ಉದ್ಯಮಿಯ ಬರ್ಬರ ಹತ್ಯೆ

ಹಾಸನ: ನಗರದಲ್ಲಿ ಬುಧವಾರ ರಾತ್ರಿ ಉದ್ಯಮಿಯ ಬರ್ಬರ ಹತ್ಯೆ ನಡೆದಿದ್ದು, ಹಣಕಾಸಿನ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನಲಾಗಿದೆ.

ನಗರದ ತಣ್ಣೀರುಹಳ್ಳ ಸುಭಾಷ್‌ನಗರದಲ್ಲಿ ವಾಸವಾಗಿದ್ದ ಅರಕಲಗೂಡು ತಾಲೂಕು ಮಾರಗೊಂಡನಹಳ್ಳಿ ಗ್ರಾಮದ ಗ್ರಾನೈಟ್ ಉದ್ಯಮಿ ಅಪ್ಪಣ್ಣಗೌಡ (48) ಕೊಲೆಯಾದವರು.

ರಾತ್ರಿ 10.30ರ ಸುಮಾರಿಗೆ ಸುಭಾಷ್‌ನಗರದ ಮನೆಗೆ ಅಪ್ಪಣ್ಣಗೌಡ ಬಂದಿದ್ದು, ದುಷ್ಕರ್ಮಿಗಳು ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಮನೆಯ ಸಿಸಿಟಿವಿ ಕ್ಯಾಮರಾ ಕಾರ್ಯನಿರ್ವಹಿಸದ ಕಾರಣ ಆರೋಪಿಗಳ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲೆಗೆ ರಜೆ ಇದ್ದ ಕಾರಣ ಮಕ್ಕಳೊಂದಿಗೆ ಪತ್ನಿ ಮಾರಗೌಡನಹಳ್ಳಿಗೆ ಹೋಗಿದ್ದು, ಅಪ್ಪಣ್ಣಗೌಡ ಒಬ್ಬರೇ ಹಾಸನದ ನಿವಾಸದಲ್ಲಿದ್ದರು.

ಬಚ್ಚಿಟ್ಟುಕೊಂಡಿದ್ದ ದುಷ್ಕರ್ಮಿಗಳು:
ಅಪ್ಪಣ್ಣಗೌಡ ಮನೆಗೆ ಬರುವ ಮುನ್ನವೇ ಅವರ ಮಲಗುವ ಕೋಣೆಯಲ್ಲಿ ದುಷ್ಕರ್ಮಿಗಳು ಮೊದಲೇ ಬಚ್ಚಿಟ್ಟುಕೊಂಡಿದ್ದು, ಅವರು ಬಂದ ತಕ್ಷಣ ಸಲಾಕೆಯಿಂದ ತಲೆಗೆ ಜೋರಾಗಿ ಹೊಡೆದಿದ್ದಾರೆ. ನಂತರ ಬೆಡ್‌ರೂಂ ಲಾಕ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ರಾತ್ರಿ ಅದೇ ಮನೆಯ ಮತ್ತೊಂದು ಕಡೆ ಮಲಗಿದ್ದ ಅಪ್ಪಣ್ಣಗೌಡ ಅವರ ಸಹಾಯಕ ರವಿ ಎಂಬಾತ ಗುರುವಾರ ಬೆಳಗ್ಗೆ ಬೆಡ್‌ರೂಂನಿಂದ ಅಪ್ಪಣ್ಣಗೌಡ ಹೊರಗೆ ಬಾರದೆ ಇದ್ದುದರಿಂದ ಆತಂಕಕ್ಕೆ ಒಳಗಾಗಿದ್ದಾನೆ. ಬಹಳ ಹೊತ್ತಾದರೂ ಬಾಗಿಲು ತೆರೆಯದ ಕಾರಣ ಅವರ ಸಂಬಂಧಿಕರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಪೊಲೀಸರು ಆಗಮಿಸಿ, ಬಾಗಿಲು ಮುರಿದು ಬೆಡ್‌ರೂಂ ಪ್ರವೇಶಿಸಿದಾಗ ಆಗ ಅಪ್ಪಣ್ಣಗೌಡರ ಕೊಲೆಯಾಗಿರುವುದು ತಿಳಿದುಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್ ರಾಥೋರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ, ಡಿವೈಎಸ್‌ಪಿ ಶಶಿಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ರವಾನಿಸಲಾಯಿತು. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *