ಅನ್ನದಾತರ ಬದುಕು ಕಸಿದ ಮುಂಗಾರು

ಕೆ.ಆರ್.ನಗರ: ಜೂನ್ ತಿಂಗಳು ಮುಗಿಯುತ್ತಾ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದಿರುವುದು ಆತಂಕ ಉಂಟು ಮಾಡಿದೆ. ಕಳೆದ ವರ್ಷದ ಹಿಂದಿನ ಎರಡು ಮೂರು ವರ್ಷಗಳೂ ತಾಲೂಕು ವ್ಯಾಪ್ತಿಯಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ಬಾರಿಯೂ ಅಂತಹದ್ದೇ ವಾತಾವರಣ ಮುಂದುವರಿದಿದ್ದು, ಕೃಷಿಕರನ್ನು ಚಿಂತೆಗೀಡು ಮಾಡಿದೆ.


ಕಳೆದ ಬಾರಿ ಜೂನ್ ತಿಂಗಳ ಸಮಯದಲ್ಲಿ ಕೊಡಗು ಜಿಲ್ಲೆ ಮತ್ತು ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ನದಿ ಪಾತ್ರದ ಸಾವಿರಾರು ಎಕರೆ ಜಮೀನು ಜಲಾವೃತಗೊಂಡು ಭತ್ತದ ಬೆಳೆ ಕೊಚ್ಚಿಹೋಗಿತ್ತು. ಇದರಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿತ್ತು. ಆದರೆ, ಈ ಬಾರಿ ಇದುವರೆಗೂ ಮಳೆಬೀಳದೆ ನೀರಿನ ಕೊರತೆ ಎದುರಾಗಿದೆ.


ತಾಲೂಕಿನ ಶೇ.70ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಈ ಬಾರಿ ಮುಂಗಾರು ಕೈಕೊಟ್ಟಿದ್ದರಿಂದ ಖುಷ್ಕಿ ಭೂಮಿಯಲ್ಲಿ ಬೆಳೆಯಬಹುದಾದ ಬೆಳೆಗಳಲ್ಲಿ ಶೇ.20ರಷ್ಟು ಪ್ರಮಾಣ ಕುಂಠಿತವಾಗಿದೆ. ಒಟ್ಟಾರೆ 14,500 ಹೆಕ್ಟೇರ್ ಒಣಭೂಮಿಯಲ್ಲಿ ರಾಗಿ, ಮುಸುಕಿನ ಜೋಳ, ಹಲಸಂದೆ, ಹೊಗೆಸೊಪ್ಪು ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು, ಈ ಬಾರಿ ಕಡಿಮೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಉಳಿದ ನೀರಾವರಿ ಭೂಮಿಯಲ್ಲಿ ಶೇ.80ರಷ್ಟು ಬೇಸಿಗೆ ಬೆಳೆಗಳಾದ ಉದ್ದು, ಹಲಸಂದೆ, ತರಕಾರಿ ಬೆಳೆ ಬೆಳೆದಿದ್ದು, ಅವೂ ಕೂಡ ಮಳೆಯನ್ನು ಬೇಡುತ್ತಿವೆ.


ಈ ಬಗ್ಗೆ ಕೆಲ ರೈತರು ‘ವಿಜಯವಾಣಿ’ ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹಿಂಗಾರು ಮಳೆಯನ್ನೇ ಕಾಯಬೇಕು
ಕೃಷಿಯನ್ನೇ ಅವಲಂಬಿಸಿರುವ ನಾವು ನಮಗೆ ಇರುವ ಅಲ್ಪ ಸ್ವಲ್ಪ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇವೆ. ಮುಂಗಾರಿನಲ್ಲಿ ರಾಗಿ, ಎಳ್ಳು, ಹಲಸಂದೆ ಬೆಳೆಯ ವ್ಯವಸಾಯ ಮಾಡುತ್ತೇವೆ. ಈ ಬಾರಿ ಮಳೆ ಆರಂಭದಲ್ಲಿ ಬಿದ್ದಾಗ ಸ್ವಲ್ಪ ಬಿತ್ತನೆ ಮಾಡಿದೆವು. ಆದರೆ, ಮಳೆ ಕೈಕೊಟ್ಟಿದ್ದು ಬೆಳೆ ಒಣಗುತ್ತಿವೆ. ಇನ್ನೇನಿದ್ದರೂ ಹಿಂಗಾರು ಮಳೆಯನ್ನೇ ಕಾಯಬೇಕಿದೆ.
ರಾಮಚಂದ್ರ, ರೈತ, ಮಧುವನಹಳ್ಳಿ

