ ನುಡಿಯಬೇಕು, ಮೃದುವಾಗಿ ಮಾತನಾಡಬೇಕೆಂದು ಇದರ ಉದ್ದೇಶ.

ನಾಲ್ಕನೆಯದು ಸಮ್ಯಕ್ ಕರ್ಮ. ಪ್ರಾಣಿಹಿಂಸೆ ಮಾಡಬಾರದು, ಕಳ್ಳತನ ಮಾಡಬಾರದು, ನೀತಿಯನ್ನು ಮೀರಬಾರದು. ಧರ್ಮಸಮ್ಮತವಾದ ಕಾರ್ಯಗಳನ್ನೇ ಮಾಡಬೇಕು. ಪ್ರಾಣಿದಯೆ ಇದರ ಮೂಲ.

ಐದನೆಯದು ಸಮ್ಯಕ್ ಜೀವಿಕೆ. ಹೀನವೃತ್ತಿಯನ್ನು ತ್ಯಜಿಸಿ ಉತ್ತಮ ವೃತ್ತಿಗಳ ಮೂಲಕವೇ ಜೀವನೋಪಾಯವನ್ನು ಮಾಡಬೇಕು. ಅಂದರೆ ನಮ್ಮ ವೃತ್ತಿಯಿಂದ ಪರಹಿಂಸೆಯಾಗಬಾರದು. ವಿಷ, ಮಾಂಸ ಮಾರಾಟ ಮಾಡುವುದು, ಪ್ರಾಣಿವಧೆ ಕೂಡದೆಂದು ಬುದ್ಧ ಹೇಳಿದ. ಪರಹಿಂಸೆಯಿಂದ ಧನಿಕನಾಗುವವನು ಕಡು ಪಾಪಿಯೆಂಬುದು ಬುದ್ಧನ ಅಭಿಪ್ರಾಯ.

ಆರನೆಯದು ಸಮ್ಯಕ್ ವ್ಯಾಯಾಮ. ಧ್ಯಾನ ಮೊದಲಾದವುಗಳ ಸಹಾಯದಿಂದ, ಸದಾ ಸದ್ವಿಚಾರಗಳನ್ನೇ ಮನಸ್ಸಿನಲ್ಲಿ ಸ್ಥಿರಗೊಳಿಸಿ ತೃಷ್ಣೆ ಅಥವಾ ಆಸೆಯ ನಿರೋಧ ಮಾಡಬೇಕು. ಅಂದರೆ, ಮನಸ್ಸು ಸದಾ ಸದ್ಭಾವನೆಗಳಲ್ಲೇ ಮಗ್ನವಾಗಿರಬೇಕು. ಮೈತ್ರಿ ಮತ್ತು ಕರುಣೆಗಳಿಗೆ ಬುದ್ಧ ಹೆಚ್ಚಿನ ಪ್ರಾಮುಖ್ಯ ನೀಡಿದ. ಸಕಲಜೀವಿಗಳಲ್ಲೂ ಪ್ರೀತಿ ಕರುಣೆಗಳಿರಬೇಕೆಂಬುದು ಬುದ್ಧನ ಪ್ರೇಮಲ ಸ್ವಭಾವಕ್ಕೆ ಉಚಿತವಾಗಿತ್ತು. ಜೊತೆಗೆ ಮುದಿತಾ, ಅಂದರೆ ಅಹಿತವನ್ನು ಮಾಡಿದವರ ವಿಷಯದಲ್ಲಿಯೂ ಪ್ರಸನ್ನಭಾವದಿಂದಿರುವುದು; ಉಪೇಕ್ಷೆ, ಅಂದರೆ ನಿಷ್ಪಕ್ಷಪಾತತೆ ಮತ್ತು ಪ್ರತೀಕಾರ ಬುದ್ಧಿಯಿಲ್ಲದಿರುವುದನ್ನು ಬುದ್ಧ ಸ್ಪಷ್ಟಪಡಿಸಿದ.

ಏಳನೆಯದು ಸಮ್ಯಕ್ ಸ್ಮೃ. ಅಂದರೆ, ಮನಸ್ಸಿನ ದುಷ್ಟತನವನ್ನು, ಸಂತಾಪವನ್ನು ತ್ಯಜಿಸುವುದು. ಸದಾ ಒಳ್ಳೆಯದನ್ನೇ ಸ್ಮರಣೆ ಮಾಡಿಕೊಳ್ಳುವುದು.

