ಶಿವಮೊಗ್ಗ: ಓದುವ ಹವ್ಯಾಸ ಎಂದರೆ ಶೈಕ್ಷಣಿಕ ನದಿಯಲ್ಲಿ ತೆಪ್ಪವಿದ್ದ ಹಾಗೆ. ನಾವೇ ಓಡಿಸಿ ದಡ ಸೇರಬೇಕು ಎಂದು ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಹಾಗೂ ಲೇಖಕಿ ಡಾ. ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗ, ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯಿಂದ ಮಂಗಳವಾರ ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ದೂರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎಷ್ಟೋ ಬಾರಿ ಮಕ್ಕಳು ಮೊಬೈಲ್‌ನಲ್ಲೇ ಪುಸ್ತಕ ಓದುತ್ತೇವೆ ಎಂದು ಹೇಳುತ್ತಾರೆ. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ನಮ್ಮ ಓದು ಅಚ್ಚುಕಟ್ಟಾಗಿರುತ್ತಿತ್ತು. ಆದರೆ ಸಾಮಾಜಿಕ ಜಾಲತಾಣಗಳು ಬಂದ ಮೇಲೆ ನಮ್ಮ ಸಮಯವೇ ವ್ಯರ್ಥವಾಗುತ್ತಿದೆ. ಪುಸ್ತಕಗಳನ್ನು ಓದುವುದು ಎಂದರೆ ಶತಮಾನಗಳ ಕಥನಗಳನ್ನು ತಿಳಿಯವುದು ಎಂದರ್ಥ ಎಂದರು.
ಪ್ರಾಚಾರ್ಯ ಡಾ. ಟಿ.ಅವಿನಾಶ್ ಮಾತನಾಡಿ, ಸಾಹಿತ್ಯ ಎಂದರೆ ಕೇವಲ ಅಕ್ಷರಗಳಲ್ಲ. ಲೋಕವನ್ನು ನೋಡುವ ಸಂವೇದನೆ. ಮೌಲ್ಯಗಳನ್ನು ಅರಿಯುವ ಬಗೆ. ವಿದ್ಯಾರ್ಥಿಗಳು ಪುಸ್ತಕ ಪ್ರೇಮ ಮತ್ತು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಲಿ. ಅವರು ಬದುಕಿನ ಕ್ರಮವನ್ನು ಅರಿತುಕೊಳ್ಳಲಿ ಎಂಬ ಉದ್ದೇಶದಿಂದ ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಿಬಿರದ ಸಂಚಾಲಕ ಡಾ. ಪ್ರಕಾಶ್ ಮರ‌್ಗನಳ್ಳಿ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಪಠ್ಯದ ಓದು ಸಾಕಾಗುವುದಿಲ್ಲ. ಉತ್ತಮ ಸಮಾಜ ಕಟ್ಟಲು ಅಂಕ ಸಹಾಯಕವಾಗುವುದಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ತೆರೆದುಕೊಂಡಾಗ, ಅಧ್ಯಾಪಕ ವರ್ಗದವರು ಕ್ರಿಯಾಶೀಲರಾದಾಗ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದರು.
ಲೇಖಕ ಡಾ. ಸರ್ಜಾ ಶಂಕರ ಹರಳೀಮಠ ವಿದ್ಯಾರ್ಥಿಗಳ ಪ್ರಬಂಧ ಕುರಿತು ಸಂವಾದ ನಡೆಸಿದರು. ಶಿಬಿರದ ಸಹ ಸಂಚಾಲಕರಾದ ಡಾ. ರಾಜೀವ ನಾಯ್ಕ, ಡಾ. ಜಿ.ಆರ್.ಲವ, ಡಾ. ಎಚ್.ದೊಡ್ಡನಾಯ್ಕ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಸರಳಾ ಇತರರಿದ್ದರು.