ಹೊಸ ಕಾಲದ ಗ್ರೇಟ್ ಗೇಮ್ ಹೊಸ ವಾಸ್ತವಗಳು

ಜಗದಗಲಅಫ್ಘಾನಿಸ್ತಾನ ಮತ್ತು ಅಂದಿನ ಪಶ್ಚಿಮ ಭಾರತದ ಮೂಲಕ ಅರಬ್ಬಿ ಸಮುದ್ರ ಮತ್ತು ಅದರಾಚೆಯ ಹಿಂದೂ ಮಹಾಸಾಗರ ತಲುಪುವ ಝಾರಿಸ್ಟ್ ರಷ್ಯನ್ ಸಾಮ್ರಾಜ್ಯದ ಯೋಜನೆಯನ್ನು ಹತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಬ್ರಿಟನ್ ವಿಫಲಗೊಳಿಸಿತು. ನಂತರ ಅಫ್ಘಾನಿಸ್ತಾನ ಮತ್ತು ಇಂದಿನ ಪಾಕಿಸ್ತಾನದ ಮೂಲಕ ಅದೇ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರ ತಲುಪುವ ಕಮ್ಯೂನಿಸ್ಟ್ ಸೋವಿಯತ್ ಯೂನಿಯನ್ ಬಯಕೆಯನ್ನು ಇಪ್ಪತ್ತನೆಯ ಶತಮಾನದ ಕೊನೆಯದರ ಹಿಂದಿನ ದಶಕದಲ್ಲಿ ಅಮೆರಿಕ ಮಣ್ಣುಗೂಡಿಸಿತು. ಅದಾದ 3-4 ವರ್ಷಗಳಲ್ಲೇ ಕಮ್ಯುನಿಸಂ ಕುಸಿದು ಸೋವಿಯತ್ ಯೂನಿಯನ್ ಛಿದ್ರಗೊಂಡು ಅಫ್ಘಾನಿಸ್ತಾನ ಉತ್ತರದ ಮಧ್ಯ ಏಷ್ಯಾದಲ್ಲಿ ಐದು ಹೊಸ ದೇಶಗಳು ಅಸ್ತಿತ್ವಕ್ಕೆ ಬಂದವು. ಪರಿಣಾಮವಾಗಿ ಮಾಸ್ಕೋದ ಆಡಳಿತದ ದಕ್ಷಿಣದ ಸೀಮಾರೇಖೆ ಅಫ್ಘಾನಿಸ್ತಾನದಿಂದ ಬಹು ದೂರ ಸರಿದುಹೋಯಿತು. ಅದರೊಂದಿಗೆ ಅರಬ್ಬಿ ಸಮುದ್ರ ತಲುಪುವ ರಷ್ಯನ್ನರ ‘ಐತಿಹಾಸಿಕ ಬಯಕೆ’ಯೂ ದೂರ ಸರಿದುಹೋಯಿತು. ಅದು ಪೂರ್ಣವಾಗಿ ಇತಿಹಾಸ ಸೇರಿತು ಎಂದು ಹೇಳಲಾಗುವುದಿಲ್ಲ. ಮುಂದಿನ 50-100 ವರ್ಷಗಳಲ್ಲಿ ಜಾಗತಿಕ ಶಕ್ತಿ ರಾಜಕಾರಣ ಮತ್ತು ಸಾಮರಿಕ ಸ್ಥಿತಿ ಬದಲಾಗಿ ಮಾಸ್ಕೋದ ಹಿಡಿತ ಮತ್ತೊಮ್ಮೆ ಈ ಪ್ರದೇಶದಲ್ಲಿ ವಿಸ್ತಾರಗೊಂಡರೆ, ಅದನ್ನು ತಡೆಯುವ ಬಲಿಷ್ಠ ಜಾಗತಿಕ ಶಕ್ತಿಯೊಂದು ಇಲ್ಲವಾದರೆ ಇತಿಹಾಸ ಮರುಕಳಿಸಬಹುದು. ಇತಿಹಾಸದಲ್ಲಿ ಪೂರ್ಣವಿರಾಮ ಇರುವುದಿಲ್ಲ, ಇದಿಷ್ಟೇ ಎಂದು ಹೇಳಿ ನಾವು ಕೈತೊಳೆದುಕೊಳ್ಳುವ ಹಾಗಿಲ್ಲ. ರಷ್ಯನ್ನರು ‘ಸದ್ಯಕ್ಕೆ’ ಹಿಂದೆ ಸರಿದಿದ್ದಾರೆ ಎಂದುಕೊಂಡು ನಾವು ಸದ್ಯಕ್ಕೆ ಇಲ್ಲೇನಾಗುತ್ತಿದೆ ಎನ್ನವುದರತ್ತ ಗಮನ ಹರಿಸೋಣ.

ಸೋವಿಯತ್ ಸೇನೆ ಅಫ್ಘಾನಿಸ್ತಾನದಿಂದ ಹೊರಹೋಗುವಂತೆ ಮಾಡಿ, ಇಲ್ಲಿ ಇನ್ನೇನೂ ಅಪಾಯವಿಲ್ಲ ಎಂದುಕೊಂಡ ಅಮೆರಿಕ ಈ ವಲಯದಿಂದ ಹೊರನಡೆದು ಪಶ್ಚಿಮ ಏಷ್ಯಾ ಮುಖ್ಯವಾಗಿ ಇರಾಕ್​ನತ್ತ ಗಮನ ಹರಿಸಿತು. ನಂತರ ಸೋವಿಯತ್ ಯೂನಿಯನ್ ಛಿದ್ರಗೊಂಡು ಇತಿಹಾಸ ಸೇರಿದಾಗ, ಒಂದು ಕ್ಷಿಪಣಿಯನ್ನೂ ಹಾರಿಸದೆ ತಾನು ಶೀತಲ ಸಮರವನ್ನು ಗೆದ್ದೆನೆಂದು ಬೀಗಿದ ಅಮೆರಿಕ ಇನ್ನಷ್ಟು ಪಶ್ಚಿಮಕ್ಕೆ ಸರಿದು ಛಿದ್ರತೆಯ ಹಾದಿಯಲ್ಲಿದ್ದ ಯುಗೋಸ್ಲಾವಿಯಾದತ್ತ ತಿರುಗಿತು. ಮುಂದಿನ ಒಂದಿಡೀ ದಶಕದ ಬೆಳವಣಿಗೆಗಳು ಅಮೆರಿಕವನ್ನು ಪಶ್ಚಿಮ ಏಷ್ಯಾ ಮತ್ತು ಬಾಲ್ಕನ್ ಪರ್ಯಾಯದ್ವೀಪಕ್ಕೇ ಕಟ್ಟಿಹಾಕಿದವು. ಹೊಸ ಶತಮಾನ ಆರಂಭವಾಗುತ್ತಿದ್ದಂತೆ 9/11 ದಾಳಿಗಳ ಪರಿಣಾಮವಾಗಿ ಅಮೆರಿಕ ತನ್ನ ಗಮನವನ್ನು ಮತ್ತೊಮ್ಮೆ ಅಫ್ಘಾನಿಸ್ತಾನಕ್ಕೂ ವಿಸ್ತರಿಸುವಂತಾಯಿತು. ಆ ‘ಭಯೋತ್ಪಾದನೆಯ ವಿರುದ್ಧದ ಸಮರ’ದಲ್ಲಿ ಪಾಕಿಸ್ತಾನ ತನ್ನೊಂದಿಗಿದೆ ಎಂದು ತಿಳಿದ ಅಮೆರಿಕ ಆ ವಿಷಯದಲ್ಲಿ ನೆಮ್ಮದಿಯಾಗಿತ್ತು. ಆದರೆ ಅದರ ಕಣ್ಣಮುಂದೆಯೇ ಹೊಸದೊಂದು ಆಟ ಈ ವಲಯದಲ್ಲಿ ಆರಂಭವಾಗಿತ್ತು.

ಅಮೆರಿಕಕ್ಕೆ ‘ರಫ್ತು’ ಮಾಡಲು ನಮ್ಮಲ್ಲಿ ಯುವತಿಯರಷ್ಟೇ ಇರುವುದು, ಗರ್ಭಧಾರಣೆಯ ವಯಸ್ಸಿನ ನಮ್ಮ ಒಂದು ಕೋಟಿ ಯುವತಿಯರನ್ನು ದಯವಿಟ್ಟು ತೆಗೆದುಕೊಳ್ಳಿ ಎಂದು ಚೀನೀ ನೇತಾರ ಮಾವೋ ಝೆಡಾಂಗ್ 1974ರಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಅವರನ್ನು ಕೇಳಿಕೊಂಡಿದ್ದುಂಟು. ಕಮ್ಯೂನಿಸಂ ನಮ್ಮನ್ನು ಈ ಗತಿಗೆ ತಂದುಬಿಟ್ಟಿತಲ್ಲ ಎಂದು ಮರುಗಿದ ಡೆಂಗ್ ಷಿಯಾವೋಪಿಂಗ್ ‘ರಾಜಕೀಯ ರಂಗದಲ್ಲಿ ಮಾತ್ರ ಕಮ್ಯೂನಿಸಂ, ಆರ್ಥಿಕ ಕೇತ್ರದಲ್ಲಿ ಅಗತ್ಯವಿರುವಷ್ಟು ಬಂಡವಾಳಶಾಹಿ’ ಎಂಬ ನಿಲುವು ತಳೆದು 1978ರಲ್ಲಿ ಚೀನೀ ಅರ್ಥವ್ಯವಸ್ಥೆಯನ್ನು ಉದಾರೀಕರಣಗೊಳಿಸಿ ಅದನ್ನು ಜಾಗತಿಕ ಬಂಡವಾಳ ಹೂಡಿಕೆಗೆ ತೆರೆದರು. ‘ಹೊಸ ಚೀನಾ’ ಒದಗಿಸಿದ ಕಡಿಮೆ ಕೂಲಿಯ ಬೃಹತ್ ಕೆಲಸದಾರರ ಸೈನ್ಯ ಮತ್ತು ಯಥೇಚ್ಛ ಕಚ್ಚಾವಸ್ತುಗಳು ಮತ್ತು ಮುಷ್ಕರರಹಿತ ಉತ್ಪಾದನಾ ವಾತಾವರಣಗಳನ್ನು ಕಂಡು ಅಮೆರಿಕ ಮತ್ತು ಪಶ್ಚಿಮ ಯುರೋಪ್​ನ ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾಗೆ ವರ್ಗಾಯಿಸಿದರು. ಕಡಿಮೆ ಕೂಲಿ ಕೊಟ್ಟು ಅಧಿಕ ಉತ್ಪಾದನೆ ಮಾಡಿ, ಜಾಗತಿಕವಾಗಿ ಮಾರಾಟ ಮಾಡಿ ಹೇರಳ ಲಾಭ ಗಳಿಸುವ ದುರಾಸೆ ಅವರದು. ಆ ದುರಾಸೆ ಮುಂದೊಂದು ದಿನ ತಂತಮ್ಮ ದೇಶಗಳ ಹಿತಾಸಕ್ತಿಗಳಿಗೇ ಮುಳುವಾಗುತ್ತದೆ ಎಂಬ ಪರಿಜ್ಞಾನವೂ ಅವರಿಗಿರಲಿಲ್ಲ. ಪರಿಣಾಮವಾಗಿ ಚೀನಾ ಅನತಿಕಾಲದಲ್ಲೇ ‘ಜಗತ್ತಿನ ಕಾರ್ಖಾನೆ’ ಎಂಬ ಹೆಸರು ಪಡೆಯಿತು ಮತ್ತು ಅದರ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ತಾರಾಮಾರು ಏರಿ ಹೊಸ ಶತಮಾನ ಆರಂಭವಾಗುವ ಹೊತ್ತಿಗೆ ಅದು ಪಶ್ಚಿಮ ಯುರೋಪ್​ನ ಎಲ್ಲ ಆರ್ಥಿಕ ದಿಗ್ಗಜಗಳನ್ನೂ ಹಿಂದೆ ಹಾಕಿ ಜಗತ್ತಿನ ಮೂರನೆಯ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿ ಬದಲಾಯಿತು. ಮತ್ತೊಂದು ದಶಕದಲ್ಲಿ ಅದು ಜಪಾನ್ ಅನ್ನು ಹಿಂದೆ ತಳ್ಳಿ ಜಾಗತಿಕವಾಗಿ ಎರಡನೆಯ ಬೃಹತ್ ಅರ್ಥವ್ಯವಸ್ಥೆಯಾಗಿ ಬೆಳೆದುನಿಂತಿತು.

ಆರ್ಥಿಕ ಶಕ್ತಿ ಸೇನಾಶಕ್ತಿಯಾಗಿ ಬೆಳೆಯುವುದಕ್ಕೆ ಇತಿಹಾಸ ಮತ್ತೆಮತ್ತೆ ಸಾಕ್ಷಿಯಾಗಿದೆ. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೆರಿಕ ಎಲ್ಲವೂ ಈ ಪ್ರಕ್ರಿಯೆಗೆ ಉದಾಹರಣೆಗಳು. ಇದಕ್ಕೆ ಚೀನಾ ಸಹ ಉದಾಹರಣೆಯಾಗುವುದು ಅಸಹಜವೂ ಆಗಿರಲಿಲ್ಲ, ಅನಿರೀಕ್ಷಿತವೂ ಆಗಿರಲಿಲ್ಲ. ತನ್ನಲ್ಲಿ ಸೇರಿದ್ದ ಅಗಾಧ ಡಾಲರ್ ಸಂಗ್ರಹದಲ್ಲಿ ಒಂದಂಶವನ್ನು ಇತರ ದೇಶಗಳಿಗೆ ಸಾಲವಾಗಿ ಕೊಟ್ಟು ಆ ಮೂಲಕ ಸಾಧ್ಯವಾದಡೆಯಲ್ಲೆಲ್ಲ ಪ್ರಭಾವ ಗಳಿಸಿಕೊಳ್ಳುವುದನ್ನು ಚೀನಾ ಒಂದೂವರೆ ದಶಕದ ಹಿಂದೆಯೇ ಆರಂಭಿಸಿತು. ಅದರ ಭಾಗವಾಗಿಯೇ ಅದು ಪಾಕಿಸ್ತಾನದ ಆರ್ಥಿಕ ಪ್ರಗತಿಗೂ ಸಹಾಯ ಮಾಡಿತು.

