More

    ಸಂಸಾರಿ ಮತ್ತು ಸರ್ವಸಂಗ ಪರಿತ್ಯಾಗಿಯ ಜ್ಞಾನ

    ಸಂಸಾರಿ ಮತ್ತು ಸರ್ವಸಂಗ ಪರಿತ್ಯಾಗಿಯ ಜ್ಞಾನಪ್ರಾಪಂಚಿಕನ ಜ್ಞಾನ ಹಾಗೂ ಸರ್ವಸಂಗ ಪರಿತ್ಯಾಗಿಯ ಜ್ಞಾನ ಎರಡೂ ಬೇರೆ ಬೇರೆ. ಪ್ರಾಪಂಚಿಕ ಎಲ್ಲ ವಿಚಾರ, ಕಾರ್ಯ, ಚಿಂತನೆ ಮುಂತಾದವುಗಳನ್ನು ತನ್ನ ಸಂಸಾರದ ಪರಿಧಿಯೊಳಗೇ ಇರುವಂತೆ ಪ್ರಯತ್ನಿಸುತ್ತಾನೆ. ತನ್ನ ಅಪೂರ್ವ ಮನಃಶಕ್ತಿಯನ್ನೆಲ್ಲ ತಾನು, ತನ್ನವರು, ತನ್ನದು ಎಂಬೀ ಚಿಂತನೆಗಳಿಗೆ, ಸುಖ-ಭೋಗಗಳಿಗೆ ಮೀಸಲಾಗಿಡುತ್ತಾನೆ. ಆದರೆ ಸರ್ವಸಂಗ ಪರಿತ್ಯಾಗಿಯ ಜ್ಞಾನ ನಿಜಕ್ಕೂ ವಿಭಿನ್ನವಾದುದು. ಸದಾ ಭಗವತ್ ಚಿಂತನೆಯಲ್ಲಿ ತೊಡಗಿದ್ದು, ಏನೇ ಮಾಡಿದರೂ ಜಗತ್ ಕಲ್ಯಾಣಕ್ಕಾಗಿಯೇ. ಸಕಲರ ಒಳಿತಿಗಾಗಿ ಪ್ರಾರ್ಥಿಸುತ್ತಾನೆ, ಜಗತ್ ಕಲ್ಯಾಣದ ವಿಚಾರ ಅವನಲ್ಲಿರುತ್ತದೆ. ಕಾರಣ, ಜಗತ್ತೇ ಜಗನ್ಮಯಿಯ ಲೀಲಾಸ್ಥಾನ ಎಂದು ಪರಿಗಣಿಸುತ್ತಾನೆ. ಈ ಸರ್ವಸ್ವವೂ ಆ ದಯಾಮಯಿ ಭವತಾರಿಣಿಯದ್ದೇ ಎನ್ನುತ್ತಿದ್ದರು ಭಗವಾನ್ ಶ್ರೀರಾಮಕೃಷ್ಣರು.

    ಇದು ನಿಜವಾದ ಸರ್ವಸಂಗ ಪರಿತ್ಯಾಗಿಯ ಮನಸ್ಸಿನ ಚೌಕಟ್ಟು. ಈ ವಿಚಾರವನ್ನು ಬಹು ಸ್ಪಷ್ಟವಾಗಿ ಪರಮಹಂಸರು ತಮ್ಮೊಂದಿಗೆ ಇದ್ದ ಹಾಜರಾ ಮಹಾಶಯನಿಗೆ ಈ ರೀತಿ ತಿಳಿಸುತ್ತಾರೆ (30ನೇ ಜೂನ್ 1884 ಸೋಮವಾರ) ‘ವ್ಯಾಕುಲತೆಯೊಡನೆ ಅಳು. ವಿವೇಕ, ವೈರಾಗ್ಯ, ಇವುಗಳಿಂದ ಎಲ್ಲವನ್ನೂ ತ್ಯಜಿಸಿಬಿಟ್ಟಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ದೊರೆತುಬಿಡುತ್ತದೆ. ನಿಜವಾದ ವ್ಯಾಕುಲತೆ ಉಂಟಾಯಿತು ಎಂದರೆ, ಉನ್ಮತ್ತನ ಅವಸ್ಥೆ ಬಂದುಬಿಡುತ್ತದೆ. ಸಾಧಕ ಜ್ಞಾನಮಾರ್ಗಿಯಾದರೂ ಸರಿಯೆ, ಭಕ್ತಿಮಾರ್ಗಿಯಾದರೂ ಸರಿಯೆ…’ ಹೀಗೆ ಪರಮಹಂಸರು ಸಂಭಾಷಣೆಯನ್ನು ಮುಂದುವರಿಸುತ್ತ ಸಂಸಾರಿಗಳ ಜ್ಞಾನ ಹಾಗೂ ಸರ್ವಸಂಗ ಪರಿತ್ಯಾಗಿಗಳ ಜ್ಞಾನದ ಬಗ್ಗೆ ವಿವರಿಸುತ್ತಾರೆ.

    ‘ಸಂಸಾರಿಯ ಜ್ಞಾನಕ್ಕೂ, ಸರ್ವಸಂಗ ಪರಿತ್ಯಾಗಿಯ ಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸ. ಸಂಸಾರಿಯ ಜ್ಞಾನ-ದೀಪ ಬೆಳಕಿನ ಹಾಗೆ. ಮನೆಯ ಒಳಗೆ ಮಾತ್ರ ಬೆಳಕು ಕೊಡುತ್ತದೆ. ಅಂದರೆ ಆತ ತನ್ನನ್ನು ಮತ್ತು ತನ್ನ ಸಂಸಾರವನ್ನು ಹೊರತು ಬೇರೆ ಯಾರನ್ನೂ ನೋಡಲಾರ. ಸರ್ವಸಂಗ ಪರಿತ್ಯಾಗಿಯ ಜ್ಞಾನ ಸೂರ್ಯನ ಬೆಳಕು ಇದ್ದ ಹಾಗೆ. ಆ ಬೆಳಕಿನಿಂದ ಮನೆಯ ಒಳಗೆ ಹೊರಗೆ ಎಲ್ಲವನ್ನೂ ನೋಡಬಹುದು. ಚೈತನ್ಯದೇವ ಜ್ಞಾನ, ಸೌರ ಜ್ಞಾನ, ಜ್ಞಾನ ಸೂರ್ಯನ ಬೆಳಕು….’ ಎಂದು ಅವರು ವಿವರಿಸುತ್ತಾರೆ.

    ಪ್ರಾಪಂಚಿಕರ ಮನಸ್ಸು ಮತ್ತು ಅವರು ಪಡೆದ ಜ್ಞಾನದ ಪರಿಧಿ ಅತ್ಯಂತ ಅಲ್ಪ. ಅವರು ತಮ್ಮದು, ತಮ್ಮ ಸಂಸಾರದ ವೃತ್ತದಲ್ಲಿಯೇ ಗಿರಕಿ ಹೊಡೆಯುತ್ತಿರುತ್ತಾರೆ. ವೈಶಾಲ್ಯತೆ ಅತ್ಯಂತ ಅಲ್ಪವಾಗಿರುವ ಕಾರಣ ಸಂಕುಚಿತ, ಅಲ್ಪಬುದ್ಧಿಯವರಾಗಿ ಸದಾ ಸ್ವಾರ್ಥದ ಗೂಡಾಗಿರುತ್ತಾರೆ. ಆದರೆ ಸರ್ವಸಂಗ ಪರಿತ್ಯಾಗಿ ಸರ್ವದಾ ವೈಶಾಲ್ಯದ ಸ್ತರದಲ್ಲಿರುತ್ತಾರೆ. ಅಲ್ಪತೆಯ ಅರಿವೇ ಅವರಿಗಿರುವುದಿಲ್ಲ. ಬದಲಾಗಿ ವಿಶ್ವಮಾನವರಾಗಿ ವಿಶ್ವಜ್ಯೋತಿಯಾಗಿ ಬೆಳಗುತ್ತಿರುತ್ತಾರೆ. ಪ್ರಾಪಂಚಿಕತೆಯ ಅಂಧಕೂಪದಲ್ಲಿ ಸಿಲುಕಿ ನರಳುತ್ತಿರುವವರ ಹೃದಿಕಂದರದಲ್ಲಿ ಜ್ಞಾನಜ್ಯೋತಿಯನ್ನು ಬೆಳಗಿಸಿ ಉದ್ಧರಿಸುತ್ತಾರೆ. ಇದೇ ನಿಜವಾದ ಸರ್ವಸಂಗಪರಿತ್ಯಾಗಿಯ ಜ್ಞಾನ.

    ಈ ಅದ್ಭುತ ವಿಚಾರಕ್ಕೆ ಪರಮಹಂಸರ ದಿವ್ಯಜೀವನವೇ ಉದಾಹರಣೆ. ಅದೊಂದು ದಿನ ಶ್ರೀರಾಮಕೃಷ್ಣ ಪರಮಹಂಸರನ್ನು ನೋಡಲೆಂದು ಬಂದ ಆ ಕಾಲದ ಶ್ರೇಷ್ಠ ಪಂಡಿತ ಶಶಿಧರ ತರ್ಕಚೂಡಾಮಣಿ ಪರಮಹಂಸರನ್ನು ಕುರಿತು ‘ಮಹಾಶಯರೆ! ತಮ್ಮಂತಹ ಸಿದ್ಧಯೋಗಿಗಳು ಇಚ್ಛಾಮಾತ್ರದಿಂದ ರೋಗನಿವಾರಣೆ ಮಾಡಿಕೊಳ್ಳಲು ಸಮರ್ಥರೆಂದು ಶಾಸ್ತ್ರಗಳು ಹೇಳುತ್ತವೆ. ನೀವೇಕೆ ಹಾಗೆ ಮಾಡಬಾರದು’ ಎಂದರು.

    ಪರಮಹಂಸರು ತೀಕ್ಷ್ಣವಾಗಿ ಹೇಳುತ್ತಾರೆ; ‘ಪಂಡಿತನಾಗಿ ಇಂತಹ ಮಾತು ಆಡುತ್ತೀಯೆಲ್ಲ! ಈ ಮನಸ್ಸು ಸಂಪೂರ್ಣವಾಗಿ ಈಶ್ವರಾರ್ಪಿತವಾಗಿದೆ. ಅದನ್ನು ಹಿಂದಕ್ಕೆ ಕರೆದು ಈ ನಶ್ವರ ಶರೀರಕ್ಕೆ ದಾನ ಮಾಡಿಬಿಡಲೇ?’ ಆಗ ಪಂಡಿತ ನಾಚಿ ಸುಮ್ಮನಾದ. ಆದರೆ ನರೇಂದ್ರಾದಿ ಶಿಷ್ಯರು ಬಿಡಲಿಲ್ಲ. ‘ನಮಗಾಗಿಯಾದರೂ ಬೇನೆಯನ್ನು ಗುಣಮಾಡಿಕೊಳ್ಳಬೇಕು’ ಎಂದರು. ಪರಮಹಂಸರು ತಿಳಿಸುತ್ತಾರೆ; ‘ನಾನೇನು ಬೇಕೆಂದು ಈ ಬೇನೆಯನ್ನು ಬರಮಾಡಿಕೊಂಡಿದ್ದೇನೆಯೇ? ವಾಸಿಯಾಗಲಿ ಎಂದು ನನ್ನ ಇಚ್ಛೆ. ಆದರೆ ಅದು ಹೇಗೆ ಸಾಧ್ಯ? ಎಲ್ಲ ಜಗನ್ಮಾತೆಯ ಕೈಯಲ್ಲಿದೆ.’ ನರೇಂದ್ರ, ‘ಹಾಗಾದರೆ ಆಕೆಯನ್ನು ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯನ್ನು ಖಂಡಿತ ಕೇಳಿಯೇ ಕೇಳುತ್ತಾಳೆ’ ಎಂದಾಗ ಪರಮಹಂಸರು, ‘ನೀನೇನೋ ಸುಲಭವಾಗಿ ಹೇಳಿಬಿಡುತ್ತೀಯೆ. ಆದರೆ ನನ್ನಿಂದ ಅಂಥ ಪ್ರಾರ್ಥನೆ ಹೊರಹೊಮ್ಮದು.’ ನರೇಂದ್ರನಾಥ ತನ್ನ ಗುರುದೇವನಿಗೆ ಎಲ್ಲಿಲ್ಲದ ಒತ್ತಡ ಹಾಕಿ ಭವತಾರಿಣಿಯ ಬಳಿ ನಮಗಾಗಿಯಾದರೂ ಪ್ರಾರ್ಥಿಸಲೇಬೇಕು ಎಂದು ಹಠ ಹಿಡಿದಾಗ ಪರಮಹಂಸರು ಸರಿ ಆಗಲಿ ಭವತಾರಿಣಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಸ್ವಲ್ಪ ಸಮಯದ ನಂತರ ನರೇಂದ್ರನಾಥ ತನ್ನ ಪ್ರಾರ್ಥನೆಯ ಫಲವೇನು ಎಂಬುದಾಗಿ ವಿಚಾರಿಸಿದಾಗ, ಪರಮಹಂಸರು ತಿಳಿಸುತ್ತಾರೆ. ‘ನಿನ್ನ ಮಾತನ್ನು ಎಂದಿಗೂ ಕೇಳುವುದಿಲ್ಲ. ಕಾರಣ, ನಾನು ಭವತಾರಿಣಿಯನ್ನು ಕುರಿತು ‘‘ಆಹಾರ ಸೇವಿಸಲು ಅಸಾಧ್ಯ, ಏನಾದರೂ ಹೊಟ್ಟೆಗೆ ಆಹಾರ, ಊಟ ಸೇರುವಂತೆ ಮಾಡು’’ ಎಂದು ಕೇಳಿದೆ. ಆಕೆ ನಿಮ್ಮನ್ನೆಲ್ಲ ತೋರಿಸಿ ‘‘ಏಕೆ? ಈ ಎಲ್ಲ ವದನದಿಂದ ನೀನು ಆಹಾರ ಸೇವಿಸುತ್ತಿಲ್ಲವೇ?’’ ಎಂದಾಗ ನನಗೆ ಅವಮಾನವಾಯಿತು ಎಂದು ನಿರುತ್ತರ ಸ್ಥಿತಿಯಲ್ಲಿ ಭವತಾರಿಣಿಯ ಕಂಡೆ’ ಎಂದರು. ಈ ಅಂಶವನ್ನು ನಾವು ಪರಿಷ್ಕರಿಸಿ ನೋಡಿದಾಗ – ಸರ್ವಸಂಗ ಪರಿತ್ಯಾಗಿಯ ಜ್ಞಾನ ಅದ್ಭುತ. ವ್ಯಷ್ಟಿಯಲ್ಲಿ ಸಮಷ್ಟಿಯನ್ನು ಕಾಣುವ ವೈಶಾಲ್ಯತೆ ಆ ಮಹಾತ್ಮನಲ್ಲಿರುತ್ತದೆ. ಇದು ಪರಮಹಂಸರ ಮತ್ತು ನರೇಂದ್ರನಾಥನ ಸಂಭಾಷಣೆ. ಇದು ಅಪೂರ್ವ ಸಾಧನೆಯಿಂದ ಸರ್ವಸಂಗ ಪರಿತ್ಯಾಗಿ ಪಡೆದ ಶಕ್ತಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts