ಮಂಡ್ಯ: ಸಮ್ಮೇಳನ ಆರಂಭಕ್ಕೂ ಮುನ್ನ ವಿವಾದ ಅಲೆ ಎಬ್ಬಿಸಿದ್ದ ಆಹಾರ ಪದ್ಧತಿ ವಿಚಾರ, ನುಡಿ ಜಾತ್ರೆಯ ಮೊದಲ ದಿನ ತಣ್ಣಗಾಯಿತು.
ಶುಕ್ರವಾರ ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದು ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಹಳೇ ಮೈಸೂರು ಭಾಗದ ರಾಗಿ ಮುದ್ದೆಯನ್ನು ಕಾಯಿ ಹೋಳಿಗೆಯೊಂದಿಗೆ ಸವಿಯುವ ಮೂಲಕ ಮನಸ್ಸಿನ ಜತೆಗೆ ಬಾಯಿಯನ್ನೂ ತಣಿಸಿಕೊಂಡರು.
ನೂರಕ್ಕೂ ಹೆಚ್ಚು ಕೌಂಟರ್: ಸಮ್ಮೇಳನಕ್ಕೆ ಬಂದ ಸಾಹಿತ್ಯಾಭಿಮಾನಿಗಳಿಗೆ ರುಚಿ ಮತ್ತು ಶುಚಿಯಾದ ಊಟದ ವ್ಯವಸ್ಥೆ ಮಾಡುವ ಸಲುವಾಗಿಯೇ ನೋಂದಾಯಿತ ಮತ್ತು ಸಾಮಾನ್ಯ ಪ್ರತಿನಿಧಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಬೆಳಗ್ಗೆ ತಟ್ಟೆ ಇಡ್ಲಿ-ಸಾಂಬಾರು, ಹಾಗೂ ಉಪ್ಪಿಟ್ಟು-ಚಟ್ನಿ ಸಿದ್ಧಪಡಿಸಲಾಗಿತ್ತು.
ಮಧ್ಯಾಹ್ನದ ಊಟವೂ ಸಹ ಬಾಯಿ ನೀರೂರಿಸುವಂತೆ ಸಿದ್ದಗೊಂಡಿತ್ತು. ಹೋಳಿಗೆ ಜತೆಗೆ, ಖಡಕ್ ರೊಡ್ಡಿ, ಎಣ್ಣೆಗಾಯಿ, ಮುದ್ದೆ, ಮೊಳಕೆ ಕಟ್ಟಿದ ಸಾರು, ಇದರ ಜತೆಗೆ ತರಹೇವಾರಿ ಫಲ್ಯಗಳನ್ನು ನೀಡಲಾಯಿತು.
ನೋಂದಾಯಿತಿ ಪ್ರತಿನಿಧಿಗಳಿಗೆ ಸುಮಾರು 40 ಕೌಂಟರ್ ಮತ್ತು ಸಾರ್ವಜನಿಕರಿಗೆ 80ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 11 ಗಂಟೆವರೆಗೂ ಬೆಳಗ್ಗಿನ ಉಪಾಹಾರ ನೀಡಿದರೆ, ಮಾಧ್ಯಾಹ್ನ 1 ಗಂಟೆಗೆ ಆರಂಭಗೊಂಡ ಊಟದ ವಿತರಣೆ ಸಂಜೆ 4 ಗಂಟೆಯಾದರೂ ನಿಂತಿರಲೇ ಇಲ್ಲ.
ಎಲ್ಲವೂ ಅಚ್ಚುಕಟ್ಟು: ಭೋಜನ ಶಾಲೆಯಲ್ಲಿಯೂ ಅಚ್ಚುಕಟ್ಟಾಗಿ ವ್ಯವಸ್ತೆಗೊಂಡಿತ್ತು. ಪ್ರತಿ ಕೌಂಟರ್‌ಗಳಲ್ಲಿ ನೂರಾರು ಸ್ವಯಂ ಸೇವಕರು ಕೆಲಸ ಮಾಡುವ ಮೂಲಕ ಸಾಹಿತ್ಯಾಭಿಮಾನಿಗಳಿಗೆ ಊಟದಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ಇದರ ಜೊತೆಗೆ ಸಾವಿರಾರು ಮಂದಿ ಊಟ ಮಾಡಿದರೂ ಎಲ್ಲಿಯೂ ಸಹ ಒಂದೇ ಒಂದು ಅಗಳು ಅನ್ನ ಚೆಲ್ಲದಂತೆ ಇಡೀ ಭೋಜನಾಲಯವನ್ನು ಸ್ವಚ್ಚವಾಗಿ ಇಟ್ಟುಕೊಂಡಿದ್ದು ಇಲ್ಲಿನ ವಿಶೇಷ.