Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ, ಕಾರ್ಯಾಚರಣೆಗೆ ಮಳೆ ಅಡ್ಡಿ

Wednesday, 13.06.2018, 10:00 PM       No Comments

ಬೆಳ್ತಂಗಡಿ/ಮಂಗಳೂರು: ಇತ್ತೀಚೆಗಿನ ವರ್ಷಗಳಲ್ಲೇ ನಡೆದ ಭಾರಿ ಭೂಕುಸಿತದಿಂದ ಕಂಗೆಟ್ಟಿರುವ ಪಶ್ಚಿಮ ಘಟ್ಟ ತಪ್ಪಲಿನ ಚಾರ್ಮಾಡಿ ಹೆದ್ದಾರಿಯನ್ನು ಸಮಸ್ಥಿತಿಗೆ ತರಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ಹರಸಾಹಸ ಪಡುತ್ತಿರುವ ನಡುವೆಯೇ ಭಾರಿ ಮಳೆ ಮುಂದುವರಿದಿದ್ದು, ಮತ್ತೆ ಐದು ಕಡೆ ಭೂಕುಸಿತ ಸಂಭವಿಸಿದೆ.

ಸೋಮವಾರ ಚಾರ್ಮಾಡಿ ಘಾಟಿಯ ಎರಡು ಮತ್ತು ಮೂರನೇ ತಿರುವಿನ ಬಳಿ ನಡೆದ ಭೂಕುಸಿತದ ಬಳಿಕ ಇಡೀ ರಾಷ್ಟ್ರೀಯ ಹೆದ್ದಾರಿ 73ರ ಸುಮಾರು 25 ಕಿ.ಮೀ ಭಾಗದಲ್ಲಿ 13 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ಬಂದ್ ಆಗಿತ್ತು. ವಾಹನಗಳ ಓಡಾಟಕ್ಕೆ ಹೆದ್ದಾರಿಯನ್ನು ಸಿದ್ಧಪಡಿಸುವ ಉದ್ದೇಶದಿಂದ 2 ದಿನಗಳ ಕಾಲ ಯಾವುದೇ ವಾಹನ ಓಡಾಡದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು.

ಕಾರ್ಯಾಚರಣೆಗೆ ಅಡ್ಡಿ: ಮಂಗಳವಾರ ರಾತ್ರಿ ಬಳಿಕ ಬುಧವಾರದವರೆಗೆ ಮತ್ತೆ ಐದು ಕಡೆ (3, 4, 6, 7 ಮತ್ತು 9ನೇ ತಿರುವು) ಗುಡ್ಡಗಳು ಮರಗಳ ಸಮೇತ ಕುಸಿದು ರಸ್ತೆ ಮೇಲೆ ಬಿದ್ದಿವೆ. 6ನೇ ತಿರುವಿನಲ್ಲಿ ರಸ್ತೆಯ ಕೆಳಭಾಗದ ತಡೆಗೋಡೆ ಕುಸಿಯುತ್ತಿದೆ. ತಡೆಗೋಡೆಯ ಕಲ್ಲುಗಳು ಬೀಳಲಾರಂಭಿಸಿದ್ದು, ತಡೆಯದಿದ್ದರೆ ಅಪಾಯ ತಪ್ಪಿದ್ದಲ್ಲ. 8ನೇ ತಿರುವಿನಲ್ಲಿಯೂ ಕೆಳಭಾಗದ ತಡೆಗೋಡೆ ಕುಸಿಯುವ ಸ್ಥಿತಿ ತಲುಪಿದ್ದು, ಕುಸಿತ ಸಂಭವಿಸಿದರೆ ಘಾಟಿಯಲ್ಲಿ ವಾಹನ ಸಂಚಾರ ಸಾಧ್ಯವೇ ಇಲ್ಲ.

ಮಂಗಳವಾರ ರಾತ್ರಿ ಮಣ್ಣು ತೆಗೆಯುತ್ತಿದ್ದ ವೇಳೆ ಜೆಸಿಬಿ ಯಂತ್ರದ ಮೇಲೆ ಮಣ್ಣು ಕುಸಿದು ಬಿದ್ದಿದೆ. ರಾತ್ರಿ ಅಪಾಯಕಾರಿ ಸ್ಥಳಗಳಲ್ಲಿ ಕಾಮಗಾರಿ ನಡೆಸುವುದು ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿವರೆಗೆ ಕಾರ್ಯಾಚರಣೆಗೆ ಅಗತ್ಯ ಲೈಟ್ ಮತ್ತಿತರ ಸಲಕರಣೆಗಳಿವೆ, ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಹೆದ್ದಾರಿ ಇಲಾಖೆ ತಿಳಿಸಿದೆ.

13 ಜೆಸಿಬಿ ಬಳಕೆ: ಮಂಗಳವಾರ ತಾತ್ಕಾಲಿಕವಾಗಿ ರಸ್ತೆಯ ಒಂದು ಬದಿ ತೆರವು ಕಾರ್ಯಾಚರಣೆ ಮಂಗಳವಾರ ನಡೆದಿತ್ತು. ಬುಧವಾರ ಬೆಳಗ್ಗೆ ಪೂರ್ಣ ಪ್ರಮಾಣದಲ್ಲಿ ಒಟ್ಟು 13 ಜೆಸಿಬಿ-ಇಟಾಚಿ ಯಂತ್ರಗಳು ಘಾಟಿಯಲ್ಲಿ ಮಣ್ಣು, ಬಂಡೆ, ಮರಗಳ ತೆರವು ಕಾರ್ಯಾಚರಣೆ ನಡೆಸುತ್ತಿವೆ. ಕಾರ್ಮಿಕರು- ಅಧಿಕಾರಿಗಳ ಸಹಿತ 50ಕ್ಕೂ ಅಧಿಕ ಮಂದಿ ಘಾಟಿಯಲ್ಲಿ ಕಾರ್ಯ ನಿರತರಾಗಿದ್ದಾರೆ.

‘ನಮ್ಮ 10ರಷ್ಟು ಜೆಸಿಬಿಗಳು, 25 ಸಿಬ್ಬಂದಿ ನಿರಂತರವಾಗಿ ಹೆದ್ದಾರಿ ಮೇಲೆ ಬಿದ್ದಿರುವ ಮಣ್ಣಿನ ರಾಶಿ ತೆರವು ಕೆಲಸ ನಡೆಸುತ್ತಿದ್ದೇವೆ. ತೆರವಾದ ಮಣ್ಣನ್ನು ಅಲ್ಲೇ ಹಾಕಲು ಸಾಧ್ಯವಿಲ್ಲ, ಅದಕ್ಕಾಗಿ ಅದನ್ನು ಟಿಪ್ಪರ್ ಬಳಸಿ ಕೆಳಗೆ ತರಲಾಗುತ್ತಿದೆ. ಅತ್ಯಂತ ಅಪಾಯಕಾರಿ ಕಾರ್ಯಾಚರಣೆ ಇದು, ಯಾವ ಜಾಗದಲ್ಲಿ ಭೂಕುಸಿತವಾಗುತ್ತೋ ತಿಳಿಯದು’ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಸುಬ್ಬರಾಮ ಹೊಳ್ಳ ‘ವಿಜಯವಾಣಿ’ಗೆ ವಸ್ತುಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.

ಮರ ತೆರವಿಗೆ ಸರ್ವೇ: ಘಾಟಿ ಪ್ರದೇಶದ ರಸ್ತೆ ಬದಿ ನೂರಾರು ಮರಗಳು ವಾಹನಗಳ ಮೇಲೆ ಬೀಳುವ ರೀತಿಯಲ್ಲಿವೆ. ಈಗಾಗಲೇ ಹಲವು ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಇನ್ನು ಬೀಳಬಹುದಾದ ಮರಗಳನ್ನೂ ತೆರವುಗೊಳಿಸುವ ಕಾರ್ಯ ಅರಣ್ಯ ಇಲಾಖೆ ಆರಂಭಿಸಿದೆ. ಬುಧವಾರ ಅರಣ್ಯ ಇಲಾಖೆ ಅಪಾಯಕಾರಿ ಮರಗಳ ಸರ್ವೇ ನಡೆಸಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಇತರ ಸಿಬ್ಬಂದಿ ಪಾಲ್ಗೊಂಡಿದ್ದು, ಮರ ತೆರವು ಪೂರ್ಣಗೊಳಿಸಲು ಇನ್ನೂ ಒಂದೆರಡು ದಿನ ಬೇಕು.

ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ, ತಹಸೀಲ್ದಾರ್ ಟಿ.ಸಿ ಹಾದಿಮನಿ, ತಾಪಂ ಇಒ ಬಸವರಾಜ್ ಅಯ್ಯಣ್ಣನವರ್, ಲೋಕೋಪಯೋಗಿ ಇಲಾಖೆ ಕಾರ‌್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಕಂದಾಯ ನಿರೀಕ್ಷಕ ರವಿ, ವಲಯ ಅರಣ್ಯಾಧಿಕಾರಿ ಸುಬ್ಬಯ್ಯನಾಯಕ್ ಘಾಟಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸಂಚಾರ ನಿರ್ಬಂಧ ವಿಸ್ತರಣೆ?: ಮಂಗಳವಾರದ ಪರಿಸ್ಥಿತಿ ಗಮನಿಸಿ, ಇನ್ನೆರಡು ದಿನ (ಜೂನ್ 13, 14) ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಘಾಟಿ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿರುವುದು ಮತ್ತು ಭೂಕುಸಿತ ಸಂಭವಿಸುತ್ತಿರುವುದು ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಒಂದು ವೇಳೆ ಕಾರ್ಯಾಚರಣೆ ಮುಗಿದರೂ, ಮಳೆ ಮುಂದುವರಿದರೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ಅಪಾಯಕಾರಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿರ್ಬಂಧ ಕೆಲವು ದಿನಗಳ ಮಟ್ಟಿಗೆ ಮುಂದೂಡುವ ಸಾಧ್ಯತೆಗಳೂ ಇಲ್ಲದ್ದಿಲ್ಲ. ಈ ಬಗ್ಗೆ ಗುರುವಾರ ಸಾಯಂಕಾಲ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಸಂಚಾರಕ್ಕೆ ಮುಕ್ತ: ನಳಿನ್
ಮಣ್ಣು, ಮರ ತೆರವು ಕಾರ್ಯ ನಡೆಯುತ್ತಿದೆ, ಗುರುವಾರ ಸಾಯಂಕಾಲ ಅಥವಾ ರಾತ್ರಿ ವೇಳೆ ಕೆಲಸ ಪೂರ್ತಿಯಾಗುವ ನಿರೀಕ್ಷೆ ಇರುವುದರಿಂದ ಶುಕ್ರವಾರ ಬೆಳಗ್ಗೆಯಿಂದ ಚಾರ್ಮಾಡಿ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಬಹುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ. ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಹೆದ್ದಾರಿಯ ಒಟ್ಟಾರೆ ನಿರ್ವಹಣೆ ಕುರಿತಂತೆ ಮೊದಲು ಬೆಳ್ತಂಗಡಿ ಶಾಸಕರು ಸಭೆ ನಡೆಸುತ್ತಾರೆ, ಆ ಬಳಿಕ ಸಕಲೇಶಪುರ ಹಾಗೂ ಮಂಗಳೂರು ಎರಡೂ ಉಪವಿಭಾಗದ ಅಧಿಕಾರಿಗಳನ್ನೂ ಕರೆಸಿ ಸಭೆ ನಡೆಸಲಿದ್ದೇನೆ ಎಂದರು.
ಶಿರಾಡಿ ಭಾಗದಲ್ಲಿ ಒಂದು ಸೇತುವೆಯಷ್ಟೇ ಬಾಕಿ ಉಳಿದಿರುವ ಕಾರಣ, ಅದನ್ನು ಪೂರ್ಣಗೊಳಿಸಿ ಜುಲೈ ಮೊದಲ ವಾರ ಸಂಚಾರ ಪ್ರಾರಂಭಿಸಬಹುದು ಎಂದೂ ‘ವಿಜಯವಾಣಿ’ಗೆ ತಿಳಿಸಿದರು.

ಮಳೆ, ಗಾಳಿಯೇ ಕಾರಣ?
ಚಾರ್ಮಾಡಿ ಘಾಟಿಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಇದುವರೆಗೆ ಇಂಥ ಭೂಕುಸಿತವಾಗಿಲ್ಲ ಎಂಬ ಮಾಹಿತಿ ಇದೆ, ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಿದು. ವರ್ಷಕ್ಕೆ 7000 ಮಿ.ಮೀ.ನಷ್ಟು ಮಳೆಯಾಗುತ್ತದೆ. ಇದರಿಂದ ಮಣ್ಣು ಸಡಿಲವಾಗಿ ಕುಸಿತವಾಗಿರಬಹುದು. ಅಲ್ಲದೆ ಅಧಿಕ ಪ್ರಮಾಣದಲ್ಲಿ ಭಾರಿ ವಾಹನಗಳೂ ಓಡಾಡುವ ಪ್ರದೇಶವಾದ್ದರಿಂದ ರಸ್ತೆ ಇಕ್ಕೆಲಗಳಲ್ಲಿ ಕಂಪನವುಂಟಾಗಿ ಕುಸಿತವುಂಟಾಗುವ ಸಾಧ್ಯತೆಯನ್ನೂ ಅಧಿಕಾರಿಗಳು ಅಲ್ಲಗಳೆಯುತ್ತಿಲ್ಲ.

ಯಾತ್ರಿಗಳಿಗೆ ಸಮಸ್ಯೆ: ಕಾಮಗಾರಿ ಹಿನ್ನೆಲೆಯಲ್ಲಿ ಶಿರಾಡಿ ಘಾಟಿ ಬಂದ್ ಆಗಿದ್ದು, ಇದೀಗ ಚಾರ್ಮಾಡಿ ಘಾಟಿಯೂ ಬಂದ್ ಆಗಿರುವುದರಿಂದ ಶ್ರೀಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯ ಸಹಿತ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವುದು ಕಷ್ಟವಾಗಿದೆ. ಅಲ್ಲದೆ ಹೂವು, ತರಕಾರಿ ಇನ್ನಿತರ ದಿನಬಳಕೆಯ ವಸ್ತುಗಳೂ ಇದೇ ಮಾರ್ಗದಲ್ಲಿ ದಿನನಿತ್ಯ ಬರಬೇಕಾಗಿದ್ದು, ವ್ಯಾಪಾರ ವ್ಯವಹಾರಕ್ಕೂ ಅಡಚಣೆ ಉಂಟಾಗಿದೆ. ಅಗತ್ಯ ಕೆಲಸಗಳಿಗಾಗಿ ಬೆಂಗಳೂರು ಕಡೆ ಹೋಗುವವರು ಸದ್ಯ ಮೈಸೂರು ಮಾರ್ಗ ನೆಚ್ಚಿಕೊಂಡಿದ್ದಾರೆ.

ಬ್ಯಾರಿಕೇಡ್ ಹಾಕಿ ತಡೆ: ಘಾಟಿಯಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಈ ಭಾಗದಲ್ಲಿ ಉಜಿರೆ ಮತ್ತು ಚಾರ್ಮಾಡಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಲಾಗುತ್ತಿದೆ. ಘಟ್ಟದ ಮೇಲ್ಗಡೆ ಕೊಟ್ಟಿಗೆಹಾರದಲ್ಲಿ ವಾಹನಗಳನ್ನು ತಡೆದು ವಾಪಸ್ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪೊಲೀಸರು, ಅಧಿಕಾರಿಗಳ ಕಣ್ತಪ್ಪಿಸಿ ಕೆಲವು ವಾಹನಗಳು ಬದಲಿ ರಸ್ತೆಗಳ ಮೂಲಕ ಚಾರ್ಮಾಡಿ ಗೇಟಿನ ವರೆಗೂ ಬಂದಿದ್ದು, ಅಲ್ಲಿ ತಡೆಯಲಾಗಿದೆ. ಗೇಟಿನ ಮುಂದೆ 50ರಷ್ಟು ಲಾರಿಗಳು ಸಾಲಾಗಿ ನಿಂತಿದ್ದವು. ಈ ವಾಹನಗಳನ್ನು ಹಿಂದಕ್ಕೆ ಕಳುಹಿಸುವ ಕಾರ‌್ಯ ನಡೆಯುತ್ತಿದೆ.

ಘಾಟಿ ಸಂಚಾರ ಇನ್ನು ಕಷ್ಟ: ಘಾಟಿಯಲ್ಲಿ ಭೂಕುಸಿತ ಹಾಗೂ ಕಾಮಗಾರಿಗಳಿಂದಾಗಿ ಬಹುತೇಕ ಕಡೆಗಳಲ್ಲಿ ಡಾಂಬರು ಕಿತ್ತುಹೋಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡದಾದ ಹೊಂಡಗಳು ಬಿದ್ದಿದ್ದು ವಾಹನ ಸಂಚಾರಕ್ಕೆ ತೊಡಕಾಗಲಿದೆ. ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಅದರಿಂದಾಗಿ ರಸ್ತೆಯಲ್ಲಿರುವ ಹೊಂಡಗಳನ್ನು ಗುರುತಿಸುವುದು ಅಸಾಧ್ಯವಾಗಲಿದೆ. ಚಾರ್ಮಾಡಿ ಘಾಟಿ ಸಂಚಾರ ಮುಕ್ತವಾದ ನಂತರ ಮಳೆ ಕಡಿಮೆಯಾಗುವ ತನಕ ಈ ವ್ಯಾಪ್ತಿಯಲ್ಲಿ ಒಂದೆರಡು ಜೆಸಿಬಿ ಯಂತ್ರಗಳು ಹಾಗೂ ತುರ್ತು ಕಾಮಗಾರಿ ನಡೆಸಲು ತಾತ್ಕಾಲಿಕ ಸಿಬ್ಬಂದಿ ನೇಮಿಸಿದರೆ ಮಾತ್ರ ರಸ್ತೆ ಸಂಚಾರ ಸುಗಮವಾಗಬಹುದು.

