ಜಮ್ಮುವಿನಲ್ಲಿ ನಿರ್ಬಂಧ ಸಂಪೂರ್ಣ ತೆರವು; ಕಾಶ್ಮೀರ ಕಣಿವೆಯಲ್ಲಿ ಮುಂದುವರಿದ ಕಣ್ಗಾವಲು, ಸ್ವಾತಂತ್ರ್ಯ ದಿನಕ್ಕೆ ಸಕಲ ಸಿದ್ಧತೆ

ಶ್ರೀನಗರ: ಆರ್ಟಿಕಲ್ 370 ಹಾಗೂ 35 ಎ ರದ್ದುಗೊಳಿಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜನೆಗೊಳಿಸುವ ಜತೆ ಹಲವು ರೀತಿಯ ನಿರ್ಬಂಧ ವಿಧಿಸಿತ್ತು.

ಅದರಲ್ಲಿ ಜಮ್ಮುವಿನಲ್ಲಿ ವಿಧಿಸಲಾಗಿದ್ದ ಎಲ್ಲ ರೀತಿಯ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದ್ದು, ಕಾಶ್ಮೀರದಲ್ಲಿ ಇನ್ನೂ ಹಲವು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಜಮ್ಮುಕಾಶ್ಮೀರದ ಉನ್ನತ ಪೊಲೀಸ್​ ಅಧಿಕಾರಿ ಮುನೀರ್​ ಖಾನ್​ ಇಂದು ಮಾಹಿತಿ ನೀಡಿದ್ದಾರೆ.

ಹಾಗೇ ಜಮ್ಮುಕಾಶ್ಮೀರದಲ್ಲಿ ಇದವರೆಗೆ ಯಾವುದೇ ಅವಘಡ ನಡೆದಿಲ್ಲ, ಸಾವು ನೋವು ಆಗಿಲ್ಲ. ನಮ್ಮ ನಿಯಂತ್ರಣದಲ್ಲಿ ಇದೆ ಎಂದು ಹೇಳಿದ್ದಾರೆ.

ಜಮ್ಮುಕಾಶ್ಮೀರ ಸೂಕ್ಷ್ಮ ಪ್ರದೇಶವಾಗಿದ್ದು ಅಲ್ಲಿ ವಿಧಿಸಿರುವ ಹಲವು ರೀತಿಯ ನಿರ್ಬಂಧಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತದೆ ಎಂದು ಕೇಂದ್ರ ಗೃಹಸಚಿವ ಅಮಿತ್​ ಷಾ ನಿನ್ನೆ ತಿಳಿಸಿದ್ದರು. ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲವೆಂದು ಸುಪ್ರೀಂಕೋರ್ಟ್​ ಕೂಡ ಸ್ಪಷ್ಟಪಡಿಸಿದೆ.

ಕೇಂದ್ರ ಸರ್ಕಾರ ಆಗಸ್ಟ್​ 5ರಂದು ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದೆ. ಈ ವೇಳೆ ಅಲ್ಲಿ ಯಾವುದೇ ಗಲಾಟೆ, ಗಲಭೆ ಆಗಬಾರದು ಎಂಬ ಕಾರಣಕ್ಕೆ ಪೂರ್ವಭಾವಿಯಾಗಿ ಆಗಸ್ಟ್​ 4ರಿಂದಲೇ ನಿಷೇಧಾಜ್ಞೆ ಸೇರಿ ಹಲವು ರೀತಿಯ ನಿಷೇಧಿತ ಆದೇಶಗಳನ್ನು ಹೇರಲಾಗಿತ್ತು.

ಸಣ್ಣ ಗಲಾಟೆಗಳು ನಡೆದಿದ್ದು ಚಿಕ್ಕಪುಟ್ಟ ಗಾಯಗೊಂಡ ಕೆಲವರಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಜಮ್ಮುಕಾಶ್ಮೀರದಾದ್ಯಂತ ಶಾಂತಿಯುತವಾಗಿ ಸ್ವಾತಂತ್ರ್ಯ ದಿನ ಆಚರಿಸುವತ್ತ ಹೆಚ್ಚಿನ ಗಮನಹರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಒಮರ್​ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಕಾಶ್ಮೀರ ಕಣಿವೆಯ ಒಟ್ಟು 400 ರಾಜಕೀಯ ನಾಯಕರು ಬಂಧನದಲ್ಲಿ ಇದ್ದಾರೆ. ಸುಮಾರು 50, 000 ಭದ್ರತಾ ಸಿಬ್ಬಂದಿ ಪ್ರತಿ ರಸ್ತೆ, ಬೀದಿಗಳ ಮೇಲೆ ಕಣ್ಗಾವಲಿಟ್ಟಿದ್ದಾರೆ. ಹಾಗೇ ಫೋನ್​, ಇಂಟರ್​ನೆಟ್​ ಸೇವೆಗಳು ಸ್ಥಗಿತಗೊಂಡಿವೆ.

Leave a Reply

Your email address will not be published. Required fields are marked *