ಚೀನಾ ಮತ್ತು ಪಾಕಿಸ್ತಾನಗಳನ್ನು ಸಂರ್ಪಸುವ ಕಾರಾಕೊರಂ ಹೆದ್ದಾರಿಯನ್ನು ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಚೀನಾ 1970ರ ದಶಕದಲ್ಲೇ ನಿರ್ವಿುಸಿತ್ತಷ್ಟೆ. ನಾಲ್ಕು ದಶಕಗಳ ನಂತರ ಅರಬ್ಬಿ ಸಮುದ್ರತೀರದ ಗ್ವಾದಾರ್ ಬಂದರಿನವರೆಗೂ ವಿಸ್ತರಿಸುವ, ರಸ್ತೆಯ ಜತೆ ರೈಲುಮಾರ್ಗವನ್ನೂ ನಿರ್ವಿುಸುವ ಯೋಜನೆಯನ್ನು ಚೀನಾ ರೂಪಿಸಿತು. ಇದಕ್ಕೆ ಚೀನಾ ನೀಡಿದ ಸಮರ್ಥನೆಯೆಂದರೆ ಪಶ್ಚಿಮ ಏಷ್ಯಾದಿಂದ ಚೀನಾದ ಬಂದರುಗಳಿಗೆ ಸಮುದ್ರಮಾರ್ಗದ ಮೂಲಕ ತೈಲ ಸಾಗಾಣಿಕೆಗೆ 21 ದಿನಗಳಷ್ಟು ದೀರ್ಘ ಸಮಯ ಹಿಡಿಯುತ್ತದೆ, ಪಾಕ್ ನೆಲದಲ್ಲಿ ರಸ್ತೆ ಮತ್ತು ರೈಲುಮಾರ್ಗಗಳು ನಿರ್ವಣವಾದರೆ ಅವುಗಳ ಮೂಲಕ ತೈಲವನ್ನು ಕೇವಲ ಎರಡೇ ದಿನಗಳಲ್ಲಿ ಚೀನಾಗೆ ತರಬಹುದು ಎಂದು. ಇದು ನಿಜವೇ. ಆದರೆ ಇವೇ ರಸ್ತೆ ಮತ್ತು ರೈಲುಮಾರ್ಗಗಳು ಈಗ ಚೀನೀ ಸೇನೆಯನ್ನು ಜಗತ್ತಿನ ಕಣ್ಣಿಗೆ ಕಾಣದಂತೆ ಕೇವಲ ಎರಡೇ ದಿನಗಳಲ್ಲಿ ಅರಬ್ಬಿ ಸಮುದ್ರತೀರಕ್ಕೆ ತರಬಹುದಲ್ಲ! ಇದರ ಜತೆಗೆ, ಗ್ವಾದಾರ್ ಬಂದರಿನಲ್ಲಿ ಚೀನಾ ಅದಾಗಲೇ ನೌಕಾ ಮತ್ತು ವಾಯುನೆಲೆಯೊಂದರ ನಿರ್ವಣವನ್ನು ಆರಂಭಿಸತೊಡಗಿತ್ತು ಎನ್ನುವುದನ್ನೂ ನೋಡಿದರೆ ಚೀನೀ ಯೋಜನೆಯ ಪೂರ್ಣಚಿತ್ರ ದೊರೆಯುತ್ತದೆ. ಹಿಂದೆ ಝಾರಿಸ್ಟ್ ರಷ್ಯನ್ ಸಾಮ್ರಾಜ್ಯ ಮತ್ತು ಇತ್ತೀಚೆಗೆ ಕಮ್ಯೂನಿಸ್ಟ್ ಸೋವಿಯತ್ ಯೂನಿಯನ್ ದೊಡ್ಡದಾಗಿ ಸದ್ದುಮಾಡಿಕೊಂಡು ಪ್ರಯತ್ನಿಸಿ ವಿಫಲವಾದ ಕಡೆ ಚೀನಾ ತಣ್ಣಗೆ ಕೆಲಸ ಆರಂಭಿಸಿ ಯಶಸ್ಸಿನ ಹಾದಿಯಲ್ಲಿ ನಿರಾತಂಕವಾಗಿ ಸಾಗಿತ್ತು!

ಈ ಚೀನೀ ಹುನ್ನಾರ ಅಮೆರಿಕಕ್ಕೆ ಗೊತ್ತಾಗಲೇ ಇಲ್ಲ ಅಂದರೆ ಅದು ಪೂರ್ಣವಾಗಿ ಸರಿಯಾಗದು. ತಥಾಕಥಿತ ಪ್ರಗತಿಪರ ಅಂದರೆ ಎಡಪಂಥೀಯ ಒಲವಿದ್ದ ಬರಾಕ್ ಒಮಾಮ ಸರ್ಕಾರ ಚೀನಾದ ಯೋಜನೆಗೆ ಮೌನಸಮ್ಮತಿ ನೀಡಿದಂತೆಯೂ ಕಾಣುತ್ತದೆ. ಹಾಗೆಯೇ ಆಗ ಭಾರತದಲ್ಲಿದ್ದ ಯುಪಿಎ ಸರ್ಕಾರ ಸಹ ಚೀನೀ ಯೋಜನೆಯನ್ನು ಮೌನವಾಗಿ ಒಪ್ಪಿಕೊಳ್ಳುವ ನಿಲುವು ತಳೆದಿತ್ತು. ಯುಪಿಎ ಅಧ್ಯಕ್ಷೆ ಮತ್ತವರ ಮಕ್ಕಳಿಗೆ ಚೀನೀ ಸರ್ಕಾರ ಬೀಜಿಂಗ್ ಒಲಿಂಪಿಕ್ಸ್ ಸಮಯದಲ್ಲಿ ವಿಶೇಷವಾಗಿ ಸತ್ಕರಿಸಿದ್ದನ್ನು ಅದಾದ ಒಂದೇ ತಿಂಗಳಲ್ಲಿ ಪ್ರಮುಖ ಕಾಂಗ್ರೆಸ್ ನೇತಾರರೊಬ್ಬರು ಚೀನೀ ಕಮ್ಯೂನಿಸ್ಟ್ ಪಾರ್ಟಿಯ ಬೇಹುಗಾರಿಕಾ ವಿಭಾಗದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದನ್ನು, ನಂತರ ಲಢಾಕ್​ನಲ್ಲಿ ಸುಮಾರು ಒಂದುಸಾವಿರ ಚ.ಕಿ.ಮೀ. ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಚೀನೀ ಸೇನೆಗೆ ಅವಕಾಶ ಮಾಡಿಕೊಟ್ಟದ್ದನ್ನು ನೋಡಿದರೆ ಪಾಕಿಸ್ತಾನದ ಮೂಲಕ ಚೀನಾ ಅರಬ್ಬಿ ಸಮುದ್ರ ತಲುಪುವುದರಲ್ಲಿ ಯುಪಿಎ ಸರ್ಕಾರಕ್ಕೆ ಯಾವುದೇ ಅಪಾಯ ಕಾಣದೇ ಹೋದದ್ದು ಅಚ್ಚರಿಯೆನಿಸುವುದಿಲ್ಲ. ಆದರೆ ಭಾರತವನ್ನು ಸುತ್ತುವರಿಯುವ ಚೀನೀ ಹುನ್ನಾರದ ಬಗ್ಗೆ ಅಂದಿನ ಭಾರತ ಸರ್ಕಾರ ತೋರಿದ ಬೇಜವಾಬ್ದಾರಿ ನಡವಳಿಕೆ ಬೇಸರವುಂಟುಮಾಡುತ್ತವೆ. ಎಡಪಂಥದತ್ತ ವಾಲಿದ ರಾಜಕೀಯ ಪಕ್ಷಗಳಾದ ಅಮೆರಿಕದ ಡೆಮೋಕ್ರಾಟಿಕ್ ಪಕ್ಷ ಮತ್ತು ಭಾರತದ ಯುಪಿಎ ಕೂಟದ ಪಕ್ಷಗಳು ಚೀನೀ ಯೋಜನೆಗಳ ಬಗ್ಗೆ ಸಮಾನ ನಿಲುವು ತಳೆದದ್ದು ತೆರೆಯ ಹಿಂದೆ ನಡೆದಿರಬಹುದಾದ ಆಟಗಳ ಬಗ್ಗೆ ಸುಳಿವು ನೀಡುತ್ತದೆ.

ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ ಚೀನೀ ಹುನ್ನಾರಗಳ ಬಗ್ಗೆ ಭಾರತದ ನಿಲುವು ಬದಲಾಯಿತು. ಆದರೆ ಆಗಿನ್ನೂ ವಾಷಿಂಗ್​ಟನ್​ನಲ್ಲಿ ಒಬಾಮ ಆಡಳಿತವೇ ಇದ್ದುದರಿಂದ ಮೋದಿಯವರ ನಿಲುವಿಗೆ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಬೆಂಬಲ ಅಗತ್ಯವಿದ್ದಷ್ಟು ದೊರೆಯಲಿಲ್ಲ. ಪರಿಸ್ಥಿತಿ ಕೊನೆಗೂ ಬದಲಾದದ್ದು ಡೊನಾಲ್ಡ್ ಟ್ರಂಪ್ ಶ್ವೇತಭವನ ಪ್ರವೇಶಿಸಿದಾಗ. ಮೋದಿ ಮತ್ತು ಟ್ರಂಪ್ ಚೀನೀ ಹುನ್ನಾರಗಳಿಗೆ ಕಡಿವಾಣ ಹಾಕುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದೇಬಿಟ್ಟರು. ಚೀನೀ ದುಸ್ಸಾಹಕ್ಕೆ ಕಾರಣವಾದ ಆರ್ಥಿಕ ಶಕ್ತಿಯನ್ನು ಕುಗ್ಗಿಸುವ ಕ್ರಮಕ್ಕೆ ಟ್ರಂಪ್ ಮುಂದಾದರೆ ಗಡಿಯಲ್ಲಿ ಚೀನೀ ಸೇನೆಗೆ ಸೂಕ್ತ ಪ್ರತಿರೋಧ ತೋರುವ ಮೂಲಕ ಚೀನೀ ಹುಮ್ಮಸ್ಸನ್ನು ಕುಗ್ಗಿಸಿ ಅದರ ಸಾಮರ್ಥ್ಯದ ಮಿತಿಯನ್ನು ಅದಕ್ಕೆ ಮನಗಾಣಿಸುವ ಕ್ರಮವನ್ನು ಮೋದಿ ಆರಂಭಿಸಿದರು.

ಆದರೆ ಪರಿಸ್ಥಿತಿ ಮತ್ತೆ ನಕಾರಾತ್ಮಕತೆಗೆ ತಿರುಗಿದ್ದು ಜೋ ಬೈಡೆನ್ ಅಧ್ಯಕ್ಷರಾದಾಗ. ಇಕ್ಕಳದಿಂದ ಚೀನಾವನ್ನು ಹೊರಬಿಟ್ಟು ರಷ್ಯಾವನ್ನು ಸಿಕ್ಕಿಸಿಕೊಳ್ಳುವ ಸಾಮರಿಕವಾಗಿ ಮೂರ್ಖತನದ ಕೃತ್ಯವನ್ನು ಬೈಡೆನ್ ಸರ್ಕಾರ ಮಾಡಿತು. ಡೆಮೋಕ್ರಾಟಿಕ್ ಪಕ್ಷದ, ಅದರಲ್ಲೂ ಬರಾಕ್ ಒಬಾಮ ಹಿಡಿತದ ಸರ್ಕಾರದಿಂದ, ಮರಿ ಒಬಾಮಗಳೇ ತುಂಬಿರುವ ವಿದೇಶಾಂಗ ಇಲಾಖೆಯಿಂದ ಇದನ್ನಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಆದರೆ ವರ್ಷ ಕಳೆಯುವುದರೊಳಗೆ ಹಿಂದಿನ ಟ್ರಂಪ್ ಆಡಳಿತ ಆರಂಭಿಸಿದ್ದ ಯೋಜನೆಗಳ ದೂರಗಾಮಿ ಮಹತ್ವ ಲಾಯ್್ಡ ಜಾರ್ಜ್ ನೇತೃತ್ವದ ರಕ್ಷಣಾ ಇಲಾಖೆಗಾಯಿತು ಮತ್ತು ಅದಕ್ಕೆ ಸಹಕಾರಿಯಾಗಿ ನಿಲ್ಲುವ ಒತ್ತಡಕ್ಕೆ ವಿದೇಶಾಂಗ ಇಲಾಖೆ ಒಳಗಾಯಿತು. ಪರಿಣಾಮವಾಗಿ ವರ್ಷದಿಂದ ಹಳಿ ತಪ್ಪಿದ್ದ ಬೈಡೆನ್ ಆಡಳಿತದ ಚೀನಾ ನೀತಿ ಮತ್ತೆ ಹಳಿಗೇರಿತು. ಅರಬ್ಬಿ ಸಮುದ್ರ ತಲುಪುವ ಚೀನೀ ಯೋಜನೆಯನ್ನು ವಿಫಲಗೊಳಿಸಲು ಬೈಡೆನ್ ಆಡಳಿತ ಟೊಂಕಕಟ್ಟಿ ನಿಂತಿತು. ಪರಿಣಾಮವಾಗಿ ಈ ವಲಯದಲ್ಲೀಗ ‘ದ ಗ್ರೇಟ್ ಗೇಮ್ 2’ ಆರಂಭವಾಯಿತು.

ಹೊಸ ಗ್ರೇಟ್ ಗೇಮ್ಲ್ಲಿ ಸೇನೆಯನ್ನು ಬಳಸುವ ಅಗತ್ಯ ಅಮೆರಿಕಕ್ಕೆ ‘ಸದ್ಯಕ್ಕೆ’ ಇಲ್ಲ. ಯಾಕೆಂದರೆ ಹಿಂದೆ ಎರಡು ಬಾರಿ ರಷ್ಯನ್ನರು ಸೇನೆಯನ್ನು ಮುಂದಿಟ್ಟುಕೊಂಡು ಬಂದಂತೆ ಚೀನೀಯರೇನೂ ತಮ್ಮ ಸೇನೆಯನ್ನು ಇಲ್ಲಿಗೆ ಇಳಿಸಿಲ್ಲ. ಅವರದೇನಿದ್ದರೂ ಪಾಕಿಸ್ತಾನವನ್ನು ಮೊದಲು ಆರ್ಥಿಕವಾಗಿ ಹಿಡಿತಕ್ಕೆ ತೆಗೆದುಕೊಳ್ಳುವುದು, ಸೇನೆಯ ಪ್ರವೇಶ ನಂತರದ್ದು. ಅದಾಗುವ ಮೊದಲೇ ಚೀನೀಯರನ್ನು ಇಲ್ಲಿಂದ ಕಾಲ್ತೆಗೆಸುವುದು ಇಂದಿನ ಅಮೆರಿಕದ ನೀತಿ. ಅದಕ್ಕನುಗುಣವಾಗಿಯೇ ಚೀನಾವನ್ನು ಸಂಪೂರ್ಣವಾಗಿ ತೊರೆಯಲು ಸಿದ್ಧವಿಲ್ಲದ ಇಮ್ರಾನ್ ಖಾನ್​ರನ್ನು ಕೆಳಗಿಳಿಸುವ, ನಂತರ ಚುನಾವಣೆಗಳಾದ ಮೇಲೂ ಚೀನಿ ಸಖ ನವಾಜ್ ಶರೀಫ್​ರನ್ನು ಹಿಂದಿರಿಸಿ, ಅಮೆರಿಕಕ್ಕೆ ಹೊಂದಿಕೊಳ್ಳುವ ವ್ಯವಹಾರಸ್ಥ ಶಹ್​ಬಾಜ್ ಶರೀಫ್​ರೇ ಪ್ರಧಾನಮಂತ್ರಿಯಾಗಿ ಮುಂದುವರಿಯುವ ವ್ಯವಸ್ಥೆಯನ್ನು ಅಮೆರಿಕ ಮಾಡಿತು. ಇದರಿಂದಾಗಿ ಅಮೆರಿಕ ಆ ದೇಶದಲ್ಲಿ ಚೀನೀ ಪ್ರಭಾವವನ್ನು ಕುಗ್ಗಿಸಲು ತನಗೆ ಬೇಕಾದದ್ದನ್ನು ಗಳಿಸಿಕೊಂಡಂತಾಯಿತು. ಅರಬ್ಬಿ ಸಮುದ್ರತೀರದಲ್ಲಿ ಅದಕ್ಕೆ ನೆಲೆ ದೊರೆತಿದೆ, ಚೀನಾ ತನ್ನ ಮಹತ್ವಾಕಾಂಕ್ಷೆಯ ‘ಚೈನಾ ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್’ನ್ನು ಕೈಬಿಟ್ಟು ಹಿಂದೆ ಓಡಿದೆ!

ಇಲ್ಲಿ ವಿದೇಶಾಂಗ ಇಲಾಖೆಯಲ್ಲಿ ಮಧ್ಯ ಮತ್ತು ದಕ್ಷಿಣ ಏಷ್ಯಾ ವಿಭಾಗವನ್ನು ನೋಡಿಕೊಳ್ಳುವ ಉಪ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ಅವರ ಪಾತ್ರವನ್ನು ವಿಶೇಷವಾಗಿ ಗಮನಿಸಬೇಕು. ಇಮ್ರಾನ್ ಖಾನ್ ಸರ್ಕಾರದ ಪತನಕ್ಕೆ ವೇದಿಕೆ ಸಿದ್ಧಪಡಿಸಿದ್ದು ಇವರು. ಹಾಗಾಗಿ ನೈತಿಕತೆಗೆ ವಿರುದ್ಧವಾದ ಇವರ ಕೃತ್ಯ ವ್ಯಾಪಕ ಖಂಡನೆಗೆ ಗುರಿಯಾದದ್ದು ಸಹಜ. ಹಾಗೇ ನಾವೆಲ್ಲರೂ ಲು ಅವರನ್ನು ತೆಗಳಿದ್ದುಂಟು. ಆದರೆ ಉಛ jಠಠಿಜ್ಛಿಜಿಛಿಠ ಞಛ್ಞಿಠ ಎಂದು ಮೆಕಿಯಾವೆಲ್ಲಿ ಹೇಳುವಂತೆ ಇವರು ಮಾಡಿದ್ದರ ಅಂತಿಮ ಪರಿಣಾಮವೆಂದರೆ ಪಾಕಿಸ್ತಾನದಲ್ಲಿ ಚೀನಾದ ಕೈಗಳು ಕಟ್ಟಿಹಾಕಲ್ಪಟ್ಟವು, ಈ ಕಾಲದ ಗ್ರೇಟ್ ಗೇಮ್ ಮೊದಲ ಹಂತವನ್ನು ಅಮೆರಿಕ ಯಶಸ್ವಿಯಾಗಿ ದಾಟಿತು.

ಚೀನಾ ಅರಬ್ಬಿ ಸಮುದ್ರ ತಲುಪುವುದನ್ನು ತಡೆದ ಹಾಗೂ ಆ ದೇಶ ಈ ವಲಯದಲ್ಲಿ ತನ್ನ ಹಾಜರಿಯನ್ನು ಕಡಿಮೆಗೊಳಿಸುವ ಒತ್ತಡಕ್ಕೊಳಗಾದದ್ದು ನಮಗೂ ಒಳ್ಳೆಯದಲ್ಲವೇ? ಅಮೆರಿಕ ಇದನ್ನು ಮಾಡದಿದ್ದರೆ ನಾವಷ್ಟೇ ಮಾಡಬಹುದಾಗಿತ್ತೇ? ಅಂದರೆ ಅಮೆರಿಕದ ಕೃತ್ಯ ನಮಗೇ ಅನುಕೂಲಕರವಾಯಿತಲ್ಲವೇ? ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಬೆಳವಣಿಗೆಗಳನ್ನೂ ನಾವು ಬೇರೆಯದೇ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ. ಹಾಗೆ ನೋಡಿದಾಗ ನಿನ್ನೆ ಪಾಕಿಸ್ತಾನದಲ್ಲಿ ಮಾಡಿದ್ದನ್ನು ಮತ್ತು ಇಂದು ಬಾಂಗ್ಲಾದೇಶದಲ್ಲಿ ಮಾಡುತ್ತಿರುವುದನ್ನು ಅಮೆರಿಕ ನಾಳೆ ಭಾರತದಲ್ಲೂ ಮಾಡುತ್ತದೆ ಎಂಬ ಆತಂಕ ಅರ್ಥಹೀನ ಎನ್ನುವುದು ವೇದ್ಯವಾಗುತ್ತದೆ. 2004-14ರ ನಡುವೆ ನವದೆಹಲಿಯಲ್ಲಿ ಇದ್ದಂತಹ ಚೀನಾ ಪರವಾದ ಸರ್ಕಾರ ಈಗಲೂ ಇದ್ದಿದ್ದರೆ ಆಗ ಇಸ್ಲಾಮಾಬಾದ್ ಮತ್ತು ಢಾಕಾದಲ್ಲೂ ನಡೆದದ್ದು ನವದೆಹಲಿಯಲ್ಲೂ ನಡೆಯಬಹುದಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈ ಕಾಲದ ಗ್ರೇಟ್ ಗೇಮ್ಲ್ಲಿ ತನ್ನ ಯೋಜನೆಗಳಿಗೆ ಮೋದಿ ಸರ್ಕಾರವೇ ಸೂಕ್ತ ಸಹಕಾರಿ ಎಂದು ಬೈಡೆನ್ ಸರ್ಕಾರ ಅರಿತಿದೆ. ಇದರ ಸಮಗ್ರ ವಿಶ್ಲೇಷಣೆಗೆ ಪ್ರತ್ಯೇಕ ಲೇಖನವೇ ಅಗತ್ಯ. ಅದು ಮುಂದಿನವಾರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಕ್ಫ್ ಬೋರ್ಡ್​ನಿಂದ ಸ್ಥಾಪನೆಯಾಗಲಿವೆ ಮಹಿಳಾ ಪದವಿ ಪೂರ್ವ ಕಾಲೇಜು? ಸಚಿವ ಜಮೀರ್ ಅಹಮದ್ ಹೇಳಿದ್ದೇನು ?

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…