ಮಾಯಾವತಿಯ ಅವಹೇಳನ ಮಾಡಿದ್ದ ಬಿಜೆಪಿ ಶಾಸಕಿ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ನವದೆಹಲಿ: ಬಿಎಸ್​ಪಿ ವರಿಷ್ಠೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕಿ ಸಾಧನಾ ಸಿಂಗ್​ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಅಲ್ಲದೆ, ಪ್ರಕರಣ ಸಂಬಂಧ ಶಾಸಕಿ ಸಾಧನಾ ಸಿಂಗ್​ ಅವರಿಗೆ ನೋಟಿಸ್​ ಜಾರಿ ಮಾಡಿ ವಿವರಣೆ ಪಡೆಯಲು ರಾಷ್ಟ್ರೀಯ ಮಹಿಳಾ ಆಯೋಗ ನಿರ್ಧರಿಸಿದೆ.

ಉತ್ತರಪ್ರದೇಶದ ಚಂದೌಲಿ ಎಂಬಲ್ಲಿ ಶನಿವಾರ ನಡೆದ ಬಿಜೆಪಿಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮುಗಲ್​ಸರಾಯ್​ ಕ್ಷೇತ್ರದ ಬಿಜೆಪಿ ಶಾಸಕಿ ಸಾಧನ ಸಿಂಗ್​, ” ಮಾಯಾವತಿಗೆ ಪ್ರತಿಷ್ಠೆ, ಘನತೆ ಎಂಬುದೇ ಗೊತ್ತಿಲ್ಲ. ಆಕೆ ಅತ್ತ ಗಂಡಸೂ ಅಲ್ಲ, ಇತ್ತ ಹೆಂಗಸೂ ಅಲ್ಲ. ನಪುಂಸಕರಿಗಿಂತಲೂ ಕಡೆ. ದ್ರೌಪದಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿರುದ್ಧ ಸೇಡು ತೀರಿಸಿಕೊಂಡಿದ್ದಳು. ಅದು ಮಹಿಳೆಯ ಆತ್ಮಾಭಿಮಾನದ ಸಂಕೇತವೂ ಹೌದು. ಆದರೆ, ಈಕೆಯನ್ನು (ಮಾಯಾವತಿ) ನೋಡಿ. ಈಕೆಯಿಂದ ಎಲ್ಲವನ್ನೂ ದೋಚಲಾಯಿತು. ಲಖನೌ ಗೆಸ್ಟ್​ ಹೌಸ್​ ಪ್ರಕರಣದಲ್ಲಿ ಆಕೆಯ ಬಟ್ಟೆಯನ್ನು ಎಸ್​ಪಿ ಕಾರ್ಯಕರ್ತರು ಹರಿದು ಹಾಕಿದ್ದರು. ಆದರೂ, ಈಗ ಅಧಿಕಾರಕ್ಕಾಗಿ ಮರ್ಯಾದೆ ಮರೆತು ಮೈತ್ರಿ ಮಾಡಿಕೊಂಡಿದ್ದಾರೆ. ಅಕೆಯ ನಡೆಯನ್ನು ದೇಶದ ಮಹಿಳಾ ಸಮುದಾಯ ಖಂಡಿಸಬೇಕು,” ಎಂದು ಕಟು ಶಬ್ಧಗಳಿಂದ ಟೀಕೆ ಮಾಡಿದ್ದರು.

ಸಾಧನಾ ಸಿಂಗ್​ ಅವರ ಹೇಳಿಕೆ ಉತ್ತರಪ್ರದೇಶದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ.

ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿವೆ. ಈ ಬೆಳವಣಿಗೆಯನ್ನು ಟೀಕಿಸುವ ಭರದಲ್ಲಿ ಸಾಧನಾ ಸಿಂಗ್​ ಅವರು ವಿವಾದಿತ ಹೇಳಿಕೆ ನೀಡಿದ್ದರು.