ಡಾ.ಗುರುದೇವ ರಾನಡೆ ಮಂದಿರದ ಗ್ರಂಥಾಲಯ ನಾಳೆ ಉದ್ಘಾಟನೆ

ಬೆಳಗಾವಿ: ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಉದ್ದೇಶದಿಂದ ನಗರದ ಹಿಂದವಾಡಿಯಲ್ಲಿರುವ ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ(ಗುರುದೇವ ರಾನಡೆ ಮಂದಿರ)ದಲ್ಲಿ ನಿರ್ಮಿಸಿರುವ ಗ್ರಂಥಾಲಯವನ್ನು ನವೆಂಬರ್ 28 ರಂದು ಸಂಜೆ 4 ಗಂಟೆಗೆ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರಮನ್ ವಿಜಯ ಸಂಕೇಶ್ವರ ಅವರು ಉದ್ಘಾಟಿಸಲಿದ್ದಾರೆ.

ಅಧ್ಯಯನ ಪೀಠದ ಕಾರ್ಯದರ್ಶಿ ಎಂ.ಬಿ.ಝಿರಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಈ ಗ್ರಂಥಾಲಯದಿಂದ ಅನುಕೂಲವಾಗಲಿದೆ. ಯಶಸ್ಸಿನ ಉತ್ತುಂಗಕ್ಕೆ ತಲುಪುವ ಮೂಲಕ ವಿಜಯ ಸಂಕೇಶ್ವರ ಅವರು ಯುವ ಜನತೆಗೆ ರೋಲ್ ಮಾಡೆಲ್ ಆಗಿದ್ದಾರೆ. ಅವರ ಸಾಧನೆಯಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರಕಲಿ ಎನ್ನುವ ಉದ್ದೇಶದಿಂದ ಗ್ರಂಥಾಲಯ ಉದ್ಘಾಟನೆಗೆ ಅವರನ್ನು ಆಹ್ವಾನಿಸಲಾಗಿದೆ ಎಂದು ವಿವರಿಸಿದರು.

ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ ಎಲ್ಲ ಧರ್ಮ, ದರ್ಶನ, ಸಂಪ್ರದಾಯದ ಸಮನ್ವಯದ ವೇದಿಕೆಯಾಗಿದೆ. ಶಾಂತಿ, ಪ್ರೇಮ, ಬಂಧುತ್ವವನ್ನು ನಾಡು, ವಿಶ್ವಕ್ಕೆ ನೀಡುವ ಉದ್ದೇಶದಿಂದ ಗುರುದೇವ ಡಾ. ಆರ್.ಡಿ.ರಾನಡೆ ಅವರು ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ ಸ್ಥಾಪಿಸಿದ್ದರು. 1965 ರಲ್ಲಿ ಆಗಿನ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರು ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ ಉದ್ಘಾಟಿಸಿದ್ದರು. ಮಾಜಿ ರಾಷ್ಟ್ರಪತಿಗಳಾದ ಡಾ.ಎಸ್.ರಾಧಾಕೃಷ್ಣನ್, ಬಾಬು ರಾಜೇಂದ್ರ ಪ್ರಸಾದ್, ಶಂಕರ ದಯಾಳ ಶರ್ಮ ಮತ್ತಿತರ ಹಲವು ಮಹನೀಯರು ಗುರುದೇವ ಡಾ. ಆರ್.ಡಿ.ರಾನಡೆಯವರ ಶಿಷ್ಯರಾಗಿದ್ದರು ಎಂದರು.
ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ ಯಾವುದೇ ಪ್ರಚಾರದ ಬೆನ್ನು ಬೀಳದೆ ಕಾರ್ಯ ನಿರ್ವಹಿಸುತ್ತ ಬಂದಿದೆ. ಪೀಠದಿಂದ ಪ್ರತಿ ವರ್ಷ ದೇಶ, ವಿದೇಶಗಳ ಸಂತರ ಬಗ್ಗೆ ಪುಸ್ತಕ ಪ್ರಕಟಿಸಲಾಗುತ್ತದೆ. ಈ ವರ್ಷ 11 ಪುಸ್ತಕಗಳನ್ನು ಪ್ರಕಟಿಸಲಾಗುವುದು ಎಂದರು.

ಯುಪಿಎಸ್‌ಸಿ ಯಂತಹ ಉನ್ನತ ಪರೀಕ್ಷೆಗಳಿಗೆ ಬರೆಯಲು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಆಸಕ್ತಿ, ಸಾಮರ್ಥ್ಯವಿದ್ದರೂ, ತರಬೇತಿ, ಸಂಪನ್ಮೂಲಕ್ಕಾಗಿ ದೂರದ ಮುಂಬೈ, ದೆಹಲಿ. ಹೈದರಾಬಾದ್‌ಗೆ ತೆರಳಬೇಕಾಗುತ್ತದೆ. ಇದಕ್ಕೆ ಲಕ್ಷಾಂತರ ರೂ. ಖರ್ಚು ಬರುತ್ತದೆ. ವಿದ್ಯಾರ್ಥಿಗಳ ಈ ಕಷ್ಟವನ್ನು ನಿವಾರಿಸಿ, ಅವರಿಗೆ ಬೆಳಗಾವಿಯಲ್ಲಿಯೇ ಅಧ್ಯಯನ ಹಾಗೂ ತರಬೇತಿ ನೀಡುವ ಉದ್ದೇಶದಿಂದ ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಿದೆ. ಭವಿಷ್ಯದಲ್ಲಿ ಇದನ್ನು ಡಿಜಿಟಲ್ ಗ್ರಂಥಾಲಯವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ವಿದ್ಯಾರ್ಥಿಗಳಿಗೆ ಕುಳಿತು ಓದಲು ಅತ್ಯಂತ ಶಾಂತ ಪರಿಸರ ಇಲ್ಲಿದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಐಎಎಸ್, ಕೆಎಎಸ್, ಐಆರ್‌ಎಸ್ ಮುಂತಾದ ಉನ್ನತ ಪರೀಕ್ಷೆಗಳಲ್ಲಿ ಈಗಾಗಲೇ ಸಾಧನೆ ಮಾಡಿದವರಿಂದ ಉಪನ್ಯಾಸ ಏರ್ಪಡಿಸಲಾಗುವುದು ಎಂದರು.

ಗ್ರಂಥಾಲಯಕ್ಕೆ ಶಾಸಕ ಮಹಾಂತೇಶ ಕೌಜಲಗಿ ಅವರು 2 ಲಕ್ಷ ರೂ., ಬೆಳಗಾವಿ ರೋಟರಿ ಕ್ಲಬ್‌ನವರು 3 ಲಕ್ಷ ರೂ. ಕೊಡುಗೆ ನೀಡಿದ್ದು, ನಮ್ಮ ಪೀಠದಿಂದ 2 ಲಕ್ಷ ರೂ. ಬಳಸಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕೂಡ ಆಹ್ವಾನಿಸಲಾಗಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ, ಬೆಳಗಾವಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ಮುಕುಂದ ಉಡಚಣಕರ ಉಪಸ್ಥಿತರಿರಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶನಗಳ ತೌಲನಿಕ ಅಧ್ಯಯನ ಪೀಠದ ಅಧ್ಯಕ್ಷ ಅಶೋಕ ಪೋತದಾರ, ರಜಿಸ್ಟ್ರಾರ್ ಐ.ಎಸ್.ಕುಂಬಾರ, ಟ್ರಸ್ಟಿ ಆರ್.ಜಿ.ಜಕಾತಿ, ಸದಸ್ಯರಾದ ಕಿಶೋರ ಕಾಕಡೆ, ಸುಬ್ರಹ್ಮಣ್ಯ ಭಟ್ ಇದ್ದರು.