ಒಡೆಯನ ಪ್ರಾಣ ರಕ್ಷಣೆಗೆ ಜೀವತೆತ್ತ ‘ವಿಕ್ಕಿ’ವಿಜಯವಾಣಿ ವಿಶೇಷ ಹಾಸನ
ತುತ್ತು ಅನ್ನ ಹಾಕಿ ಸಾಕಿದ್ದ, ಕಾಲೇಜಿನಿಂದ ಬಂದ ತಕ್ಷಣ ಮುದ್ದು ಮಾಡುತ್ತಿದ್ದ, ತಾನೆಂದರೆ ಆಗಸದಷ್ಟು ಪ್ರೀತಿ ತೋರುತ್ತಿದ್ದ ಒಡೆಯನ ಪ್ರಾಣ ರಕ್ಷಣೆಗಾಗಿ ಪ್ರೀತಿಯ ನಾಯಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.
ತಾಲೂಕಿನ ಮಲ್ಲನಾಯಕನಹಳ್ಳಿ (ಕೋಣನಕೊಪ್ಪಲು) ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಪ್ರೀತಿಯ ‘ವಿಕ್ಕಿ’ ಸಾವಿಗೆ ನೂರಾರು ಜನರು ಕಂಬನಿ ಮಿಡಿದಿದ್ದಾರೆ. ಅಂತ್ಯಸಂಸ್ಕಾರವನ್ನೂ ಸಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. 11ನೇ ದಿನಕ್ಕೆ ತಿಥಿ ಕಾರ್ಯ ಮಾಡಲು ನಿರ್ಧರಿಸಿದ್ದಾರೆ.
ಅದೇ ಗ್ರಾಮದ ಧರಣೇಂದ್ರ ಎಂಬಾತ ವಿಕ್ಕಿಯನ್ನು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. ಆತನ ವಿರುದ್ಧ ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವರ:
ಪ್ರಥಮ ಪಿಯುಸಿ ಓದುತ್ತಿರುವ ಚಂದನ್ ರಜಾ ದಿನವಾದ ಭಾನುವಾರ ಮನೆ ಪಕ್ಕದ ಪಾಳು ಭೂಮಿಯಲ್ಲಿ ಹಸು ಮೇಯಿಸಲು ಹೋಗಿದ್ದಾನೆ. ಆಟವಾಡುತ್ತ ತನ್ನ ಹಸು ಪಕ್ಕದ ಜಮೀನಿಗೆ ಪ್ರವೇಶ ಮಾಡಿರುವುದನ್ನು ಅರಿಯದೆ ಮೈ ಮರೆತಿದ್ದಾನೆ. ಹಸು ಜಮೀನು ಹೊಕ್ಕಿರುವುದನ್ನು ದೂರದಿಂದಲೇ ನೋಡಿದ ಮಾಲೀಕ ಧರಣೇಂದ್ರ, ದೊಣ್ಣೆ ಸಮೇತ ಚಂದನ್ ಕಡೆಗೆ ಬಂದಿದ್ದಾನೆ. ಇನ್ನೇನು ಚಂದನ್ ತಲೆಗೆ ಏಟು ಬಿತ್ತು ಎನ್ನುವಷ್ಟರಲ್ಲಿ ವಿಕ್ಕಿ ಜೋರಾಗಿ ಬೊಗಳಿ ಧರಣೇಂದ್ರನ ಚಿತ್ತ ಬದಲಿಸಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಧರಣೇಂದ್ರ ಸಮೀಪದಲ್ಲಿದ್ದ ಚಂದನ್ ಅವರ ತಾಯಿ ಸುನಂದಾಗೆ ಹೊಡೆಯಲು ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ವಿಕ್ಕಿ ತಕ್ಷಣವೇ ಆತನ ಮೇಲೆ ಹಾರಿದೆ. ನಾಯಿ ತನ್ನೆಡೆಗೆ ಬರುತ್ತಿರುವುದನ್ನು ಅರಿತ ಆತ ಅದೇ ದೊಣ್ಣೆಯನ್ನು ನಾಯಿ ಕಡೆಗೆ ಬೀಸಿದ್ದಾನೆ. ಮುಖಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ನೋವು ತಾಳಲಾರದೆ ವಿಕ್ಕಿ ನರಳಿ ನರಳಿ ಮೃತಪಟ್ಟಿದೆ. ವಿಕ್ಕಿ ಹಾಗೂ ಚಂದನ್ ಅವರ ಕಿರುಚಾಟ ಕೇಳಿ ಸುತ್ತಲಿನ ಜನರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಅಕಸ್ಮಾತ್ ಅಲ್ಲಿ ವಿಕ್ಕಿ ಇಲ್ಲದಿದ್ದರೆ ಆ ಹೊಡೆತ ಸುನಂದಾ ಅಥವಾ ಚಂದನ್‌ಗೆ ಬೀಳುತ್ತಿತ್ತು.
ಅಂತ್ಯ ಸಂಸ್ಕಾರ:
ಪ್ರೀತಿಯ ವಿಕ್ಕಿಯ ಅಂತ್ಯಸಂಸ್ಕಾರವನ್ನು ಚಂದನ್ ಹಾಗೂ ಕುಟುಂಬ ಭಕ್ತಿಭಾವದಿಂದ ನೆರವೇರಿಸಿದೆ. ತಮ್ಮ ಜಮೀನಿನಲ್ಲಿಯೇ ಹೂತು ಹಾಕಿದ್ದು ತಿಥಿ ಕಾರ್ಯ ಮಾಡುವುದಾಗಿ ಹೇಳಿದ್ದಾರೆ. ಚಂದನ್ ಹಾಗೂ ವಿಕ್ಕಿಯ ಬಾಂಧವ್ಯವನ್ನು ಕಣ್ಣಾರೆ ಕಂಡಿದ್ದ ಜನರು ಕಣ್ಣೀರು ಸುರಿಸಿದ್ದಾರೆ. ನಿಯತ್ತಿನ ನಾಯಿಯ ಸಾವಿಗೆ ಕಂಬನಿ ಮಿಡಿದಿದ್ದಾರೆ. ಪಶುವೈದ್ಯಕೀಯ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿದರು.

Leave a Reply

Your email address will not be published. Required fields are marked *