ಭಯೋತ್ಪಾದನೆಯ ಹೊಸ ಆಯಾಮ ಥ್ರೀ ಡಿ ಪ್ರಿಂಟರ್

blank

ಭಯೋತ್ಪಾದನೆಯ ಹೊಸ ಆಯಾಮ ಥ್ರೀ ಡಿ ಪ್ರಿಂಟರ್

(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ಕಳೆದ ಒಂದು ದಶಕದಿಂದೀಚೆಗೆ ಹೆಚ್ಚು ಪ್ರಚಲಿತವಾಗಿರುವ ಥ್ರೀ ಡಿ ಪ್ರಿಂಟಿಂಗ್ ತಂತ್ರಜ್ಞಾನ ಎರಡಲಗಿನ ಕತ್ತಿ ಇದ್ದಂತೆ. ಅದನ್ನು ಒಳ್ಳೆಯದಕ್ಕೂ ಬಳಸಬಹುದು. ವಿಧ್ವಂಸಕ ಕೃತ್ಯಗಳಿಗೂ ಉಪಯೋಗಿಸಬಹುದು. ಭಯೋತ್ಪಾದಕರೂ ಈಗ ಅದನ್ನು ತಮಗೆ ಬೇಕಾದಂತೆ ಬಳಸಲು ಆರಂಭಿಸಿರುವುದು ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಕಳೆದ ವರ್ಷ ಡಿಸೆಂಬರ್ 4ರ ಬೆಳಗ್ಗೆ ಆರೂ ಮುಕ್ಕಾಲು ಗಂಟೆ. ಐವತ್ತರ ಹರೆಯದ ಅಮೆರಿಕನ್ ಉದ್ಯಮಿ ಬ್ರಿಯಾನ್ ಆಡಮ್ಸ್ ನ್ಯೂಯಾರ್ಕ್​ನಲ್ಲಿ ತಾನು ಉಳಿದುಕೊಂಡಿದ್ದ ಹೋಟೆಲ್ ಮ್ಯಾರಿಯಟ್​ನಿಂದ ಹೊರಬಿದ್ದು ನಿರ್ಜನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಅಂದು ಬ್ರಿಯಾನ್ ಹೊರಟಿದ್ದು ತನ್ನ ಹೋಟೆಲ್​ನಿಂದ ಕೆಲವೇ ಫರ್ಲಾಂಗು ದೂರವಿದ್ದ ಸಭಾಗೃಹಕ್ಕೆ. ಅಲ್ಲಿ ಆಯೋಜಿತವಾಗಿದ್ದ ತನ್ನ ಕಂಪನಿಯ ವಾರ್ಷಿಕ ಸಮ್ಮೇಳನಕ್ಕೆ. ಇನ್ನೇನು ಅಲ್ಲಿಗೆ ತಲುಪುವಷ್ಟರಲ್ಲಿ, ಕೆಲವೇ ಮಾರು ದೂರದಲ್ಲಿದ್ದ ಆತನಿಗೆ ಬೆನ್ನ ಹಿಂದೆ ಢಂ ಎನ್ನುವ ಶಬ್ದ ಕೇಳಿಬಂತು.

ಮರುಕ್ಷಣದಲ್ಲೇ ಬ್ರಿಯಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಸಮ್ಮೇಳನದ ಸ್ಥಳದಿಂದ ಓಡಿಬಂದ ಆತನ ಸಹೋದ್ಯೋಗಿಗಳು ಆತನನ್ನು ಉಳಿಸಲು ಮಾಡಿದ ಪ್ರಯತ್ನಗಳ್ಯಾವುವೂ ಫಲಿಸಲಿಲ್ಲ. ದುಷ್ಕರ್ವಿು ಅಂದು ಹಿಂದಿನಿಂದ ಬಂದು ಬ್ರಿಯಾನ್​ನ ತಲೆಗೆ ಗುರಿಯಿಟ್ಟು ಹಾರಿಸಿದ್ದ ಗುಂಡು ತನ್ನ ಕೆಲಸ ಮಾಡಿತ್ತು. ಅಮೆರಿಕದ ಪ್ರತಿಷ್ಠಿತ ಕಂಪನಿಯೊಂದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜವಾಬ್ದಾರಿಯನ್ನು ಸಂಭಾಳಿಸುತ್ತಿದ್ದ ಬ್ರಿಯಾನ್ ತನ್ನ ಆಳ್ವಿಕೆಯಲ್ಲಿ ಕಂಪನಿಯ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಿದ್ದರೂ ಹಲವು ಪ್ರಮುಖ ಸಂದರ್ಭಗಳಲ್ಲಿ ಇನ್ಷೂರನ್ಸಿನ ಕ್ಲೇಮ್ಳನ್ನು ತಲುಪಿಸದೆ ಅಡ್ಡಗಾಲು ಹಾಕುವ ಕುರಿತಾದ ಆಪಾದನೆಯ ಕಾರಣಕ್ಕೆ ಹಲವರ ದ್ವೇಷ ಕಟ್ಟಿಕೊಂಡಿದ್ದ.

ಇದು ಆತನ ಪ್ರಾಣಕ್ಕೆ ಕುತ್ತು ತಂದಿರುವುದನ್ನು ಸರಿಯಾಗಿಯೇ ಊಹಿಸಿದ ನ್ಯೂಯಾರ್ಕ್ ಪೊಲೀಸರು ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ನಡೆಸಿದ ಕಾರ್ಯಾಚರಣೆಯಿಂದ ಮುಂದಿನ ಕೆಲವೇ ದಿನಗಳಲ್ಲಿ ಬ್ರಿಯಾನ್​ನ ಹತ್ಯೆಗೈದ ಯುವಕನನ್ನು ಪೆನ್ಸಿಲ್ವೇನಿಯಾದಲ್ಲಿ ಬಂಧಿಸಿದರು. ಅಮೆರಿಕದ ಪ್ರಖ್ಯಾತ ಕಂಪನಿಯ ಸಿಇಒ ಹಾಡಹಗಲೇ ಹತ್ಯೆಯಾದನೆಂಬ ಕಾರಣಕ್ಕೆ ದೇಶದೆಲ್ಲೆಡೆ ಆತಂಕಕ್ಕೆ ಕಾರಣವಾಗಿದ್ದ ಈ ಹೈಪೊಫೈಲ್ ಪ್ರಕರಣವನ್ನು ಅಲ್ಲಿನ ಪೊಲೀಸರೇನೋ ತಕ್ಷಣ ಭೇದಿಸುವಲ್ಲಿ ಯಶಸ್ವಿಯಾದರು. ಆದರೆ ವಿಚಾರಣೆ ಸಮಯದಲ್ಲಿ, ಬಂಧಿತ ತನ್ನ ಕಾರ್ಯಾಚರಣೆಗೆ ಬಳಸಿದ್ದ ಆಯುಧವನ್ನು ಜಪ್ತಿ ಮಾಡಿಕೊಂಡ ಪೊಲೀಸರಿಗೆ ಅದರ ಮೇಲೆ ಅದು ಯಾವ ಮಾಡೆಲ್ಲು, ತಯಾರಕರ್ಯಾರು ಎಂಬ ವಿವರಗಳು ಕಾಣಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತಷ್ಟು ವಿಚಾರಣೆ ನಡೆಸಿದಾಗ ಅದು ಆರೋಪಿ ಥ್ರೀ ಡಿ ಪ್ರಿಂಟರ್ ಬಳಸಿ ತಾನೇ ತಯಾರಿಸಿದ ಪಿಸ್ತೂಲು ಎಂಬ ವಿಷಯ ಹೊರಬಂದು ಕೊಲೆಯ ಸುದ್ದಿಗಿಂತ ಅದೇ ಹೆಚ್ಚು ಸದ್ದು ಮಾಡಿತು.

1980ರ ಸುಮಾರಿಗೆ ಉಗಮವಾಗಿ ಅಂಬೆಗಾಲಿಡುತ್ತಿದ್ದ ಥ್ರೀ ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ಆರಂಭದ ದಿನಗಳಲ್ಲಿ ಮೂರು ಆಯಾಮದ ಸಿದ್ಧಮಾದರಿಗಳನ್ನು ತಯಾರಿಸಲು ಬಳಸಲಾಗುತ್ತಿತ್ತು. ಥ್ರೀ ಡಿ ಪ್ರಿಂಟರ್​ನಲ್ಲಿ ಧನಾತ್ಮಕ ಮುದ್ರಣ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಉದಾಹರಣೆಗೆ, ನಮಗೊಂದು ಮೇಣದ ತಾಜ್​ಮಹಲನ್ನು ತಯಾರಿಸಬೇಕಿದೆ ಎಂದುಕೊಳ್ಳೋಣ. ಕಲಾವಿದ ಅದಕ್ಕಾಗಿ ಆ ಕಲಾಕೃತಿಯ ಅಳತೆಗಿಂತ ತುಸು ದೊಡ್ಡದಾದ ಮೇಣದ ತುಂಡೊಂದನ್ನು ಎತ್ತಿಕೊಂಡು ಅದರಲ್ಲಿ ತಾಜ್​ಮಹಲಿನ ಆಕಾರವನ್ನು ಗುರುತಿಸಿಕೊಂಡು ಉಳಿದ ಮೇಣವನ್ನು ಕೆತ್ತಿ ತೆಗೆಯುತ್ತಾನೆ. ಅದೇ ತಾಜ್​ಮಹಲನ್ನು ಥ್ರೀ ಡಿ ಪ್ರಿಂಟರ್​ನಲ್ಲಿ ಮುದ್ರಿಸುವುದಾದರೆ ಮೊದಲಿಗೆ ಕಂಪ್ಯೂಟರ್ ತಾಜ್​ಮಹಲಿನ ಆಕಾರವನ್ನು ಪದರಗಳನ್ನಾಗಿ ಪ್ರತ್ಯೇಕಿಸಿ ಆ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಹೀಗೆ ಸಂಗ್ರಹಿಸಲಾದ ಪದರಗಳ ಮಾಹಿತಿಯನ್ನು ಅನುಕ್ರಮದಲ್ಲಿ ಹೊಂದಿಕೊಂಡಿರುವ ಥ್ರೀ ಡಿ ಪ್ರಿಂಟರ್ ಅರ್ಥಾತ್ ಮುದ್ರಣಯಂತ್ರಕ್ಕೆ ರವಾನಿಸುತ್ತದೆ.

ಕಲರ್ ಪ್ರಿಂಟರ್​ನಲ್ಲಿ ವಿವಿಧ ಬಣ್ಣಗಳ ಶಾಯಿಯ ಪೆನ್ನುಗಳಿರುವಂತೆ ಮೇಣದ ಆಕೃತಿಯನ್ನು ಮುದ್ರಿಸುವ ಪ್ರಿಂಟರ್​ನಲ್ಲಿ ವಿವಿಧ ಬಣ್ಣಗಳ ಮೇಣದ ಪೆನ್ನುಗಳಿರುತ್ತವೆ. ಮುದ್ರಕದ ಕಾಟರಿಡ್ಜ್ ಅರ್ಥಾತ್ ಜೋಳಿಗೆಯಲ್ಲಿರುವ ಮೇಣವನ್ನು ವಿದ್ಯುತ್ ತಾಪಕಗಳು ಕರಗಿಸಿ ಮುದ್ರಕದ ಲೇಖನಿಯ ಮೂಲಕ ಹರಿಬಿಡುತ್ತವೆ. ತಾಜ್​ಮಹಲನ್ನು ಮುದ್ರಿಸುವಾಗ ಕಂಪ್ಯೂಟರ್ ಒಂದೊಂದೇ ಪದರಗಳ ಮುದ್ರಣದ ವಿವರಗಳನ್ನು ಮುದ್ರಕಕ್ಕೆ ನೀಡುತ್ತಿದ್ದಂತೆ ಆಯಾ ಬಣ್ಣದ ಮೇಣದ ಲೇಖನಿಗೆ ಬುಲಾವ್ ಹೋಗುತ್ತದೆ. ಅದು ತನ್ನ ಜೋಳಿಗೆಯಿಂದ ಕರಗಿದ ಮೇಣವನ್ನು ಅದೇ ಆಕಾರದಲ್ಲಿ ಪೇರಿಸುತ್ತ ಹೋಗುತ್ತದೆ. ಹೀಗೆ ಒಂದರ ಮೇಲೊಂದು ಮೇಣದ ಪದರಗಳನ್ನು, ಮನೆ ಕಟ್ಟುವಾಗ ಇಟ್ಟಿಗೆಗಳನ್ನು ಜೋಡಿಸಿದಂತೆ ಪೇರಿಸಿ ತಾಜ್​ಮಹಲು ತಯಾರಾಗುತ್ತದೆ. ಇದು ತೀರಾ ಸರಳವಾದ ಥ್ರೀ ಡಿ ಪ್ರಿಂಟಿಂಗ್ ವಿಧಾನ. ಇಲ್ಲಿ ಮೇಣದ ಬದಲು ಥರ್ವೇಪ್ಲಾಸ್ಟಿಕ್ ಅಥವಾ ಪಾಲಿಮರ್​ಗಳನ್ನು ಊಹಿಸಿಕೊಳ್ಳಿ. ಆ ಸನ್ನಿವೇಶದಲ್ಲಿ ಮೇಣದ ಬದಲು ಪ್ಲಾಸ್ಟಿಕ್ ಆಕೃತಿಯು ಪ್ರಿಂಟರ್​ನಿಂದ ಹೊರಬರುತ್ತದೆ.

ಇನ್ನು ಸ್ವಲ್ಪ ಸಂಕೀರ್ಣ ಉತ್ಪನ್ನದ ಕುರಿತು ಯೋಚಿಸೋಣ. ಈ ಮೂರು ಆಯಾಮದ ಪ್ರಿಂಟರ್​ನಿಂದ ಕೇಕ್ ತಯಾರಿಸಿದರೆ ಹೇಗೆ? ಸದ್ಯಕ್ಕೆ ಲಭ್ಯವಿರುವ ತಾಂತ್ರಿಕತೆಯಲ್ಲಿ ಬಿಸ್ಕತ್ತಿನ ಪೇಸ್ಟು, ಶೇಂಗಾ ಚಟ್ನಿ, ಜಾಮ್ಳನ್ನು ಬಳಸಿ ಕೇಕ್ ತಯಾರಿಸಬಹುದು. ಇಲ್ಲಿ ಕಂಪ್ಯೂಟರ್ ನಮ್ಮ ಆಯ್ಕೆಯ ಕೇಕ್​ನ ವಿನ್ಯಾಸವನ್ನು ಪದರಗಳಲ್ಲಿ ವಿಂಗಡಿಸಿ ಆ ವಿವರಗಳನ್ನು ಪ್ರಿಂಟರ್​ಗೆ ವರ್ಗಾಯಿಸುತ್ತದೆ. ಈ ವಿವರಗಳ ಅನ್ವಯ ಪ್ರಿಂಟರ್ ತನ್ನ ಜೋಳಿಗೆಯಲ್ಲಿರುವ ಬಿಸ್ಕತ್ತಿನ ಪೇಸ್ಟು, ಶೇಂಗಾ ಚಟ್ನಿ, ಜಾಮ್ ಐಸಿಂಗ್​ಗಳನ್ನು ಆಯ್ದು ಅದರ ಪದರಗಳನ್ನು ಒಂದೊಂದಾಗಿ ಪೇರಿಸುತ್ತ ನಮಗೆ ಬೇಕಾದ ಕೇಕನ್ನು ತಯಾರಿಸುತ್ತದೆ. ಮೂರು ಆಯಾಮದ ಪ್ರಿಂಟಿಂಗ್ ತಂತ್ರಜ್ಞಾನವೀಗ ನಮ್ಮ ಊಹೆಗೂ ಮೀರಿ ಬೆಳೆಯುತ್ತಿದೆ. ಕರಗಿಸಿ ನಂತರ ಘನರೂಪಕ್ಕೆ ತರಬಲ್ಲ ಯಾವುದೇ ವಸ್ತುವಿನಿಂದ ಥ್ರೀ ಡಿ ಪ್ರಿಂಟಿಂಗ್ ಮಾಡಬಹುದೆಂಬ ಹುಂಬ ಧೈರ್ಯ ನಮ್ಮ ವಿಜ್ಞಾನಿಗಳಲ್ಲಿ ಬಂದಿದೆ.

