ಶಿಕ್ಷಣ ರಂಗದಲ್ಲಿ ಮಹತ್ವದ ಮೈಲಿಗಲ್ಲು

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತಂದಿರುವ ಎನ್​ಡಿಎ ಸರ್ಕಾರ ಪ್ರಾಥಮಿಕ-ಪ್ರೌಢ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ಸ್ವರೂಪಕ್ಕೂ ಆಧುನಿಕತೆಯ ಸ್ಪರ್ಶ ಒದಗಿಸಿದೆ.

ಹಲವು ಕ್ರಮಗಳು

ಗುಣಮಟ್ಟದ ಉನ್ನತ ಶಿಕ್ಷಣ ನೀಡಲು 32 ದೇಶಗಳ ಸಹಕಾರದೊಂದಿಗೆ ಗ್ಲೋಬಲ್ ಇನಿಷಿಯೆಟಿವ್ ಫಾರ್ ಅಕಾಡೆಮಿಕ್ ನೆಟ್​ವರ್ಕ್ ಯೋಜನೆ ಜಾರಿಗೆ ತರಲಾಗಿದೆ. = ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜಾಗತಿಕ ಮಟ್ಟದ ಮೂಲಸೌಕರ್ಯಗಳನ್ನು ಒದಗಿಸಲು ಸಂಸ್ಥೆಗಳಿಗೆ ಸರ್ಕಾರ ಉನ್ನತ ಶಿಕ್ಷಣ ನಿಧಿ ಏಜೆನ್ಸಿ ಅಡಿಯಲ್ಲಿ ಹಣವನ್ನು ಸಾಲದ ರೂಪದಲ್ಲಿ ನೀಡಿದೆ. = ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ ಅಡಿಯಲ್ಲಿ ಜಾರಿಗೆ ಬಂದ ಹೊಸ ಕಾಯ್ದೆ ಉನ್ನತ ಶಿಕ್ಷಣ ನೀಡುವ ಎಲ್ಲ ಸಂಸ್ಥೆಗಳಿಗೂ ಅವುಗಳ ಕಾರ್ಯನಿರ್ವಹಣೆಯ ಆಧಾರದ ಮೇಲೆ ಬೇರೆ-ಬೇರೆ ಅಟಾನಮಿ ಗ್ರೇಡುಗಳನ್ನು ನೀಡಿದೆ ಮತ್ತು ಐಐಎಂಗಳಿಗೆ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಸ್ವಾತಂತ್ರ್ಯ ನೀಡಲಾಗಿದೆ. =ವಿಶೇಷ ಮಕ್ಕಳಿಗಾಗಿ ‘ಸಕ್ಷಮ್ ವಿದ್ಯಾರ್ಥಿವೇತನ ಜಾರಿಗೆ ತರಲಾಗಿದೆ. ಇದರಡಿಯಲ್ಲಿ ಎಐಸಿಟಿಇ ಪ್ರತಿ ವರ್ಷ ಸಾವಿರ ವಿಶೇಷ ಮಕ್ಕಳಿಗೆ ರ್ಯಾಂಕ್ ಆಧಾರದ ಮೇಲೆ ವಿದ್ಯಾರ್ಥಿವೇತನ ನೀಡುತ್ತಿದೆ. =‘ಸ್ವಯಂ’ ಯೋಜನೆಯಡಿ ಐಐಟಿ, ಐಐಎಂ, ಕೇಂದ್ರ ವಿಶ್ವವಿದ್ಯಾಲಯ ಸೇರಿದಂತೆ ಸರ್ಕಾರದಡಿಯಲ್ಲಿರುವ ಸಂಸ್ಥೆಗಳ ಪ್ರೊಫೆಸರ್​ಗಳು ಆನ್​ಲೈನ್​ನಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು, ಉಚಿತವಾಗಿ ಪಾಠ ಮಾಡುತ್ತಿದ್ದಾರೆ. = ಗುಣಮಟ್ಟದ ವಿಷಯ ಎಲ್ಲರಿಗೂ ತಲುಪುವಂತಾಗಲು ರಾಷ್ಟ್ರೀಯ ಇ-ಗ್ರಂಥಾಲಯ ಆರಂಭಿಸಲಾಗಿದೆ. = ಶಿಕ್ಷಕರಿಗೆ ಡಿಜಿಟಲ್ ಶಿಕ್ಷಣದ ಬಗ್ಗೆ ಅರಿವಿಗಾಗಿ ‘ದೀಕ್ಷಾ’ ಯೋಜನೆ ರೂಪಿಸಲಾಗಿದೆ. = 18 ಸ್ಕೂಲ್ ಆಂಡ್ ಪ್ಲಾ್ಯನಿಂಗ್ ಆಂಡ್ ಅರ್ಕಿಟೆಕ್ಚರ್​ಗಳನ್ನು (ಎಸ್​ಪಿಎ) ಐಐಟಿ ಮತ್ತು ಎನ್​ಐಟಿಗಳಲ್ಲಿ ತೆರೆಯಲು ನಿರ್ಧರಿಸಲಾಗಿದೆ.

ಹೊಸ ಐಐಟಿಗಳು

ದೇಶದಲ್ಲಿ ಹೊಸ ಆರು ಐಐಟಿಗಳನ್ನು ಆರಂಭಿಸಲು 2015 ಡಿಸೆಂಬರ್​ನಲ್ಲಿ ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡಿತು. ಆಂಧ್ರಪ್ರದೇಶ, ಕೇರಳ, ಕರ್ನಾಟಕ, ಛತ್ತೀಸ್​ಗಢ, ಗೋವಾ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ ಒಂದು ಐಐಟಿಯನ್ನು ಆರಂಭಿಸಲಾಗಿದೆ. ಕರ್ನಾಟಕದ ಧಾರವಾಡದಲ್ಲಿ ಐಐಟಿ ಆರಂಭಗೊಂಡಿದೆ. ಈ ಆರು ಐಐಟಿಗಳ ನಿರ್ವಣಕ್ಕೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದೆ. ಈ ಪೈಕಿ ಮೊದಲ ಹಂತದಲ್ಲಿ 7 ಸಾವಿರ ಕೋಟಿ ರೂ.ಗಳ ಅನುದಾನ ಬಿಡುಗಡೆಗೊಂಡಿದೆ.

ನೂತನ ಐಐಎಂಗಳು

2014-15ರ ಬಜೆಟ್​ನಲ್ಲಿ ಹೊಸ ಆರು ಐಐಎಂಗಳ ಸ್ಥಾಪನೆಯ ಘೋಷಣೆ ಮಾಡಲಾಯಿತು. ಅಮೃತಸರ (ಪಂಜಾಬ್), ಬೋಧಗಯಾ (ಬಿಹಾರ), ನಾಗ್ಪುರ (ಮಹಾರಾಷ್ಟ್ರ), ಸಂಬಲ್​ಪುರ್ (ಒಡಿಶಾ), ಸಿರ್​ವೌರ್ (ಹಿಮಾಚಲ ಪ್ರದೇಶ) ಮತ್ತು ವಿಶಾಖಪಟ್ಟಣಂ (ಆಂಧ್ರಪ್ರದೇಶ)ದಲ್ಲಿ ಐಐಎಂಗಳು ಆರಂಭಗೊಂಡಿವೆ. ಸದ್ಯಕ್ಕೆ ಇವು ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತರಗತಿ ಮತ್ತು ಮೂಲಸೌಕರ್ಯಕ್ಕಾಗಿ ಪ್ರತಿ ಐಐಎಂಗೆ ತಲಾ 79 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಅನುದಾನ

2019-20ರ ಬಜೆಟ್​ನಲ್ಲಿ ಶಿಕ್ಷಣಕ್ಕೆ 93,847 ಕೋಟಿ ರೂ. ಮೀಸಲಿರಿಸಲಾಗಿದೆ. ಉನ್ನತ ಶಿಕ್ಷಣಕ್ಕೆ 37,641 ಕೋಟಿ ರೂ. ಮತ್ತು ಪ್ರಾಥಮಿಕ-ಪ್ರೌಢ ಶಿಕ್ಷಣಕ್ಕೆ 56,383 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಅಲ್ಲದೆ, ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಸೌಕರ್ಯ ಪುನಶ್ಚೇತನ ಯೋಜನೆ (ಆರ್​ಐಎಸ್​ಇ) ಜಾರಿಗೆ ತರಲಾಗಿದ್ದು, ಮುಂಬರುವ ನಾಲ್ಕು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಲಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು ನೀಡುವ ಉದ್ದೇಶದಿಂದಲೇ 608.87 ಕೋಟಿ ರೂ. ಮೀಸಲಿಡಲಾಗಿದೆ.