More

    ಸರ್ಕಾರ ಕೈಗೊಳ್ಳಲಿದೆ ನಿರ್ಧಾರ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಹು-ಧಾ ಅವಳಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿ ಗುತ್ತಿಗೆ ರದ್ದತಿ ಅಧಿಕಾರ ನನಗಿಲ್ಲ. ಆದರೆ ಗುತ್ತಿಗೆ ಹಿಂಪಡೆಯಬೇಕು ಎಂಬ ಪಾಲಿಕೆ ಸದಸ್ಯರ ಅಭಿಪ್ರಾಯವನ್ನು ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕಿ ದೀಪಾ ಚೋಳನ್ ಹೇಳಿದರು.
    ನಗರದ ಮಹಾನಗರ ಪಾಲಿಕೆ ಅಮೃತ ಮಹೋತ್ಸವ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ನೀರು ಸರಬರಾಜು ಸ್ಥಿತಿಗತಿ ಮೌಲ್ಯಮಾಪನ ಸಮೀಕ್ಷೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
    ಕಂಪನಿ ಸರಿಯಾಗಿ ನೀರು ಸರಬರಾಜು ಮಾಡದ ಕಾರಣ ಗುತ್ತಿಗೆ ರದ್ದತಿ ಮಾಡಲು ಸದಸ್ಯರು ಒಕ್ಕೋರಲಿನಿಂದ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೋಳನ್, ನಿರಂತರ ನೀರು ಯೋಜನೆ ಜಾರಿಗೆ 5 ವರ್ಷ, 8 ವರ್ಷ ನಿರ್ವಹಣೆ ಸೇರಿ ಒಟ್ಟು 12 ವರ್ಷ ಕಂಪನಿ ಟೆಂಡರ್ ಪಡೆದಿದೆ. ಅವರ ಕಾರ್ಯ ವೈಖರಿ ಬಗ್ಗೆ ದೂರುಗಳಿವೆ. ಈ ಬಗ್ಗೆ ಇಲಾಖೆ ಕಾರ್ಯದರ್ಶಿ ಗಮನಕ್ಕೆ ತರುತ್ತೇನೆ. ಮುಂದಿನ ನಿರ್ಧಾರವನ್ನು ಇಲಾಖೆ ಸಚಿವರು ಹಾಗೂ ಸರ್ಕಾರ ಕೈಗೊಳ್ಳಲಿದೆ ಎಂದರು.
    ಕುಡಿಯುವ ನೀರಿನ ಸಮಸ್ಯೆ ತಲೆದೋರಲು ಜಲ ಮಂಡಳಿ ಸಿಬ್ಬಂದಿ ಮರು ನೇಮಕ ಮಾಡದಿರುವುದೇ ಕಾರಣ ಎಂಬುದು ಸ್ಪಷ್ಟ. ಹೀಗಾಗಿ ಈ ಮೊದಲಿನ 220 ಜನರು ಅರ್ಜಿ ಹಾಕುವುದನ್ನು ಕಾಯದೆ ಪಾಲಿಕೆ ಆಯುಕ್ತರು ನೇತೃತ್ವ ವಹಿಸಿ ಮರು ನೇಮಕ ಮಾಡಿಕೊಳ್ಳಬೇಕು ಎಂದು ಆದೇಶಿಸಿದರು.
    ಇದಕ್ಕೂ ಪೂರ್ವದಲ್ಲಿ 10 ತಿಂಗಳ ಕಾಲ ಕುಡಿಯುವ ನೀರಿಗಾಗಿ ತಾವು ಪರಿತಪಿಸಿದ, ಜನರಿಂದ ತೀವ್ರ ತರಾಟೆಗೆ ಒಳಗಾದ ಸನ್ನಿವೇಶಗಳನ್ನು ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಲಕ್ಷ್ಮೀ ಹಿಂಡಸಗೇರಿ, ನಿರಂಜನ ಹಿರೇಮಠ, ರಾಮಣ್ಣ ಬಡಿಗೇರ, ಇಸ್ಮಾಯಿಲ್ ಭದ್ರಾಪುರ, ಶಂಭು ಸಾಲಮನಿ ಸೇರಿ ಇತರರು ದೀಪಾ ಚೋಳನ್ ಎದುರು ಅಳಲು ತೋಡಿಕೊಂಡರು.
    ಮೇಯರ್ ಈರೇಶ ಅಂಚಟಗೇರಿ, ಉಪ ಮೇಯರ್ ಉಮಾ ಮುಕುಂದ, ಪ್ರತಿಪಕ್ಷ ನಾಯಕ ದೊರಾಜ್ ಮಣಿಕುಂಟಲ್, ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ವಿಜಯಾನಂದ ಶೆಟ್ಟಿ, ಶಿವು ಮೆಣಸಿನಕಾಯಿ, ಸ್ಥಾಯಿ ಸಮಿತಿ ಸದಸ್ಯರು, ಎಲ್ ಆ್ಯಂಡ್ ಟಿ ಅಧಿಕಾರಿಗಳು, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts