ನವದೆಹಲಿ: ಗರ್ಭಪಾತಕ್ಕೆ ಇದ್ದ 20 ವಾರಗಳ ಗರಿಷ್ಠ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸುವ ತಿದ್ದುಪಡಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಮೂಲಕ 1971ರ ವೈದ್ಯಕೀಯ ಶಿಫಾರಸಿನ ಗರ್ಭಪಾತ ಕಾಯ್ದೆಗೆ ಬಜೆಟ್ ಅಧಿವೇಶನದಲ್ಲೇ ಸರ್ಕಾರ ತಿದ್ದುಪಡಿ ಮಂಡಿಸಲಿದೆ.
ಈ ತಿದ್ದುಪಡಿಯಿಂದ ವಿಶೇಷ ಪ್ರಕರಣಗಳಲ್ಲಿ ಸುರಕ್ಷಿತ ಗರ್ಭಪಾತ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿ ಹಕ್ಕು ಖಾತರಿ ಆಗುತ್ತದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಸಂಪುಟ ಸಭೆಯ ನಂತರ ತಿಳಿಸಿದರು.
ಮಹಿಳೆಯರ ಸುರಕ್ಷತೆ, ಕಾನೂನಾತ್ಮಕ ಗರ್ಭಪಾತಕ್ಕೆ ಅವಕಾಶ, ವೈದ್ಯಕೀಯ, ಮಾನವೀಯ ಮತ್ತು ಸಾಮಾಜಿಕ ಆಯಾಮಗಳಲ್ಲಿ ತಿದ್ದುಪಡಿ ತರಲಾಗಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಗರ್ಭಪಾತದ ಮಿತಿ ಹೆಚ್ಚಳ ಅಸಹಜ ಭ್ರೂಣ ಬೆಳವಣಿಗೆ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ. ಇಂಥ ಪ್ರಕರಣಗಳು ವೈದ್ಯಕೀಯ ಮಂಡಳಿಯ ನಿರ್ಧಾರಕ್ಕೆ ಒಳಪಟ್ಟಿರುತ್ತವೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
ಯಾರಿಗೆ ಪ್ರಯೋಜನ?: ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆ ಗರ್ಭವತಿ ಆಗಿದ್ದರೆ ಅಥವಾ ಗರ್ಭವತಿ ಬಾಲಕಿ, ಅಥವಾ ಗರ್ಭಿಣಿ ಅಂಗವಿಕಲೆಯಾಗಿದ್ದರೆ ಗರ್ಭಪಾತದ ಮಿತಿಯನ್ನು 24 ವಾರದವರೆಗೆ ಏರಿಸುವುದರಿಂದ ಪ್ರಯೋಜನ ಆಗಲಿದೆ.
ಬಾಲಕಿಯು ಗರ್ಭವತಿಯಾದ ಪ್ರಕರಣಗಳಲ್ಲಿ ಕೆಲವೊಮ್ಮೆ ಐದು ತಿಂಗಳಾಗುವವರೆಗೂ ಆಕೆ ಗರ್ಭಧಾರಣೆ ಮಾಡಿದ್ದಾಳೆಂಬುದು ತಿಳಿಯುವುದಿಲ್ಲ. ಗರ್ಭಪಾತಕ್ಕೆ ಅನುಮತಿ ಕೋರಿ ಕೋರ್ಟ್ಗೆ ಹೋಗಬೇಕು ಎಂಬ ಅರಿವು ಬಾಲಕಿ ಅಥವಾ ಆಕೆಯ ಪಾಲಕರಿಗೆ ಇರುವುದಿಲ್ಲ. ಈ ದೃಷ್ಟಿಯಿಂದ ಗರ್ಭಪಾತದ ಮಿತಿ ಏರಿಕೆ ಮಾಡಿರುವುದು ಒಳ್ಳೆಯ ನಿರ್ಧಾರ ಎಂಬುದು ಮಹಿಳಾ ಮತ್ತು ಮಕ್ಕಳ ಪರ ಕಾರ್ಯಕರ್ತರ ಅಭಿಪ್ರಾಯ.
ಯಾರು ಶಿಫಾರಸು ಮಾಡಬಹುದು?
20 ವಾರದೊಳಗಿನ ಗರ್ಭಪಾತ ಕುರಿತು ವೈದ್ಯರು ಶಿಫಾರಸು ಮಾಡಲು ಅವಕಾಶ ಇದೆ. ಆದರೆ, 20 ವಾರದ ನಂತರದಲ್ಲಿ ಗರ್ಭಪಾತಕ್ಕೆ ಇಬ್ಬರು ವೈದ್ಯರ ಶಿಫಾರಸು ಅಗತ್ಯ. ಈ ಇಬ್ಬರಲ್ಲಿ ಒಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿರಬೇಕು. ಗರ್ಭಪಾತ ಮಾಡಿಸಿಕೊಂಡ ಮಹಿಳೆಯ ಅನುಮತಿ ಇಲ್ಲದೆ ಆಕೆಯ ಹೆಸರನ್ನು ಬಹಿರಂಗ ಪಡಿಸುವಂತಿಲ್ಲ ಎಂಬ ಅಂಶವನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ.