ಕೆರೆ ತುಂಬಿಸಲು ಆಗ್ರಹಿಸಿ ಡಿಸಿಗೆ ಮನವಿ

ಬೆಳಗಾವಿ: ರಾಮೇಶ್ವರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಮದುರ್ಗ, ಗೋಕಾಕ ತಾಲೂಕಿನ ವಿವಿಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ ತೀವ್ರ ಬೇಸಿಗೆ ಆರಂಭವಾಗಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕೆರೆಗಳು ನೀರಿಲ್ಲದೆ ಬತ್ತಿದ್ದು, ಕೊಳವೆ ಬಾವಿಗಳ ಅಂತರ್ಜಲ ಕುಸಿದಿದೆ. ಇದರಿಂದ ನೀರಿನ ಅಭಾವ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ರಾಮೇಶ್ವರ ಏತ ನೀರಾವರಿ ಯೋಜನೆಯ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಕಾಲುವೆಗಳ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ರಾಮದುರ್ಗ ತಾಲೂಕಿನ ಹಿರೇಕೊಪ್ಪ (ಕೆ.ಎಸ್) ಭಾಗೋಜಿಕೊಪ್ಪ, ಹುಲಕುಂದ, ಚಿಕ್ಕೊಪ್ಪ (ಕೆಎಸ್) ಹುಲಕುಂದ, ಸವದತ್ತಿ ತಾಲೂಕಿನ ಸವದತ್ತಿ, ಮೆಳ್ಳಿಕೇರಿ, ದಾಸನಾಳ, ಮುಗಳಿಹಾಳ, ಗೋಕಾಕ ತಾಲೂಕಿನ ಕಳ್ಳಿಗುದ್ದಿ, ಕೌಜಲಗಿ ಸೇರಿ ವಿವಿಧ ಗ್ರಾಮಗಳಲ್ಲಿನ ಸುಮಾರು 20 ಕೆರೆ ನೀರಿಲ್ಲದೆ ಬತ್ತಿ ಹೋಗಿವೆ.

ಕುಡಿಯುವ ನೀರಿನ ಸಲುವಾಗಿ ಕೊಳವೆ ಬಾವಿಗಳಿದ್ದು, ನೀರಿನ ಪ್ರಮಾಣ ತೀವ್ರ ಕಡಿಮೆಯಾಗಿದೆ. ಕೆರೆಗಳು ನೀರಿಲ್ಲದೆ ಸಂಪೂರ್ಣ ಬತ್ತಿಗೆ ಹೋಗಿವೆ. ಈ ಹಿನ್ನೆಲೆಯಲ್ಲಿ ಘಟಪ್ರಭಾ ನದಿಯಿಂದ ಕುಡಿಯುವ ನೀರಿಗಾಗಿ ಕಾಲುವೆಗಳಿಗೆ ನೀರು ಬಿಡುಗಡೆಗೆ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಬಸವೇಶ್ವರ ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಅರ್ಜುನ ಮಳಲಿ, ಅರುಣ ಮಳಲಿ, ಕೇಶವ ಮಳಿ, ರಾಮಣ್ಣ ಮಹಾರೆಡ್ಡಿ, ಯಲ್ಲಪ್ಪ ಬಾಗಡಿ, ಶಂಕರ ಪಾವಗುದ್ದಿ, ಭೀಮನಗೌಡ ಪಾಟೀಲ, ವಿನಾಯಕ ಮಳವಂಕಿ, ಅಶೋಕ ಬಡಿಗೇರ ಇತರರು ಇದ್ದರು.

Leave a Reply

Your email address will not be published. Required fields are marked *