ಪದೇ ಪದೆ ಖರ್ಚಿನಿಂದ ಆದಾಯ ಖೋತಾ
ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ ವ್ಯವಸಾಯಕ್ಕೆ ಟ್ರಾೃಕ್ಟರ್ ಮತ್ತು ಟಿಲ್ಲರ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಆದರೂ ಭೂಮಿ ಮೇಲೆ ನಂಬಿಕೆಯಿಟ್ಟು ಭೂಮಿ ಹದಮಾಡಿ ಕಾಯುತ್ತಿದ್ದೆವು. ಮಳೆ ಬಾರದೆ ಇತ್ತ ಹದವಾಗಿದ್ದ ಜಮೀನಿನಲ್ಲಿ ಮತ್ತೆ ಕಳೆ ಬೆಳೆದುಕೊಂಡಿದ್ದು ಪದೇ ಪದೆ ಖರ್ಚು ಮಾಡುತ್ತಾ ಆದಾಯವೇ ಇಲ್ಲದಂತಾಗಿದೆ.
ಸೋಮಣ್ಣ, ರೈತ, ಬಸವರಾಜಪುರ

ಮೋಡ ಬಿತ್ತನೆ ಮಾಡಿದ್ದರೆ ಅನುಕೂಲ
ಹಿಂದಿನ ಎರಡೂ ವರ್ಷಗಳು ತಾಲೂಕು ಬರಗಾಲ ಅನುಭವಿಸಿತು. ಈ ಬಾರಿಯೂ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಲವು ವರ್ಷಗಳಿಂದ ನಷ್ಟ ಅನುಭವಿಸುತ್ತಲೇ ಇದ್ದು, ಸರ್ಕಾರ ಮೋಡ ಬಿತ್ತನೆ ಕಾರ್ಯವನ್ನಾದರೂ ಮಾಡಿಸಿದರೆ ಅನುಕೂಲ.
ಜಿ.ಟಿ. ಪುಟ್ಟೇಗೌಡ, ನಿರ್ದೇಶಕ, ಕೃಷಿ ಸಮಾಜ ಕೆ.ಆರ್.ನಗರ

ಬರ ತಾಲೂಕಾಗಿ ಘೋಷಿಸಲಿ
ಭತ್ತದ ಖಣಜ ಎಂದು ಪ್ರಸಿದ್ಧಿ ಪಡೆದಿದ್ದರೂ ತಾಲೂಕಿನಲ್ಲಿ ಬರ ತಾಂಡವವಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿ ಕೃಷಿ ಆರಂಭಿಸಲು ಪ್ರೋತ್ಸಾಹಿಸುವ ಜತೆಗೆ ಸೂಕ್ತ ಪರಿಹಾರ ಕಲ್ಪಿಸಲು ಬರ ತಾಲೂಕು ಎಂದು ಘೋಷಿಸಲಿ.
ಕೃಷ್ಣಪ್ಪ, ರೈತ ಮುಖಂಡ, ಕುಂಬಾರಕೊಪ್ಪಲು

ಉತ್ತಮ ಮಳೆಯಾಗುವ ನಿರೀಕ್ಷೆ ಇದೆ
ವ್ಯವಸಾಯಕ್ಕೆ ಸಾಲ ಮಾಡಿ ಸಿದ್ಧತೆ ಕೈಗೊಂಡಿದ್ದರೆ ಮಳೆ ಕೈಕೊಟ್ಟಿದೆ. ಪ್ರತಿವರ್ಷವೂ ಮಳೆ ಚೆನ್ನಾಗಿ ಆಗುತ್ತಿತು. ಆದರೆ, ಈ ಬಾರಿ ರಾಜ್ಯದಲ್ಲೇ ಮಳೆಗಾಲ ಕೈಕೊಟ್ಟಿದೆ. ಮಂಗಳವಾರ ತಾಲೂಕಿನ ಕೆಲವೆಡೆ ಮಳೆ ಸುರಿದಿರುವುದರಿಂದ ರೈತರಲ್ಲಿ ಆಶಾಭಾವ ಮೂಡಿದೆ. ಮುಂದಿನ ದಿನಗಳಲ್ಲಿ ಎಲ್ಲ ಭಾಗದಲ್ಲೂ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ.
ಎಚ್.ಎಚ್. ಹರೀಶ್, ರೈತ, ಹೊಸೂರು

ಬೇಗ ನೀರು ಹರಿಸಲು ಸಾಧ್ಯವಿಲ್ಲ
ಮುಂಗಾರಿನಲ್ಲಿ ಯಥೇಚ್ಛ ಮಳೆಯಾಗಿ ಅಣೆಕಟ್ಟೆಯಲ್ಲಿ ನೀರು ತುಂಬಿದರೆ ಮಾತ್ರ ಹಾರಂಗಿ ನಾಲಾ ಹಂತಗಳಿಗೆ ನೀರು ಹರಿಸಲು ಸಾಧ್ಯ. ಕಳೆದ ಬಾರಿ ಕೊಡಗಿನಲ್ಲಿ ಹೆಚ್ಚು ಮಳೆಯಾಗಿದ್ದರಿಂದ ನೀರಿನ ಪ್ರಮಾಣ ಹೆಚ್ಚಾಗಿದ್ದು ಅವಧಿಗಿಂತ ಮೊದಲೇ ತಾಲೂಕಿನ ನಾಲೆಗಳಲ್ಲಿ ನೀರು ಹರಿಸಿದೆವು. ಇದರಿಂದಾಗಿ ತಾಲೂಕಿನ ರೈತರು ಭತ್ತದ ಬೆಳೆಯನ್ನು ಬೇಗ ಬೆಳೆದುಕೊಂಡರು. ಆದರೆ, ಈ ಬಾರಿ ಮುಂಗಾರು ಮಳೆ ಅಗತ್ಯದಷ್ಟು ಬೀಳದೆ ಇರುವುದರಿಂದ ಬೇಗ ನೀರು ಹರಿಸಲು ಸಾಧ್ಯವಾಗುವುದಿಲ್ಲ.
ಎ.ಚಂದ್ರಶೇಖರ್, ಎಇ, ಹಾರಂಗಿ ನಾಲಾ ಉಪ ವಿಭಾಗ, ಕೆ.ಆರ್.ನಗರ

ಮಳೆ ಬಾರದಿದ್ದರೆ ಭತ್ತದ ಕಣಜ ಬರಿದು
ನಮ್ಮ ಭಾಗದಲ್ಲಿ ಹೆಚ್ಚಾಗಿ ನಾಲೆ ಆಶ್ರಿತ ಜಮೀನುಗಳಿದ್ದು ಈಗಾಗಲೇ ತಂಬಾಕು ಬೆಳೆ ಬೆಳೆಯಲಾಗಿದೆ. ಮೊದಲು ತಂಬಾಕಿಗೆ ಸಾಕಾಗುವಷ್ಟು ಮಳೆ ಬಿದ್ದಿತ್ತು. ಮುಂದಿನ ದಿನಗಳಲ್ಲಿ ಭತ್ತದ ಬೆಳೆ ಬೆಳೆಯಲು ನಾಲೆಗಳಿಗೆ ನೀರು ಹರಿಸಲು ಮಳೆ ಬೇಕು. ಮಳೆ ಭಾರದೆ ಇದ್ದರೆ ಭತ್ತದ ಕಣಜ ಬರಿದಾಗಲಿದೆ.
ರಾಮಯ್ಯ, ರೈತ, ಚಿಕ್ಕಹನಸೋಗೆ

ಬಿತ್ತನೆ ಕಾರ್ಯ ಕುಂಠಿತ
ತಾಲೂಕಿನಲ್ಲಿ ಕಳೆದ ವರ್ಷದ ಮುಂಗಾರಿನಲ್ಲಿ 390 ಮಿಲಿ ಮೀಟರ್ ಮಳೆಯಾಗಿತ್ತು. ಆದರೆ, ಈ ಬಾರಿ 200 ಮಿಲಿ ಮೀಟರ್ ಮಳೆ ಆಗುವ ಮೂಲಕ ಈ ಸಾಲಿನಲ್ಲಿ ಮುಂಗಾರು ಕೈಕೊಟ್ಟಿದ್ದು ಬಿತ್ತನೆ ಕಾರ್ಯ ಕುಂಠಿತಗೊಂಡಿದೆ. ಆದರೆ, ಹವಾಮಾನ ಇಲಾಖೆಯ ವರದಿಯಂತೆ ಕೆಲವೇ ದಿನಗಳಲ್ಲಿ ಮಳೆ ಬೀಳಲಿದ್ದು, ನಮ್ಮ ಇಲಾಖೆಯಿಂದ ರೈತರಿಗೆ ವಿತರಿಸಲು ಬೀಜ ಮತ್ತು ಗೊಬ್ಬರ ದಾಸ್ತಾನು ಇರಿಸಲಾಗಿದೆ.
ರಂಗರಾಜನ್, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ

Leave a Reply

Your email address will not be published. Required fields are marked *