ಮೇಧಾ ಪ್ರಹ್ಲಾದಾಚಾರ್ಯ ಜೋಶಿ
ಪಕ್ಷಿ ಹಾರಲು ಎರಡು ರೆಕ್ಕೆಗಳು ಅಗತ್ಯವಿರುವಂತೆ ವ್ಯಕ್ತಿ ಸರ್ವತೋಮುಖವಾಗಿ ಸದಾ ಸನ್ಮಾರ್ಗದಲ್ಲಿ ಇರಲು ಸದ್ವಿಚಾರ- ಸದಾಚಾರ (ಆಚಾರ- ವಿಚಾರ) ಎಂಬ ಎರಡು ರೆಕ್ಕೆಗಳು ಅನಿವಾರ್ಯ. ಸದ್ವಿಚಾರವೆಂದರೆ ಸನಾತನವಾಗಿ ವೇದೋಕ್ತವಾದ ಪ್ರಾಚೀನ ಋಷಿ ಮುನಿಗಳ ಪರಂಪರೆಯಿಂದ ಬಂದ ತತ್ತ್ವಗಳು. ಸದಾಚಾರವೆಂದರೆ ತಿಳಿದ ಸದ್ವಿಚಾರಕ್ಕೆ ತಕ್ಕಂತೆ ಆಚರಣೆ. ಸ್ವಚ್ಛ ಹಾಗೂ ಶುದ್ಧಗಳಲ್ಲಿ ವ್ಯತ್ಯಾಸವಿದೆ. ದೇಹದ ಬಾಹ್ಯ ನೈರ್ಮಲ್ಯವನ್ನು ತೊಳೆಯುವುದು ಸ್ವಚ್ಛವೆನಿಸಿದರೆ, ಆಂತರಿಕ ನೈರ್ಮಲ್ಯವನ್ನು ತೊಳೆದುಕೊಳ್ಳುವುದೇ ಶುದ್ಧಿಯೆನಿಸುತ್ತದೆ. ಹಾಲನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಹಾಲು ಮಾತ್ರ ಶುದ್ಧವಾಗಿದ್ದರೆ ಸಾಲದು, ಅದನ್ನು ಶೇಖರಿಸುವ ಪಾತ್ರೆಯೂ ಅಷ್ಟೇ ಸ್ವಚ್ಛವಾಗಿರಬೇಕು. ಹಾಗೆಯೇ ಕೇವಲ ಬುದ್ಧಿಯಲ್ಲಿ ವಿಚಾರಗಳನ್ನು ತುಂಬಿಕೊಂಡರೆ ಸಾಲದು, ಆ ವಿಚಾರಗಳು ವಿಕೃತಗೊಳ್ಳದಂತೆ ಉಳಿಯಲು ದೇಹವನ್ನು ಒಳ್ಳೆಯ ಆಚರಣೆಯಿಂದ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ದೇಹ ಮನಸ್ಸುಗಳ ಈ ಶುದ್ಧಿಗಾಗಿಯೇ ಅನೂಚಾನವಾಗಿ ಬೆಳೆದು ಬಂದ ಆಚರಣೆಯ ಪರಂಪರೆಯೇ ಚಾತುರ್ವಸ್ಯ.
ವಿಚಾರಗಳು ಗಟ್ಟಿಯಾಗಿ ನೆಲೆಯೂರಬೇಕೆಂದೇ ದೇಹಕ್ಕೆ ಅನೇಕ ಸದಾಚಾರಗಳನ್ನು ಪ್ರಾಜ್ಞರು ತಿಳಿಸಿದ್ದಾರೆ. ಉಪವಾಸ, ತೀರ್ಥಯಾತ್ರೆ, ದಾನ, ತಪಸ್ಸು, ಯಜ್ಞ – ಹೀಗೆ ಅನೇಕ ಸಾಧನೆಗಳನ್ನು ಶಾಸ್ತ್ರಗಳು ತಿಳಿಸಿವೆ. ಇವುಗಳಿಂದಲೇ ನೇರವಾಗಿ ಮೋಕ್ಷದ ಪ್ರಾಪ್ತಿಯಲ್ಲ. ಆದರೆ ಆ ಮಹಾ ಪದವಿಗೆ ಇವು ಮೆಟ್ಟಿಲುಗಳು. ಅವುಗಳನ್ನು ಹತ್ತಲು ಬೇಕಾದ ಜ್ಞಾನ ಹಾಗೂ ಭಕ್ತಿಗೆ ಈ ದೈಹಿಕ ಶುದ್ಧತೆಗಳೇ ಮುಖ್ಯ ಸಾಧನಗಳಾಗಿವೆ.
ಯಾವುದು ಚಾತುರ್ವಸ್ಯ ಕಾಲ?: ಒಂದು ಸಂಪೂರ್ಣ ಸಂವತ್ಸರವನ್ನು (ಒಂದು ವರ್ಷ) ಉತ್ತರಾಯಣ ದಕ್ಷಿಣಾಯಣ ಎಂಬುದಾಗಿ ವಿಭಾಗಿಸಿದ್ದಾರೆ. ಅದರಲ್ಲಿಯೂ ಉತ್ತರಾಯಣ ಎಂಬುದು ದೇವತೆಗಳ ಹಗಲು. ದಕ್ಷಿಣಾಯಣ ಎಂಬುದು ದೇವತೆಗಳಿಗೆ ರಾತ್ರಿ. ಹೀಗೆ ಒಂದು ವರ್ಷವನ್ನು ದೇವತೆಗಳ ಒಂದು ದಿನ ಎಂಬ ಕಾಲಮಾನದಿಂದ ಶಾಸ್ತ್ರಗಳು ತಿಳಿಸುತ್ತವೆ. ಆಷಾಢದಿಂದ ಪ್ರಾರಂಭವಾಗುವ ಈ ದಕ್ಷಿಣಾಯಣವು ಭಗವಂತನ ಯೋಗ ನಿದ್ರೆಯ ಕಾಲ. ಉಳಿದೆಲ್ಲ ದೇವತೆಗಳಿಗೆ ವಿಶ್ರಾಂತಿಯ ಸಮಯ. ಆದ್ದರಿಂದಲೇ ಯಾವುದೇ ಶುಭ ಕಾರ್ಯಗಳಿಗೆ ಇದು ಸೂಕ್ತ ಸಮಯವಲ್ಲ ಎಂದು ನಿಷೇಧಿಸಿದ್ದಾರೆ. ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ದ್ವಾದಶಿಯವರೆಗೆ ಚಾತುರ್ವಸ್ಯ ಕಾಲ.
ವರಾಹ ಪುರಾಣದ ಪ್ರಕಾರ ದಕ್ಷಿಣಾಯಣದ ಅಭಿಮಾನಿ ದೇವತೆ, ಭಗವಾನ್ ವರಾಹ ದೇವನಿಗೆ ಪ್ರಾರ್ಥಿಸಿದಳು. ‘ದೇವ..! ಈ ದಕ್ಷಿಣಾಯಣವು ರಾತ್ರಿ ಕಾಲವೆಂದು ಪರಿಗಣಿಸುವುದರಿಂದ ಯಾರು ಯಾವ ಶುಭ ಕಾರ್ಯಗಳನ್ನೂ ಮಾಡುವುದಿಲ್ಲ. ನಾನು ಅಶುಭಳೆಂದು ತಿರಸ್ಕರಿಸಲ್ಪಟ್ಟಿದ್ದೇನೆ. ಈ ಸಮಯಕ್ಕೆ ಅಭಿಮಾನಿಯಾದ ನನ್ನ ಜನ್ಮ ವ್ಯರ್ಥವಾಗದಂತೆ ಅನುಗ್ರಹಿಸು’ ಎಂದು ಪ್ರಾರ್ಥಿಸಿದಳು. ಈ ಕಾರಣಕ್ಕಾಗಿ ಭಗವಾನ್ ವರಾಹನು ‘ದಕ್ಷಿಣಾಯಣದ ಈ ಕಾಲ ಪರ್ವಕಾಲವೆಂದೆನಿಸುತ್ತದೆ. ಮೊದಲ ನಾಲ್ಕು ತಿಂಗಳುಗಳು ನನಗೆ ಅತ್ಯಂತ ಪ್ರೀತಿಕರವಾಗಿವೆ. ಈ ಸಮಯದಲ್ಲಿ ಆಚರಿಸಿದ ಧರ್ಮ ಕಾರ್ಯಗಳಿಗೆ ಅಕ್ಷಯ ಫಲ ನೀಡುತ್ತೇನೆ. ಅದೇ ಚಾತುರ್ವಸ್ಯ ಕಾಲ’ ಎಂದು ದಕ್ಷಿಣಾಯಣಾಭಿಮಾನಿ ದೇವತೆಗೆ ವರವಿತ್ತ. ಅನೇಕ ಸಂಪ್ರದಾಯಗಳಲ್ಲಿ ಆಷಾಢದ ಪ್ರಥಮ ಏಕಾದಶಿಯಂದು ಯತಿಗಳೆಲ್ಲ ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡುತ್ತಾರೆ. ತಾವೂ ಸಹ ಸ್ವಯಂ ಮುದ್ರಾ ಧಾರಣೆ ಮಾಡಿಕೊಳ್ಳುತ್ತಾರೆ.
ಆಹಾರದ ನಿಯಮ: ಚಾತುರ್ವಸ್ಯದ ನಿಯಮಗಳಲ್ಲಿ ಈ ಆಹಾರದ ನಿಯಮ ಅತಿ ಮುಖ್ಯವಾಗಿದೆ. ಆಹಾರ ಕೇವಲ ದೇಹದ ಪುಷ್ಟಿಗೆ ಮಾತ್ರವಲ್ಲ. ನಾವು ತಿಂದ ಆಹಾರ ಮೂರು ಭಾಗವಾಗಿ ಸೂಕ್ಷ್ಮ ಭಾಗ ಮನಸ್ಸಿಗೆ ಪರಿಣಮಿಸಿ, ಸೂಕ್ಷ್ಮ ಸ್ಥೂಲಗಳ ಮಧ್ಯ ಭಾಗ ದೇಹಕ್ಕೆ ಪುಷ್ಟಿಯನ್ನು, ಬೇಡವಾದ ಭಾಗ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುತ್ತದೆ. ಆದ್ದರಿಂದ ಮನಸ್ಸಿನ ಶುದ್ಧತೆಗೂ ವಿಹಿತವಾದ ಸಾತ್ವಿಕ ಆಹಾರ ಬಹಳ ಮುಖ್ಯ. ನಾಲ್ಕು ತಿಂಗಳುಗಳಲ್ಲಿ ಕ್ರಮವಾಗಿ ಮೊದಲು ಶಾಖವ್ರತ ಎಂದರೆ ಎಲ್ಲ ತರಕಾರಿಗಳನ್ನು ತೊರೆದು ಕೇವಲ ಕಾಳುಕಡಿಗಳನ್ನು ಮಾತ್ರ ಸ್ವೀಕರಿಸುವುದು. ದಧಿ ವ್ರತದಲ್ಲಿ ಮೊಸರಿನ ಸೇವನೆ ರ್ವ್ಯಜ. ಕ್ಷೀರ ವ್ರತದಲ್ಲಿ ಹಾಲಿನ ಸೇವನೆಯನ್ನು ನಿಷೇಧಿಸಿದ್ದಾರೆ. ಕೊನೆಯಲ್ಲಿ ದ್ವಿದಳ ವ್ರತ. ಆಗ ದ್ವಿದಳ ಧಾನ್ಯಗಳ ಸೇವನೆ ಇಲ್ಲ. ಎಲ್ಲ ಆಹಾರ ನಿಯಮಗಳಿಗೆ ಪ್ರಾಚೀನರ ವಿಚಾರಧಾರೆಗಳು ಅತಿ ಸಮಯೋಚಿತ ಹಾಗೂ ವೈಜ್ಞಾನಿಕವಾಗಿದೆ. ಸ್ವಸ್ಥ ಜೀವನಕ್ಕೆ ಆಹಾರದ ನಿಯಂತ್ರಣ ನಿಯಮಗಳು ಅತಿ ಮುಖ್ಯ. ನೀರಿನಿಂದಾಗಿ ಬರುವ ಅನೇಕ ರೋಗಗಳಿಗೆ ಇದು ನಾಂದಿ. ಮಳೆಗಾಲದ ಪ್ರಾರಂಭದ ದಿನಗಳಾದ ಆಷಾಢ ಮಾಸದಲ್ಲಿ ಯಾವುದೇ ರೀತಿಯ ತರಕಾರಿ ಸೇವನೆಯನ್ನು ನಿಷೇಧಿಸಿದ್ದಾರೆ. ಸತತವಾಗಿ ಮಳೆಯಿಂದಾಗಿ ಮಣ್ಣಿನಲ್ಲಿರುವ ಅನೇಕ ವಿಧದ ಹುಳು ಕ್ರಿಮಿಕೀಟಗಳು ಹೊಸದಾಗಿ ಬೆಳೆದ ತರಕಾರಿಗಳಲ್ಲಿ ಸೇರಿಕೊಳ್ಳುತ್ತವೆ. ಕೆಲವು ಕಂಡರೂ, ಕೆಲವು ಕಾಣುವುದಿಲ್ಲ. ಆ ದೃಷ್ಟಿಯಿಂದ ಈ ನಿಷೇಧ. ಮಳೆಗಾಲದ ಸಮಯದಲ್ಲಿ ಚಳಿಯಿಂದಾಗಿ ದೇಹದಲ್ಲಿ ಕಫದ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ.
ಆದ್ದರಿಂದ ಎರಡನೆಯ ತಿಂಗಳಿನಲ್ಲಿ ಕಫಕ್ಕೆ ಕಾರಣವಾಗುವ ಮೊಸರಿನ ಸೇವನೆಯನ್ನು ನಿಷೇಧಿಸಿದ್ದಾರೆ. ಆಯುರ್ವೆದವೂ ಸಹ ಇದನ್ನು ಪ್ರತಿಪಾದಿಸುತ್ತದೆ. ಭಾದ್ರಪದ ಮಾಸದಲ್ಲಿ ಋತುವಿಗೆ ಅನುಗುಣವಾಗಿ ಹಾಲು ಕೊಡುವ ಪ್ರಾಣಿಗಳು ಮೈಥುನದಲ್ಲಿ ತೊಡಗುತ್ತವೆ. ನಂತರದ ಸಮಯದಲ್ಲಿ ಹಸುಗಳು ಗರ್ಭ ಧರಿಸುತ್ತವೆ. ಈ ಸಮಯದ ಹಾಲನ್ನು ಸೇವಿಸಬಾರದು ಹಾಗೂ ಅದು ಆರೋಗ್ಯಕ್ಕೂ ಹಿತಕರವಲ್ಲ ಎಂಬ ದೃಷ್ಟಿಯಿಂದ ಆವಾಗ ಹಾಲಿನ ಸೇವನೆ ನಿಷಿದ್ಧ. ಕೊನೆಯದಾಗಿ ನಾಲ್ಕನೇ ತಿಂಗಳಿನಲ್ಲಿ ದ್ವಿದಳ ಅಂದರೆ ಬೇಳೆಕಾಳುಗಳ ವ್ರತ. ಹೊಸದಾಗಿ ಬೆಳೆದ ಕಾಳುಗಳ ಸೇವನೆಯಿಂದ ಅನೇಕ ಬಾರಿ ವಾತದ ತೊಂದರೆ ಆಗುತ್ತದೆ. ಆದ್ದರಿಂದ ಆವಾಗ ಬೇಳೆಕಾಳುಗಳನ್ನು ಒಂದು ತಿಂಗಳು ನಿಷೇಧಿಸಿದ್ದಾರೆ. ಉತ್ತರಾಯಣಕ್ಕೆ ಹೋಲಿಸಿದರೆ ಸೂರ್ಯನ ಶಾಖವು ದಕ್ಷಿಣಾಯಣದಲ್ಲಿ ಕಡಿಮೆಯಾಗುತ್ತದೆ. ಚಂದ್ರನ ಶಕ್ತಿ ಹೆಚ್ಚು ಇರುತ್ತದೆ. ಮನುಷ್ಯ/ ಪ್ರಾಣಿಗಳ ದೇಹದಲ್ಲಿನ ಉಷ್ಣಾಂಶವೂ ಸಹ ಬದಲಾವಣೆಗೆ ಒಳಪಟ್ಟಿರುತ್ತದೆ. ಅದಕ್ಕಾಗಿಯೇ ಆಹಾರದ ಕೆಲವು ನಿಯಮಗಳಿವೆ. ‘ಶರೀರಮಾದ್ಯಂ ಖಲು ಧರ್ಮಸಾಧನಂ’ ಎಂದಿದ್ದಾರೆ. ಎಲ್ಲದಕ್ಕೂ ವೈಜ್ಞಾನಿಕ ಕಾರಣಗಳನ್ನು ಕೊಡುವುದು ನಮ್ಮ ಪ್ರಾಚೀನರ ಉದ್ದೇಶವಲ್ಲ. ಎಲ್ಲವೂ ದೇವರಿಗಾಗಿಯೇ, ಧರ್ಮ ಸಾಧನೆಗಾಗಿಯೇ ಎಂಬ ತತ್ವವನ್ನು ಈ ನಿಟ್ಟಿನಲ್ಲಿ ಬಳಸಿಕೊಂಡವರು ನಮ್ಮ ಪ್ರಾಚೀನರು. ರುಚಿಕರವೆನಿಸುವ ಪದಾರ್ಥಗಳನ್ನು ಭಗವದ್ ಪ್ರೀತಿಗಾಗಿ ತ್ಯಜಿಸುವುದರಿಂದ ವ್ಯಕ್ತಿಯಲ್ಲಿ ಒಂದು ರೀತಿಯ ಅಭಿಮಾನ ತ್ಯಾಗದ ಮನೋಭಾವನೆ ಬೆಳೆಯುತ್ತದೆ.
ಜಪ- ಹೋಮ- ದಾನಗಳಿಗೆ ಆದ್ಯತೆ: ತೀರ್ಥ ಕ್ಷೇತ್ರಗಳಲ್ಲಿ ಸ್ನಾನ, ಜಪ ಹೋಮ ಇವುಗಳಿಗೆಲ್ಲ ಈ ಸಮಯದಲ್ಲಿ ಅಕ್ಷಯ ಫಲವೆಂದು ತಿಳಿಸಿದ್ದಾರೆ. ಎಲ್ಲೆಡೆ ಧಾರ್ವಿುಕ ಸ್ಥಳಗಳಲ್ಲಿ ಹರಿನಾಮ ಸಂಕೀರ್ತನೆ, ಪುರಾಣಗಳ ಶ್ರವಣ ನಿರಂತರ ಹೋಮ ಹವನಗಳು ನಡೆದಿರುತ್ತವೆ. ಅನೇಕ ರೀತಿಯ ದಾನಗಳನ್ನು ತಿಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ವ್ಯಕ್ತಿ ತಾನು ಸಂಪಾದಿಸಿದ್ದನ್ನೆಲ್ಲಾ ತನ್ನ ಸ್ವಾರ್ಥಕ್ಕಾಗಿಯೇ ಬಳಸುವುದಕ್ಕಿಂತ ಅಗತ್ಯವಿದ್ದವರಿಗೆ ಕೊಡುವ ಔದಾರ್ಯ ಬೆಳೆಯಬೇಕೆಂಬ ದೃಷ್ಟಿಯಿಂದ ದಾನದ ವಿಧಿಯನ್ನು ತಿಳಿಸಿದ್ದಾರೆ. ಅದರಲ್ಲಿಯೂ ಸಹ ಸಾಕು ಎಂದು ತೃಪ್ತಿಪಟ್ಟು ಹೇಳುವುದು ವ್ಯಕ್ತಿಯ ಹೊಟ್ಟೆ ತುಂಬಿದಾಗ ಮಾತ್ರ. ಆದ್ದರಿಂದಲೇ ಅನ್ನದಾನಕ್ಕೆ ಹೆಚ್ಚಿನ ಪ್ರಾಶಸ್ಱ ನೀಡಿದ್ದಾರೆ.
ಅಹಿಂಸಾ ತತ್ವ: ಚಾತುರ್ವಸ್ಯದ ಸಂಪೂರ್ಣ ಪರಿಕಲ್ಪನೆಯಲ್ಲಿ ಅಹಿಂಸೆಯ ತತ್ವವೇ ಮುಖ್ಯವಾಗಿದೆ. ಮಳೆಗಾಲದಲ್ಲಿ ಮಣ್ಣು ಮೆದುವಾಗಿ ಭೂಮಿಯಲ್ಲಿಯ ಎಲ್ಲ ಕ್ರಿಮಿಕೀಟಗಳು ಹುಳುಗಳು ನೆಲದ ಮೇಲೆ ಹರಿದಾಡುತ್ತಿರುತ್ತವೆ. ಸತತ ಓಡಾಟದಿಂದ ಅಸಂಖ್ಯ ಕ್ರಿಮಿಕೀಟಗಳು ನಾಶವಾಗುತ್ತವೆ. ಈ ಹಿನ್ನೆಲೆಯಲ್ಲಿ ಸದಾ ಸಂಚಾರದಲ್ಲಿಯೇ ಇರುವ ಸನ್ಯಾಸಿಗಳು ಸಂಚಾರಕ್ಕೆ ತಡೆ ಒಡ್ಡಿ ಒಂದೆಡೆಯಲ್ಲಿ ನೆಲೆಸಿ ಚಾತುರ್ವಸ್ಯದ ದೀಕ್ಷೆ ಕೈಗೊಳ್ಳುತ್ತಾರೆ. ವೈದಿಕ, ಜೈನ ಇನ್ನೂ ಅನೇಕ ಸಂಪ್ರದಾಯದವರು ಇದನ್ನು ಆಚರಿಸುತ್ತಾರೆ.
ಶಾಸ್ತ್ರಗಳಲ್ಲಿ ಜ್ಞಾನದಿಂದಲೇ ಮೋಕ್ಷವೆಂದು ತಿಳಿಸಿದ್ದು ಸತ್ಯ. ಆದರೆ ಜ್ಞಾನಮಾರ್ಗವನ್ನು ಅನುಸರಿಸುವ ನೆಪದಲ್ಲಿ ಕರ್ಮಮಾರ್ಗವನ್ನು ತಿರಸ್ಕರಿಸುವಂತಿಲ್ಲ. ಶುದ್ಧತೆ ಕೇವಲ ಬುದ್ಧಿಗೆ ಮಾತ್ರವಲ್ಲ, ದೇಹಕ್ಕೂ ಸಹ ಅವಶ್ಯಕ. ಆದ್ದರಿಂದ ಗೀತೆಯಲ್ಲಿ ತಿಳಿಸಿದಂತೆ ಜ್ಞಾನಮಾರ್ಗ ಕರ್ಮಮಾರ್ಗ ಎರಡೂ ಭಕ್ತಿ ಯೋಗದ ಎರಡು ಮುಖಗಳೇ. ಆದ್ದರಿಂದ ಸದಾಚಾರ- ಸದ್ವಿಚಾರ ಇವು ನಾಣ್ಯದ ಎರಡು ಮುಖಗಳಂತೆ ಅವಿಭಾಜ್ಯ ಅಂಗಗಳಾಗಿವೆ. ಎರಡರಲ್ಲಿಯೂ ಸಾಧನೆ ಮಾಡುವುದೇ ಜೀವನದ ಆಧ್ಯಾತ್ಮಿಕ ವಿಕಾಸಕ್ಕೆ ಹಾಗೂ ಉನ್ನತಿಗೆ ಮೆಟ್ಟಿಲುಗಳು.
(ಲೇಖಕರು ಹವ್ಯಾಸಿ ಬರಹಗಾರರು)