ಬಾಂಜಾರುಮಲೆಗೆ ಸಮಸ್ಯೆ: ಚಾರ್ಮಾಡಿ ಘಾಟಿಯ ಒಂಭತ್ತನೇ ತಿರುವಿನಲ್ಲಿರುವ ಬಾಂಜಾರು ಮಲೆ ಪ್ರದೇಶದ ಜನರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅವರ ವಾಹನಗಳು ಘಾಟಿಯ ಮೂಲಕ ಹೋಗಲು ಅವಕಾಶ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಬಾಂಜಾರುಮಲೆಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಪರಿಶೀಲಿಸುವಂತೆ ಬೆಳ್ತಂಗಡಿ ತಹಶೀಲ್ದಾರರಿಗೆ ಪುತ್ತೂರು ಸಹಾಯಕ ಕಮಿಷನರ್ ಸೂಚನೆ ನೀಡಿದ್ದಾರೆ.

ಮಳೆ ಇನ್ನೂ ಮುಂದುವರಿದಿದ್ದು, ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದೆ. ಮಳೆ ಕಡಮೆಯಾದರೆ ಒಂದರೆಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ತೆರೆಯಲಾಗುವುದು. ಮಳೆ ಮುಂದುವರಿದರೆ ಅಧವಾ ಹೆಚ್ಚಿನ ಪ್ರದೇಶಗಳಲ್ಲಿ ಭೂ ಕುಸಿತಗಳಾದರೆ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಲು ಹೆಚ್ಚು ಸಮಯ ಬೇಕಾಗಬಹುದು.
* ರಾಘವನ್, ಸುಪರಿಟೆಂಡೆಂಟ್ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಮಂಗಳವಾರ ರಾತ್ರಿ ಐದು ಕಡೆ ಮತ್ತೆ ಭೂಕುಸಿತ ಸಂಭವಿಸಿರುವುದು ಕಾರ್ಯಾಚರಣೆಗೆ ಎದುರಾದ ದೊಡ್ಡ ಸವಾಲು. ಭಾರಿ ಮಳೆಯೂ ಕಾರ್ಯಾಚರಣೆಗೆ ಅಡ್ಡಿ ಮಾಡುತ್ತಿದೆ. ಎರಡು ದಿನ ರಸ್ತೆ ಸಂಚಾರ ಬಂದ್ ಆದೇಶವಿರುವ ನಡುವೆ ಹೆದ್ದಾರಿ ಇಲಾಖೆ ಕಾರ್ಯಾಚರಣೆ ಮುಂದುವರಿಸಿದ್ದು, ಗುರುವಾರ ಸಾಯಂಕಾಲದ ವೇಳೆ ಕೆಲಸ ಪೂರ್ತಿ ಮಾಡಬೇಕಾಗಿದೆ.
* ಸುಬ್ಬರಾಮ ಹೊಳ್ಳ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್

ತ್ವರಿತವಾಗಿ ಕಾಮಗಾರಿ ನಡೆಯುತ್ತಿದ್ದು, ಸಂಬಂಧಪಟ್ಟ ಎಲ್ಲ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಾಗಿದೆ. ಅಪಾಯಕಾರಿ ಮರಗಳ ತೆರವಿಗೂ ಸೂಚಿಸಲಾಗಿದೆ. ಗುರುವಾರ ಸಂಜೆಯೊಳಗೆ ಕಾರ್ಯಾಚರಣೆ ಮುಗಿಸುವ ಗುರಿಯಿದೆ. ಗುರುವಾರ ಸ್ಥಿತಿಗತಿ ಪರಿಶೀಲಿಸಿದ ಬಳಿಕ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
*ಕೃಷ್ಣಮೂರ್ತಿ ಸಹಾಯಕ ಕಮೀಷನರ್, ಪುತ್ತೂರು

Leave a Reply

Your email address will not be published. Required fields are marked *

Back To Top