Friday, 16th November 2018  

Vijayavani

Breaking News

39 ಭಾರತೀಯರ ಹತ್ಯೆ ದೃಢ

Wednesday, 21.03.2018, 3:04 AM       No Comments

ನವದೆಹಲಿ: ಇರಾಕ್​ನ ಮಸೂಲ್​ನಲ್ಲಿ ಒತ್ತೆಯಾಳುಗಳಾಗಿದ್ದ ಭಾರತೀಯ ಮೂಲದ 39 ಕಾರ್ವಿುಕರನ್ನು ಹತ್ಯೆಗೈದಿರುವ ಐಸಿಸ್ ಉಗ್ರರು, ಬದೋಷ್ ಎಂಬ ಗ್ರಾಮದಲ್ಲಿ ಅವರ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಇವರನ್ನು ಯಾವಾಗ ಹತ್ಯೆ ಮಾಡಲಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಸಂಸತ್​ಗೆ ತಿಳಿಸಿದ್ದಾರೆ.

ಹತ್ಯೆಯಾದವರಲ್ಲಿ ಪಂಜಾಬ್​ನ 27, ಬಿಹಾರದ 6, ಹಿಮಾಚಲ ಪ್ರದೇಶದ 4 ಮತ್ತು ಪಶ್ಚಿಮ ಬಂಗಾಳದ ಇಬ್ಬರು ಸೇರಿದ್ದಾರೆ. ಡಿಎನ್​ಎ ಪರೀಕ್ಷೆಯಿಂದ ಇದು ಖಚಿತಪಟ್ಟಿದೆ. ಮೃತಪಟ್ಟಿರುವ 38 ಜನರ ಡಿಎನ್​ಎ ಶೇ.100 ಹೊಂದಾಣಿಕೆಯಾಗಿದ್ದರೆ, ಒಬ್ಬರ ಡಿಎನ್​ಎ ಶೇ.70 ಹೊಂದಾಣಿಕೆಯಾಗಿದೆ. ಭಾರತೀಯ ಕಾರ್ವಿುಕರು ಮೃತಪಟ್ಟಿರುವ ಬಗ್ಗೆ ಖಚಿತ ಮಾಹಿತಿ ಸಿಗದ ಹೊರತು, ಅವರು ಸತ್ತಿರುವುದಾಗಿ ಹೇಳುವ ಪಾಪ ಕೆಲಸ ಮಾಡುವುದಿಲ್ಲ ಎಂದು ಹಿಂದೆ ಹೇಳಿದ್ದೆ. ಈಗ ಸೂಕ್ತ ಸಾಕ್ಷ್ಯಾಧಾರ ಸಿಕ್ಕಿರುವ ಹಿನ್ನೆಲೆಯಲ್ಲಿ ಅತ್ಯಂತ ದುಃಖದಿಂದ ಮತ್ತು ಭಾರವಾದ ಹೃದಯದಿಂದ ಸದನಕ್ಕೆ ಈ ವಿಷಯ ತಿಳಿಸುತ್ತಿದ್ದೇನೆ. ಮೃತರ ಅಸ್ಥಿಗಳನ್ನು ಕುಟುಂಬವರ್ಗದವರಿಗೆ ತಲುಪಿಸಿದ ಬಳಿಕ, ನನಗೆ ಸಮಾಧಾನವಾಗುತ್ತದೆ. ಇರಾಕ್​ನಿಂದ ಮೃತರ ಅಸ್ಥಿಗಳನ್ನು ವಿಶೇಷ ವಿಮಾನದಲ್ಲಿ ತರಲು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್ ಅಲ್ಲಿಗೆ ತೆರಳುತ್ತಾರೆ ಎಂದು ತಿಳಿಸಿದರು.