ಎಂಟನೆಯದು ಸಮ್ಯಕ್ ಸಮಾಧಿ. ಇದು ಆರ್ಯ ಅಷ್ಟಾಂಗಮಾರ್ಗಗಳ ಕಡೆಯ ಸಿದ್ಧಿಯ ಕಡೆಯ ಹಂತ. ಅದರ ಸಾಧನೆಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥವೆಂಬ ನಾಲ್ಕು ಧ್ಯಾನದ ಘಟ್ಟಗಳನ್ನು ಬುದ್ಧ ವಿವರಿಸಿ ಹೇಳಿದ. ಇವುಗಳ ಸಿದ್ಧಿಯಿಂದ ಹಿಂದಿನ ಜನ್ಮಗಳ ವೃತ್ತಾಂತಗಳೂ ತಿಳಿಯುತ್ತವೆ. ಕೊನೆಗೆ ಅಜ್ಞಾನದ ಅಡ್ಡಿಗಳು, ಆವರಣಗಳೆಲ್ಲ ನಿವಾರಣೆಯಾಗಿ ನಿರ್ವಾಣದ ಶಾಂತಿ ಲಭ್ಯವಾಗುತ್ತದೆ. ಇದೇ ದುಃಖಮಯವಾದ ಬದುಕಿನಿಂದ ಪರಮಶಾಂತಿಯ ನಿರ್ವಾಣ ಸ್ಥಿತಿಯನ್ನು ಪಡೆಯುವ ಆರ್ಯ ಅಷ್ಟಾಂಗಮಾರ್ಗ.

ಕೆಲವು ಕ್ಷಣ ಮೌನ. ಪಂಚಭಿಕ್ಷುಗಳು ಪರಸ್ಪರ ಮುಖ ನೋಡಿಕೊಂಡರು. ಅವರಿಗೆ ತನ್ನ ತತ್ವಗಳಲ್ಲಿ ನಂಬಿಕೆ ಬಂದಿಲ್ಲವೇ? ಎಂದು ಬುದ್ಧ ಶಂಕಿಸಿದ. ಅಷ್ಟರಲ್ಲಿ ಕೌಂಡಿನ್ಯ ಎದ್ದು ನಿಂತು ‘ಬುದ್ಧಂ ಶರಣಂ ಗಚ್ಛಾಮಿ’ ಎಂದು ಬುದ್ಧನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ. ಉಳಿದವರೂ ‘ಬುದ್ಧಂ ಶರಣಂ ಗಚ್ಛಾಮಿ’ ಎಂದು ಹೇಳಿಕೊಂಡು ನಮಸ್ಕಾರ ಮಾಡಿದರು.

‘ಇನ್ನು ಮುಂದೆ ಬುದ್ಧನ ಧರ್ಮ ನಮ್ಮ ಧರ್ಮ’ ಎಂದ ಭದ್ರಿಕ.

ಬಾಷ್ಪ ಹೇಳಿದ, ‘ಎಷ್ಟು ಸರಳವಾಗಿದೆ! ನಮಗೆ ಅರ್ಥವಾದಂತೆ ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುತ್ತದೆ.’

ಮಹಾನಾಮ ಹೇಳಿದ, ‘ಸಾಮಾನ್ಯರಿಗೆ ಮಾತ್ರವಲ್ಲ, ಪಂಡಿತರಿಗೂ ಉದ್ಧಾರದ ದಾರಿ ತೋರಿಸುವ ಈ ಧರ್ಮ ಜಗತ್ತಿನ ತುಂಬ ಹರಡಬೇಕು.’

‘ಭಗವನ್’ ಅಶ್ವಜಿತ ಹೇಳಿದ, ‘ನಿಮ್ಮ ತತ್ವಗಳೆಲ್ಲ ಹೊಸತನದಿಂದ ಕೂಡಿವೆ. ಆಚರಿಸಲು ಸುಲಭವಾಗಿವೆ. ನೀವು ಹೇಳಿದಂತೆ ಇದು ಅತಿಗಳಿಲ್ಲದ ಮಧ್ಯಮಮಾರ್ಗವೇ ಸರಿ.’

