ಧೋನಿ ನಿವೃತ್ತಿ ಬಗ್ಗೆ ಗಾಯಕಿ ಲತಾ ಮಂಗೇಶ್ಕರ್​ ಟ್ವೀಟ್​: ಟೀಂ ಇಂಡಿಯಾಕ್ಕೆ ಹಾಡೊಂದನ್ನು ಅರ್ಪಿಸಿದ ನೈಟಿಂಗೇಲ್​

ಮುಂಬೈ: ಈ ವಿಶ್ವಕಪ್​ ಮುಗಿದ ಬಳಿಕ ಮಹೇಂದ್ರ ಸಿಂಗ್​ ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೇ. ಈಗಾಗಲೇ 38ನೇ ವರ್ಷಕ್ಕೆ ಕಾಲಿಟ್ಟಿರುವ ಧೋನಿ ಇನ್ನು ಕ್ರಿಕೆಟ್​ ಮುಂದುವರಿಸುವುದಿಲ್ಲ ಎಂಬುದೇ ಬಹುತೇಕರ ವಾದ.

ಹೀಗಿರುವಾಗ ಧೋನಿ ನಿವೃತ್ತಿಯ ಬಗ್ಗೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ ಮಾಡಿರುವ ಟ್ವೀಟ್​ ಸಿಕ್ಕಾಪಟೆ ವೈರಲ್​ ಆಗಿದೆ.

ನಿನ್ನೆ ನ್ಯೂಜಿಲೆಂಡ್​ ವಿರುದ್ಧ ಭಾರತ ಸೆಮಿಫೈನಲ್​ನಲ್ಲಿ ಸೋತ ಬೆನ್ನಲ್ಲೇ ಲತಾ ಮಂಗೇಶ್ಕರ್​ ಟ್ವೀಟ್​ ಮಾಡಿದ್ದು ತಂಡವನ್ನು ಶ್ಲಾಘಿಸಿದ್ದಾರೆ. ಹಾಗೇ ನಿವೃತ್ತಿಹೊಂದುವ ಯೋಚನೆ ಮಾಡಬೇಡಿ ಎಂದು ಧೋನಿಗೆ ಮನವಿ ಮಾಡಿದ್ದಾರೆ. ಟೀಂ ಇಂಡಿಯಾ ಸೋತಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಹೇಳಿರುವ ಲತಾ ಮಂಗೇಶ್ಕರ್​, ಗುಲ್ಜಾರ್​ ಸಾಹಬ್​ ಅವರ ಆಕಾಶ್​ ಕೆ ಉಸ್​ ಪಾರ್​ ಭೀ, ಆಕಾಶ್​ ಹೇ…ಎಂಬ ಹಾಡನ್ನು ಹಾಡಿ ಟೀಂ ಇಂಡಿಯಾಕ್ಕೆ ಅರ್ಪಿಸಿದ್ದಾರೆ. ನಾವು ನಿನ್ನೆ ಗೆಲ್ಲಲು ಸಾಧ್ಯವಾಗಿಲ್ಲ ಅಷ್ಟೇ, ಆದರೆ ಖಂಡಿತ ಸೋತಿಲ್ಲ. ಈ ಹಾಡನ್ನು ನಮ್ಮ ಆಟಗಾರರಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೆ ಧೋನಿಯ ಕುರಿತು ಟ್ವೀಟ್​ ಮಾಡಿ, ಎಂ.ಎಸ್​.ಧೋನಿಜೀ ನಮಸ್ಕಾರ, ನೀವು ನಿವೃತ್ತಿ ತೆಗೆದುಕೊಳ್ಳುತ್ತಿದ್ದೀರಿ ಎಂಬ ವಿಚಾರವನ್ನು ಕೆಲ ದಿನಗಳಿಂದಲೂ ಕೇಳುತ್ತಿದ್ದೇನೆ. ಆದರೆ ದಯವಿಟ್ಟು ಆ ನಿರ್ಧಾರ ಮಾಡಬೇಡಿ. ಈ ದೇಶಕ್ಕೆ ನಿಮ್ಮ ಆಟದ ಅಗತ್ಯ ಖಂಡಿತ ಇದೆ. ಇದು ನನ್ನ ವೈಯಕ್ತಿಕ ಮನವಿ ಎಂದು ಹೇಳಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ನಿವೃತ್ತಿಯ ಬಗ್ಗೆ ಬೇರೆಯವರು ಹೇಳುತ್ತಿದ್ದಾರೆ ಬಿಟ್ಟರೆ ಇದುವರೆಗೆ ಅವರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

2007ರಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್​ ಹಾಗೂ 2011ರ ಐಸಿಸಿ ವಿಶ್ವಕಪ್​ ಪಂದ್ಯಾವಳಿಯಲ್ಲಿ ಭಾರತಕ್ಕೆ ಕಪ್​ ಗೆದ್ದುಕೊಟ್ಟ ಕೂಲ್​ ಕ್ಯಾಪ್ಟನ್​ ಆಗಿರುವ ಧೋನಿ ಈಗಾಗಲೇ ಟೆಸ್ಟ್​ ಪಂದ್ಯದಿಂದ ನಿವೃತ್ತಿ ಪಡೆದಿದ್ದಾರೆ.

 

 

Leave a Reply

Your email address will not be published. Required fields are marked *