ತೆರೆಯದ ಸರ್ಕಾರಿ ಆಂಗ್ಲ ಶಾಲೆ ಬಾಗಿಲು !

ಮಂಜುನಾಥ ಟಿ.ಭೋವಿ ಮೈಸೂರು
ಶಾಲೆಗಳ ಪುನರಾರಂಭಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದರೆ, ಪ್ರಸಕ್ತ ಸಾಲಿನಿಂದ ಪ್ರಾರಂಭಿಸಲು ಉದ್ದೇಶಿಸಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಸ್ಪಷ್ಟ ಚಿತ್ರಣ ಇನ್ನೂ ಹೊರಬಿದ್ದಿಲ್ಲ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಕೂಡ ಆಮೆಗತಿಯಲ್ಲಿ ಸಾಗಿವೆ. ಇದು ಪಾಲಕರಲ್ಲಿ ಗೊಂದಲ ಮೂಡಿಸಿದೆ.

2019-20ನೇ ಸಾಲಿನ ಶೈಕ್ಷಣಿಕ ವರ್ಷ ಜೂನ್ 1ರಿಂದ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲ್ಲಿ ಖಾಸಗಿ ಶಾಲೆಗಳಲ್ಲಿ ಬಹುತೇಕ ಪ್ರವೇಶ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮೇ 25ರಿಂದ ಶಾಲೆಯನ್ನು ಪುನರ್ ಪ್ರಾರಂಭಿಸಲು ತಯಾರಿ ನಡೆಸಿಕೊಂಡಿವೆ. ಆದರೆ, ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಇನ್ನು 35 ದಿನಗಳು ಬಾಕಿ ಉಳಿದಿದ್ದರೂ ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಯ ದಾಖಲಾತಿ ಸೇರಿದಂತೆ ಯಾವುದೇ ಪ್ರಕ್ರಿಯೆಗಳಿಗೂ ಇನ್ನು ಚಾಲನೆ ದೊರೆತಿಲ್ಲ.

ಬಹಿರಂಗವಾದ ಸಮಗ್ರ ಚಿತ್ರಣ: 2018-19ನೇ ಸಾಲಿನ (ಜುಲೈ) ಆಯವ್ಯಯ ಭಾಷಣದಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ 1 ಸಾವಿರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ತೀರ್ಮಾನ ಪ್ರಕಟಿಸಿದ್ದರು. ಇದಕ್ಕೆ ಕನ್ನಡಪರ ಕಾರ್ಯಕರ್ತರು, ಸಾಹಿತಿಗಳು, ಬುದ್ಧಿಜೀವಿಗಳು ವಿರೋಧಿಸಿದ್ದರು. ಇದಕ್ಕೆ ಪೂರಕವಾಗಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಇದಕ್ಕೆ ಜಗ್ಗದ ಸಿಎಂ, ತಮ್ಮ ನಿರ್ಧಾರಕ್ಕೆ ಬದ್ಧವಾಗಿ ಶಾಲೆಗಳ ಆರಂಭಕ್ಕೆ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ನಿಟ್ಟಿನಲ್ಲಿ ಪೂರ್ವ ತಯಾರಿಗಳು ನಡೆದಿವೆ. ಆದರೆ, ಈ ಕುರಿತು ಸಮಗ್ರ ಹೊರಣ ಮಾತ್ರ ಬಹಿರಂಗವಾಗಿಲ್ಲ.

ಜೂನ್ 1ರಿಂದಲೇ ಶುರು?: ಜಿಲ್ಲೆಗೆ ಒಟ್ಟು 44 ಆಂಗ್ಲ ಮಾಧ್ಯಮ ಶಾಲೆಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸಭೆ ಕ್ಷೇತ್ರಗಳಿಗೆ ಅನುಗುಣವಾಗಿ ಈ ಆಯ್ಕೆ ಮಾಡಲಾಗಿದೆ. ಪ್ರತಿ ಕ್ಷೇತ್ರಕ್ಕೆ ಕನಿಷ್ಠ 4 ಆಂಗ್ಲ ಶಾಲೆಗಳು ಸಿಗಲಿವೆ. ಈಗಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳು(ಕೆಪಿಎಸ್) ಕೂಡ ಆಂಗ್ಲ ಮಾಧ್ಯಮ ಶಾಲೆಗಳ ವ್ಯಾಪ್ತಿಗೆ ಬರಲಿದ್ದು, ಜಿಲ್ಲೆಯಲ್ಲಿ ಹಾಲಿ 7, ಈ ವರ್ಷ ಹೊಸದಾಗಿ ಮಂಜೂರಾಗಿರುವ 5 ಸೇರಿ ಒಟ್ಟು 12 ಕೆಪಿಎಸ್‌ಗಳಿವೆ. ಇವುಗಳನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ 32 ಆಂಗ್ಲ ಮಾಧ್ಯಮ ಶಾಲೆಗಳನ್ನು ಈ ವರ್ಷದಿಂದ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇವುಗಳು ಜೂನ್ 1ರಿಂದ ಕಾರ್ಯಾರಂಭ ಮಾಡಬೇಕಾಗಿದೆ.

ಪ್ರಕ್ರಿಯೆ ಶುರುವಿಗೆ ತಿಂಗಳು ಬೇಕು: ಈ ವಿಷಯವಾಗಿ ಜಿಲ್ಲೆಯಲ್ಲಿ ಸರ್ವೇ ನಡೆಸಿದ್ದು, ಕಟ್ಟಡ, ಮೂಲಸೌಕರ್ಯ ಸೇರಿದಂತೆ ಇನ್ನಿತರ ಮಾನದಂಡ ಪೂರೈಕೆ ಮಾಡುವ ಹಾಲಿ ಸರ್ಕಾರಿ ಶಾಲೆಗಳನ್ನು ಗುರುತಿಸಿದ್ದು, ಇಂತಹ ಸರ್ಕಾರಿ ಶಾಲೆಗಳಲ್ಲಿ ‘ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ತೆರೆಯಬಹುದು’ ಎಂಬ ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಡಿಡಿಪಿಐ ಕಚೇರಿಯಿಂದ ಕಳುಹಿಸಿಕೊಡಲಾಗಿದೆ. ಆದರೆ, ಆ ಕಡೆಯಿಂದ ಇನ್ನು ಯಾವುದೇ ಸೂಚನೆಗಳು ಬಂದಿಲ್ಲ. ಈ ಕುರಿತು ಅಧಿಕೃತ ಆದೇಶವೂ ಹೊರಬಿದ್ದಿಲ್ಲ. ಪ್ರಸ್ತಾವನೆಗೆ ಅನುಮೋದನೆ ಸಿಗುವುದು ಇನ್ನು ಒಂದು ತಿಂಗಳು ಹಿಡಿಯಬಹುದು

ಸಾವಿರ ಶಾಲೆಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ನಂತರ ಪ್ರವೇಶ ಪ್ರಕ್ರಿಯೆ ಸೇರಿದಂತೆ ಎಲ್ಲ ಪ್ರಕ್ರಿಯೆ ಶುರುವಾಗಲಿದೆ. ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಯೊಂದಿಗೆ ಆಂಗ್ಲ ಮಾಧ್ಯಮ ಆರಂಭಿಸಬೇಕಾಗಿದೆ. ಇಂಗ್ಲಿಷ್ ಮತ್ತು ಪರಿಸರ ವಿಜ್ಞಾನ ವಿಷಯವನ್ನು ಬೋಧಿಸಲು ಎನ್‌ಸಿಇಆರ್‌ಟಿ ಪುಸ್ತಕ ಬಳಸಲಾಗುತ್ತದೆ. ಆದರೆ, ಶಿಕ್ಷಕರನ್ನು ಸಜ್ಜುಗೊಳಿಸುವ ಕೆಲಸ ಇನ್ನು ಪೂರ್ಣಪ್ರಮಾಣದಲ್ಲಿ ನಡೆದಿಲ್ಲ. ಈ ಶಾಲೆಗಳಿಗೆ ಶಿಕ್ಷಕರ ನಿಯೋಜನೆಯ ಕೆಲಸವೂ ಆಗಿಲ್ಲ. ಅವರನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡುವುದು ಇನ್ನು ಬಾಕಿ ಇದೆ.

  • ಕ್ರಿಯಾಯೊಜನೆ ವಿವರ: ದಕ್ಷಿಣ ಭಾರತ ಪ್ರಾದೇಶಿಕ ಆಂಗ್ಲಭಾಷಾ ತರಬೇತಿ ಸಂಸ್ಥೆಯು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಬಗ್ಗೆ ವಿಸ್ತೃತ ವರದಿಯನ್ನು ಈಗಾಗಲೇ ನೀಡಿತ್ತು. ಇದನ್ನು ಆಧರಿಸಿ ಕ್ರಿಯಾಯೊಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಇವುಗಳು ಇನ್ನು ಜಿಲ್ಲೆಯಲ್ಲಿ ಕಾರ್ಯಗತವಾಗಿಲ್ಲ. ವರದಿಯಲ್ಲಿನ ಸಾರಾಂಶ ಹೀಗಿದೆ.
  • ಈಗಾಗಲೇ ಇಂಗ್ಲಿಷ್ ಬೋಧನೆಯಲ್ಲಿ ಪರಿಣತಿ ಹೊಂದಿರುವ ಕಾರ್ಯನಿರತ ಶಿಕ್ಷಕರಿಗೆ ಆಯ್ಕೆ ಪರೀಕ್ಷೆ ನಡೆಸಿ ಆಂಗ್ಲ ಮಾಧ್ಯಮ ತರಗತಿಗೆ ನಿಯೋಜಿಸಲು ಸೂಚನೆ
  • ಆಯ್ಕೆಗೊಂಡ ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲಭಾಷಾ ತರಬೇತಿ ಸಂಸ್ಥೆಯ ಮೂಲಕ 15 ದಿನಗಳ ಪ್ರವೇಶ ತರಬೇತಿ ನೀಡಬೇಕು ಮತ್ತು ಪ್ರತಿ ತಿಂಗಳು ಸಂಸ್ಥೆಯೊಂದಿಗೆ ವಿಡಿಯೋ ಸಂವಾದಕ್ಕೆ ವ್ಯವಸ್ಥೆ ಮಾಡಬೇಕೆಂದು ಹೇಳಲಾಗಿದೆ.
  • ಇಂಗ್ಲಿಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಅಗತ್ಯವಾದ ಪಠ್ಯಪುಸ್ತಕಗಳು ಹಾಗೂ ಸ್ಮಾರ್ಟ್ ತರಗತಿಗಳಲ್ಲಿ ಬೋಧಿಸಲು ಅನುಕೂಲವಾಗುವಂತೆ ಧ್ವನಿ ಮತ್ತು ದೃಶ್ಯಗಳನ್ನೊಳಗೊಂಡ ಇ-ಕಂಟೆಂಟ್‌ಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಡಿಎಸ್‌ಆರ್‌ಟಿಇಗೆ (ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ) ನೀಡಲಾಗಿದೆ.
  • ಪ್ರಸ್ತುತ 1ನೇ ತರಗತಿಗೆ ಮಾತ್ರ ಆಂಗ್ಲ ಮಾಧ್ಯಮ ಆರಂಭಿಸಿ, ಮುಂದಿನ ವರ್ಷಗಳಲ್ಲಿ ಮುಂದಿನ ತರಗತಿಗೆ ವಿಸ್ತರಿಸಲು ನಿರ್ಧಾರ
  • ಈಗಾಗಲೇ 6 ಮತ್ತು 7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿರುವ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರತ್ಯೇಕವಾಗಿ ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆ ಆದ್ಯತೆ ನೀಡಲು ಸೂಚನೆಹೆಚ್ಚಿನ ದಾಖಲಾತಿ ಹೊಂದಿರುವ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಆದ್ಯತೆ ನೀಡಲು ನಿರ್ದೇಶನ

ಪಾಲಿಕರು ಗಲಿಬಿಲಿ: ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭದ ಪ್ರಕ್ರಿಯೆಗಳು ಮಂದಗತಿಯಲ್ಲಿ ಸಾಗಿರುವುದು ಪಾಲಕರಲ್ಲಿ ಅಸಮಾಧಾನ ಮೂಡಿಸಿದೆ. ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ ಈಗಾಗಲೇ ದಾಖಲಾತಿ ಪ್ರಕ್ರಿಯೆ ಮುಗಿಯುವ ಹಂತ ಬಂದಿದ್ದು, ಕೆಲ ಸೀಟುಗಳು ಮಾತ್ರ ಬಾಕಿ ಉಳಿದಿವೆ. ಇಲ್ಲಿ 40 ಸಾವಿರದಿಂದ 1.50 ಲಕ್ಷ ರೂ. ವಂತಿಕೆ ಮತ್ತು ಶುಲ್ಕ ಪಾವತಿಸಬೇಕಾಗಿದೆ. ಇದನ್ನು ತುಂಬಲಾಗದ ಪಾಲಕರು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ಎದುರು ನೋಡುತ್ತಿದ್ದಾರೆ. ಆದರೆ, ಇದು ಇನ್ನು ಶುರುವಾಗದೆ ಇರುವುದು ಪಾಲಕರಲ್ಲಿ ಗಲಿಬಿಲಿ ಉಂಟುಮಾಡಿದ್ದು, ಸರ್ಕಾರಿ ಶಾಲೆಗೆ ಸೇರಿಸಬೇಕೆ ಅಥವಾ ಖಾಸಗಿ ಶಾಲೆಗೆ ಸೇರಿಸಬೇಕೆ ಎಂಬ ಗೊಂದಲದಲ್ಲಿ ಮುಳುಗಿಸಿದೆ.

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳನ್ನು ವಿಧಾನಸಭಾ ಕ್ಷೇತ್ರವಾರು ಆಯ್ಕೆ ಮಾಡಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ. ಆ ಕುರಿತು ಇನ್ನು ಅಧಿಕೃತ ಆದೇಶ ಬಂದಿಲ್ಲ. ಇದಕ್ಕಾಗಿ ಒಂದು ತಿಂಗಳು ಹಿಡಿಯುವ ಸಾಧ್ಯತೆಯಿದ್ದು, ಅದು ಬಂದ ಬಳಿಕ ಈ ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದು.
ಪಾಂಡುರಂಗ, ಡಿಡಿಪಿಐ

Leave a Reply

Your email address will not be published. Required fields are marked *