‘ನಾವು ಇಂದಿನಿಂದ ನಿಮ್ಮ ಅಧಿಕೃತ ಶಿಷ್ಯರಾಗುತ್ತೇವೆ. ನಿಮ್ಮ ಆದೇಶದಂತೆ ನಡೆಯುತ್ತೇವೆ. ಮಾನವ ಕಲ್ಯಾಣದ ನಿಮ್ಮ ತತ್ವಗಳನ್ನು ಪ್ರಚುರಪಡಿಸಲು ಶ್ರಮಿಸುತ್ತೇವೆ’ ಎಂದ ಕೌಂಡಿನ್ಯ.

ಬುದ್ಧನ ಆತ್ಮವಿಶ್ವಾಸ ದೃಢವಾಯಿತು. ‘ಬಹಳ ಸಂತೋಷ’ ಅವನು ಹೇಳಿದ, ‘ಗುರು ಹೇಳಿದ್ದೆಂದು ಕಣ್ಣು ಮುಚ್ಚಿಕೊಂಡು ಯಾರೂ ಪಾಲಿಸಬೇಕಾಗಿಲ್ಲ. ನಿಮ್ಮ ಆಲೋಚನೆಗೆ ಸಮಂಜಸವೆಂದು ಕಂಡಮೇಲೇ ಅದನ್ನು ಸ್ವೀಕರಿಸಿ. ದೋಷವಿದ್ದರೆ ನನ್ನೊಂದಿಗೆ ರ್ಚಚಿಸಿ. ನಾವೆಲ್ಲ ಸೇರಿ ಸರಿಪಡಿಸೋಣ. ಇಲ್ಲಿ ಪ್ರತಿಷ್ಠೆ ಮುಖ್ಯವಾಗಬಾರದು, ಸತ್ಯ ಮುಖ್ಯವಾಗಬೇಕು.’

‘ಅಹಂ ಇಲ್ಲದ ನಿಮ್ಮ ಸರಳತನ ವಿಶೇಷ ಭಗವನ್’ ಎಂದು ಮಹಾನಾಮ ಮೆಚ್ಚಿದ. ಮತ್ತೆ ಬುದ್ಧ ಹೇಳಿದ, ‘ನೀವು ನನ್ನ ಧರ್ಮದ, ಅಲ್ಲ ಅಲ್ಲ, ಬುದ್ಧನ ಧರ್ಮದ ಮೊದಲ ಭಿಕ್ಷುಗಳು. ನಾನು, ನೀವು, ಮುಂದೆ ಬರಲಿರುವ ಭಿಕ್ಷುಗಳು, ಎಲ್ಲರೂ ಸೇರಿ ಲೋಕಶಾಂತಿಗಾಗಿ, ಎಲ್ಲ ಮಾನವರ ಶ್ರೇಯಸ್ಸಿಗಾಗಿ ಆರ್ಯಸತ್ಯಗಳು ಮತ್ತು ಅಷ್ಟಾಂಗ ಮಾರ್ಗವನ್ನು ಪ್ರಚುರಪಡಿಸಬೇಕು.’

