ಸವಣೂರ: ಮುಡಾ ಹಗರಣದಲ್ಲಿ ಸ್ವತಃ ಸಿದ್ದರಾಮಯ್ಯನವರೇ ಎ1 ಆರೋಪಿಯಾಗಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿ ರಾಜ್ಯವನ್ನು ಆರ್ಥಿಕ ದಿವಾಳಿ ಮಾಡಿರುವ ಮತ್ತು ವಾಲ್ಮೀಕಿ ಹಗರಣ, ವಕ್ಪ ಹಗರಣಗಳಲ್ಲಿ ಸಿಲುಕಿರುವ ಸರ್ಕಾರಕ್ಕೆ ಮುಂದುವರಿಯುವ ನೈತಿಕತೆ ಇಲ್ಲ. ಈ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಒತ್ತಾಯಿಸಿದರು.
ತಾಲೂಕಿನ ಮಾದಾಪುರ ಸೇರಿ ವಿವಿಧ ಗ್ರಾಮಗಳ ಎಸ್ಸಿ ಕಾಲನಿಗಳಿಗೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು. ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಉಚಿತ ಭಾಗ್ಯಗಳ ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದರು.
ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ, ಸವಣೂರ ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಮರಗಪ್ಪನವರ, ಶ್ರೀಕಾಂತ ಲಕ್ಷ್ತ್ರ್ಮೇಶ್ವರ, ಗ್ರಾಪಂ ಸದಸ್ಯ ಶಿವಶಂಕರ ಸೊಪ್ಪಿನ ಹಾಗೂ ಇತರರು ಇದ್ದರು.