ವಸ್ತುಗಳನ್ನು ಶಾಖದಿಂದ ಕರಗಿಸಿ ಪದರಗಳನ್ನು ಪೇರಿಸುವ ತಂತ್ರಜ್ಞಾನದ ಬತ್ತಳಿಕೆಗೆ ಇದೀಗ ಲೇಸರ್ ತಂತ್ರಜ್ಞಾನದ ಅಸ್ತ್ರವೂ ಸೇರಿಕೊಂಡಿದೆ. ಲೇಸರ್ ಬಳಸಿ ವಸ್ತುಗಳನ್ನು ಕರಗಿಸುವುದು, ಕತ್ತರಿಸುವುದು ಒಂದೆಡೆಯಾದರೆ ಮತ್ತೊಂದೆಡೆ ಈ ಕಿರಣಗಳನ್ನು ಹಾಯಿಸಿ ಲೋಹಗಳ ಧೂಳನ್ನು ಬೆಸೆದು ನಮಗೆ ಬೇಕಾದ ಆಕಾರಗಳನ್ನು ಸೃಷ್ಟಿಸುವುದು ಇನ್ನೊಂದು ತಂತ್ರ. ಯಾವುದೇ ಆಕಾರದ ಸೂಕ್ಷ್ಮಾತಿಸೂಕ್ಷ್ಮ ವಿವರಗಳೂ ಎದ್ದು ಕಾಣುವ ರೀತಿಯಲ್ಲಿ ಉತ್ಪನ್ನಗಳನ್ನು ಛಾಪಿಸುವ ಮುದ್ರಕಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಕ್ಕಳ ನೆಚ್ಚಿನ ಸೂಪರ್ ಹೀರೋಗಳ ಪ್ರತಿಕೃತಿಯಿಂದ ಹಿಡಿದು, ನಾವು ಬಳಸುವ ಸ್ಪೋರ್ಟ್ಸ್ ಶೂಗಳು, ಹಲ್ಲಿನ ಸೆಟ್ಟು, ಮೊಬೈಲ್ ಮತ್ತು ಕಂಪ್ಯೂಟರ್ ಚಿಪ್​ಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್ ಬೋರ್ಡ್​ಗಳು, ಅಷ್ಟೇ ಏಕೆ, ಉಪಗ್ರಹಗಳ ತಯಾರಿಕೆಯಲ್ಲಿ ಬಳಸುವ ಹಲವಾರು ಉಪಕರಣಗಳು… ಹೀಗೆ ಎಲ್ಲೆಡೆ ಇದೀಗ ಈ ಮೂರು ಆಯಾಮದ ಮುದ್ರಕಗಳದ್ದೇ ಕಾರುಬಾರು.