‘ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ – ಈ ಘೊಷವಾಕ್ಯ ನಮ್ಮ ಮಹಾ ಮಂತ್ರ!’ ಎಂದ ಕೌಂಡಿನ್ಯ. ಬುದ್ಧನ ತತ್ವಗಳ ರೀತಿಯಲ್ಲಿ ಅವರು ತಮ್ಮ ಮನಸ್ಸನ್ನು ಸ್ಥಿರಗೊಳಿಸಲು ಪ್ರಯತ್ನಿಸಿದರು. ಧ್ಯಾನವನ್ನು ರೂಢಿಸಿಕೊಳ್ಳಲು ಶ್ರಮಿಸಿದರು. ಬುದ್ಧ ಅವರಿಗೆ ಸೂಕ್ತ ಸಲಹೆ ನೀಡುತ್ತಿದ್ದ. ನಿತ್ಯ ನಿಯಮಿತ ಅವಧಿಯಲ್ಲಿ ಅವರ ಸಂದೇಹ ನಿವಾರಣೆ ಮಾಡುತ್ತಿದ್ದ. ಏಕಾಗ್ರತೆ ಸಾಧಿಸುವುದು ಅವರಿಗೆ ಕಷ್ಟವಾಯಿತು. ಆದರೆ ಬುದ್ಧ, ನಿರಾಸೆಗೊಳ್ಳದೆ ಶ್ರದ್ಧೆಯಿಂದ ಪ್ರಯತ್ನಿಸಿದರೆ, ಅದು ಕೈವಶವಾಗುವುದೆಂದು ಅವರಲ್ಲಿ ಉತ್ಸಾಹ ತುಂಬುತ್ತಿದ್ದ. ಅವನ ಮಾತು ಮೃದು ಮಧುರವಾಗಿರುತ್ತಿತ್ತು. ಇಷ್ಟು ಮೃದುವಾಗಿ, ಇಷ್ಟು ಪ್ರಿಯವಾಗಿ ಮಾತನಾಡುವುದು ಸಾಧ್ಯವೇ! ಎಂದು ಅವರು ಅಚ್ಚರಿಗೊಳ್ಳುತ್ತಿದ್ದರು. ಬುದ್ಧ ಅವರ ಪಾಲಿಗೆ ಗುರು, ಹಿರಿಯ, ತಂದೆ, ಎಲ್ಲವೂ ಆದ. ಅವರಿಗೆ ಕ್ರಮ ಕ್ರಮೇಣ ಅವನ ತತ್ವಗಳು ಹೆಚ್ಚು ಹೆಚ್ಚು ಅರ್ಥವಾಗತೊಡಗಿದವು. ಅದಕ್ಕೆ ತಕ್ಕಂತೆ ತಮ್ಮ ವ್ಯಕ್ತಿತ್ವವನ್ನು ಪುನರ್ರೂಪಿಸಿಕೊಳ್ಳುವುದು ಮೊದಮೊದಲು ಕಷ್ಟವಾದರೂ, ನಿಧಾನವಾಗಿ ಅದರಲ್ಲಿ ಯಶ ದೊರೆಯುವುದರ ಸೂಚನೆ ಸಿಕ್ಕಿದಾಗ ಅವರು ಉತ್ಸಾಹಿತರಾದರು. ಬುದ್ಧನ ಶಿಷ್ಯರಾದದ್ದು ತಮ್ಮ ಅದೃಷ್ಟವೆಂದುಕೊಂಡರು.

ಗೃಹಸ್ಥ ಭಕ್ತರಿಗೆ ದಶಶೀಲ ನಿಯಮಗಳು

ಒಂದು ದಿನ ಒಬ್ಬ ತರುಣ ಮಲಿನ ವಸ್ತ್ರಗಳನ್ನು ಧರಿಸಿ ನಿತ್ರಾಣಗೊಂಡು ಹತಾಶೆಯಿಂದ ಬಂದು ಕುಟೀರದ ಸಮೀಪದಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿರುವುದು, ಭಿಕ್ಷೆಯಿಂದ ಬರುತ್ತಿದ್ದ ಬುದ್ಧನ ಗಮನಕ್ಕೆ ಬಂತು. ಕೂಡಲೇ ಕುಟೀರದಿಂದ ಕುಡಿಯುವ ನೀರು ತೆಗೆದುಕೊಂಡು ಅವನ ಬಳಿಗೆ ಧಾವಿಸಿದ. ಅವನಿಗೆ ನೀರು ಕೊಟ್ಟ. ದಾಹದಿಂದ ತಲ್ಲಣಿಸುತ್ತಿದ್ದ ಅವನು ಗಟಗಟನೆ ನೀರು ಕುಡಿದ. ಕುಡಿಯುವ ಆತುರದಲ್ಲಿ ಮುಖದ ಮೇಲೆ, ಮೈಮೇಲೆಲ್ಲ ಚೆಲ್ಲಿಕೊಂಡ. ನೆತ್ತಿಗೆ ಹತ್ತಿ ಕೆಮ್ಮತೊಡಗಿದ.

ಬುದ್ಧ ಭಿಕ್ಷಾಪಾತ್ರೆಯನ್ನು ಕೆಳಗಿರಿಸಿ, ಅವನ ಬೆನ್ನ ಮೇಲೆ ಸವರಿದ. ಕೆಮ್ಮು ನಿಂತ ನಂತರ ತನ್ನ ಉತ್ತರೀಯದಿಂದಲೇ ಅವನ ಬಾಯಿ ಮತ್ತು ಮುಖವನ್ನು ಒರೆಸಿದ. ‘ಹಸಿವಾಗಿದೆಯೇ?’ ಎಂದು ಅಕ್ಕರೆ ಯಿಂದ ಕೇಳಿದ. ಅವನು ಹೌದೆಂದು ತಲೆಯಾಡಿಸಿದ. ಬುದ್ಧ ತನ್ನ ಭಿಕ್ಷಾಪಾತ್ರೆಯನ್ನೇ ಅವನಿಗೆ ನೀಡಿದ. ಅವನು ಗಬಗಬನೆ ತಿಂದು ಮುಗಿಸಿದ. ಅವನ ಮುಖದಲ್ಲಿ ತೃಪ್ತಿ ಕಂಡಿತು. ಬುದ್ಧನ ಮುಖದಲ್ಲಿ ಸಮಾಧಾನ ಕಂಡಿತು. ಆ ವ್ಯಕ್ತಿ ಈಗ ಸರಿಯಾಗಿ ಬುದ್ಧನ ಕಡೆ ನೋಡಿದ. ಅಲ್ಲಿ ಕರುಣೆಯ ಮಂದಹಾಸ ತುಂಬಿ ತುಳುಕುತ್ತಿತ್ತು. ‘ಅನ್ನಪಾನವನ್ನು ನೀಡಿ ನನ್ನ ಜೀವವುಳಿಸಿದ ಪುಣ್ಯಾತ್ಮ, ನೀನು ಯಾರು?’ ಎಂದು ಅವನು ಕೇಳಿದ.

‘ನನ್ನನ್ನು ಬುದ್ಧನೆಂದು ಕರೆಯುತ್ತಾರೆ. ನೀನು ಯಾರು?’ ಬುದ್ಧ ಕೇಳಿದ.

‘ನನ್ನ ಹೆಸರು ಯಶ, ವಾರಣಾಸಿಯವನು.’

‘ಏನಾಯಿತು? ಏಕೆ ಹೀಗೆ ಹತಾಶೆಯಿಂದ ಬಂದೆ? ಯಾರಾದರೂ ಬೆನ್ನಟ್ಟಿ ಬಂದರೇ?’

‘ಹೌದು, ಸಾಂಸಾರಿಕ ಬಂಧನಗಳು ನನ್ನನ್ನು ಬೆನ್ನಟ್ಟುತ್ತಿವೆ. ಅವುಗಳಿಂದ ಪಾರಾಗಿ ಶಾಂತಿಯನ್ನು ಹುಡುಕಿಕೊಂಡು ವಾರಣಾಸಿಯ ಸುತ್ತಮುತ್ತ ಅಲೆದಾಡುತ್ತ, ಇಲ್ಲಿಗೆ ಬಂದೆ.’

ಇದನ್ನೆಲ್ಲ ಪಂಚಭಿಕ್ಷುಗಳು ದೂರದಿಂದಲೇ ನೋಡುತ್ತಿದ್ದರು. ತಾವು ಅಸಹ್ಯಪಡುವಷ್ಟು ಕೊಳಕಾಗಿದ್ದ ಯಶನಿಗೆ ಬುದ್ಧ ತೋರಿಸಿದ ಅಕ್ಕರೆ, ಉಪಚಾರ, ತನ್ನ ಭಿಕ್ಷಾನ್ನವನ್ನೇ ನೀಡಿಬಿಟ್ಟಿದ್ದು ವಿಸ್ಮಯಕಾರಿಯಾಗಿತ್ತು.

‘ಭಗವನ್, ನಿಮ್ಮ ಭಿಕ್ಷಾನ್ನವನ್ನೇ ನೀಡಿಬಿಟ್ಟಿರಲ್ಲಾ!?’ ಎಂದ ಕೌಂಡಿನ್ಯ.

‘ಉರುವೇಲೆಯಲ್ಲಿ ಎಷ್ಟೋ ದಿನಗಳು, ವಾರಗಳ ಕಾಲ ನಿರಾಹಾರ ವ್ರತ ಮಾಡಲಿಲ್ಲವೆ? ಈಗ ಒಂದು ಹೊತ್ತಿನ ಆಹಾರಕ್ಕೆ ಪರಿತಪಿಸಲೆ! ಈ ಬಂಧುವಿನ ಹಸಿವನ್ನು ನೀಗಿಸಿದ ಸಂತೋಷ ನನ್ನ ಹೊಟ್ಟೆ ತುಂಬಿಸಿದೆ.’

‘ನೀನು ಈಗ ಎಲ್ಲಿಗೆ ಹೊರಟಿರುವೆ!?’ ಅಶ್ವಜಿತ ಕೇಳಿದ.

ಯಶ ಹೇಳಿದ, ‘ನನಗೆ ಶಾಂತಿಯ ದಾರಿ ತೋರಿಸುವ ಗುರುವಿಗಾಗಿ ಹುಡುಕುತ್ತಿದ್ದೆ. ಈ ಮಹಾತ್ಮನನ್ನು ಕಂಡ ಮೇಲೆ ನಾನಿನ್ನು ಹುಡುಕುವ ಅಗತ್ಯವಿಲ್ಲ ಎನ್ನಿಸುತ್ತಿದೆ. ಭಗವನ್, ನನ್ನನ್ನೂ ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸುತ್ತೀರಾ?’ ಎಂದು ಅವನು ಬುದ್ಧನ ಪಾದಗಳನ್ನು ಹಿಡಿದ.

ಬುದ್ಧ ಅವನ ಭುಜ ಹಿಡಿದು ಮೇಲೆತ್ತಿ ‘ಬುದ್ಧನ ಧರ್ಮವನ್ನು ಪಾಲಿಸುವ ನಿಷ್ಠೆಯಿದ್ದರೆ, ಈ ಐವರ ಜೊತೆ ನೀನೂ ಆರನೆಯವನಾಗಬಹುದು.’

‘ಕೃತಾರ್ಥನಾದೆ ತಂದೆ, ಕೃತಾರ್ಥನಾದೆ’ ಎಂದು ಯಶ ಬುದ್ಧನಿಗೆ ಶರಣಾದ, ಅವನ ಧರ್ಮಕ್ಕೆ ಶರಣಾದ, ಸಂಘಕ್ಕೆ ಶರಣಾದ. ಕೆಲವು ದಿನಗಳ ಕಾಲ ಅವನ ಮನೋಧರ್ಮವನ್ನು ಪರೀಕ್ಷೆ ಮಾಡಿ ಬುದ್ಧ ಅವನಿಗೆ ಭಿಕ್ಷು ದೀಕ್ಷೆಯನ್ನು ನೀಡಿದ. ಅವನೂ ಕಾಷಾಯವಸ್ತ್ರಧಾರಿಯಾದ.

