ಕರಾವಳಿ ಉತ್ಸವ ಉದ್ಘಾಟನೆ ಮಾತ್ರ

ಪಿ.ಬಿ.ಹರೀಶ್ ರೈ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾವಳಿ ಉತ್ಸವ ಉದ್ಘಾಟನೆಗೊಂಡು ನಾಲ್ಕು ದಿನ ಕಳೆದಿದೆ. ಬೃಹತ್ ವಸ್ತುಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಲಾಗಿದೆ. ಆದರೆ ಕರಾವಳಿ ಉತ್ಸವ ಮೈದಾನದಲ್ಲಿ ವಸ್ತುಪ್ರದರ್ಶನ ಇನ್ನೂ ಆರಂಭವಾಗಿಲ್ಲ. ಎಲ್ಲ ಸ್ಟಾಲ್‌ಗಳು ಖಾಲಿ.

ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಾಯಂಕಾಲ 2 ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಶನಿವಾರ ಮತ್ತು ಭಾನುವಾರ ಸಾಯಂಕಾಲ ಕರಾವಳಿ ಉತ್ಸವ ಮೈದಾನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಸ್ಟಾಲ್‌ಗಳಲ್ಲಿ ಖರೀದಿ ಮತ್ತು ಮನರಂಜನಾ ಆಟಗಳ ವೀಕ್ಷಣೆಗೆಂದು ಬಂದವರು ನಿರಾಸೆಯಿಂದ ತೆರಳಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನೀರಸ ಪ್ರತಿಕ್ರಿಯೆ.

30 ಲಕ್ಷ ರೂ.ಗೆ ಟೆಂಡರ್: ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನ ನಡೆಸುವ ಬಗ್ಗೆ ಏಕಮಾತ್ರ ಟೆಂಡರ್ ಸಲ್ಲಿಕೆಯಾಗಿತ್ತು. ಕೆ.ಮುಷ್ತಾಕ್ ಅಹಮದ್ ಎಂಬುವರು 30 ಲಕ್ಷ ರೂ.ಗೆ ಟೆಂಡರ್ ವಹಿಸಿದ್ದರು. ಬಿಡ್ ಮೊತ್ತದ ಶೇ.50ರಷ್ಟು ಡಿ.5ರೊಳಗೆ ಹಾಗೂ ಉಳಿದ ಮೊತ್ತ ಡಿ.20ರೊಳಗೆ ಪಾವತಿಸಬೇಕು. ಡಿ.22ರಿಂದ ಫೆ.4ವರೆಗೆ ವಸ್ತುಪ್ರದರ್ಶನದ ಅವಧಿ ಎಂದು ಷರತ್ತುಗಳಲ್ಲಿ ತಿಳಿಸಲಾಗಿದೆ.

ವಿಳಂಬ ನೀತಿ: ವಸ್ತುಪ್ರದರ್ಶನ ಯಾಕೆ ಆರಂಭವಾಗಿಲ್ಲ ಎಂದು ಪ್ರಶ್ನಿಸಿದರೆ ಯಾರಲ್ಲೂ ಸಮರ್ಪಕ ಉತ್ತರವಿಲ್ಲ. ಅದ್ದೂರಿ ಮೆರವಣಿಗೆ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಕರಾವಳಿ ಉತ್ಸವ ಉದ್ಘಾಟನೆಗೊಂಡಿದೆ. ಪ್ರತಿವರ್ಷ ಉದ್ಘಾಟನೆ ಬಳಿಕ ಜನಪ್ರತಿನಿಧಿಗಳು, ಗಣ್ಯರು ಸ್ಟಾಲ್‌ಗಳಿಗೆ ಭೇಟಿ ನೀಡಿ, ಸರ್ಕಾರದ ಮಳಿಗೆಗಳನ್ನು ಉದ್ಘಾಟಿಸುವ ಕ್ರಮವಿತ್ತು. ಈ ಬಾರಿ ವಾರ್ತಾ ಇಲಾಖೆಯ ಉದ್ಘಾಟನೆ ವೇದಿಕೆಯಲ್ಲೇ ನಡೆದಿದೆ. ಭೇಟಿ ನೀಡಲು ಸ್ಟಾಲ್‌ಗಳೇ ಇರಲಿಲ್ಲ. ವಸ್ತುಪ್ರದರ್ಶನದ ಬಗ್ಗೆ ಸಾಕಷ್ಟು ಮುಂಚಿತವಾಗಿ ಟೆಂಡರ್ ಕರೆದು ಕಾರ್ಯಾದೇಶ ನೀಡದಿರುವುದು ವಿಳಂಬಕ್ಕೆ ಕಾರಣ ಎನ್ನಲಾಗಿದೆ.

ಗುತ್ತಿಗೆದಾರರ ವೈಯಕ್ತಿಕ ಸಮಸ್ಯೆಯಿಂದ ವಸ್ತುಪ್ರದರ್ಶನ ಆರಂಭ ವಿಳಂಬವಾಗಿದೆ. ಈ ದಿನದಿಂದಲೇ ವಸ್ತು ಪ್ರದರ್ಶನ ಆರಂಭಿಸುವಂತೆ ಸೂಚಿಸಲಾಗಿದೆ.
– ಕುಮಾರ್, ಅಪರ ಜಿಲ್ಲಾಧಿಕಾರಿ

ಗುತ್ತಿಗೆದಾರರು ಹಣ ಪೂರ್ತಿ ಪಾವತಿಸಿದ್ದಾರೆ. ಅವರ ಕುಟುಂಬದ ಸದಸ್ಯನಿಗೆ ಅಪಘಾತವಾದ ಕಾರಣ ಕೊಂಚ ವಿಳಂಬವಾಗಿದೆ. ಶೀಘ್ರ ಸ್ಟಾಲ್‌ಗಳು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
– ಮಹಮ್ಮದ್ ನಜೀರ್ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