More

    ಸಾಲಕೂಪದಲ್ಲಿ ಲಂಕಾ ಜನರಿಗೆ ಅರೆಹೊಟ್ಟೆ

    ಸಾಲಕೂಪದಲ್ಲಿ ಲಂಕಾ ಜನರಿಗೆ ಅರೆಹೊಟ್ಟೆ| ಡಾ. ವಿ.ಜಿ. ಕಿರಣ್​ಕುಮಾರ್

    ಆತ್ಮೀಯರ ಮದುವೆಗೆ ಹಾಜರಾಗಲು ನಾನು ಇತ್ತೀಚೆಗೆ ಶ್ರೀಲಂಕಾದ ಕೊಲಂಬೊಗೆ ಹೋಗಿದ್ದೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೆ, ಅದರೆ, ಪ್ರತ್ಯಕ್ಷವಾಗಿ ಅಲ್ಲಿನ ಸ್ಥಿತಿ ನೋಡಿ ಶಾಕ್ ಆಯ್ತು. ವಾಹನ, ಜನರು ಇಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿವೆ. ವಾಹನಗಳಿಗೆ ಪೆಟ್ರೋಲ್ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಆಹಾರ ಉತ್ಪನ್ನಗಳಂತೂ ತುಂಬಾ ದುಬಾರಿಯಾಗಿವೆ. ಬ್ರೆಡ್​ಗೆ 550 ರೂ. (ಶ್ರೀಲಂಕಾ ಕರೆನ್ಸಿ), ಒಂದು ಮೊಟ್ಟೆಗೆ 400 ರೂಪಾಯಿ. ಹಾಲು ಒಂದು ಲೀಟರ್​ಗೆ 850 ರೂಪಾಯಿ! ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಅಲ್ಲಿನ ಜನಗಳದ್ದು. ಸದಾ ಜನಜಂಗುಳಿ ಇರುತ್ತಿದ್ದ ಮಾಲ್​ಗಳಲ್ಲಿ ಜನರೇ ಕಾಣುತ್ತಿಲ್ಲ. ಪ್ರವಾಸೋದ್ಯಮವೇ ಆಧಾರವಾಗಿದ್ದ ಶ್ರೀಲಂಕಾಕ್ಕೆ ವಿದೇಶಗಳಿಂದ ಜನ ಬರುತ್ತಿಲ್ಲ. ಲಂಕಾದ ರೂಪಾಯಿ ಕರೆನ್ಸಿ ಮೌಲ್ಯ ಗಣನೀಯವಾಗಿ ಕುಸಿಯುತ್ತಿದೆ. ಶ್ರೀಲಂಕಾದ ರೂಪಾಯಿ ಮೌಲ್ಯ ಒಂದು ಯುಎಸ್ ಡಾಲರ್​ಗೆ 358 ಆಗಿದೆ.

    ಶ್ರೀಲಂಕಾ ಇತ್ತೀಚಿನ ವರ್ಷಗಳಲ್ಲಿ ವಿಪರೀತ ಸಾಲ ಮಾಡಿಕೊಂಡಿದೆ. 5000 ಕೋಟಿ ಡಾಲರ್​ಗೂ ಅಧಿಕ ವಿದೇಶೀ ಸಾಲ ಹೊಂದಿದೆ. (ಭಾರತದ ರೂಪಾಯಿ ಲೆಕ್ಕದಲ್ಲಿ 4 ಲಕ್ಷ ಕೋಟಿ ರೂಪಾಯಿ). ಭಾರತದ ಆರ್ಥಿಕತೆ ಮಟ್ಟಿಗೆ ಇದು ಸಣ್ಣದೆನಿಸಿದರೂ ಶ್ರೀಲಂಕಾದ ಆರ್ಥಿಕತೆಗೆ ಬಹುದೊಡ್ಡ ಮೊತ್ತ. ಆ ದೇಶದ ಜಿಡಿಪಿ ಇರುವುದೇ 8400 ಕೋಟಿ ಡಾಲರ್. ಅಂದರೆ ಅದರ ಜಿಡಿಪಿಯ ಶೇ. 60 ಭಾಗ ಸಾಲವೇ ಇದೆ. ಇದು ಶ್ರೀಲಂಕಾದ ಆದಾಯ ಕುಸಿತಕ್ಕೂ ಕಾರಣವಾಗಿದೆ. ವೆಚ್ಚ ಗಣನೀಯವಾಗಿ ಏರಿದೆ. ಹಣದುಬ್ಬರ ಶೇ. 50ಕ್ಕಿಂತ ಹೆಚ್ಚಾಗಿದೆ.

