ಬೆಂಗಳೂರು: ರಾಜ್ಯದಲ್ಲಿ ‘ಅಹಿಂದ’ ಸಂಘಟನೆಯಿಂದ ಪಕ್ಷಕ್ಕೆ ಆಗುತ್ತಿರುವ ಲಾಭವು ಮುಂದೆ ತನಗೆ ತಿರಗುಬಾಣವಾಗಬಾರದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ಹೆಜ್ಜೆ ಇರಿಸಿದೆ.
ಉಪ ಚುನಾವಣೆ ಬಳಿಕ ಅಹಿಂದ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ಪ್ರಯತ್ನ ಕಾಂಗ್ರೆಸ್‌ನಿಂದ ಒಂದು ಗುಂಪಿನಿಂದ ನಡೆದಿತ್ತು. ಈ ವಿಚಾರ ಹೈಕಮಾಂಡ್ ಕಿವಿಗೂ ಬಿದ್ದ ಬಳಿಕ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ನಾಯಕರ ಪ್ರತಿ ನಡೆಯ ಬಗ್ಗೆ ಮಾಹಿತಿ ತರಿಸಿಕೊಳ್ಳುತ್ತಲೇ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸ್ವಾಭಿಮಾನ ಸಮಾವೇಶದ ಹಿಂದೆ ಅಹಿಂದ ಲೆಕ್ಕಾಚಾರವಿದೆ, ಇದು ಪಕ್ಷದ ಚೌಕಟ್ಟು ದಾಟಬಾರದು. ಏನೇ ನಡೆದರೂ ಪಕ್ಷದ ಚೌಕಟ್ಟಿನೊಳಗೇ ನಡೆಯಬೇಕೆಂಬ ಒಂದು ಸ್ಪಷ್ಟ ನಿರ್ದೇಶನವಿದ್ದು, ಸೋಮವಾರದ ಬೆಳವಣಿಗೆಯಲ್ಲಿ ಕೆಪಿಸಿಸಿ ನಿಯೋಗ ಸಮಾವೇಶದ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಎಐಸಿಸಿ ವರದಿಯನ್ನೂ ಮಾಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಹಿಂದ ಬಲ ಪಕ್ಷಕ್ಕೆ ಸಿಕ್ಕಿದ್ದರಿಂದಲೇ ಅಧಿಕಾರಕ್ಕೇರುವಂತಾಯಿತು. ಇತ್ತೀಚಿನ ಉಪ ಚುನಾವಣೆಯಲ್ಲಿ ಎದುರಾಳಿ ಮಣ್ಣುಮುಕ್ಕಿಸಲು ಸಹ ಇದೇ ಶಕ್ತಿ ಬಳಕೆಯಾಯಿತು. ಆದರೆ, ಈ ಶಕ್ತಿ ಪಕ್ಷವನ್ನು ನಿಯಂತ್ರಿಸುವ ಮಟ್ಟಕ್ಕೆ ಹೋಗಬಾರದೆಂಬುದು ಹೈಕಮಾಂಡ್ ಮುನ್ನೆಚ್ಚರಿಕೆಯಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಪದಾಧಿಕಾರಿ ವಿವರಣೆಯಾಗಿದೆ.
ಮುಂದೆ ಅಧಿಕಾರ ಹಸ್ತಾಂತರ, ವಿಧಾನ ಪರಿಷತ್ ಚುನಾವಣೆಗೆ ಆಯ್ಕೆ, ಇತರೆ ನೇಮಕಗಳು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಂತಹ ಪ್ರಮುಖ ಬೆಳವಣಿಗೆಗಳು ನಡೆಯುವುದಿದೆ. ಆ ವೇಳೆ ಪಕ್ಷದ ಮೂಗಿನ ನೇರಕ್ಕೇ ತೀರ್ಮಾನ ಆಗಬೇಕಾಗುತ್ತದೆ. ಪಕ್ಷದೊಳಗಿನ ಇನ್ನೊಂದು ಶಕ್ತಿ ನಿಯಂತ್ರಿಸುವಂತಿರಬಾರದೆಂಬ ಕಾರಣಕ್ಕೆ ಎಲ್ಲವೂ ಪಕ್ಷದ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕೆಲಸ ನಡೆದಿದೆ ಎಂದು ತಿಳಿಸಿದರು.