ಹತ್ತೂರಿಗೆ ಬರ ಬಂದರೂ ಪುತ್ತೂರಿಗಿಲ್ಲ!

>>

ಶ್ರವಣ್ ಕುಮಾರ್ ನಾಳ ಪುತ್ತೂರು
ತುಳುನಾಡಿನಲ್ಲಿ ಯಾವ ಪ್ರದೇಶದಲ್ಲಿ ಬರ ಪರಿಸ್ಥಿತಿ ಎದುರಾದರೂ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರನ ಕೆರೆ ಮಾತ್ರ ಅಕ್ಷಯ ಪಾತ್ರೆಯಂತೆ ನೀರು ತುಂಬಿರುತ್ತದೆ.

ಜಲ ಬತ್ತದ ಕೆರೆ ಎಂದೇ ಪ್ರಸಿದ್ಧ್ದಿ ಪಡೆದಿರುವ ಶ್ರೀ ಮಹಾಲಿಂಗೇಶ್ವರನ ದೇವರ ಕೆರೆಯ ಮಣ್ಣು ಹಾಗೂ ಕೆಸರು ತೆಗೆಯಲು 40 ವರ್ಷದ ಹಿಂದೆ ಕೃತಕವಾಗಿ ನೀರು ಸಂಪೂರ್ಣ ಖಾಲಿ ಮಾಡಲಾಗಿತ್ತಾದರೂ ಹೂಳು ತೆಗೆದ ಮರುಕ್ಷಣವೇ ಕೆರೆ ನೀರಿನಿಂದ ತುಂಬಿತ್ತು. ಕೆರೆ ಮಧ್ಯೆ ಇರುವ ಮಂಟಪದಲ್ಲಿ ವರುಣದೇವರ ಮೂರ್ತಿ ಸ್ಥಾಪಿತವಾದ ದಿನದಿಂದ ಈ ಕೆರೆೆ ಬತ್ತಿದ ಇತಿಹಾಸವೇ ಇಲ್ಲ ಎನ್ನುವುದು ಆಸ್ತಿಕರ ನಂಬಿಕೆ.

ಕೆರೆಯ ತಳ ಭಾಗ ಒಡೆದು ಉಕ್ಕಿದ ನೀರು: ಪುತ್ತೂರು ಸೀಮೆಯ ಜನರು ಯಾವುದೇ ಸಾಮೂಹಿಕ ಕಷ್ಟ ಬಂದಾಗ ಮೊದಲು ಶರಣಾಗುವುದು ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರಿಗೆ. ಎಲ್ಲ ಕಷ್ಟಗಳನ್ನೂ ನಿವಾರಿಸುವ, ಊರಿಗೆ ಸುಭಿಕ್ಷೆ ನೀಡುವ ಪುತ್ತೂರ‌್ದ ಉಳ್ಳಾಯ ಎನ್ನುವ ಭಕ್ತಿ, ನಂಬಿಕೆ ಭಕ್ತರಲ್ಲಿದೆ. ಮಹಾಲಿಂಗೇಶ್ವರ ದೇವಾಲಯ ಹೊರಾಂಗಣ ಬಳಿ ಇರುವ ಕೆರೆಯಲ್ಲಿ ನೀರು ತುಂಬಿದ ಕುರಿತ ಧಾರ್ಮಿಕ ನಂಬಿಕೆಯೂ ರೋಚಕ. ಶತಮಾನಗಳ ಹಿಂದೆ ಪುತ್ತೂರು ದೇವಸ್ಥಾನಕ್ಕೆ ಕೆರೆ ನಿರ್ಮಿಸುವ ಅನಿವಾರ್ಯತೆ ಎದುರಾಯಿತು. ಊರಿನ ಮುಖಂಡರು ಕೈಗೊಂಡ ನಿರ್ಣಯದಂತೆ ನೂರಾರು ಭಕ್ತರು ಕೆರೆ ತೋಡಿದಾಗ ನೀರು ಸಿಗಲಿಲ್ಲ. ನೀರಿಗಾಗಿ ವರುಣದೇವರ ಕೃಪೆ ಅಗತ್ಯ ಮನಗಂಡು ಶ್ರೀ ಮಹಾಲಿಂಗೇಶ್ವರ ದೇವಾಲಯ ದೇವರ ಸತ್ಯ -ಧರ್ಮ ನಡೆಯಲ್ಲಿ ಪ್ರಾರ್ಥಿಸಿ ಎಳನೀರಿನ ಅಭಿಷೇಕ ಮಾಡಿದರು. ಅನಂತರ ನೀರು ಸಿಗದ ಕೆರೆಯ ದಂಡೆಯಲ್ಲಿ ಭಕ್ತರು ಊಟಕ್ಕೆ ಕುಳಿತಿದ್ದರು. ಈ ಸಂದರ್ಭ ಕೆರೆಯ ತಳ ಭಾಗ ಒಡೆದು ನೀರು ಉಕ್ಕಿತು. ಎಲೆಯಲ್ಲಿ ಬಡಿಸಿದ್ದ ಅನ್ನದ ಅಗಳುಗಳು ಮುತ್ತುಗಳಾಗಿ ಪರಿವರ್ತನೆಯಾದವು. ಆದ ಕಾರಣ ಪುತ್ತೂರಿನ ಕೆರೆಗೆ ಮುತ್ತು ಬೆಳೆದ ಕೆರೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ದೇವಾಲಯದ ಚರಿತ್ರೆಯಲ್ಲಿ ಕೆರೆಯ ಕಥೆಯೂ ಉಲ್ಲೇಖವಾಗಿದೆ.

ಮಳೆಗೆ ಪ್ರಾರ್ಥಿಸಿ ಎಳನೀರಿನ ಅಭಿಷೇಕ: ಶ್ರೀ ಮಹಾಲಿಂಗೇಶ್ವರ ದೇವರ ಸತ್ಯ -ಧರ್ಮ ನಡೆಯಲ್ಲಿ ಮಾಡಿದ ಪ್ರಾರ್ಥನೆಗೆ ದೇವರು ಲ ನೀಡದೆ ನಿಲ್ಲುವುದಿಲ್ಲ ಎಂಬ ಅಚಲ ನಂಬಿಕೆ ಜನರಲ್ಲಿದೆ. ಪ್ರತಿ ವರ್ಷ ಪುತ್ತೂರಿನಲ್ಲಿ ಮಳೆಗಾಗಿ ಪ್ರಾರ್ಥಿಸಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಎಳನೀರಿನ ಅಭಿಷೇಕ ಮಾಡಲಾಗುತ್ತದೆ. ಪ್ರತಿಲವಾಗಿ ವರುಣನ ಕೃಪೆಯಾಗುತ್ತದೆ, ಮಳೆ ಬಂದೇ ಬರುತ್ತದೆ ಎಂಬುದು ಭಕ್ತರ ನಂಬಿಕೆ. ಈ ನಂಬಿಕೆ ಎಂದೂ ಸುಳ್ಳಾಗಿಲ್ಲ.ಮಳೆಗಾಗಿ ಪ್ರತಿವರ್ಷ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಸುವ ಸಂಪ್ರದಾಯ ನಡೆದು ಬಂದಿದೆ ಎಂದು ದೇವಾಲಯಗಳ ಅಧ್ಯಯನಕಾರ ಪಿ.ಜಿ. ಚಂದ್ರಶೇಖರ್ ತಿಳಿಸಿದ್ದಾರೆ.

ವರುಣದೇವನ ಮೂರ್ತಿ ಪ್ರತಿಷ್ಠಾಪನೆ: ಕೆರೆಯ ನಡು ಮಂಟಪದ ಕೆಳಗೆ ಹತ್ತೂರಿಗೆ ವರುಣದೇವನ ಆಶೀರ್ವಾದ ಸಿಗಲೆಂದು ವರುಣದೇವರ ಶೃಂಗಾರ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಪುತ್ತೂರಿನಲ್ಲಿ ಬರವೇ ಬಂದಿಲ್ಲ. ಬರ ಪರಿಸ್ಥಿತಿ ಬಂದ ಮಾಹಿತಿಯಿಲ್ಲ. ಕೃಷಿ ಪ್ರಧಾನ ಪುತ್ತೂರಿನಲ್ಲಿ ಭಕ್ತರು ಸಂಕಷ್ಟ ಕಾಲದಲ್ಲಿ ಮಹಾಲಿಂಗೇಶ್ವರನ ಮೊರೆಹೊಕ್ಕಾಗ ಕ್ಷಿಪ್ರ ಪ್ರಸಾದವೆಂಬಂತೆ ಮಹಾದೇವ ಕಾಪಾಡಿದ ಅನೇಕ ಉದಾಹರಣೆಗಳಿವೆ.

ಪುತ್ತೂರು ಸೀಮೆಯ ಜನರು ಯಾವುದೇ ಸಾಮೂಹಿಕ ಕಷ್ಟ ಬಂದಾಗ ಮೊದಲು ಶರಣಾಗುವುದು ಸೀಮೆಯ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರಿಗೆ. ಮಳೆಗಾಗಿ ಪ್ರಾರ್ಥಿಸಿ ಸೀಯಾಳಾಭಿಷೇಕ ಮಾಡುವ ಪದ್ಧ್ದತಿ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವರುಣನ ಕೃಪೆಗೆ ಪ್ರಾರ್ಥಿಸಿ ಈ ಬಾರಿ ಏ.27ರಂದು ವಿಶೇಷವಾಗಿ ಸೀಯಾಳಾಭಿಷೇಕ ನಡೆಯಲಿದೆ.
-ಎನ್. ಸುಧಾಕರ್ ಶೆಟ್ಟಿ, ಪುತ್ತೂರು ಮಹಾಲಿಂಗೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *