ಬೆಂಗಳೂರು: ಸಿಂಗಸಂದ್ರದ ಎಸ್‌ಆರ್‌ಎಸ್ ಟ್ರಾವೆಲ್ಸ್ನ ವರ್ಕ್‌ಶಾಪ್‌ನ ವಾಹನ ನಿಲುಗಡೆ ಶೆಡ್‌ನಲ್ಲಿ ಜೋಡಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಉತ್ತರಹಳ್ಳಿ ನಿವಾಸಿ ಸುರೇಶ ಅಲಿಯಾಸ್ ಶಶಿ(೩೫) ಬಂಧಿತ.
ಆರೋಪಿಯು ರಾಮನಗರದ ನಾಗೇಶ್ (೫೨) ಹಾಗೂ ಮಂಡ್ಯದ ಮಂಜೇಗೌಡ (೪೪) ಅವರನ್ನು ನ.೮ ರಂದು ಕೊಲೆಗೈದು ಪರಾಗಿಯಾಗಿದ್ದ. ಈ ಸಂಬಂಧ ನಾಗೇಶ್ ಅವರ ಪುತ್ರಿ ಸಹನ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ನಾಗೇಶ್, ಮಂಜುನಾಥ್ ಹಾಗೂ ಆರೋಪಿ ಸುರೇಶ್ ಸಿಂಗಸಂದ್ರದ ಕೆಐಎಡಿಬಿಯ ಕೈಗಾರಿಕಾ ಪ್ರದೇಶದಲ್ಲಿರುವ ಎಸ್‌ಆರ್‌ಎಸ್ ಟ್ರಾವೆಲ್ಸ್ನ ವರ್ಕ್ ಶಾಪ್‌ನಲ್ಲಿ ಕ್ಲಿನರ್ ಕೆಲಸ ಮಾಡಿಕೊಂಡು ಅಲ್ಲಿನ ಶೆಡ್‌ಗಳಲ್ಲಿ ವಾಸಿಸುತ್ತಿದ್ದರು. ಆರೋಪಿ ಸುರೇಶನನ್ನು ಯಾವಾಗಲೂ ನಿಂದಿಸುತ್ತಿದ್ದ ನಾಗೇಶ್ ಮತ್ತು ಮಂಜುನಾಥ್ ಕುಡಿದ ಮತ್ತಿನಲ್ಲಿ ನೀನೊಬ್ಬ ಕಳ್ಳ, ನಿನ್ನ ಮೇಲೆ ಕೇಸುಗಳಿವೆ ಎಂದು ಹೀಯಾಳಿಸುತ್ತಿದ್ದರು. ಇದೇ ರೀತಿ ಕಳೆದ ನ.೮ರಂದು ರಾತ್ರಿಯೂ ಸಹ ಮೂವರು ಮದ್ಯಪಾನ ಮಾಡಿದ್ದರು. ಮದ್ಯದ ಅಮಲಿನಲ್ಲಿ ಇಬ್ಬರು ಸುರೇಶ್‌ನನ್ನು ಮತ್ತೆ ನಿಂದಿಸಿದ್ದರು. ಈ ವೇಳೆ ಜಗಳವಾಗಿದ್ದು, ಇದರಿಂದ ರೊಚ್ಚಿಗೆದ್ದ ಆತ ಕಬ್ಬಿಣದ ರಾಡ್‌ನಿಂದ ಇಬ್ಬರ ತಲೆಗೆ ಹೊಡೆದು ಕೊಲೆಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಹತ್ಯೆಯ ಹಿಂದಿನ ಕಾರಣ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೩೫ ಕೀ.ಮಿ ನಡೆದುಕೊಂಡು ಹೋಗಿದ್ದ:
ಆರೋಪಿಯು ಡಬಲ್ ಮರ್ಡರ್ ಮಾಡಿದ ಬಳಿಕ ಸುಮಾರು ೩೫ ಕೀ.ಮಿ ನಡೆದುಕೊಂಡು ಹೋಗಿದ್ದ. ವಿಶೇಷ ತಂಡವನ್ನು ರಚಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಕೆ.ಆರ್.ಮಾರುಕಟ್ಟೆ ಬಳಿ ಬಂಧಿಸಿದ್ದಾರೆ.
ನಟರೊಬ್ಬರು ಬಿಡಿಸಿದ್ದ ಆರೋಪಿ:
ಜೋಡಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸುರೇಶ್ ಈ ಹಿಂದೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೧೦ ರಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದಲ್ಲಿ ಜೈಲು ಸೇರಿದ್ದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ. ನಂತರ ೨೦೧೨ ರಲ್ಲಿ ಕೊಲೆ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ೧೨ ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದು, ೨೦೨೪ ರ ಜನವರಿಯಲ್ಲಿ ಬಿಡುಗಡೆಯಾಗಿದ್ದ. ಈತನಿಗೆ ಶ್ಯೂರಿಟಿ ಹಣ ನೀಡಿ ಹೊರಕ್ಕೆ ಕರೆತರಲು ಯಾರೂ ಇರಲಿಲ್ಲ. ಈ ಸಮಯದಲ್ಲಿ ಕೆಲ ಅಪರಾಧಿಗಳಿಗೆ ತಲಾ ಮೂರು ಲಕ್ಷದಂತೆ ಸಿನಿಮಾ ನಟರೊಬ್ಬರು ಶ್ಯೂರಿಟಿ ಹಣ ಕೊಟ್ಟಿದ್ದರು. ಈ ವೇಳೆ ಸುರೇಶ್‌ಗೂ ಕೂಡ ಶ್ಯೂರಿಟಿ ಹಣವನ್ನು ನಟ ನೀಡಿದ್ದರಿಂದ ಆತ ಜೈಲಿನಿಂದ ಹೊರಬಂದಿದ್ದ. ಜೈಲಿಂದ ಬಿಡುಗಡೆಗೊಂಡ ಬಳಿಕ ಸುರೇಶ್ ಬದಲಾಗಿ ಮಾರ್ಕೆಟ್‌ನಲ್ಲಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ತನ್ನ ಸಂಬಂಧಿ ಮೂಲಕ ಕ್ಲೀನರ್ ಕೆಲಸ ಪಡೆದುಕೊಂಡು ಕೆಲಸ ಮಾಡುತ್ತಿದ್ದ ಇದ್ದೀಗ ಕೋಪದ ಕೈಗೆ ಬುದ್ದಿಕೊಟ್ಟು ಜೋಡಿ ಕೊಲೆ ಮಾಡಿ ಮತ್ತೆ ಜೈಲು ಸೇರುವಂತಾಗಿದೆ.