ರಾಜ್ಯಸಭೆಯ ಕಲಾಪ: ಈ ಸಂದರ್ಭದಲ್ಲಿ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸುವ ಬದಲು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದರಿಂದ ಸಿಟ್ಟಾದ ರಾಜ್ಯಸಭೆಯ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಪ್ರತಿಪಕ್ಷಗಳ ಅಮಾನವೀಯ ವರ್ತನೆೆಗೆ ವಿಷಾದ ವ್ಯಕ್ತಪಡಿಸಿದ್ದಲ್ಲದೆ, ‘ಘೋಷಣೆ ಕೂಗುವುದನ್ನು ನಿಲ್ಲಿಸದಿದ್ದರೆ, ಸದನದಿಂದ ಹೊರಹೋಗುವೆ’ ಎಂದು ಬೆದರಿಸಿದರು.ಇದಕ್ಕೂ ಮಣಿಯದ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದಂತೆ, ಸಭಾಧ್ಯಕ್ಷರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಲೋಕಸಭೆಯ ಕಲಾಪ: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಎಐಎಡಿಎಂಕೆ ಮತ್ತು ಟಿಡಿಪಿ ಸದಸ್ಯರು ಸಭಾಧ್ಯಕ್ಷರ ಪೀಠದೆದುರು ಜಮಾಯಿಸಿ ಪ್ರತಿಭಟಿಸಲಾರಂಭಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರಾದರೂ, ಗದ್ದಲ ಕಡಿಮೆಯಾಗಲಿಲ್ಲ. ಈ ಹಂತದಲ್ಲಿ ಸಿಟ್ಟೆಗೆದ್ದ ಸ್ಪೀಕರ್ ಸುಮಿತ್ರಾ ಮಹಾಜನ್, ಶವಗಳ ಮೇಲೆ ರಾಜಕೀಯ ಮಾಡುವಷ್ಟು ತುಚ್ಛ ಮನೋಭಾವ ತೋರಬೇಡಿ. ಇದರಿಂದ ನನಗೆ ತುಂಬಾ ನೋವಾಗುತ್ತಿದೆ. ಸದನ ಇಷ್ಟು ಸಂವೇದನೆರಹಿತವಾಗಿ ವರ್ತಿಸಿದ್ದನ್ನು ಇದುವರೆಗೂ ಕಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸದನದಲ್ಲಿ ಗದ್ದಲ ಮತ್ತು ಅಶಿಸ್ತಿನ ವಾತಾವರಣ ಇರುವ ಕಾರಣ, ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಯನ್ನು ಚರ್ಚೆಗೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ, ಸದನವನ್ನು ಬುಧವಾರಕ್ಕೆ ಮುಂದೂಡಿದರು. -ಏಜೆನ್ಸೀಸ್

ಶವಗಳ ಮೇಲೆ ರಾಜಕೀಯ ಮಾಡಬಹುದೇ?

ಇರಾಕ್​ನಲ್ಲಿ ಐಸಿಸ್ ಉಗ್ರರು 39 ಭಾರತೀಯ ಕಾರ್ವಿುಕರನ್ನು ಹತ್ಯೆಗೈದ ವಿಚಾರವನ್ನು ಸದನಕ್ಕೆ ತಿಳಿಸಲು ಮುಂದಾದಾಗ, ವಿಪಕ್ಷಗಳು ಶವಗಳ ಮೇಲೆ ತುಚ್ಛರಾಜಕೀಯ ಮಾಡುವಷ್ಟು ನೀಚತನ ತೋರಬಹುದೇ? ರಾಜ್ಯಸಭೆಯಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದಾಗ, ಎಲ್ಲರೂ ಸಮಾಧಾನವಾಗಿ ಕೇಳಿಸಿಕೊಂಡರು. ಪ್ರತಿಯೊಬ್ಬರೂ ಮೌನಾಚರಿಸಿ, ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.ಲೋಕಸಭೆ ಕಲಾಪದಲ್ಲೂ ಇದು ಪುನರಾವರ್ತನೆಯಾಗುವ ನಿರೀಕ್ಷೆಯಿತ್ತು. ಆದರೆ ಕಾಂಗ್ರೆಸ್​ನ ಜ್ಯೋತಿರಾದಿತ್ಯ ಸಿಂಧಿಯಾ ಸೇರಿ ಎಲ್ಲ ಸದಸ್ಯರು ಗದ್ದಲ ಎಬ್ಬಿಸಿದ್ದು ಬೇಸರ ತಂದಿತು ಎಂದು ಸುಷ್ಮಾ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಹತ್ಯೆಯಾಗಿದ್ದು ಹೇಗೆ…?

ಇರಾಕ್​ನ ಮಸೂಲ್​ನಲ್ಲಿದ್ದ ಜವಳಿ ಕಾರ್ಖಾನೆಯಲ್ಲಿ ಭಾರತೀಯ ಮೂಲದ 40 ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಬಾಂಗ್ಲಾದೇಶ ಮೂಲದ ಕಾರ್ವಿುಕರೂ ಅಲ್ಲಿದ್ದರು. 2014ರಲ್ಲಿ ಐಸಿಸ್ ಉಗ್ರರು ಇರಾಕ್​ನ 2ನೇ ಅತಿದೊಡ್ಡ ನಗರ ಮಸೂಲ್ ಅನ್ನು ಆಕ್ರಮಿಸಿಕೊಂಡಿದ್ದರು. ಆ ಸಂದರ್ಭದಲ್ಲೇ ಇವರೆಲ್ಲ ಒತ್ತೆಯಾಳುಗಳಾಗಿದ್ದರು. ಮೊದಲಿಗೆ ಮಸೂಲ್​ನ ಜವಳಿ ಕಾರ್ಖಾನೆಯಲ್ಲಿ ಇರಿಸಿದ್ದರು. ಬಳಿಕ, ಬಾಂಗ್ಲಾ ಕಾರ್ವಿುಕರನ್ನು ಪ್ರತ್ಯೇಕಿಸಿ, ಎರ್ಬಿಲ್​ಗೆ ತೆರಳುವಂತೆ ಸೂಚಿಸಿದ್ದರು. ಈ ಪೈಕಿ ಭಾರತ ಮೂಲದ ಕಾರ್ವಿುಕ ಗುರ್ದಾಸ್​ಪುರದ ಹರ್ಜಿತ್ ಮಸೀಹ್, ಅಲಿ ಎಂಬ ಹೆಸರಿನಲ್ಲಿ ಬಾಂಗ್ಲಾ ಕಾರ್ವಿುಕರ ಗುಂಪಿನಲ್ಲೇ ಕೂಡಿಕೊಂಡು, ಸುರಕ್ಷಿತವಾಗಿ ಪಾರಾಗಿದ್ದ.

ಪತ್ತೆ ಹಚ್ಚಿದ್ದು ಹೇಗೆ.. ?

ಐಸಿಸ್ ಉಗ್ರರಿಂದ ಮಸೂಲ್ ಅನ್ನು ಮರುವಶಕ್ಕೆ ಪಡೆದ ಬಳಿಕ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ. ಸಿಂಗ್, ಕಾಣೆಯಾಗಿದ್ದ ಭಾರತೀಯ ಮೂಲದ ಕಾರ್ವಿುಕರ ಕುರಿತು ಮಾಹಿತಿ ಸಂಗ್ರಹಿಸಲು ಇರಾಕ್​ಗೆ ತೆರಳಿದ್ದರು. ಅಲ್ಲಿದ್ದ ಭಾರತದ ರಾಯಭಾರಿಗ ಳೊಂದಿಗೆ ಹುಡುಕಾಡಿದಾಗ, ಬದೋಷ್​ನಲ್ಲಿ ಸಾಮೂಹಿಕ ಸಮಾಧಿಯೊಂದು ಪತ್ತೆಯಾಗಿತ್ತು. ಆಳದವರೆಗೆ ಸಾಗಬಹುದಾದ ರಡಾರ್ ತರಂಗಾಂತರವನ್ನು ಬಳಸಿ, ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಿರುವುದು ಖಚಿತವಾದ ಬಳಿಕ ಸಮಾಧಿಯನ್ನು ಅಗೆದು ಅಸ್ಥಿಪಂಜರಗಳನ್ನು ಹೊರತೆಗೆಯಲಾಗಿತ್ತು. ಬಾಗ್ದಾದ್​ನ ಮಾರ್ಟಿಯರ್ಸ್ ಫೌಂಡೇಷನ್ ಸಹಾಯದಿಂದ ಡಿಎನ್​ಎ ಪರೀಕ್ಷೆ ಮಾಡಿ, ಅವುಗಳ ಗುರುತು ಪತ್ತೆ ಮಾಡಲಾಯಿತು.

Leave a Reply

Your email address will not be published. Required fields are marked *

Back To Top