ಪಾಲಿಮರ್ ಬಳಸಿ ಸಿದ್ಧಮಾದರಿ, ಆಟದ ಗೊಂಬೆಗಳನ್ನು ತಯಾರಿಸುತ್ತಿದ್ದ ಈ ಪ್ರಿಂಟಿಂಗ್ ತಂತ್ರಜ್ಞಾನದಿಂದ ಒಂದಿಡೀ ಮನೆಯನ್ನೇ ಮುದ್ರಿಸುವ ಪ್ರಿಂಟರ್​ಗಳು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿವೆ. ಅಷ್ಟು ಸಾಲದ್ದಕ್ಕೆ ಈ ತಂತ್ರಜ್ಞಾನವನ್ನೇ ಬಳಸಿ ಚಂದಿರ ಮತ್ತು ಮಂಗಳನಲ್ಲಿ ಮನೆಗಳನ್ನು ಕಟ್ಟುವ ನಿಟ್ಟಿನಲ್ಲಿ ವಿಜ್ಞಾನಿಗಳ ಚಿತ್ತ ಹರಿದಿದೆ. ತಂತ್ರಜ್ಞಾನದ ಅಭಿವೃದ್ಧಿಯ ಜತೆಗೆ ಬಳಕೆಯ ವಿಸ್ತಾರ ಹೆಚ್ಚಾಗುತ್ತಿದ್ದಂತೆಯೇ ಥ್ರೀ ಡಿ ಪ್ರಿಂಟರ್​ಗಳ ವೆಚ್ಚವೂ ಕಡಿಮೆಯಾಗಿ ಸಾಮಾನ್ಯರ ಕೈಗೆಟುಕುವ ರೇಂಜಿಗೆ ಬಂದಿದೆ. ಪ್ರಾಬ್ಲಮ್ಮು ಶುರುವಾಗಿದ್ದೇ ಇಲ್ಲಿ. 2013ರಲ್ಲಿ ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ಓದುತ್ತಿದ್ದ ಕೋಡಿ ವಿಲ್ಸನ್ ಎಂಬ ಯುವಕನೊಬ್ಬ ತಾನು ಥ್ರೀ ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿ ಬಂದೂಕನ್ನು ತಯಾರಿಸಿರುವುದಾಗಿ ಘೊಷಿಸಿದ. ಆದರೆ ಕೆಲ ತಾಂತ್ರಿಕ ತೊಂದರೆಗಳಿಂದ ಸರಿಯಾಗಿ ಕೆಲಸ ಮಾಡದ ಈ ಗನ್ನು ಟುಸ್ ಪಟಾಕಿಯಾಯಿತು.

ಒಂದು ಪ್ರಯತ್ನಕ್ಕಷ್ಟೇ ಸೀಮಿತವಾಗಿದ್ದ ಈ ಯೋಜನೆಗೆ ಮರುಜೀವ ಕೊಟ್ಟಿದ್ದು ‘ಜೆ ಸ್ಟಾರ್ಕ್ 1809’ ಎಂಬ ವಿಚಿತ್ರ ಹೆಸರಿನ ಭಯೋತ್ಪಾದಕ. 2020ರಲ್ಲಿ ತಾನು ಥ್ರೀ ಡಿ ಪ್ರಿಂಟರ್ ಬಳಸಿ ತಯಾರಿಸಿದ ಎಫ್​ಜಿಸಿ-9 ಎಂಬ ಗನ್ ಬಿಡುಗಡೆ ಮಾಡಿ ಅದನ್ನು ತಯಾರಿಸುವ ವಿಧಾನವನ್ನೂ ಜಾಲತಾಣಗಳಲ್ಲಿ ಹರಿಬಿಟ್ಟ ಈ ಭೂಪ. ಇಷ್ಟು ಸಾಲದ್ದಕ್ಕೆ ಅದರ ಮುಂದಿನ ವರ್ಷ ಮತ್ತೆ ಇದರ ಸುಧಾರಿತ ಅವತರಣಿಕೆಯೂ ಬಂತು. ಕೋಡಿ ವಿಲ್ಸನ್​ನ ಆವಿಷ್ಕಾರದ ಬಾಲಬಡುಕರು ಇದೀಗ ಜಾಗತಿಕವಾಗಿ ತಲೆನೋವಾಗಿದ್ದಾರೆ. ಕಳೆದ ವರ್ಷವಷ್ಟೇ ಈ ವಿಡಿಯೋ ನೋಡಿ ತಾವೂ ಬಂದೂಕು ತಯಾರಿಸುವ ದುಸ್ಸಾಹಸಕ್ಕೆ ಕೈಹಾಕಿ ಪೊಲೀಸರ ಕೈಗೆ ಸಿಕ್ಕು 37 ವರ್ಷಗಳ ಸೆರೆವಾಸಕ್ಕೀಡಾಗಿರುವ ಫಿನ್ಲೆಂಡಿನ ಇಬ್ಬರು ಯುವಕರ ಕಥೆ ಅಲ್ಲಿನ ಪತ್ರಿಕೆಗಳಲ್ಲಿ ಬಂದಿತ್ತು. ಸ್ವಯಂ ಆಯುಧಗಳನ್ನು ಹೊಂದಲು ಕಠಿಣ ಕಾನೂನುಗಳಿರುವ ಭಾರತದಂತಹ ದೇಶಗಳಲ್ಲಿ ಈ ಥ್ರೀ ಡಿ ಬಂದೂಕಿನ ಕಾಟವಿನ್ನೂ ಕಂಡುಬಂದಿಲ್ಲ. ಆದರೆ ಅಮೆರಿಕದಂತಹ ಲಿಬರಲ್ ಕಾನೂನಿರುವ ದೇಶದಲ್ಲಿ ಇವುಗಳ ಹಾವಳಿ ಜಾಸ್ತಿಯಾಗಿದೆ. ಮ್ಯಾನ್ಮಾರಿನಲ್ಲಿ ಆಂತರಿಕ ಸಂಘರ್ಷ ನಡೆಸುತ್ತಿರುವ ಗುಂಪಿನ ಸದಸ್ಯರೂ ಈ ಬಂದೂಕುಗಳನ್ನು ತಯಾರಿಸಿ ಬಳಸುತ್ತಿರುವ ವಿಡಿಯೋಗಳು ಓಡಾಡುತ್ತಿವೆ.

