ನವದೆಹಲಿ: ಐಪಿಎಲ್ 18ರ ಆವೃತ್ತಿಗೆ ಪೂರ್ವಭಾವಿಯಾಗಿ ನಡೆಯಲಿರುವ ಬಹುನಿರೀಕ್ಷಿತ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಸೌದಿ ಅರೇಬಿಯಾದ ರಿಯಾಧ್ ಆತಿಥ್ಯವಹಿಸಲಿದೆ. ನವೆಂಬರ್ ಕೊನೇ ವಾರ ಅಂದರೆ ನ.24 ಮತ್ತು 25 ರಂದು ಆಟಗಾರರ ಹರಾಜು ನಡೆಯವುದನ್ನು ಬಿಸಿಸಿಐ ಬಹುತೇಕ ಅಂತಿಮಗೊಳಿಸಿದೆ. ಸತತ ಎರಡನೇ ಬಾರಿಗೆ ಹರಾಜು ಪ್ರಕ್ರಿಯೆಯನ್ನು ವಿದೇಶದಲ್ಲಿ ಆಯೋಜಿಸಲು ನಿರ್ಧರಿಸಿರುವ ಬಿಸಿಸಿಐ, ಕಳೆದ ವರ್ಷದ ಮಿನಿ ಹರಾಜು ಪ್ರಕ್ರಿಯೆಯನ್ನು ದುಬೈನಲ್ಲಿ ನಡೆಸಿತ್ತು.
ಎಲ್ಲ 10 ್ರಾಂಚೈಸಿಗಳಿಗೆ ಹರಾಜು ತಾಣದ ಮಾಹಿತಿ ನೀಡಿರುವ ಬಿಸಿಸಿಐ, ಹರಾಜು ಪ್ರಕ್ರಿಯೆಗೆ ಅಗತ್ಯವಿರುವ ಸೌಲಭ್ಯದ ಜತೆಗೆ ಸಿದ್ಧತೆ ಆರಂಭಿಸಲು ಒಂದು ತಂಡವನ್ನು ನಿಯೋಜಿಸಿದೆ ಎಂದು ವರದಿಯಾಗಿದೆ. ಈ ಬಾರಿಯ ಹರಾಜು ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಅರ್ಷದೀಪ್ ಸಿಂಗ್ ಹೆಸರುಗಳಿವೆ. ಜತೆಗೆ ಈ ಆಟಗಾರರ ಸೇರ್ಪಡೆಗೆ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆ ಹರಡಿದೆ. ರಿಟೇನ್ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಎಲ್ಲ 10ಫ್ರಾಂಚೈಸಿಗಳ ಬಳಿ ಒಟ್ಟು ₹641.5 ಕೋಟಿ ಪರ್ಸ್ ಉಳಿದುಕೊಂಡಿದೆ. ಒಟ್ಟು 204 ಸ್ಥಾನಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದರಲ್ಲಿ 70 ವಿದೇಶಿ ಆಟಗಾರರು ಸ್ಥಾನ ಪಡೆಯಲಿದ್ದಾರೆ. ಸದ್ಯ ₹558.5 ಕೋಟಿ ವೆಚ್ಚದಲ್ಲಿ 46 ಆಟಗಾರರು ರಿಟೇನ್ ಆಗಿ ಹಾಲಿ ತಂಡದಲ್ಲಿ ಉಳಿದುಕೊಂಡಿದ್ದು, ಪಂಜಾಬ್ ಕಿಂಗ್ಸ್ ತಂಡ ಗರಿಷ್ಠ ₹110.5 ಕೋಟಿಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ.