ಪ್ರಕೃತಿ ಮುನಿದ ಮೇಲೂ ಗುಡ್ಡ ನಾಶ

ಹರೀಶ್ ಮೋಟುಕಾನ ಮಂಗಳೂರು

ಕಳೆದ ಮಳೆಗಾಲದಲ್ಲಿ ಬೃಹತ್ ಗುಡ್ಡಗಳೇ ಜಾರಿ ನೀರಿನೊಂದಿಗೆ ಹರಿದು ಕೃಷಿಭೂಮಿ, ಹಲವು ಮನೆಗಳು ನಾಶವಾಗಿ ಆತಂಕ ತಂದಿಟ್ಟಿತ್ತು. ಇದಕ್ಕೆ ಜಾಗ ಸಮತಟ್ಟು ಮಾಡುವ ನೆಪದಲ್ಲಿ ಬೃಹತ್ ಗುಡ್ಡಗಳನ್ನು ತೆರವುಗೊಳಿಸುವುದು ಕೂಡ ಕಾರಣ ಎಂಬುದೂ ದೃಢವಾದ ಬಳಿಕ ಸರ್ಕಾರವೇ ಕಡಿವಾಣ ಹಾಕುವ ಭರವಸೆ ನೀಡಿತ್ತು. ಆದರೆ ಗುಡ್ಡಗಳ ನಾಶ ಯಥಾಪ್ರಕಾರ ಮುಂದುವರಿದಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವ ಬಜ್ಪೆ ಬಳಿಯ ಕರಂಬಾರು ಪಾಂಚಕೋಡಿ ಎಂಬಲ್ಲಿ ಖಾಸಗಿ ಮಾಲೀಕತ್ವದ ನೂರಾರು ಎಕರೆ ವ್ಯಾಪ್ತಿಯ ಗುಡ್ಡ ಈಗ ಬೋಳುಬೋಳಾಗಿ ಕಾಣುತ್ತಿದೆ. ಗುಡ್ಡಗಳನ್ನು ಅಗೆದು ಪ್ರತಿದಿನ ಟಿಪ್ಪರ್‌ಗಳಲ್ಲಿ ಮಣ್ಣು ಸಾಗಾಟ ಮಾಡಲಾಗುತ್ತಿದೆ. ವರ್ಷದ ಹಿಂದೆ ವಿಶಾಲವಾಗಿ ಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ಡ ಈಗ ಸಮತಟ್ಟಾಗಿದೆ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಈ ಮಣ್ಣು ಗಣಿಗಾರಿಕೆಯಿಂದ ಊರಿಗೆ ಊರು ಧೂಳಿನಿಂದ ತುಂಬಿದ್ದು, ಮಳೆಗಾಲದಲ್ಲಿ ಪ್ರಕೃತಿ ವಿಕೋಪ ಸಂಭವಿಸಬಹುದೇ ಎಂಬ ಆತಂಕ ಊರಿನ ಜನರದ್ದು.

ಬಜ್ಪೆ ಬೆಟ್ಟ ಗುಡ್ಡಗಳಿಂದಾವೃತವಾದ ಪ್ರದೇಶ. ನೂರು ಎಕರೆಯಷ್ಟು ಜಾಗ ಸಮತಟ್ಟಾಗಬೇಕಾದರೆ ಲಕ್ಷಾಂತರ ಲೋಡು ಮಣ್ಣು ತೆಗೆಯಬೇಕು. ಅಷ್ಟು ಮಣ್ಣು ಪಾಂಚಕೋಡಿಯಲ್ಲಿ ತೆಗೆದಿರುವ ಸಾಧ್ಯತೆ ಇದೆ. ಇದು ಪ್ರಕೃತಿಯ ಮೇಲೆ ಭಾರಿ ಹೊಡೆತ ಬಿದ್ದಂತಾಗಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಗೋಚರಿಸುವ ಸಾಧ್ಯತೆ ಇದೆ ಎಂದು ಪರಿಸರ ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಣ್ಣು ಏರ್‌ಪೋರ್ಟ್‌ಗೆ ಸಾಗಾಟ: ಉದ್ಯಮಿಗಳು, ರಾಜಕಾರಣಿಗಳು ಈ ಭಾಗದಲ್ಲಿ ಜಾಗ ಖರೀದಿಸಿದ್ದಾರೆ. ಗುಡ್ಡ ಪ್ರದೇಶವಾಗಿರುವುದರಿಂದ ಅದನ್ನು ಸಮತಟ್ಟು ಮಾಡುವ ಕಾಮಗಾರಿ ನಡೆಯುತ್ತಿದೆ. ಮಣ್ಣು ವಿಲೇವಾರಿಗೆ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಮಾಡುವ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಅದನ್ನು ಬೃಹತ್ ಟಿಪ್ಪರ್‌ಗಳಲ್ಲಿ ಸಾಗಾಟ ಮಾಡಿ ಬಳಸಿಕೊಳ್ಳುತ್ತಿದ್ದಾರೆ. ಸ್ಥಳೀಯ ನಿವಾಸಿಗಳ ಒತ್ತಡ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಗುತ್ತಿಗೆ ವಹಿಸಿಕೊಂಡಿರುವ ಸಿಬ್ಬಂದಿ ಭಾನುವಾರ ಪಾಂಚಕೋಡಿ ಪ್ರದೇಶಕ್ಕೆ ಆಗಮಿಸಿ ಅಹವಾಲು ಸ್ವೀಕರಿಸಿದ್ದಾರೆ. ಮಳೆಗಾಲದಲ್ಲಿ ಆಗಬಹುದಾದ ಸಮಸ್ಯೆಯನ್ನು ಸ್ಥಳೀಯರು ಗಮನಕ್ಕೆ ತಂದಿದ್ದಾರೆ. ವಾರದ ಒಳಗಾಗಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ, ತಡೆಗೋಡೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಭರವಸೆ ಈಡೇರದಿದ್ದರೆ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಳೆಗಾಲದಲ್ಲಿ ಏನಾಗುವುದೋ?: ನೂರಾರು ಎಕರೆ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿದೆ. ಮಣ್ಣು ತೆಗೆದ ಪರಿಸರದಲ್ಲಿ ಹಲವು ಮನೆಗಳು, ಕೃಷಿ ಭೂಮಿಯೂ ಇದೆ. ಇಲ್ಲಿ ತೋಡು ಕೂಡ ಹರಿಯುತ್ತಿದೆ. ಮಳೆಗಾಲದಲ್ಲಿ ತೋಡಿನಲ್ಲಿ ಮಣ್ಣು ತುಂಬಿದರೆ ಕೃಷಿ ಭೂಮಿ ಹಾಗೂ ಮನೆಗಳಿಗೆ ಮಣ್ಣು ನುಗ್ಗುವ ಅಪಾಯವಿದೆ. ಜೇಡಿ ಮಣ್ಣು ಆಗಿರುವುದರಿಂದ ಗುಡ್ಡ ಜಾರುವ ಸಾಧ್ಯತೆಯೂ ಇದೆ. ಮಳೆಗಾಲದಲ್ಲಿ ಇಲ್ಲಿ ವಾಸ ಮಾಡುವುದು ಹೇಗೆ ಎನ್ನುವುದು ಸ್ಥಳೀಯರ ಆತಂಕ.

ಮಣ್ಣು ಗಣಿಗಾರಿಕೆ ನಡೆಯುವ ಪರಿಸರದಲ್ಲಿರುವ 100ಕ್ಕೂ ಅಧಿಕ ಮನೆಗಳು ಕೆಂಪಾಗಿವೆ. ದಿನವೊಂದಕ್ಕೆ ಮೂರು ಬಾರಿ ಮನೆಯನ್ನು ನೀರು ಹಾಕಿ ಒರೆಸಬೇಕಾಗಿದೆ. ಕಿಟಕಿ, ಬಾಗಿಲು ಹಾಕಿದರೂ ಧೂಳು ಮನೆಯೊಳಗೆ ಪ್ರವೇಶಿಸುತ್ತದೆ. ಧೂಳಿನಿಂದ ಹಲವು ಮಂದಿಗೆ ಅಲರ್ಜಿ ಉಂಟಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಇಲ್ಲಿನ ಕೃಷಿಕರು ಅಡಕೆ, ತೆಂಗು ಹಾಗೂ ತರಕಾರಿ ಬೆಳೆಯುತ್ತಿದ್ದಾರೆ. ಅವೆಲ್ಲವೂ ಧೂಳಿನಿಂದ ಕೆಂಪಾಗಿದೆ. ಸುತ್ತಲೂ ಕಾಡಿನಿಂದ ಆವೃತವಾಗಿದ್ದು, ಮರ- ಗಿಡಗಳು ಧೂಳಿನಿಂದ ತುಂಬಿವೆ. ಧೂಳು ಮೆತ್ತಿಕೊಂಡ ಹುಲ್ಲು, ಸೊಪ್ಪನ್ನು ಜಾನುವಾರುಗಳಿಗೆ ತಂದು ಹಾಕಬೇಕಾದ ಅನಿವಾರ್ಯತೆ ಒದಗಿದೆ. ಗಾಳಿಯಲ್ಲಿ ಕಿಲೋ ಮೀಟರ್‌ಗಟ್ಟಲೆ ದೂಳು ಹಾರಿ ಹೋಗುತ್ತಿದೆ, ರಸ್ತೆಗಳಿಗೆ ಹಾನಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ವರ್ಷದಿಂದ ಧೂಳು ತಿನ್ನುತ್ತಿದ್ದೇವೆ. ಮನೆಯೊಳಗೆ ಧೂಳು ತುಂಬಿ ಗೋಡೆಗಳು ಕೆಂಪಾಗಿವೆ. ಬಟ್ಟೆ, ಪಾತ್ರೆಗಳು ಹಾಳಾಗುತ್ತಿವೆ. ಇದುವರೆಗೂ ನಮಗೆ ಯಾವುದೇ ಪರಿಹಾರ ನೀಡಿಲ್ಲ. ಮಳೆಗಾಲದಲ್ಲಿ ಯಾವುದೇ ತೊಂದರೆ ಆಗದಂತೆ ನಮಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಮಗೆ ಕುಡಿಯಲು ನೀರು ಕೂಡಾ ಇಲ್ಲದಂತಾಗಿದೆ.
| ಪುಷ್ಪಲತಾ, ಸ್ಥಳೀಯ ನಿವಾಸಿ

ಬಜ್ಪೆಯಲ್ಲಿ ನಡೆಯುತ್ತಿರುವ ಮಣ್ಣು ಗಣಿಗಾರಿಕೆಯ ದುಷ್ಪರಿಣಾಮ ಮಳೆಗಾಲದಲ್ಲಿ ಎದುರಾಗಲಿದೆ. ಕೊಡಗಿನಲ್ಲಾದ ಪ್ರಕೃತಿ ವಿಕೋಪದಿಂದ ಇಲ್ಲಿನವರು ಪಾಠ ಕಲಿತಿಲ್ಲ. ದೊಡ್ಡ ಮಟ್ಟದಲ್ಲಿ ಮಣ್ಣಿನ ಗಣಿಗಾರಿಕೆಗೆ ಪರವಾನಗಿ ಪಡೆದಿದ್ದಾರೆಯೇ? ಪಡೆದಿದ್ದರೆ ಅನುಮತಿ ಕೊಟ್ಟವರಾರು? ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

| ಶಶಿಧರ್ ಶೆಟ್ಟಿ, ಪರಿಸರ ಹೋರಾಟಗಾರ

ನದಿಯ ಪರಿಸರದಲ್ಲಿ ಮಣ್ಣು ಗಣಿಗಾರಿಕೆ ನಡೆಸಿದರೆ ನದಿಯ ಮೇಲೆ ಪರಿಣಾಮ ಬೀರುತ್ತದೆ. ಬಜ್ಪೆಯ ಬಳಿ ಫಲ್ಗುಣಿ ನದಿ ಹರಿಯುವುದರಿಂದ ಮಳೆಗಾಲದಲ್ಲಿ ಮಣ್ಣು ನದಿಯಲ್ಲಿ ಸಂಗ್ರಹಗೊಂಡು ಆಳ ಕಡಿಮೆಯಾಗಲಿದೆ. ನೀರಿನ ಹರಿವು ನಿಧಾನವಾಗಿ ನೆರೆ ಬರುವ ಸಾಧ್ಯತೆ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಧೊರಣೆಯೇ ಇದಕ್ಕೆ ಕಾರಣ.

| ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