ಜಾಗತಿಕ ಅಂಕಿಅಂಶಗಳು ಹೇಳುವಂತೆ, ವಿಶ್ವಾದ್ಯಂತ ಥ್ರೀ ಡಿ ಬಂದೂಕಿನ ಬಳಕೆಯ ಪ್ರಕರಣಗಳು 2021ರ ನಂತರ ಏರುಮುಖವಾಗಿವೆ. ಇವುಗಳಲ್ಲಿ ಉತ್ತರ ಅಮೆರಿಕ, ಒಷಿಯಾನಿಯಾ ಮತ್ತು ಯುರೋಪಿನದ್ದೇ ಸಿಂಹಪಾಲು. ಈ ತಂತ್ರಜ್ಞಾನ ಬಳಸಿ ತಯಾರಾಗುವ ಬಂದೂಕುಗಳಲ್ಲಿ ಅನುಕ್ರಮ ಸಂಖ್ಯೆಯಂತಹ ಯಾವುದೇ ಸುಳಿವು ಇರದ ಕಾರಣಕ್ಕೆ ಪೊಲೀಸರಿಗೂ ಅವುಗಳ ಮೂಲವನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಈ ಹೊಸ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬ್ರಿಟನ್​ನಂತಹ ದೇಶಗಳು ಸ್ವಯಂ ಬಂದೂಕು ಹೊಂದುವ ಕುರಿತಾದ ತಮ್ಮ ಕಾನೂನುಗಳನ್ನು ಬಿಗಿಗೊಳಿಸಿವೆ. ಮತ್ತೊಂದು ಬೆಳವಣಿಗೆಯಲ್ಲಿ ಕೆಲವು ಚಾಟ್​ಬಾಟ್​ಗಳು ಇಂತಹ ವಿಡಿಯೋಗಳ ಕುರಿತಾದ ಕೋರಿಕೆಗಳನ್ನು ತಿರಸ್ಕರಿಸುವ ಸತ್ಸಂಪ್ರದಾಯವನ್ನು ಆರಂಭಿಸಿವೆ. ಆದರೆ ಆತಂಕದ ವಿಷಯವೇನೆಂದರೆ ಈ ಥ್ರೀ ಡಿ ಬಂದೂಕು ತಯಾರಿಕಾ ಯೋಜನೆಗೆ ಈಗಾಗಲೇ ಒಂದು ದಶಕ ತುಂಬಿದೆ. ಇಷ್ಟು ಸಮಯದಲ್ಲಿ ಪ್ರಿಂಟರ್​ನ ಜೋಳಿಗೆಯಿಂದ ಸಾಕಷ್ಟು ಶಾಯಿ ಹರಿದು ಹೋಗಿದೆ. ಮೂರು ಆಯಾಮದ ಮುದ್ರಣ ತಂತ್ರಜ್ಞಾನದ ಅಭಿವೃದ್ಧಿ ವೆಚ್ಚ ಮತ್ತು ಬಳಕೆಯ ಜ್ಞಾನವು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿರುವ ಇಂದಿನ ದಿನಗಳಲ್ಲಿ ಈ ಉಪಯುಕ್ತ ತಂತ್ರಜ್ಞಾನವು ತಪ್ಪು ಕೈಗಳಿಗೆ ಹೋಗದಂತೆ ತಡೆಯದಿದ್ದಲ್ಲಿ ಭಯೋತ್ಪಾದನೆಗೆ ನೂತನ ಆಯಾಮ ಸೇರ್ಪಡೆಯಾಗಲಿದೆ.

ಈ 9 ಆಹಾರಗಳನ್ನು ತಿಂದರೆ HMPV ವೈರಸ್​ನಿಂದ ದೂರ ಉಳಿಯಬಹುದು! ಇಲ್ಲಿದೆ ಉಪಯುಕ್ತ ಮಾಹಿತಿ…

Share This Article

ಮೆಂತೆ, ಕರಿಬೇವನ್ನು ಈ ರೀತಿ ಬಳಸಿ, ಹೇರ್​ ಫಾಲ್​​ಗೆ ಗುಡ್​ ಬಾಯ್​​ ಹೇಳಿ | Hair fall

Hair fall: ಈಗೀನ ಕಾಲದಲ್ಲಿ ಎಲ್ಲಾ ಜನರು ಕೂದಲು ಉದುರುವುದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕೂದಲು…

ವೈರಲ್ ಆಗುತ್ತಿರುವ ಬೀಟ್‌ರೂಟ್ ಗಂಜಿ, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ: ನೀವು ಒಮ್ಮೆ ಟ್ರೈ ಮಾಡಿ | Beetroot Porridge

Beetroot Porridge: ಬೀಟ್‌ರೂಟ್‌ ಗಂಜಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್​​ ವೈರಲ್​ ಆಗುತ್ತಿದೆ. ಈ ಬೀಟ್‌ರೂಟ್…

ನೀವು ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ನೀವು ಈ ಸಲಹೆಗಳನ್ನು ಅನುಸರಿಸಲೇಬೇಕು…Acidity

Acidity: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಳಲುತ್ತಿರುವ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ. ಇದಕ್ಕಾಗಿ ಹಲವು…