ವಿಜಯಪುರ: ಹಬ್ಬದ ಖರ್ಚಿಗೆ ಹಣ ಕೊಡುವುದಾಗಿ ಹೇಳಿ ಕಾರ್ಮಿಕರನ್ನು ಇಟ್ಟಿಗೆ ಭಟ್ಟಿಗೆ ಕರೆಯಿಸಿಕೊಂಡ ಮಾಲೀಕ ಅವರ ಕೈ-ಕಾಲು ಕಟ್ಟಿ ರೂಮ್‌ನಲ್ಲಿ ಕೂಡಿ ಹಾಕಿ ಪ್ಲಾಸ್ಟಿಕ್ ಪೈಪ್‌ನಿಂದ ಅಮಾನವೀಯವಾಗಿ ಹಲ್ಲೆ ನಡೆಸಿರುವ ಪ್ರಕರಣ ವಿಜಯಪುರ ನಗರ ಹೊರವಲಯದ ಗಾಂಧಿ ನಗರದಲ್ಲಿ ಬೆಳಕಿಗೆ ಬಂದಿದೆ.
ಸ್ಥಳೀಯ ಗಾಂಧಿ ನಗರಕ್ಕೆ ಹತ್ತಿರದಲ್ಲಿರುವ ಬಸವನಗರದ ನಿವಾಸಿಯಾಗಿರುವ ಖೇಮು ರಾಠೋಡ ಮಾಲೀಕತ್ವದ ಇಟ್ಟಿಗೆ ಭಟ್ಟಿಯಲ್ಲಿ ಈ ಜ. 15 ರಿಂದ 18ರವರೆಗೆ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ, ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಟ್ಟಿಗೆ ಭಟ್ಟಿ ಮಾಲೀಕರನ್ನು ಬಂಧಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಖೇಮು ರಾಠೋಡ ಅವರ ಇಟ್ಟಿಗೆ ಭಟ್ಟಿಯಲ್ಲಿ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ಸದಾಶಿವ ಬಸಪ್ಪ ಮಾದರ, ಸದಾಶಿವ ಚಂದ್ರಪ್ಪ ಬಬಲಾದಿ ಹಾಗೂ ಉಮೇಶ ಮಾಳಪ್ಪ ಮಾದರ ಎಂಬ ಕಾರ್ಮಿಕರು ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಜ. 13 ರಂದು ಸಂಕ್ರಮಣದ ನಿಮಿತ್ತ ಸ್ವಗ್ರಾಮಕ್ಕೆ ತೆರಳಿದ್ದರು. ಬಳಿಕ ಮಾಲೀಕ ಖೇಮು ರಾಠೋಡ ಕೆಲಸಕ್ಕೆ ಬರುವಂತೆ ಕರೆ ಮಾಡಲಾಗಿ ಹಬ್ಬಕ್ಕಾಗಿ 10 ಸಾವಿರ ರೂಪಾಯಿ ಕೇಳಿದ್ದಾರೆ. ಇಟ್ಟಿಗೆ ಭಟ್ಟಿಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ ಖೇಮು ರಾಠೋಡ ಕಾರ್ಮಿಕರಿಗೆ ತಿಳಿಸಿದ್ದು, ಅದರಂತೆ ಜ. 15 ರಂದು ಬೆಳಗ್ಗೆ 9.30ಕ್ಕೆ ಕಾರ್ಮಿಕರು ಇಟ್ಟಿಗೆ ಭಟ್ಟಿಗೆ ಬಂದಿದ್ದಾರೆ. ಅವರನ್ನು ಮಾಲೀಕ ಖೇಮು ರಾಠೋಡ, ಆತನ ಮಗ ರೋಹನ ರಾಠೋಡ ಹಾಗೂ ಇನ್ನೂ ಕೆಲವು ಜನರು ಸೇರಿ ಅವರ ಕೈಕಾಲು ಕಟ್ಟಿ ರೂಮ್‌ನಲ್ಲಿ ಕೂಡಿ ಹಾಕಿ ಹೊಡೆದಿದ್ದಾರೆ. ಬಳಿಕ ಜ. 18 ರಂದು ಬೆಳಗ್ಗೆ 10ರ ಸುಮಾರಿಗೆ ಕಾರ್ಮಿಕರನ್ನು ರೂಮ್‌ನಿಂದ ಹೊರಗೆ ಕರೆದುಕೊಂಡು ಬಂದು ಪುನಃ ಹಲ್ಲೆ ನಡೆಸಿದ್ದಾರೆ.
ವಿಡಿಯೋ ದೃಶ್ಯಾವಳಿ ವೈರಲ್
ಕಾರ್ಮಿಕರನ್ನು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವಕ್ತವಾಯಿತು. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಖೇಮು ರಾಠೋಡ, ಸಚಿನ ಮಾನವರ ಹಾಗೂ ವಿಶಾಲ ಜುಮನಾಳ ಎಂಬುವರನ್ನು ಬಂಧಿಸಿದ್ದಾರೆ. ಕೆಲವರು ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.