ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು: ಬಿಎಸ್​ವೈ

ಧಾರವಾಡ: ದ.ರಾ. ಬೇಂದ್ರೆಯವರ ಮನೆಯನ್ನು ರಾಷ್ಟ್ರೀಯ ಸ್ಮಾರಕ ಮಾಡಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಭಾನುವಾರ ಜರುಗಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಕೆ ಅವಶ್ಯಕ. ಹೀಗಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಲೇಬೇಕು. ಆದರೆ, ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆ ಕಲಿಯಬೇಕು. ಇಂಗ್ಲಿಷ್ ಕಲಿಯುವುದು ತಪ್ಪಲ್ಲ. ಆದರೆ, ಆದ್ಯತೆ ಕನ್ನಡಕ್ಕೆ ಕೊಡಬೇಕು ಎನ್ನುವುದು ನಮ್ಮ ಧರ್ಮ. ಇಂಗ್ಲಿಷ್​ ಕಲಿಸಲಿ. ಆದರೆ ಕನ್ನಡಕ್ಕೆ ಸಿಕ್ಕಿರುವ ಆದ್ಯತೆಯಲ್ಲಿ ಒಂದು ಗುಲಗಂಜಿ ಕೊರತೆಯೂ ಆಗಬಾರದು ಎಂದು ಬಿಎಸ್​ವೈ ತಿಳಿಸಿದರು.

ರಾಜಕಾರಣಿಗಳು ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಸಹಕಾರ ನೀಡಬೇಕು. ಅಲ್ಲದೆ, ರಾಜಕಾರಣಿಗಳು ಭಿನ್ನತೆಯನ್ನು ಜನರಲ್ಲಿ ಬರದ‌ ಹಾಗೆ ನೋಡಿಕೊಳ್ಳಬೇಕು. ಉತ್ತರ ಕರ್ನಾಟಕದ ಪ್ರತ್ಯೇಕತೆ ಕೂಗು ಕೇಳಿ ಬರುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದು ಸತ್ಯ. ಅದಕ್ಕೆ‌ ನಾನು ನನ್ನ ಅವಧಿಯಲ್ಲಿ ನಂಜುಂಡಪ್ಪ ವರದಿ ಜಾರಿಗಾಗಿ ಶ್ರಮ ವಹಿಸಿದ್ದೇನೆ ಎಂದು ಬಿಎಸ್​ವೈ ಹೇಳಿದರು.

ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ್ದೇನೆ. ಮಠದಲ್ಲಿ ವಿಶ್ರಾಂತಿ ಸಿಗುವುದಿಲ್ಲ ಎಂದು ಸಿದ್ಧಗಂಗಾ‌ದಲ್ಲಿನ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸುಧಾರಣೆ ಆಗುತ್ತಿದೆ. ಇದೇ 9ಕ್ಕೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ತುಮಕೂರಿಗೆ ಬರುತ್ತಿದ್ದಾರೆ. ಸಿದ್ಧಗಂಗಾ ಶ್ರೀಗಳನ್ನು ‌ಮಾತಾಡಿಸಿ ಅವರ ಆಶೀರ್ವಾದ ಪಡೆಯಲಿದ್ದಾರೆ ಎಂದು ಬಿಎಸ್​ವೈ ಹೇಳಿದರು.

ನಾನಾ ಗಣ್ಯರಿಗೆ ಸನ್ಮಾನ

ಸಮ್ಮೇಳನ ಪ್ರಧಾನ ವೇದಿಕೆಯಲ್ಲಿ ಭಾನುವಾರ ಜರುಗಿದ ಸಮಾರಂಭದಲ್ಲಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಪ್ರೊ. ಐ.ಜಿ. ಸನದಿ, ನಿತಿನ್ ಷಾ, ಡಾ.ಎನ್.ಪಿ ಭಟ್, ಬಸಂತಕುಮಾರ ಪಾಟೀಲ, ಪ್ರೊ.ಪಿ.ಎಸ್. ಕನಮಡಿ, ಡಾ. ನಂದಾ ಎಂ. ಪಾಟೀಲ, ಯು.ಪಿ. ಪುರಾಣಿಕ, ಶಶಿ ಸಾಲಿ, ಸುರೇಶ ಹಾಲಬಾವಿ, ಎಚ್.ಎಸ್. ಮಹದೇವ, ಎಂ.ಎ. ಪೊನ್ನಪ್ಪ, ಡಾ. ಮೈಲಹಳ್ಳಿ ರೇವಣ್ಣ, ಮೋಹನ ವೆರ್ಣೇಕರ್, ಡಾ. ಶಿವಾನಂದ ಕಡಪಟ್ಟಿ, ಅನೂಪ್ ಕುಮಾರ, ಎಚ್.ಕೆ. ಕೆಂಪೇಗೌಡ, ಡಾ.ಜೆಎನ್. ರಾಮಕೃಷ್ಣೇಗೌಡ, ಡಾ. ಮೃತ್ಯುಂಜಯ ರುಮಾಲೆ, ಡಾ.ಜಿ. ಸವಿತ, ಮಾದಂಡ ಎಸ್. ಪೂವಯ್ಯ, ಶೈಲಜಾ ಭಿಂಗೆ, ಶಿವಶಂಕರ ಟೋಕರೆ, ಡಾ. ಎಚ್.ಸಿ. ಮಹದೇವಪ್ಪ, ಡಾ.ಸತೀಶಕುಮಾರ ಹೊಸಮನಿ, ಪ್ರೊ. ರಂಗರಾಜ ವನದುರ್ಗ, ಎಂ.ಕೆ. ಭಾಸ್ಕರರಾವ್, ಕಿರಣ ಉಪಾಧ್ಯಾಯ ಬಹರೇನ್, ಪ್ರೊ. ಹಸನಬಿ ಬೀಳಗಿ, ಎಂ. ರಾಮಯ್ಯ, ವಿ.ಎನ್. ತಿಪ್ಪನಗೌಡರ, ಅಶೋಕ ಪೂಜಾರ, ಜಿ. ಮಹಿಮಯ್ಯ, ಡಿ.ಎನ್. ಲೋಕಪ್ಪ, ಡಾ.ಬಿ.ಡಿ. ಭೂಕಾಂತ, ಎ.ಆರ್. ಉಜನಪ್ಪ, ಟಿ. ತಿಮ್ಮೇಶ, ಬಿ.ಎಲ್. ಪಾಟೀಲ, ಶ್ರೀಧರಗಡ್ಡೆ ಸಿದ್ದಬಸಪ್ಪ, ಪಿ.ವಿಲಾಸ ಕುಮಾರ, ಡಾ.ವಿ.ಆರ್. ಪದ್ಮನಾಭರಾವ್, ಬೆಳವಾಡಿ ಮಂಜುನಾಥ, ಯಾಕೂಬ್ ಖಾದರ್ ಗುಲ್ವಾಡಿ, ಕುಪೇಂದ್ರ ಪಾಟೀಲ, ಡಾ.ಎಚ್.ಎಲ್ ನಾಗರಾಜ, ಬಸವರಾಜ ತಿರಕಪ್ಪ ಶಿಗ್ಗಾವಿ ಅವರನ್ನು ಸನ್ಮಾನಿಸಲಾಯಿತು. 

ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗಣ್ಯರನ್ನು ಸನ್ಮಾನಿಸಿದರು. ಐ.ಎಂ. ವಿಠಲಮೂರ್ತಿ, ಅಪ್ಪಾಜಿ ಸಿ.ಎಸ್. ನಾಡಗೌಡ, ತಾರಾ ಅನುರಾಧಾ, ಭೀಮಾಶಂಕರ ಪಾಟೀಲ ಸನ್ಮಾನಕ್ಕೆ ಗೈರಾಗಿದ್ದರು.