    ಮೊದಲೇ ಅಭಾವದಲ್ಲಿರುವ ಆಹಾರ ವಸ್ತುಗಳ ಬೆಲೆ ಜನ ಸಾಮಾನ್ಯರಿಗೆ ಅಕ್ಷರಶಃ ಕೈಗೆಟುಕದಂತಾಗಿದೆ. ಜನರು ಆಹಾರ ದಾಸ್ತಾನು ಉಳಿಸಿಕೊಳ್ಳಲು ಉಪವಾಸ ಇರಬೇಕಾದ ಪ್ರಮೇಯ ಬಂದಿದೆ. ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ ಸಂಸ್ಥೆಯ ವರದಿಯೊಂದರ ಪ್ರಕಾರ ಶ್ರೀಲಂಕಾದಲ್ಲಿರುವ 10 ಕುಟುಂಬಗಳ ಪೈಕಿ 9 ಕುಟುಂಬಗಳು ದಿನಕ್ಕೆ ಒಂದು ಅಥವಾ ಎರಡು ಹೊತ್ತು ಊಟ ಮಾಡುವುದನ್ನೇ ಬಿಟ್ಟಿವೆಯಂತೆ. ಭಾರತವು ನೆರೆಯ ಶ್ರೀಲಂಕಾದ ಕಷ್ಟಕಾಲಕ್ಕೆ ಮಾನವೀಯತೆಯಿಂದ ಸ್ಪಂದಿಸಿದೆ. 54 ಬಿಲಿಯನ್ ಡಾಲರ್ ಸಾಲ ಹೊಂದಿರುವ ಶ್ರೀಲಂಕಾಗೆ ಭಾರತ 4 ಬಿಲಿಯನ್ ಡಾಲರ್ ಹಣಕಾಸು ಸಹಾಯ ಒದಗಿಸಿದೆ. ಇದರ ಜತೆಗೆ ಔಷಧ, ಅಹಾರ ಸಾಮಗ್ರಿ ಮತ್ತಿತರ ಸಹಾಯವನ್ನೂ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಧನಸಹಾಯ ಅಥವಾ ಸಾಲ ಕೊಡಲಿದೆ. ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ಕೂಡ ಧನಸಹಾಯ ಮಾಡಿವೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನಿಂದ ದೊಡ್ಡ ಸಾಲದ ನಿರೀಕ್ಷೆಯಲ್ಲಿ ಲಂಕಾ ಇದೆ. ಇಷ್ಟೆಲ್ಲಾ ಆದರೂ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ, ಜನರ ಜೀವನ ಸಹಜ ಸ್ಥಿತಿಗೆ ಬರಲು ಸಾಕಷ್ಟು ವರ್ಷಗಳೇ ಬೇಕಾಗಬಹುದು. ಇಂತಹ ದುಃಖದ, ದುರದೃಷ್ಟಕರ ಸಂಗತಿಗಳಿಂದ ಮುಕ್ತವಾಗಿ ಶ್ರೀಲಂಕಾ ಮತ್ತೆ ಪುಟಿದೇಳುತ್ತದೆ ಎಂದು ನಿರೀಕ್ಷಿಸೋಣ.

    (ಲೇಖಕರು: ವಿಶಾಲ್ ಇನ್​ಫ್ರಾಸ್ಟ್ರಕ್ಚರ್​ ಲಿಮಿಟೆಡ್ ಮುಖ್ಯಸ್ಥರು, ಎಫ್​ಕೆಸಿಸಿಐ ನಿರ್ದೇಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts