ಜೀವನ ಪುಷ್ಪ ಅರಳುವ ಮೊದಲೇ ಮರಳಿ ಬಾರದ ಲೋಕಕ್ಕೆ ತೆರಳಿದ ಅಸಾಮಾನ್ಯ ಸಾಧಕರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ ಥಾಪರ್ ಅತ್ಯಮೂಲ್ಯ ಕ್ರಾಂತಿ ತ್ರೖೆರತ್ನರು. ಸೂರ್ಯಚಂದ್ರರು ಆಗಸದಲ್ಲಿ ಬೆಳಗುವವರೆಗೂ ತಮ್ಮ ಹೆಸರು ಶಾಶ್ವತವಾಗಿರುವಂತೆ ಬಾಳ್ವೆ ನಡೆಸಿದ ಮಹಾನುಭಾವರ ಬದುಕಿನ ಪ್ರತಿ ಹೆಜ್ಜೆಯೂ ರಾಷ್ಟ್ರದೇವಿಯ ಆರಾಧಕರಿಗೆ ಮಂತ್ರದಷ್ಟೇ ಪವಿತ್ರ.
| ಆದರ್ಶ ಗೋಖಲೆ
ಶತಮಾನಗಳ ಸತತ ರಾಕ್ಷಸೀ ಆಕ್ರಮಣಗಳಿಗೆ ಎದೆಗುಂದದೆ ನೆಲಕಚ್ಚಿ ಹೋರಾಡಿದ ಪೂರ್ವಿಕರ ತ್ಯಾಗ, ಸಂಘರ್ಷ, ಹೌತಾತ್ಮ್ಯಗಳ ಫಲಶ್ರುತಿಯೇ ಹಿಂದುಸ್ಥಾನದ ಸ್ವಾತಂತ್ರ್ಯ. ಅಪಸವ್ಯಗಳನೇಕ ಎದುರ್ಗೆಂಡರೂ ಛಲಬಿಡದ ತ್ರಿವಿಕ್ರಮನಂತೆ ಮುನ್ನುಗ್ಗಿದ ಧೀರರ ನೆತ್ತರಿನ ಅಭಿಷೇಕದಿಂದ ಪ್ರಾಪ್ತವಾದ ನಮ್ಮ ಇಂದಿನ ಸುಂದರ ಬದುಕು, ಅಸಂಖ್ಯ ಅನಾಮಧೇಯ ದೇಶಭಕ್ತರ ಕೊಡುಗೆ. ನಿಗಿನಿಗಿ ತಾರುಣ್ಯದ ಪರ್ವಕಾಲದಲ್ಲಿ ಸರ್ವಸ್ವವನ್ನೂ ದೇಶಹಿತದ ಮಹೋದ್ದೇಶ ಸಾಧನೆಗಾಗಿ ಧಾರೆಯೆರೆದ ಚಿಗುರುಮೀಸೆಯ ಸಮರಭೈರವರ ‘ಸ್ವಯಮೇವ ಮೃಗೇಂದ್ರತಾ’ ಜೀವನ ಅನಂತಕಾಲದವರೆಗೂ ದೇಶಕ್ಕೆ ಸ್ಪೂರ್ತಿ. ಮನೆ, ಕುಟುಂಬ, ವಯೋಸಹಜ ಆಕಾಂಕ್ಷೆಗಳನ್ನೆಲ್ಲ ಮೂಟೆಕಟ್ಟಿ, ದಾಸ್ಯಕಬಂಧಬಾಹುವಿನಿಂದ ಮುಕ್ತಗೊಳ್ಳಲು ಅವಿರತ ಶ್ರಮಿಸಿ ಜೀವನಪುಷ್ಪ ಅರಳುವ ಮುನ್ನವೇ ಮರಳಿ ಬಾರದ ಲೋಕಕ್ಕೆ ತೆರಳಿದ ಅಸಾಮಾನ್ಯ ಸಾಧಕರಾದ ಭಗತ್ ಸಿಂಗ್, ಶಿವರಾಮ ಹರಿ ರಾಜಗುರು ಮತ್ತು ಸುಖದೇವ ಥಾಪರ್ ಅತ್ಯಮೂಲ್ಯ ಕ್ರಾಂತಿ ತ್ರೖೆರತ್ನರು.
‘ದೈನ್ಯತೆಯ, ವಿನಮ್ರ ವಿನಂತಿಯ ಭಾಷೆ ಅರ್ಥವಾಗದ ಬ್ರಿಟಿಷರೊಂದಿಗೆ ನಡೆಸುವ ಶಾಂತಿಸಂಧಾನ ಮಾತುಕತೆಯೇ ಮೂರ್ಖತನದ ಪರಮಾವಧಿ. ರುಧಿರದೋಕುಳಿಯಿಂದ ಗಳಿಸುವ ಸ್ವಾತಂತ್ರ್ಯದ ಮೇಲೆ ಸ್ವಾವಲಂಬಿ ಭಾರತ ಮೂಡಬೇಕೇ ಹೊರತು, ದೈನ್ಯತೆಯ ಅಸಹಾಯಕ ಕೀರಲು ದನಿಯಿಂದಲ್ಲ. ಎಂದೋ ಒಮ್ಮೆ ಮಣ್ಣುಪಾಲಾಗುವ ನನ್ನ ದೇಹದಿಂದಲೂ ಭಾರತವಿಜಯದ ಸುವಾಸನೆ ಹೊರಹೊಮ್ಮುವುದು’ ಎಂಬ ಪ್ರಖರನುಡಿಯಿಂದ ತರುಣರ ಮನದಲ್ಲಿ ಸುಪ್ತವಾಗಿದ್ದ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಿ ಪ್ರೇರೇಪಿಸಿದ ಕ್ರಾಂತಿಕಿಡಿ ಭಗತ್ ಸಿಂಗ್ ವಿಶ್ವದ ಅಸಾಮಾನ್ಯ ಸಾಹಸಿಗಳಲ್ಲೇ ಅಗ್ರಸ್ಥಾನಿ.
ಆರ್ಯಸಮಾಜದ ಮುಂದಾಳು ಅರ್ಜುನ್ ಸಿಂಗರ ಮೊಮ್ಮಗನಾಗಿ, ದೇಶಭಕ್ತ ಕಿಶನ್ ಸಿಂಗ್ – ವಿದ್ಯಾವತಿಯರ ಭಾಗ್ಯವಂತ ಕುಲೋದ್ಧಾರಕನಾಗಿ 1907ರ ಸೆ. 28ರಂದು ಪಂಜಾಬಿನಲ್ಲಿ ಜನಿಸಿದ ಭಗತ್ ಸಿಂಗ್ ಬೆಳೆದದ್ದು ಕ್ರಾಂತಿವೀರರ ಕಥಾಶ್ರವಣದಿಂದ. ಮೀಸೆ ಮೂಡುವ ಮೊದಲೇ ಹುತಾತ್ಮನಾದ ಕರ್ತಾರಸಿಂಗ್ ಸರಾಭಾನ ಬಲಿದಾನ, ಜಲಿಯನ್ವಾಲಾಬಾಗ್ ಹತ್ಯಾಕಾಂಡ ಬಾಲಕ ಭಗತನಲ್ಲಿ ನೋವು, ಸ್ವಾಭಿಮಾನ, ರೋಷ, ಪ್ರತೀಕಾರದ ಭಾವನೆಯನ್ನು ಹುಟ್ಟುಹಾಕಿತು. ಗಾಂಧೀಜಿ ನೇತೃತ್ವದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಭಗತ್, ಚೌರಿಚೌರಾದ ಘಟನೆಯನ್ನು ನೆಪವಾಗಿಟ್ಟು ಹೋರಾಟವನ್ನೇ ಕೈಬಿಟ್ಟ ಅಂಜುಬುರುಕುತನದಿಂದ ಬಹುಬೇಗ ನಿರಾಶನಾಗಿ, ಶಿಕ್ಷಣ ಮುಂದುವರೆಸಲು ತೀರ್ವನಿಸಿದ. ಮದುವೆಯ ಪ್ರಸ್ತಾಪವಾಗುತ್ತಿದ್ದಂತೆ ಕಾನ್ಪುರಕ್ಕೆ ತೆರಳಿ ಗಣೇಶ ಶಂಕರ ವಿದ್ಯಾರ್ಥಿ ನಡೆಸುತ್ತಿದ್ದ ‘ಪ್ರತಾಪ’ ಪತ್ರಿಕಾ ಕಚೇರಿಯಲ್ಲುಳಿದು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗಿಯಾದ.
ಸಹಪಾಠಿಗಳನ್ನು ದೇಶಭಕ್ತಿಯ ಹೆದ್ದೆರೆಗೆ ಆಕರ್ಷಿಸುವ ನಿಟ್ಟಿನಲ್ಲಿ ‘ನೌಜವಾನ್ ಭಾರತ್ ಸಭಾ’ವನ್ನು ಸ್ಥಾಪಿಸಿ, ಕ್ರಾಂತಿಕಾರರ ಭಗವದ್ಗೀತೆ ಸಾವರ್ಕರರ ಸ್ವಾತಂತ್ರ್ಯ ಸಮರದ ಕೃತಿಯನ್ನು ಹಾಗೂ ಧಿಂಗ್ರಾನ ಸಾಹಸಕೃತ್ಯವನ್ನು ಜೊತೆಗಾರರಿಗೆ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದ ಕಲೆ ಬಹುವಿಶಿಷ್ಟ. ರಾಮಪ್ರಸಾದ ಬಿಸ್ಮಿಲ್ ಆರಂಭಿಸಿದ ಹಿಂದುಸ್ಥಾನ ಪ್ರಜಾತಂತ್ರ ಸೇನೆಯ ಪರಿಚಯವಾದ ತರುವಾಯ ಭಗತ್ ಬದುಕು ಮಹಾತಿರುವಿನತ್ತ ಸಾಗಿತ್ತು.
‘ನಾವು ಪೂಜಿಸುವ ದೇವತೆಗಳೆಲ್ಲ ಶಸ್ತ್ರಧಾರಿಗಳೇ ಆಗಿರುವಾಗ ಭಕ್ತರಾದ ನಮ್ಮ ಕೈ ಖಾಲಿಯಿರುವುದು ಭಗವಂತನಿಗೆಸಗುವ ಅಪಚಾರ. ಯುವಕರು ಕೈಯಲ್ಲಿ ಶಸ್ತ್ರ ಹಿಡಿದು ಮುಗಿಬಿದ್ದರೆ ವಿದೇಶೀ ಆಕ್ರಮಣಕಾರರ ಸದ್ದಡಗಿಸಲು ಕ್ಷಣಹೊತ್ತು ಸಾಕು’ ಎಂಬ ಸಿಡಿಲಬ್ಬರದ ಲೇಖನ ಬರೆದು ಗುಡುಗಿದ ಶಿವರಾಮ ಹರಿ ರಾಜಗುರು, ಅದ್ವಿತೀಯ ಗುರಿಕಾರ ಹೋರಾಟಗಾರ.
ಮಹಾರಾಷ್ಟ್ರದ ಸಂಪ್ರದಾಯಸ್ಥ ಹರಿನಾರಾಯಣ ರಾಜಗುರು- ಪಾರ್ವತೀದೇವಿ ದಂಪತಿಗಳಿಗೆ 1908ರ ಆ. 24ರಂದು ಜನಿಸಿದ ಶಿವರಾಮ ರಾಜಗುರು, ಬಾಲ್ಯದಲ್ಲೇ ಪಿತೃವಿಯೋಗಕ್ಕೀಡಾದ ನತದೃಷ್ಟ. ಅಣ್ಣನ ಆರೈಕೆಯಲ್ಲಿ ಬೆಳೆದು ಪ್ರೌಢಶಾಲಾ ಶಿಕ್ಷಣದ ವೇಳೆ ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟ, ತರುಣರ ಜವಾಬ್ದಾರಿ ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಆಸಕ್ತರಾಗಿ ನಾ.ಸು. ಹರ್ಡೀಕರರ ನೇತೃತ್ವದಲ್ಲಿ ನಡೆದ ಸೇವಾದಳದ ವಿವಿಧ ತರಬೇತಿ ಶಿಬಿರಗಳಲ್ಲೂ ಭಾಗವಹಿಸಿ ಸೈ ಎನಿಸಿದ. ಬಾಲಕ ರಾಜಗುರು ಜೀವನದ ಪಥವನ್ನೇ ಬದಲಿಸಿದ ಸೇವಾದಳ, ತ್ಯಾಗ ಹಾಗೂ ಸೇವೆಯ ಆದರ್ಶವನ್ನು ತುಂಬಿತು. ಅಸಹಕಾರ ಚಳವಳಿಯಲ್ಲೂ ಭಾಗವಹಿಸಿ ಸ್ವದೇಶೀ ವಸ್ತುಗಳ ವಿತರಣೆಯಲ್ಲಿ ತೊಡಗಿದ. ಲೋಕಮಾನ್ಯ ತಿಲಕರ ವಿಚಾರಧಾರೆಯಿಂದ ಸ್ಪೂರ್ತಿಗೊಂಡು ತರ್ಕಶಾಸ್ತ್ರ, ಪ್ರಾಚೀನ ಸಂಸ್ಕೃತ ಸಾಹಿತ್ಯ, ಲಘುಸಿದ್ಧಾಂತ ಕೌಮುದೀ ವ್ಯಾಕರಣ ಗ್ರಂಥದಲ್ಲಿ ನಡೆಸಿದ ಅಧ್ಯಯನ ಪ್ರಶಂಸನೀಯ. ಉನ್ನತ ಸಂಸ್ಕೃತ ಶಿಕ್ಷಣಕ್ಕಾಗಿ ಕಾಶಿಗೆ ತೆರಳಿದ ಕಟ್ಟುಮಸ್ತು ಯುವಕ ಎಲ್ಲವೂ ನಿರ್ಣಯಿಸಿದಂತೆಯೇ ಆಗಿದ್ದರೆ ಸಂಸ್ಕೃತ ಪಂಡಿತನಾಗಬೇಕಿತ್ತು. ಆದರೆ ಭಗವಂತನ ನಿರ್ಣಯವೇ ಬೇರೊಂದಿತ್ತು.
‘ಮಾತೃಭೂಮಿಯ ರಕ್ಷಣೆಗಾಗಿ ನೇಣಿನ ಕುಣಿಕೆಗೆ ಕೊರಳೊಡ್ಡುವ ಪರಮಸೌಭಾಗ್ಯ ಒದಗಿದರೆ ಪೂರ್ವಜನ್ಮದ ಪುಣ್ಯದ ಫಲದಿಂದಷ್ಟೇ ರಾಷ್ಟ್ರಸೇವೆಯ ಅವಕಾಶ ಲಭಿಸುವುದೆಂದು ಸ್ವೀಕರಿಸುವೆ’ ಎಂಬ ವೀರವಾಣಿಯಿಂದ ದೇಶಭಕ್ತಿಯ ಕಿಡಿ ಹೊತ್ತಿಸಿದ ಸುಖದೇವ ಥಾಪರ್, ಮರೆಯಬಾರದ ಮಾಣಿಕ್ಯ. ಪಂಜಾಬಿನ ಲೂಧಿಯಾನಾದ ರಾಮಲಾಲ್- ರಾಣಿದೇವಿ ದಂಪತಿಗೆ 1907ರ ಮೇ 15ರಂದು ಜನಿಸಿದ ಸುಖದೇವ್, ಬ್ರಿಟಿಷರ ದೌರ್ಜನ್ಯ, ಭಾರತೀಯರ ಮೇಲೆಸಗುತ್ತಿದ್ದ ಅನ್ಯಾಯವನ್ನು ನೋಡುತ್ತಲೇ ಬೆಳೆದು ಕುನೀತಿಯ ವಿರುದ್ಧ ಹೋರಾಡುವ ದೃಢಸಂಕಲ್ಪವನ್ನೂ ಸ್ವೀಕರಿಸಿದ ಛಲಗಾರ.
ಜಲಿಯನ್ವಾಲಾಬಾಗ್ ಹತ್ಯಾಕಾಂಡದ ತರುವಾಯ ದೇಶದಾದ್ಯಂತ ಮೂಡಿದ ದೇಶಪ್ರೇಮದ ಭಾವವನ್ನು ತನ್ನೂರಲ್ಲೂ ವಿಸ್ತರಿಸಿದ ಸುಖದೇವ್, ಸ್ವದೇಶೀ ವಸ್ತುಗಳ ಪ್ರಚಾರ- ವಿದೇಶೀ ವಸ್ತುಗಳಿಗೆ ವಿರೋಧ ವ್ಯಕ್ತಪಡಿಸಿ ಯುವಕರನ್ನು ರಾಷ್ಟ್ರಕಾರ್ಯದತ್ತ ಸೆಳೆದರು. ವಯಸ್ಸು 14 ತುಂಬದಿದ್ದರೂ ಅಸಹಕಾರ ಆಂದೋಲನದ ನಿಲುಗಡೆ ದೇಶಕ್ಕೆ ಮಾರಕವೆಂಬ ಸಾಮಾನ್ಯ ಪ್ರಜ್ಞೆಯಿದ್ದ ಥಾಪರ್, ಆ ಸಂಕಟದಿಂದ ಹೊರಬರಲಾರದೆ ಅದೆಷ್ಟೋ ದಿನ ಉಪವಾಸ ಕುಳಿತು ಬೆಳಕಿಗಾಗಿ ಕಾಯುತ್ತಿದ್ದರು.
ಒಂದೇ ಗುರಿಸಾಧನೆಗೆ ಮೂರು ದಿಕ್ಕಲ್ಲಿ ಕುಳಿತು ಕಾರ್ಯತಂತ್ರ ರೂಪಿಸುತ್ತಿದ್ದ ಮಹಾನುಭಾವರು ಒಂದಾಗಿ ರಣಾಂಗಣಕ್ಕೆ ಧುಮುಕಿದ್ದು ಚಂದ್ರಶೇಖರ ಆಜಾದ್ ಭೇಟಿಯ ಬಳಿಕ. ಹಿಂದುಸ್ಥಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಮೂಲಕ ತಾವು ಅಂದುಕೊಂಡಿದ್ದ ಕಾರ್ಯವನ್ನು ಪೂರೈಸಲು ತತ್ಪರರಾದ ವಾಮನಾವತಾರಿಗಳು ನೋಡನೋಡುತ್ತಿದ್ದಂತೆ ನಭೋಮಂಡಲ ಭೇದಿಸುವ ಕ್ಷಮತೆ ತೋರಿದರು. ಪಂಜಾಬ್ ಮತ್ತು ಉತ್ತರ ಭಾರತದ ಅನೇಕ ಕಡೆ ಸಂಘಟನೆಯನ್ನು ವಿಸ್ತರಿಸಿ, ಸಶಸ್ತ್ರ ಕ್ರಾಂತಿ – ಬಂದೂಕು ಖರೀದಿ – ಮದ್ದುಗುಂಡುಗಳ ದಾಸ್ತಾನಿನ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿರುವಾಗ ಸದ್ದು ಮಾಡಿದ್ದೇ ಸೈಮನ್ ಕಮಿಷನ್. ದೇಶದಾದ್ಯಂತ ಸೈಮನ್ ಗೋ ಬ್ಯಾಕ್ ಆಂದೋಲನದ ಕಾವು ಮುಗಿಲು ಮುಟ್ಟಿದ್ದ ಕಾಲವದು.
ತಣ್ಣಗಿದ್ದ ಕಾಂಗ್ರೆಸ್ನ ಚಳಿ ಬಿಡಿಸಿದ ಪಂಜಾಬಿನ ಕೇಸರಿ ಲಾಲಾ ಲಜಪತರಾಯರು, ಬ್ರಿಟೀಷರ ವಿರುದ್ಧ ದ್ವಿತೀಯ ಸ್ವಾತಂತ್ರ್ಯ ಸಮರವನ್ನೇ ಘೊಷಿಸಿದರು. ಲಾಲಾಜಿ ಅಮೆರಿಕಾ, ಬ್ರಿಟನ್ ಪ್ರವಾಸಗೈದು ಅನಿವಾಸಿ ಭಾರತೀಯರ ಮನಗೆದ್ದ ಧೀಮಂತ. ನ್ಯೂಯಾರ್ಕ್ ಭಾರತೀಯ ಹೋಮ್ ರೂಲ್ ಲೀಗ್ ಸ್ಥಾಪಿಸಿ ವಿದೇಶಕೇಂದ್ರಿತ ಚಳುವಳಿಗೂ ಪ್ರಯತ್ನಿಸಿ, ಬ್ರಿಟಿಷ್ ಸರಕಾರದ ಅನ್ಯಾಯ, ಅಕ್ರಮಗಳನ್ನು ವಿಶ್ವವೇದಿಕೆಯ ಮೇಲೆ ತೆರೆದಿಟ್ಟ ಗಟ್ಟಿಗ. ಜಲಿಯನ್ವಾಲಾಬಾಗ್ ಹತ್ಯಾಕಾಂಡವನ್ನು ಕಟುವಾಗಿ ಖಂಡಿಸಿದ ಲಾಲಾಜಿ ತದನಂತರ ನಡೆದ ಸಂಘಟಿತ ಕ್ರಾಂತಿಯ ನೇತೃತ್ವ ವಹಿಸಿ ತರುಣ ಮುಂದಾಳುಗಳನ್ನು ಬೆಳೆಸಿದರು. ಅಸಹಕಾರ ಆಂದೋಲನದ ಗೊಂದಲ, ಖಿಲಾಫತ್ ಬೆಂಬಲಗಳಿಂದ ದೇಶದ ದಿಕ್ಕುತಪ್ಪಿಸುತ್ತಿದ್ದ ಓಲೈಕೆ ನೀತಿ ಮುಂದೊಂದು ದಿನ ಭಾರತದ ಕತ್ತು ಹಿಸುಕಲಿದೆಯೆಂಬ ಅವರ ಭವಿಷ್ಯವಾಣಿ ಭಗತ್- ರಾಜಗುರು- ಸುಖದೇವರನ್ನು ಆಕರ್ಷಿಸಿತು.
ಸ್ವದೇಶೀ ಆರ್ಥಿಕ ನೀತಿ, ಉಳಿತಾಯ ಮನೋಭಾವ ವೃದ್ಧಿಯ ಹಿನ್ನೆಲೆಯಲ್ಲಿ ಲಾಲಾಜಿ ಆರಂಭಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಲಕ್ಷ್ಮಿ ಇನ್ಸುರೆನ್ಸ್ ಕಂಪನಿ ಭಾರತದ ಆರ್ಥಿಕ ಸ್ವಾತಂತ್ರ್ಯಕ್ಕಿತ್ತ ಕೊಡುಗೆ ಗಮನಿಸಿದ ಬಳಿಕ ಗೌರವ ನೂರ್ಮಡಿಯಾಯಿತು. ತನ್ನ ತಾಯಿಯ ಹೆಸರಲ್ಲಿ ಕ್ಷಯರೋಗಿಗಳ ಚಿಕಿತ್ಸೆಗಾಗಿ ಆಸ್ಪತ್ರೆ ತೆರೆದು ದೇಸೀ ಉದ್ಯಮಿಗಳಿಗೆ ಸಂದೇಶವಿತ್ತ ಪುಣ್ಯಾತ್ಮ ಲಾಲಾಜಿಗೆ ಗುರುವಿನ ಸ್ಥಾನವಿತ್ತು ಆದರಿಸಿದರು. ಭಾರತೀಯರಿಲ್ಲದ ಸೈಮನ್ ಕಮಿಶನ್ ವಿರುದ್ಧ ನಡೆದ ‘ಸೈಮನ್ ಗೋ ಬ್ಯಾಕ್’ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ವೃದ್ಧತರುಣ ಲಾಲಾಜಿಯವರ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆಯಾಯಿತಲ್ಲದೆ, ದಾಸ್ಯಮುಕ್ತ ಭಾರತದ ಚಿತ್ರಣವನ್ನು ಕಲ್ಪಿಸಿ, ಅದೇ ಕನವರಿಕೆಯಲ್ಲಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿ ಅಸ್ತಂಗತರಾದ ಗುರುವಿನ ಅಂತಿಮ ದಿನಗಳು ಶಿಷ್ಯರ ಮನಕಲಕಿತು.
ಮೌನ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಲಾಲಾಜಿ ಹತ್ಯೆಗೆ ಪ್ರತೀಕಾರವಾಗಿ ಬ್ರಿಟಿಷ್ ಅಧಿಕಾರಿ ಸ್ಯಾಂಡರ್ಸ್ ವಧೆಗೈಯಲು ಯೋಜನೆ ರೂಪಿಸಿದ ಭಗತ್ ಸಿಂಗ್ ಬಳಗ ನಿಶ್ಚಿತ ಗುರಿ ತಲುಪುವಲ್ಲಿ ಸೋಲಲಿಲ್ಲ. ದುರ್ಗಾಭಾಭಿ ಜೊತೆ ಪತಿ ಹಾಗೂ ನೌಕರನ ವೇಷ ಧರಿಸಿ ಪರಾರಿಯಾದ ಕಿಲಾಡಿ ಜೋಡಿ ಕಣ್ಣಲ್ಲಿ ಸಾಧಿಸಿದ ಕೃತಾರ್ಥತೆಯಿತ್ತು, ಆಂಗ್ಲರಿಗೆ ಚಳ್ಳೆಹಣ್ಣು ತಿನ್ನಿಸಿದ ಸಂತಸವಿತ್ತು. ‘ಕೆಂಪಂಗಿಗಳ ಆಕ್ರಮಣವನ್ನು ಸಂಘರ್ಷದಿಂದ ಎದುರಿಸುವುದು ತಪ್ಪೆಂದರೆ ಶ್ರೀಕೃಷ್ಣ ಕಂಸನನ್ನು ವಧಿಸಿದ್ದೂ ತಪ್ಪು’ ಎಂಬ ಚೈತನ್ಯಪೂರ್ಣ ಮಾತಿನಿಂದ ಅರೆಮನಸ್ಸಿನ ಯುವಕರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ ಕ್ರಾಂತಿಬಳಗದ ಎದುರಿದ್ದುದು ಪೂರ್ಣಸ್ವಾತಂತ್ರ್ಯದ ಗುರಿಯೊಂದೇ.
ಪೋಲೀಸರ ಕಣ್ತಪ್ಪಿಸಿ ಓಡಾಡಿ ಭೂಗತರಾಗಿ ಶಸ್ತ್ರಾಸ್ತ್ರ ಸಂಗ್ರಹ, ಬಾಂಬ್ ತಯಾರಿಯಲ್ಲಿ ತೊಡಗಿ ಬಲಿದಾನಕ್ಕೆ ವೇದಿಕೆ ಸಿದ್ಧಗೊಳಿಸುವ ಹೊತ್ತಲ್ಲಿ ಭಗತ್ ಮನದಲ್ಲಿ ಹೊಸ ಯೋಚನೆಯೊಂದು ಉದಯಿಸಿತು. ಕ್ರಾಂತಿಯ ಉದ್ದೇಶ ರಕ್ತಪಾತವಲ್ಲ, ಶಕ್ತಿಶಾಲಿ ರಾಷ್ಟ್ರನಿರ್ವಿುತಿಗೆ ಸೋಪಾನವೆಂಬುದನ್ನು ಯುವಕರಿಗೆ ತಿಳಿಯಪಡಿಸುವ ಉದ್ದೇಶದಿಂದ ಬಟುಕೇಶ್ವರ ದತ್ತರೊಡಗೂಡಿ ಬ್ರಿಟಿಷ್ ಶಾಸನಸಭೆಯ ಮೇಲೆ ಬಾಂಬೆಸೆದು ಸ್ವಯಂ ಬಂಧನಕ್ಕೊಳಗಾದರು. ವಿಚಾರಣೆಯ ವೇಳೆ ನೀಡಿದ ಹೇಳಿಕೆಗಳು ಲಕ್ಷಾಂತರ ಯುವಕರ ಮನದಲ್ಲಿ ಕ್ರಾಂತಿಜ್ವಾಲೆಯುರಿಸಿ ಹೊಸ ಶಕೆಗೆ ನಾಂದಿ ಹಾಡಿತು.
ಇತ್ತ ಭೂಗತರಾಗಿದ್ದ ರಾಜಗುರು ಮತ್ತು ಸುಖದೇವರೂ ಭಾರತದ ಪಾಲಿಗೆ ದುರ್ದೈವವೆಂಬಂತೆ ಬಂಧಿತರಾದರು. ಜೈಲಿನಲ್ಲಿ ನಡೆಯುತ್ತಿದ್ದ ಅನ್ಯಾಯ ಅಕ್ರಮಗಳನ್ನು ಎತ್ತರದ ಧ್ವನಿಯಲ್ಲಿ ಪ್ರಶ್ನಿಸಲು ಹಿಂದೇಟು ಹಾಕದ ಈ ಧೀರರು ಅಧ್ಯಯನಕ್ಕೆ ಪೂರ್ಣವಿರಾಮ ಹಾಕದ ಪುಣ್ಯಶಾಲಿಗಳು. ಅಸಹನೀಯ ಕಷ್ಟಕೋಟಲೆಗಳನ್ನು ಎದುರಿಸಿದರೂ ಕಿಂಚಿತ್ತೂ ಧೃತಿಗೆಡದೆ ಧೈರ್ಯ ಪ್ರದರ್ಶಿಸಿ ಒಬ್ಬನೇ ಒಬ್ಬ ಕ್ರಾಂತಿಕಾರಿಯ ಸುಳಿವನ್ನೂ ಬಿಟ್ಟುಕೊಡದ ಬದ್ಧತೆಗೆ ಬ್ರಿಟಿಷ್ ಸರಕಾರವೂ ನಾಚಿ ತಲೆಬಾಗಿತು. ಸ್ಯಾಂಡರ್ಸ್ ಹತ್ಯೆ, ರಾಜದ್ರೋಹ, ಕೇಂದ್ರ ಶಾಸನ ಸಭೆಯ ಮೇಲೆ ಬಾಂಬ್ ದಾಳಿ, ಸಶಸ್ತ್ರ ಕ್ರಾಂತಿಗೆ ಪ್ರೇರಣೆಯೇ ಮೊದಲಾದ ಬಿರುದುಬಾವಲಿ ಸಹಿತ ವಿಚಾರಣೆಯ ನಾಟಕ ಎದುರಿಸಿ ಗಲ್ಲುಶಿಕ್ಷೆಗೆ ಗುರಿಯಾದ ಯುವಕಣ್ಮಣಿಗಳನ್ನು ಉಳಿಸುವ ಕೊನೆಯ ಅವಕಾಶ ಉಪಯೋಗಿಸದ ಕಾಂಗ್ರೆಸ್ ನಾಯಕತ್ವ, ಭಗತ್ ಜನಪ್ರಿಯತೆಯಿಂದ ಹತಾಶರಾಗಿ ತುಟಿಪಿಟಿಕ್ ಎನ್ನದೆ ಗಾಂಧಿ- ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕಿದ್ದು ದೇಶದ ದೌರ್ಭಾಗ್ಯ.
ಭಗತ್, ರಾಜಗುರು, ಸುಖದೇವರ ಬಿಡುಗಡೆಗಾಗಿ ದೇಶದ ಅಲ್ಲಲ್ಲಿ ಪ್ರತಿಭಟನಾ ಸಭೆಗಳನ್ನು ಏರ್ಪಡಿಸಿದ ಜನಸಾಮಾನ್ಯರ ಸಿಟ್ಟಿಗೆ ಭಯಬಿದ್ದ ಬ್ರಿಟಿಷ್ ಆಡಳಿತ 1931ರ ಮಾ. 23ರಂದು ತುರಾತುರಿಯಲ್ಲೇ ಗಲ್ಲುಶಿಕ್ಷೆಗೆ ಮುಹೂರ್ತ ನಿಶ್ಚಯಿಸಿತು. ನೇಣುಗಂಬವೇರುವ ಕೆಲವೇ ಕ್ಷಣ ಮೊದಲು ಬೀಳ್ಕೊಟ್ಟ ಸಹಕೈದಿಗಳಿಗೆ, ‘ಸ್ವತಂತ್ರ ಭಾರತದ ವಿಕಾಸ ನೋಡುವ ಸೌಭಾಗ್ಯ ನಿಮಗಿದೆ. ನಾವಾದರೋ ಕೆಲವೇ ಗಂಟೆಗಳೊಳಗೆ ನಮ್ಮ ಪ್ರಯಾಣ ಮುಗಿಸುತ್ತಿದ್ದೇವೆ’ ಎಂದು ಭಾವನಾತ್ಮಕವಾಗಿ ಮಾತನಾಡಿ ನೇಣಿನ ಕುಣಿಕೆಗೆ ಮುತ್ತಿಟ್ಟ ಸಿಂಹಗಳ ಧೈರ್ಯಸ್ಥೈರ್ಯ ಆಕಾಶದಷ್ಟು ಎತ್ತರ, ಭೂಮಿಯಷ್ಟು ಆಳ. ನಾಡಿನ ಯಶೋವಂತ ನಾಳೆಗಳಿಗಾಗಿ ಬದುಕನರ್ಪಿಸಿದ ಆ ಮಹಾತ್ಮರ ತ್ಯಾಗ ವ್ಯರ್ಥವಾಗದೆ ನಮ್ಮೊಳಗಿನ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಲಿ. ನಾಯಕತ್ವ, ನಿರ್ಭಯತೆಗೆ ಪರ್ಯಾಯವೆಂಬಂತೆ ಎದೆಯುಬ್ಬಿಸಿ ಹೆಜ್ಜೆಯಿಟ್ಟು ಅಮರರಾದ ರತ್ನತ್ರಯರ ಸ್ಮರಣೆಯೇ ಅದ್ಭುತ, ಅತುಲ್ಯ, ಅಪರೂಪ, ಮನೋಹರ.