ಕಾರ್ಯಕರ್ತರ ಪರಿಶ್ರಮಕ್ಕೆ ಬೆಲೆಕಟ್ಟಲಾಗದು

1 Min Read
ಕಾರ್ಯಕರ್ತರ ಪರಿಶ್ರಮಕ್ಕೆ ಬೆಲೆಕಟ್ಟಲಾಗದು
ಶಿಕಾರಿಪುರದಲ್ಲಿ ಮತದಾರರಿಗೆ ಕೃತಜ್ಞತಾ ಸಲ್ಲಿಕೆ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಲಾಯಿತು. ಹನುಮಂತಪ್ಪ, ಪಾಲಾಕ್ಷಪ್ಪ, ರೂಪಕಲಾ ಹೆಗಡೆ, ಲಕ್ಷೀ ಮಹಾಲಿಂಗಪ್ಪ ಇತರರಿದ್ದರು.

ಶಿಕಾರಿಪುರ: ಸಾಮಾನ್ಯ ಕಾರ್ಯಕರ್ತನೂ ಪಕ್ಷದ ಆಸ್ತಿ. ಪ್ರತಿ ಬೂತ್‌ನಲ್ಲಿ ಬಿಜೆಪಿಗೆ ಅತಿ ಹೆಚ್ಚು ಮತಗಳು ಬರುವಂತೆ ಕಳೆದ ಐದಾರು ತಿಂಗಳುಗಳಿಂದ ಕಾರ್ಯಕರ್ತರು ಪಟ್ಟಿರುವ ಪರಿಶ್ರಮಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಬಿಜೆಪಿ ಶಿಕಾರಿಪುರ ಮಂಡಲದಿಂದ ಮಂಗಳವಾರ ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.
ಎಂಥದ್ದೇ ಸಂಕಷ್ಟ, ಸವಾಲುಗಳು ಬರಲಿ ಎದೆಗುಂದದೆ ಪಕ್ಷದ ಸಂಘಟನೆಯನ್ನು ಬಲಪಡಿಸಿ ನನಗೆ ಗೆಲುವು ತಂದುಕೊಟ್ಟಿದ್ದೀರಿ. ಅಕ್ಷರಶಃ ಇದು ನಮ್ಮ ಕಾರ್ಯಕರ್ತರ ಗೆಲುವು. ನನ್ನ ಗೆಲುವು ಅವರೆಲ್ಲರಿಗೆ ಭೀಮಬಲ ತಂದಿದೆ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ. ಅದರ ಸದಸ್ಯರು ನಾವು ಎನ್ನುವುದೇ ನಮಗೆ ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ಕಾರ್ಯಕರ್ತನಲ್ಲೂ ನಾನು ನನ್ನನ್ನು ಕಾಣುತ್ತಿದ್ದೇನೆ ಎಂದರು.
ಸತತ ನಾಲ್ಕನೇ ಬಾರಿಗೆ ಲೋಕಸಭಾ ಸದಸ್ಯನಾಗಿ ಚುನಾಯಿತನಾಗಲು ಪಕ್ಷದ ಕಾರ್ಯಕರ್ತರ ಪರಿಶ್ರಮ ಊಹೆಗೂ ನಿಲುಕದ್ದು. ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಆಭಾರಿ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ನಿಮ್ಮೆಲ್ಲರ ಪರಿಶ್ರಮ ಸಾರ್ಥಕವಾದ ಕ್ಷಣವಿದು. ಬಿಜೆಪಿ ಬಿಂದುವಾಗಿ ಆರಂಭವಾಗಿ ಕಾರ್ಯಕರ್ತರ ಪರಿಶ್ರಮದಿಂದ ತ್ರಿವಿಕ್ರಮನ ಹಾಗೆ ಬೆಳೆದು ನಿಂತಿದೆ. ಹಿರಿಯ ಮತ್ತು ಕಿರಿಯ ಕಾರ್ಯಕರ್ತರಲ್ಲಿ ಅಂತರ ಇರಬಾರದು. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗೆ ನೀವೆಲ್ಲರೂ ಸೇನಾನಿಗಳಂತೆ ಸಜ್ಜಾಗಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಪ್ರಮುಖರಾದ ಹನುಮಂತಪ್ಪ, ಪಾಲಾಕ್ಷಪ್ಪ, ರೂಪಕಲಾ ಹೆಗಡೆ, ಲಕ್ಷ್ಮೀ ಮಹಾಲಿಂಗಪ್ಪ, ಮಂಡಲ ಪ್ರಮುಖರು, ವಿವಿಧ ಮೋರ್ಚಾ ಪದಾಧಿಕಾರಿಗಳು ಇದ್ದರು.

See also  ಕೃಷ್ಣರಾಜ ದಲ್ಲಿ ಅಭ್ಯರ್ಥಿಗಳ ಎದೆಬಡಿತ ಹೆಚ್ಚಿಸಿದ ವರಿಷ್ಠರು
Share This Article