ಕೆಲವು ದಿನಗಳ ಕಾಲ ಮಗನನ್ನು ಎಲ್ಲ ಕಡೆ ಹುಡುಕುತ್ತ ಯಶನ ತಂದೆ ತಾಯಿ ಅಲ್ಲಿಗೆ ಬಂದರು. ಮಗನನ್ನು ಕಳಿಸಿಕೊಡಬೇಕೆಂದು ಅಂಗಲಾಚಿದರು. ಸಂಸಾರದಲ್ಲಿ ನಿರಾಸಕ್ತನಾದ ಮಗನನ್ನು ಬಲಾತ್ಕರಿಸಿ ಅವನ ಬದುಕನ್ನು ನರಕ ಮಾಡುವುದು ಕೂಡದೆಂದು ಅವರಿಗೆ ಬುದ್ಧ ತಿಳಿಸಿ ಹೇಳಿದ. ಕೆಲವು ದಿನ ಅಲ್ಲೇ ಉಳಿದುಕೊಂಡು ಅವರು ಬುದ್ಧನ ತತ್ವಬೋಧೆಗಳನ್ನು ಕೇಳಿ ಪ್ರಭಾವಿತರಾದರು. ಅವರು ಬುದ್ಧನ ಧರ್ಮಕ್ಕೆ ಶರಣಾಗಿ, ಸರಳ ನಿಯಮಗಳನ್ನು ಪಾಲಿಸುವ ಉಪಾಸಕರಾಗಿ ಸಮಾಧಾನದಿಂದ ಹಿಂದಿರುಗಿದರು. ಈ ದಂಪತಿಗಳ ನೆಪದಿಂದ ಗೃಹಸ್ಥ ಭಕ್ತರಿಗಾಗಿ ಬುದ್ಧ ಪಂಚಶೀಲಗಳನ್ನು ರೂಪಿಸಿದ. ಮೊದಲನೆಯದು ಬುದ್ಧ, ಧರ್ಮ ಮತ್ತು ಸಂಘಕ್ಕೆ ಶರಣಾಗುವುದು, ಎರಡನೆಯದು ಪ್ರಾಣಿಹತ್ಯೆ ಮತ್ತು ಪ್ರಾಣಿಹಿಂಸೆ ಮಾಡದಿರುವುದು, ಮೂರನೆಯದು ತನ್ನದಾದ ಅಥವಾ ತಾನು ತೆಗೆದುಕೊಳ್ಳಬಹುದಾದ ವಸ್ತುವಿನ ಹೊರತಾಗಿ ಬೇರೆ ಯಾವ ವಸ್ತುವನ್ನೂ ತೆಗೆದುಕೊಳ್ಳದಿರುವುದು, ನಾಲ್ಕನೆಯದು ಸದಾ ಸತ್ಯವನ್ನೇ ನುಡಿಯಬೇಕು, ಪರನಿಂದೆ ಕೂಡದು, ಕುಹಕ, ವಂಚನೆ ದುಷ್ಟ ನುಡಿಗಳನ್ನಾಡಬಾರದು. ಬ್ರಹ್ಮಚರ್ಯಪಾಲನೆ ಮತ್ತು ಮಾದಕವಸ್ತುಗಳ ಸೇವನೆ ಮಾಡದಿರುವುದು ಐದನೆಯದು. ಈ ಪಂಚಶೀಲಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಉಪಾಸಕರು ವಿನೀತರೂ, ಶೀಲವಂತರೂ, ಧರ್ವತ್ಮರೂ ಆಗಿರಬೇಕು. ಅವರು ಭಿಕ್ಷುಗಳನ್ನು ಭಿಕ್ಷೆ ನೀಡಿ ಸತ್ಕರಿಸಬೇಕು ಪರೋಪಕಾರ, ಕರುಣೆ ಅವರಲ್ಲಿರಬೇಕು.

ಈ ಪಂಚಶೀಲಗಳ ಜೊತೆಗೆ ಮತ್ತೆ ಐದು ಶೀಲಗಳನ್ನು ಸೇರಿಸಿ ದಶಶೀಲಗಳನ್ನು ಬುದ್ಧ ಭಿಕ್ಷುಗಳಿಗೆ ನಿಯಮಿಸಿದ. ಅವುಗಳಲ್ಲಿ ಮೊದಲನೆಯದು ನಿಯಮಿತ ಕಾಲದಲ್ಲಿ ದಿನಕ್ಕೆ ಒಂದೇ ಸಲ ಊಟ ಮಾಡುವುದು. ಎರಡನೆಯದು ನೃತ್ಯ, ಸಂಗೀತ ಇತ್ಯಾದಿ ವಿನೋದ ವಿಲಾಸಗಳನ್ನು ನೋಡದಿರುವುದು. ಮೂರನೆಯದು ಗಂಧಮಾಲ್ಯಾದಿ ಅಲಂಕಾರಗಳನ್ನು ತ್ಯಜಿಸಬೇಕು. ನಾಲ್ಕನೆಯದು ಉತ್ತಮವಾದ ಹಾಸಿಗೆ ಹೊದಿಕೆಗಳನ್ನು ಬಳಸಬಾರದು. ಐದನೆಯದು ಸ್ವಂತ ಪ್ರಯೋಜನಗಳಿಗಾಗಿ ಚಿನ್ನ, ಬೆಳ್ಳಿ, ಇತ್ಯಾದಿ ಆಭರಣಗಳು ಮತ್ತು ಧನವನ್ನು ಸ್ವೀಕರಿಸಬಾರದು ಮತ್ತು ಶೇಖರಿಸಬಾರದು.

Leave a Reply

Your email address will not be published. Required fields are marked *

Back To Top